ಲಾಕ್ಡೌನ್ ಬೇಡಿಕೆ

ಗಣೇಶ್ ಭಟ್

ಸಮೂಹ ಸನ್ನಿಯಾಗುತ್ತಿರುವ ಲಾಕ್ಡೌನ್ ಬೇಡಿಕೆ


ಕೊರೊನಾ ವೈರಸ್ ಹಾವಳಿಯ ಕುರಿತಾದ ಭಯದಿಂದಾಗಿ ಲಾಕ್ಡೌನ್ಗಾಗಿ ಒತ್ತಾಯ ಪ್ರಾರಂಭವಾಗಿದೆ.
ಲಾಕ್ಡೌನ್ನಿಂದಾಗಿ ಕೊರೊನಾ ಪಿಡುಗನ್ನು ಹೋಗಲಾಡಿಸಬಹುದೆಂಬುದಕ್ಕೆ ಯಾವುದೇ ಆಧಾರವಿಲ್ಲ. 10, 20 ಅಥವಾ ಇನ್ನೂ ಎಷ್ಟೇ ವಾರಗಳ ಸಂಪೂರ್ಣ ಲಾಕ್ಡೌನ್ನಂತರವೂ ಜನರ ಓಡಾಟ ಪ್ರಾರಂಭವಾದಾಗ ವೈರಸ್ನ ಹಬ್ಬುವಿಕೆ ಒಮ್ಮೆಲೇ ಹೆಚ್ಚುವುದು ಸಹಜವೆಂದು ಸೋಂಕು ರೋಗ ತಜ್ಞರು ಅಭಿಪ್ರಾಯ ಪಡುತ್ತಾರೆ.
ಕೇಂದ್ರ ಸರ್ಕಾರ ರಚಿಸಿದ ತಜ್ಞರ ತಂಡ ಕೂಡಾ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿ ಭಾರತದಲ್ಲಿ ಲಾಕ್ಡೌನ್ ವಿಧಿಸದಂತೆ ಕಳೆದ ಫೆಬ್ರುವರಿಯಲ್ಲಿ ಸಲಹೆ ನೀಡಿತ್ತು. ಮೇ ತಿಂಗಳಿನಲ್ಲಿ ಲಾಕ್ಡೌನ್ – ವಿಸ್ತರಿಸುವ ಮೊದಲು ಕೂಡಾ ಇದನ್ನೇ ಪುನರುಚ್ಚರಿಸಿತ್ತು.
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದೇ ಕೊರೊನಾ ನಿಯಂತ್ರಣಕ್ಕೆ ಇರುವ ಸರಳದಾರಿ. ಕೊರೊನಾ ಕುರಿತಾದ ಅತಿಯಾದ ಭಯವೇ ವೈರಾಣುವಿಗಿಂತ ಹೆಚ್ಚಿಗೆ ಅಪಾಯಕಾರಿ.


ಅತಿಯಾಗಿ ಭಯಗ್ರಸ್ತನಾದ ವ್ಯಕ್ತಿಯ ದೇಹದಲ್ಲಿ ಉಂಟಾಗುವ ರಾಸಾಯನಿಕ ಬದಲಾವಣೆಗಳು ರೋಗ- ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಅತಿಯಾದ ಭಯದಿಂದ ಉಂಟಾಗುವ ಮಾನಸಿಕ ಒತ್ತಡವು ಹೃದಯಸ್ತಂಭನ ಅಥವಾ ಇತರೆ ಅಪಾಯಕಾರಿ ಪರಿಣಾಮಗಳನ್ನುಂಟು ಮಾಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ.


ಕಾಲುದಿನ, ಅರ್ಧ ದಿನ ಲಾಕ್ಡೌನ್ ಮುಂತಾದ ಕ್ರಮಗಳಿಂದಾಗಿ ಜೀವನಾವಶ್ಯಕ ವಸ್ತುಗಳನ್ನು ಕೊಳ್ಳಲು ಜನರು ಪೇಚೆಗೆ ಧಾವಿಸುತ್ತಾರೆ. ದಿನವಿಡೀ ನಡೆಯುತ್ತಿರುವ ವ್ಯವಹಾರ. ಸೀಮಿತ ಅವಧಿಗೆ ಮೊಟಕುಗೊಂಡಾಗ ಜನರು ಖರೀದಿಗೆ ಮುಗಿಬೀಳುತ್ತಾರೆ, ಮಾರುಕಟ್ಟೆಯಲ್ಲಿ ಅತಿಯಾದ ನೂಕುನುಗ್ಗಲು ಉಂಟಾಗುತ್ತದೆ. ಇದರಿಂದಾಗಿ ಪರಸ್ಪರ ಭೌತಿಕ ಅಂತರ ಕಾಪಾಡಿಕೊಳ್ಳುವದೂ ಸಾಧ್ಯವಾಗುವುದಿಲ್ಲ. ಜನರ ಮನದಲ್ಲಿ ಅನಗತ್ಯವಾಗಿ ಆತಂಕ ಸೃಷ್ಟಿಗೂ ಕಾರಣವಾಗುತ್ತದೆ.


ಇಂತಹ ವಿಷಮ ಪರಿಸ್ಥಿತಿಯಲ್ಲೂ ಕಳೆದ ಐದು ತಿಂಗಳುಗಳಿಂದ ಯಾವುದೇ ರಕ್ಷಾ ಕವಚಗಳಿಲ್ಲದೇ ದಿನವಿಡೀ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ವಿದ್ಯುತ್ ವಿತರಣಾ ವ್ಯವಸ್ಥೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು,ಮಾಧ್ಯಮ ಪ್ರತಿನಿಧಿಗಳು,ಪತ್ರಿಕಾ ವಿತರಕರು,ಪೋಲೀಸರು, ಹಾಲು ಮುಂತಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಿರುವವರ ಧೈರ್ಯ, ಆತ್ಮವಿಶ್ವಾಸಗಳಳು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು. ಇವರೆಲ್ಲರೂ ನಮ್ಮೊಂದಿಗೆ,ನಮ್ಮಸುತ್ತಮುತ್ತಲೇ ಬದುಕಿತ್ತಿದ್ದಾರೆ,ಅವರೂ ನಮ್ಮಂತೆಯೇ ಮನುಷ್ಯರು ಎಂಬುದನ್ನು ಮರೆಯಬಾರದು.
ಮಧ್ಯಾಹ್ನ 2 ಗಂಟೆಯ ಮೊದಲು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳದೇ ನಂತರವೇ ಓಡಾಟ ಪ್ರಾರಂಭಿಸಲು ಕೊರೊನಾ ವೈರಸ್, ಸಾಕು ಪ್ರಾಣಿಯಲ್ಲ. ಕತ್ತಲೆಯಾದ ನಂತರ ಬೀದಿಗಳಲ್ಲಿ ಸಂಚರಿಸಲು, ಕೊರೊನಾ ಕಾಡಿನಿಂದ ಓಡಿ ಬಂದ ಚಿರತೆಯೂ ಅಲ್ಲ.
ಅರೆಬರೆ ಮಾಹಿತಿ, ಮಾಧ್ಯಮಗಳ ಬೇಜವಾಬ್ದಾರಿ ಉತ್ಪ್ರೇಕ್ಷೆ, ಆಧಾರಹೀನ ಭಯಗಳಿಂದ ಪ್ರೇರಿತರಾಗಿ ಮಂಡಿಸಲ್ಪಡುತ್ತಿರುವ ಲಾಕ್ಡೌನ್ ಬೇಡಿಕೆಗೆ, ಒತ್ತಡಕ್ಕೆ, ಕೊರೊನಾ ಕುರಿತಾದ ಅನಗತ್ಯ ಭಯ, ಆತಂಕಕ್ಕೆ ಒಳಗಾಗದೇ, ಸಮೂಹಸನ್ನಿಗೆ ಸಿಲುಕದೇ, ಆತ್ಮವಿಶ್ವಾಸದಿಂದ ಬದುಕುವ ದಾರಿಯಲ್ಲಿ ಸಾಗೋಣ. ಸೂಕ್ತ ಆಹಾರ ಕ್ರಮ, ಯೋಗ, ಧ್ಯಾನ, ಧನಾತ್ಮಕ ಯೋಚನೆಗಳು ದೈವ ಚಿಂತನೆ, ಶೃದ್ಧೆಯಿಂದ ಇದು ಸಾಧ್ಯ.


ಕೊರೊನಾ ಕುರಿತು ಜಾಗೃತಿ ಇರಲಿ, ಭಯ ಪಡುವುದು ಬೇಡ, ಭಯ ಹಬ್ಬಿಸುವುದೂ ಬೇಡ…

*************

One thought on “ಲಾಕ್ಡೌನ್ ಬೇಡಿಕೆ

  1. ಅನಿಸಿಕೆಗಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವಂತಿವೆ

Leave a Reply

Back To Top