ʼಯುವಜನತೆಗೆ ಕವಲುದಾರಿಯಂತಾಗಿರುವ ವಿದ್ಯೆ ಮತ್ತು ಉದ್ಯೋಗʼ ಮೇಘ ರಾಮದಾಸ್ ಜಿ ಅವರ ಲೇಖನ

ಉದ್ಯೋಗ ಎಂಬುದು ಈಗಿನ ಕಾಲಘಟ್ಟದಲ್ಲಿ ಎಲ್ಲರ ಹಕ್ಕಾಗಿದೆ. ಉದ್ಯೋಗಂ ಪುರುಷ ಲಕ್ಷಣಂ ಎಂಬುದು ಹಿಂದೆ ಇದ್ದ ಮಾತು. ಆದರೆ ಈಗ ಪುರುಷರು ಹಾಗೂ ಮಹಿಳೆಯರು ಇಬ್ಬರೂ ಸರಿಸಮನಾಗಿ ದುಡಿಯುತ್ತಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ವೈಯಕ್ತಿಕ ಗುರುತನ್ನು ಸೃಷ್ಟಿಸಿಕೊಳ್ಳುವ ಹಂಬಲವಿದೆ. ಆದರೆ ಅಗತ್ಯಕ್ಕೆ ತಕ್ಕಷ್ಟು ಉದ್ಯೋಗಗಳು ಈ ದೇಶದಲ್ಲಿ ಸಿಗುತ್ತಿವೆಯೇ ಎಂದು ಅವಲೋಕಿಸಿದಾಗ ” ಇಲ್ಲ ” ಎನ್ನುವ ಉತ್ತರ ಕಣ್ಣ ಮುಂದೆಯೇ ಇದೆ. ಇದಕ್ಕೆ ಹಲವು ಕಾರಣಗಳಿರಬಹುದು, ಆದರೆ ಬಹು ಮುಖ್ಯ ಕಾರಣ ನಮ್ಮ ಯುವಜನತೆಗೆ ಸರಿಯಾದ ವೃತ್ತಿ ಮಾರ್ಗದರ್ಶನ ಇಲ್ಲದೆ ಇರುವುದು ಎಂಬುದು ನನ್ನ ಅಭಿಪ್ರಾಯ. ಅವರ ಸಾಮರ್ಥ್ಯಕ್ಕೆ ತಕ್ಕನಾದ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕಾದರೆ ಯುವಜನತೆಗೆ ಹಲವು ವೃತ್ತಿಗಳ ಮತ್ತು ಅದಕ್ಕೆ ಪೂರಕವಾದ ಓದಿನ ಮಾಹಿತಿ ಇರಬೇಕಾಗಿರುವುದು ಅವಶ್ಯಕ. ಆದರೆ ನಮ್ಮಲ್ಲಿ ಸಾಕಷ್ಟು ಪೋಷಕರು ಮಗು ಹುಟ್ಟಿದ ದಿನದಿಂದ ಹೇಳುತ್ತಾ ಬರುವುದು ” ನಮ್ಮ ಪಾಪು ಡಾಕ್ಟರ್ ಅಥವಾ ಇಂಜಿನಿಯರ್ ಆಗಬೇಕು ” ಎಂದು ಏನೂ ಅರಿಯದ ವಯಸ್ಸಿನಿಂದಲೇ ಮಗುವಿನ ಮೇಲೆ ಒತ್ತಡ ಹಾಕಿ ಈ ಎರಡೇ ಆಯ್ಕೆ ಇರುವುದು ಎಂದು ತಲೆಗೆ ತುಂಬಲಾಗುತ್ತದೆ.

ಬಾಲ್ಯದಿಂದಲೂ ಈ ಒತ್ತಡಗಳನ್ನು ಅನುಭವಿಸುವ ನಮ್ಮ ಯುವಜನತೆ ತಮ್ಮ ಆಸಕ್ತಿ, ಸಾಮರ್ಥ್ಯ, ಕೌಶಲ್ಯಗಳಿಗೆ ತಕ್ಕನಲ್ಲದ ವಿದ್ಯೆ ಪಡೆದು, ತಮಗಿಷ್ಟವಿಲ್ಲದ ಉದ್ಯೋಗ ಮಾಡುವ ಗುಂಪು ಒಂದೆಡೆಯಾದರೆ, ಕುಟುಂಬದ ಒತ್ತಡಕ್ಕೆ ಯಾವುದೋ ಪದವಿ ಪಡೆದು ಅದಕ್ಕೆ ತಕ್ಕ ಉದ್ಯೋಗ ಸಿಗದೆ, ಇನ್ಯಾವುದೋ ಉದ್ಯೋಗ ಮಾಡುತ್ತಿರುವ ಯುವಜನರ ಗುಂಪು ಮತ್ತೊಂದಿದೆ. ಕವಲುದಾರಿಯಲ್ಲಿ ಹೇಗೆ ಎರಡು ದಾರಿಗಳು ಸೇರುವುದಿಲ್ಲವೋ ಹಾಗೆಯೇ ವಿದ್ಯೆ ಮತ್ತು ಉದ್ಯೋಗ ಎರಡೂ ಸೇರದಿರುವಂತಹ ಪರಿಸ್ಥಿತಿಯಲ್ಲಿ ನಮ್ಮ ಯುವಜನತೆಯ ಬದುಕು ಗೊಂದಲದ ಗೂಡಾಗಿದೆ. ಹಾಗಾದರೆ ಯುವಜನತೆಯ ಈ ಅಡ್ಡ ಕತ್ತರಿಯ ಮಧ್ಯೆ ಸಿಕ್ಕ ಅಡಿಕೆಯ ಪರಿಸ್ಥಿತಿಗೆ ಏನೆಲ್ಲಾ ಕಾರಣಗಳಿವೆ ಮತ್ತು ಅದಕ್ಕೆ ಇರುವ ಪರಿಹಾರಗಳನ್ನು ನಾವು ತಿಳಿಯಬೇಕಿದೆ.

ಕಾರಣಗಳು

ವೃತ್ತಿ ಮಾರ್ಗದರ್ಶನದ ಕೊರತೆ

ಬಹುಶಃ ಎಲ್ಲಾ ಯುವಜನರಿಗೂ SSLC ವರೆಗೆ ಯಾವುದೇ ಗೊಂದಲ ಇರುವುದಿಲ್ಲ. ಆದರೆ SSLC ಉತ್ತೀರ್ಣರಾದ ಮರುಕ್ಷಣವೇ ಅವರಿಗೆ ಗೊಂದಲ ಆರಂಭವಾಗುತ್ತದೆ. ಕೆಲವರಿಗೆ ತಮ್ಮ ಗುರಿಯ ಸ್ಪಷ್ಟತೆ ಇದ್ದಿರಬಹುದು, ಆದರೆ ಗರಿಷ್ಠ ಸಂಖ್ಯೆಯ ಯುವಜನತೆಗೆ ತಮ್ಮ ಗುರಿಯ ಸ್ಪಷ್ಟತೆ ಇರುವುದಿಲ್ಲ. ಅವರು Go with the flow ಮನಸ್ಥಿತಿಯಲ್ಲಿ ಇರುತ್ತಾರೆ. ಆದರೆ SSLC ಮುಗಿಸುವ ಹೊತ್ತಿಗೆ ಅವರಿಗೆ ತಮ್ಮ ಇಷ್ಟದ ವಿಷಯ, ಅಗತ್ಯದ ಕೌಶಲ್ಯ, ಹೊರ ಜಗತ್ತಿನಲ್ಲಿ ಬೇಡಿಕೆ ಇರುವ ಉದ್ಯೋಗಗಳ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ದೊರೆತಿರುತ್ತದೆ. ಈ ಆಧಾರದ ಮೇರೆಗೆ ಅವರಿಗೆ ಏನೆಲ್ಲಾ ಹೊಸ ಹೊಸ ವೃತ್ತಿ ಅವಕಾಶಗಳು ಇವೆ ಎಂಬ ಮಾಹಿತಿ ಸಿಕ್ಕಾಗ ಅವರ ಓದು ಮತ್ತು ಉದ್ಯೋಗದ ಆಯ್ಕೆ ಖಂಡಿತವಾಗಿಯೂ ಸರಿ ದಾರಿಯಲ್ಲಿ ಸಾಗಬಹುದಾಗಿದೆ.

ಕೌಶಲ್ಯಗಳ ಕೊರತೆ

ಈಗಿನ ಪಠ್ಯಕ್ರಮದಲ್ಲಿ ಇರುವ ವಿಷಯಗಳನ್ನು ಓದಿ ಅಂಕಪಟ್ಟಿಯಲ್ಲಿ ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದೇ ಹೊರತು, ಜೀವನ ನಡೆಸಲು ಸಾಧ್ಯವಿಲ್ಲ ಎಂಬುದು ದೃಢವಾಗಿದೆ. ಈ ಕಾರಣಕ್ಕೆ ಪಠ್ಯಕ್ರಮದ ಜೊತೆಗೆ ಕೆಲವು ಕೌಶಲ್ಯಗಳನ್ನು ಕಲಿಸುವ ಅಗತ್ಯ ಈ ದಿನಮಾನಗಳಲ್ಲಿ ಬಹಳ ಇದೆ. ಯುವಜನತೆ ಶಾಲೆ ಹಾಗೂ ಕಾಲೇಜಿನಲ್ಲಿ ಇರುವಾಗಲೇ ಅವರಿಗೆ advance computer, Fluent English, Animation, web designing, multi language translation, modern organic farming, ಗುಡಿ ಕೈಗಾರಿಕೆ ಕೆಲಸಗಳು ಹಾಗೂ ಇನ್ನಿತರೆ ಸ್ವ ಉದ್ಯೋಗದ ಕೌಶಲ್ಯಗಳನ್ನು ನೀಡಬಹುದಾಗಿದೆ.

ಜೀವನ ಕೌಶಲ್ಯಗಳ ಕೊರತೆ

ಯುವಜನತೆಯಲ್ಲಿ ಒತ್ತಡ ನಿರ್ವಹಣೆ, ನಿರ್ಧಾರ ಮಾಡುವ, ಸಾಮಾಜಿಕವಾಗಿ ಬೆರೆಯುವ, ಕೌಶಲ್ಯ, ಕೌಟುಂಬಿಕ ಸಮಸ್ಯೆಗಳ ನಿರ್ವಹಣೆ, ಸಂಬಂಧಗಳ ನಿರ್ವಹಣೆ, ಪ್ರೀತಿ – ಪ್ರೇಮಗಳ ಬಾಂಧವ್ಯ ಹಾಗೂ ಇನ್ನಿತರೆ ಜೀವನ ಕೌಶಲ್ಯಗಳ ಕೊರತೆ ಎದ್ದು ಕಾಣುತ್ತದೆ. ಇದೇ ಕಾರಣಕ್ಕೆ ಯುವಜನರಲ್ಲಿ ಆತ್ಮಹತ್ಯೆ, ಮಾನಸಿಕ ಖಿನ್ನತೆ, ಹೃದಯಾಘಾತಗಳು ಹೆಚ್ಚುತ್ತಿವೆ. ಜೀವನ ಕೌಶಲ್ಯಗಳ ತರಬೇತಿಗಳನ್ನು ಪ್ರೌಢಶಾಲೆಯಿಂದ ಕಲಿಸಿದಾಗ ಯುವಜನತೆ ತಮ್ಮ ವೃತ್ತಿ ಹಾಗೂ ಕೌಟುಂಬಿಕ ಜೀವನದಲ್ಲಿ ಸಫಲರಾಗಬಹುದಾಗಿದೆ.

ಸ್ನೇಹ ಬಳಗದ ಒತ್ತಡ

ಶಾಲೆ ಹಾಗೂ ಕಾಲೇಜುಗಳು ಸ್ನೇಹಿತ್ತರನ್ನು ಸಂಪಾದಿಸಲು ಇರುವ ಒಂದು ವೇದಿಕೆ. ಇಲ್ಲಿಂದಲೇ ಸಮಾನ ಮನಸ್ಕರ ಗುಂಪುಗಳು ಸೃಷ್ಟಿಯಾಗುತ್ತವೆ. ಕೆಲವು ಬಾರಿ ಗುಂಪಿನಲ್ಲಿ ಆರ್ಥಿಕ, ಸಾಮಾಜಿಕ, ಬುದ್ಧಿವಂತಿಕೆಯ ವ್ಯತ್ಯಾಸಗಳು ಇದ್ದರೂ ಸಹಾ ಒಂದು ಮಟ್ಟದವರೆಗೆ ಅವು ಏನೂ ಪರಿಣಾಮ ಬೀರುವುದಿಲ್ಲ. ಆದರೆ ಅದೇ ಗುಂಪಲ್ಲಿ ಬಟ್ಟೆ, ಪ್ರವಾಸ, celebrations, recognition ಎನ್ನುವ ವಿಚಾರಗಳು ಬಂದಾಗ ಭಿನ್ನಾಭಿಪ್ರಾಯಗಳು ಮತ್ತು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರ ಮೇಲಿನ ಒತ್ತಡಗಳು ಹೆಚ್ಚಾಗುತ್ತವೆ. ತಮ್ಮ ನಿಲುವನ್ನು ಹೇಳಲಾಗದೆ, ಉಳ್ಳವರಂತೆಯೇ ಬದುಕಲಾರದೇ ಕೊನೆಗೆ ಯಾವುದೂ ಬೇಡ ಎಂದು ಆತ್ಮಹತ್ಯೆಗೆ ಶರಣಾಗುತ್ತಾರೆ.

 ಶೈಕ್ಷಣಿಕ ಒತ್ತಡ

ಒಂದು ಮಗು ಶಾಲೆಯ ಆರಂಭದಿಂದ ಹಿಡಿದು ಯುವಜನತೆಯಾಗಿ ತನ್ನ ಶೈಕ್ಷಣಿಕ ಪಯಣ ಮುಗಿಯುವವರೆಗೂ ಅಂಕ ಪಡೆಯುವ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡ ಅವರ ಜೀವಮಾನದುದ್ದಕ್ಕೂ ಕಾಡುತ್ತಲೇ ಇರುತ್ತದೆ. ಇದೇ ಒತ್ತಡ ಅವರು ತಮ್ಮ ಗುರಿ ಸಾಧನೆಯ ಕಡೆಗೆ ಗಮನ ಹರಿಸಲು ನಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಒತ್ತಡಗಳನ್ನು ನಿಭಾಯಿಸುವ ಮನಸ್ಥಿತಿ ಬೆಳೆಸುವುದು ಮುಖ್ಯವಾಗುತ್ತದೆ.

ಈ ಕಾರಣಗಳಷ್ಟೇ ಅಲ್ಲದೆ, ಇನ್ನೂ ಹಲವು ಕಾರಣಗಳಿಂದಾಗಿ ಇಂದಿನ ದಿನ ಯುವಜನತೆ ಕಲಿಯುವ ವಿದ್ಯೆಗೂ ಮತ್ತು ಪಡೆಯುವ ಉದ್ಯೋಗಕ್ಕೂ ಸಂಬಂಧ ಇಲ್ಲದಂತಾಗಿದೆ. ಕಲಿತ ವಿದ್ಯೆ ವ್ಯರ್ಥವಾಗಬಾರದು ಹಾಗೂ ಕುಟುಂಬದ ನಿರ್ವಹಣೆಗೆ ದುಡಿಮೆ ಬೇಕೇ ಬೇಕು ಎನ್ನುವ ಕಾರಣ ಸಿಕ್ಕ ಕೆಲಸದಲ್ಲಿ ತೃಪ್ತಿ ಕಾಣುತ್ತಿದೆ ನಮ್ಮ ಯುವಜನತೆ. ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸರ್ಕಾರ, ಶೈಕ್ಷಣಿಕ ಸಂಸ್ಥೆ ಮತ್ತು ಕುಟುಂಬಗಳಲ್ಲಿ ಇದೆ. ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಮಾರ್ಗಗಳನ್ನು ಹುಡುಕಬೇಕಿದೆ. ಶೈಕ್ಷಣಿಕ ಸಂಸ್ಥೆಗಳು ಯುವಜನರಿಗೆ ಬೇಕಿರುವ ಎಲ್ಲಾ ಕೌಶಲ್ಯಗಳನ್ನು ನೀಡಬೇಕಿದೆ. ನಮ್ಮ ಕುಟುಂಬಗಳು ಯಾವುದೋ ಒಂದೇ ವೃತ್ತಿ ಅಥವಾ ಓದನ್ನು ಪಡೆಯುವಂತೆ ಒತ್ತಡ ಹಾಕದೇ ಯುವಜನತೆಯ ಸಾಮರ್ಥ್ಯ ಹಾಗೂ ಕೌಶಲ್ಯಗಳಿಗೆ ಅನುಸಾರವಾಗಿ ಬೆಳೆಯುವಂತೆ ಪ್ರೋತ್ಸಾಹಿಸಬೇಕಿದೆ. ಈ ಎಲ್ಲವೂ ವಿದ್ಯೆ ಹಾಗೂ ಉದ್ಯೋಗವನ್ನು ಸೇರಿಸುವ ಮಾರ್ಗಗಳಾಗಬಹುದಾಗಿದೆ.


\

Leave a Reply

Back To Top