“ಶಕ್ತಿ ಸ್ವರೂಪಿಣಿ ಸ್ತ್ರೀ”ಜಯಶ್ರೀ ಅಬ್ಬಿಗೇರಿ

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಃ’(ಎಲ್ಲಿ ನಾರಿಯರು ಗೌರವಿಸಲ್ಪಡುವರೋ ಅಲ್ಲಿ ದೇವಾನು ದೇವತೆಗಳಿರುತ್ತಾರೆ) ಎಂದು ಮನುಸ್ಮೃತಿ ತಿಳಿಸುತ್ತದೆ. ಆದಿಯಿಂದಲೂ ಸೃಷಿಯ ಮೂಲ ಸ್ತ್ರೀ ಆಗಿದ್ದಾಳೆ. 

ಭಾರತದಂಥ ವಿಭಿನ್ನ ಸಂಸ್ಕೃತಿಯ ದೇಶದಲ್ಲಿ ಆಕೆಗೆ ವಿಶೇಷ ಗೌರವದ ಸ್ಥಾನಮಾನವಿದೆ. ಸ್ತ್ರೀ ಸಹನೆಗೆ ಇನ್ನೊಂದು ಹೆಸರು. ಆಕೆ ಅವಿನಾಶಿ ಮತ್ತು ಸಂಜೀವಿನಿ. ಅಕ್ಕರೆ,ಪ್ರೀತಿ,ಆರೈಕೆ,

ಮಮತೆ, ವಾತ್ಸಲ್ಯ, ದಯೆ, ಸತ್ಕಾರ, ಸಾಂತ್ವನ, ಕರುಣೆ,ಕ್ಷಮೆ ಹೀಗೆ ಪ್ರಬಲ ಗುಣಗಳು ಆಕೆಯಲ್ಲಿ ಹುಟ್ಟಿನಿಂದಲೇ ಮೇಳೈಸಿಕೊಂಡಿವೆ. ಆಕೆ ಶಕ್ತಿಗಳ ಸಂಗಮವೂ ಹೌದು. ಹೀಗಾಗಿ ಶಕ್ತಿ ಸ್ವರೂಪಿಣಿ ಸ್ತ್ರೀ

ಅಕ್ಷರದ ಆಸರೆ  

ಇದೆಲ್ಲ ಒಂದೆಡೆಯಾದರೆ ಇನ್ನೊಂದೆಡೆ ವ್ಯವಸ್ಥಿತವಾಗಿ ಭ್ರೂಣ ಹತ್ಯೆ, ಲಿಂಗ ತಾರತಮ್ಯ, ದೌರ್ಜನ್ಯ,ಅತ್ಯಾಚಾರ,

ಹೆಣ್ಣು ಎನ್ನುವ ಕಾರಣಕ್ಕೆ ಅವಮಾನ ಅಗೌರವಗಳು ಇನ್ನೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಗೊಡ್ಡು ಸಂಪ್ರದಾಯ ಮೂಡನಂಬಿಕೆಗಳಿಗೆ ಸ್ತ್ರೀ ಬಲಿಯಾಗುತ್ತಿದ್ದಾಳೆ. ಹಿಂದಿನಿಂದ ಮಹಿಳೆಯನ್ನು ಅಬಲೆಯೆಂದು ಕಡೆಗಣಿಸಲಾಗುತ್ತಿತ್ತು. ಹೀಗಾಗಿ ಅವಳು ಕಡುಗತ್ತಲೆಯ ದಾರಿಯಲ್ಲಿ ಹೋರಾಟ ಬಂದಿತು

‘ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ’ ಎನ್ನುವ ಮನು ಸ್ಮೃತಿಯ ನುಡಿಯಂತೆ ಸ್ವಾತಂತ್ರ್ಯರಹಿತ ಜೀವಿಯಾಗಿ ದಾಸ್ಯ ಅನುಭವಿಸಿದಳು. ಸಣ್ಣ ವಯಸ್ಸಿನಿಂದಲೇ ಅರ್ಥವಿಲ್ಲದ ನಿಬಂಧನೆಗಳಿಂದ ಕಟ್ಟುಪಾಡುಗಳಿಂದ ಕಟ್ಟಿಹಾಕಲಾಗಿತ್ತು. ಗಾಂಧೀಜಿಯವರು ‘ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ನಿರ್ಭಯದಿ ಏಕಾಂಗಿಯಾಗಿ ನಡೆದಾಡಿದಾಗ ಮಾತ್ರ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಂತೆ.’ ಎಂದು ನುಡಿದಿದ್ದರು. 

ಸ್ತ್ರೀ ತನ್ನ ಶಕ್ತಿ ಸಾಮರ್ಥ್ಯಗಳನ್ನು ತಿಳಿದು ಸಬಲಳಾಗಿ ಬಾಳಬೇಕೆಂದರೆ ಅಕ್ಷರದ ಆಸರೆ ಬೇಕು. ಅಕ್ಷರ ಕಲಿತಾಗ ಮಾತ್ರ ಬದುಕಿನ ಅಡ್ಡಿ ಆತಂಕ ಜಟಿಲ ಸವಾಲುಗಳನ್ನು ಸ್ವತಂತ್ರಳಾಗಿ ನಿಭಾಯಿಸಬಲ್ಲಳು. ಸಬಲಳಾಗಿ ಸಾಮಾಜಿಕ ಪ್ರಗತಿಗೆ ಕಾರಣಳಾಗಬಲ್ಲಳು. ಎಂಬ ವಿಷಯಗಳನ್ನರಿತ ಸಾವಿತ್ರಿಬಾಯಿ ಪುಲೆಯವರು ೧೮೪೮ ರಲ್ಲಿ ಮಹಿಳಾ ಶಿಕ್ಷಣದ ಬಗ್ಗೆ ಪ್ರಪ್ರಥಮ ಬಾರಿ ಸಾಂಪ್ರದಾಯಿಕ ಶಕ್ತಿಗಳ ಕೆಂಗಣ್ಣಿಗೆ ಗುರಿಯಾಗಿ ಹೆಣ್ಣು ಮಕ್ಕಳಿಗೆ ಶಾಲೆ ತೆರೆದರು. ಅಷ್ಟೇ ಅಲ್ಲದೇ ಸಾಮಾಜಿಕ ಅನಿಷ್ಟಗಳಿಗೆ ವೈಚಾರಿಕ ಪರ್ಯಾಯ ಮಾರ್ಗಗಳನ್ನು ವಾಸ್ತವದಲ್ಲಿ ಜಾರಿಗೆ ತಂದರು ಮತ್ತು ವಿಧವಾ ವಿವಾಹನ್ನು ಎತ್ತಿ ಹಿಡಿದರು.

 ಸಾಹಸ -ಸಾಧನೆ

 ಮಹಿಳೆಯರ ಸ್ಥಿತಿ ಗತಿ ಹಿಂದಿನಗಿಂತಲೂ ಇಂದು ಹೆಚ್ಚೇ ಎನಿಸುವಷ್ಟು ಸುಧಾರಿಸಿದೆ. ಆಕೆ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾಳೆ.  ಗಾಂಧೀಜಿಯವರ ದೂರದೃಷ್ಟಿತ್ವಕ್ಕೆ ಇಂಬು ಕೊಡುವಂತೆ ಎತ್ತರಕ್ಕೆ ಬೆಳದಿದ್ದಾಳೆ.  ನಾಲ್ಕು ಗೋಡೆಗಳ ಬಂಧಿಸಲ್ಪಟ್ಟಿದ್ದವಳು ಆಕಾಶದಲ್ಲಿ ಹಾರಾಡುತ್ತಿದ್ದಾಳೆ. ಪುರುಷರಿಗೆ ಮಾತ್ರ ಮೀಸಲಾಗಿದ್ದ ರಕ್ಷಣಾ ಕ್ಷೇತ್ರದಲ್ಲೂ ಮೆರೆಯುತ್ತಿದ್ದಾಳೆ. ಗಡಿಯಲ್ಲಿ ವೈರಿಗಳ ಜೊತೆ ಕಾದಾಡುತ್ತಿದ್ದಾಳೆ.  ಕುಟುಂಬದ ಸದಸ್ಯರ ಮೇಲೆ ಧನಾತ್ಮಕ ಪ್ರಭಾವ ಬೀರುವ ಮಹಿಳೆಗೆ ಇಡೀ ದೇಶವನ್ನು ಪರಿವರ್ತಿಸುವ ಶಕ್ತಿಯಿದೆ. ಸಬಲ ಸುಶಿಕ್ಷಿತ ಅಭಿವೃದ್ಧಿಶೀಲ ಸ್ತ್ರೀ ಸಮಾಜದಿಂದ ಮಾತ್ರ ಸರ್ವತೋಮುಖ ಅಭಿವೃದ್ಧಿ ಸಾಧ್ಯ. 

ಇಂದಿನ ದಿನಮಾನಗಳಲ್ಲಿ ಮಹಿಳೆ ಸಾಮಾಜಿಕ ರಾಜಕೀಯ ಆರ್ಥಿಕ ಕ್ಷೇತ್ರಗಳಷ್ಟೇ ಅಲ್ಲದೇ ಔದ್ಯೋಗಿಕ ರಂಗದಲ್ಲೂ ಪುರುಷನಿಗೆ ಸರಿ ಸಮನಾಗಿ ದುಡಿಯುತ್ತಿದ್ದಾಳೆ. ಎಷ್ಟೆಲ್ಲ ಕಷ್ಟಗಳನ್ನು ದಾಟಿ ತನ್ನ ಸಾಮರ್ಥ್ಯ ಮತ್ತು ಪ್ರತಿಭೆಯಿಂದ ಸರ್ವ ರಂಗಗಳಲ್ಲೂ ವಿಶ್ವದ ಗಮನವನ್ನು ತನ್ನೆಡೆ ಸೆಳೆಯುತ್ತಿದ್ದಾಳೆ. ಸಾಹಿತ್ಯ ಸಂಗೀತ ಕಲೆ ಸಂಸ್ಕೃತಿಗಳಲ್ಲಷ್ಟೇ ಅಲ್ಲ ಸಾಹಸ ಕಲೆಗಳಲ್ಲೂ ಸಾಧನೆಗೈದು ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. 

ಸುರಕ್ಷತೆ 

 

ಏನೆಲ್ಲ ಸಾಧಿಸಿದರೂ ಇಂದಿಗೂ ಮಹಿಳೆ ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ಉಳಿದಿದ್ದಾಳೆಂಬುದು ಅಲ್ಲಗಳೆಯಲಾಗದ ಸಂಗತಿ. ಮಹಿಳಾ ಸುರಕ್ಷತೆಯ ವಿಚಾರ ಬಂದರೆ ಸಾಕಷ್ಟು ಸಂಕಷ್ಟಗಳು ಕಣ್ಮುಂದೆ ರಾಚುತ್ತವೆ. ಮಹಿಳಾ ದೌರ್ಜನ್ಯ ಅಭದ್ರತೆ ಹೆಣ್ಣು ಭ್ರೂಣ ಹತ್ಯೆ ಲಿಂಗ ತಾರತಮ್ಯಗಳು ಬಿಟ್ಟೂ ಬಿಡದೆ ಕಾಡುತ್ತಿವೆ. ನಗರ ಪ್ರದೇಶಗಳಲ್ಲಿ ಕಲಿತ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತವೆ. ಹೀಗಿರುವಾಗ ಗ್ರಾಮೀಣ ಮಹಿಳೆಯರ ಪಾಡೇನು?  ಥಾಮ್ಸನ್ ರಾಯಿಟರ್ಸ್ ಫೌಂಡೇಶನ್‌ನ ೨೦೧೧ರ ಸಮೀಕ್ಷೆ ಪ್ರಕಾರ  ಮಹಿಳೆಯರಿಗೆ ಸುರಕ್ಷಿತವಲ್ಲದ ಸ್ಥಳಗಳಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ವಿಷಯವನ್ನು ತೆರೆದಿಟ್ಟಿದೆ. 

ನಾಗರಿಕತೆಯ ಪರೀಕ್ಷೆ
ಹೆಣ್ಣಿನಿಂದಲೇ ಇಹವು ಹೆಣ್ಣಿನಿಂದಲೇ ಪರವು 
ಹೆಣ್ಣಿನಿಂದಲೇ ಸಕಲ ಸಂಪದವು 
ಹೆಣ್ಣಲ್ಲದೊಣ್ಣಗಳು ಯಾರು ಸರ್ವಜ್ಞ  ಎನ್ನುವ ಸರ್ವಜ್ಞನ ತ್ರಿಪದಿ ಸ್ತ್ರೀ ಮಹತ್ವವನ್ನು ಸಾರಿ ಹೇಳುತ್ತಿದೆ. 

ಹೆಸರಿನಲ್ಲಿ ಸ್ವೇಚ್ಛಾಚಾರಿಗಳಾಗುತ್ತಿದ್ದಾರೆ. ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡುವುತ್ತಿದ್ದಾರೆ. ಮಹಿಳಾ ಪರ ಕಾನುನುಗಳನ್ನು ದುರುಪಯೋಗಪಡಿಸಿಕೊಂಡು ಅಶಾಂತಿ ಅಶಿಸ್ತು ಮತ್ತು ದರ್ಪವನ್ನು ಪ್ರದರ್ಶಿಸುತ್ತಿರುವುದು ಖಂಡನೀಯ. ಇದಕ್ಕೆ ತದ್ವಿರುದ್ಧವಾಗಿ ಗಂಡಿನ ಅಟ್ಟಹಾಸಕ್ಕೆ ಬಲಿಯಾಗುವವರ ಸಂಖ್ಯೆಯೂ ಕಡಿಮೆ ಇಲ್ಲ. ಸಮಸಮಾಜ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಸಹಜೀವನ ಸಹಬಾಳ್ವೆಗಳೇ ಆಧಾರ. ’ಹೆಣ್ಣಿಗೆ ಕಟ್ಟುವ ಬೆಲೆಯು ನಾಗರಿಕತೆ ಪರೀಕ್ಷೆಯ ಅಳತೆಗೋಲಾಗಿದೆ.’ಸ್ತ್ರೀಯು ಒಂದು ಅಮೋಘ ಶಕ್ತಿ ಅವಳಿಲ್ಲದೇ ಪುರುಷನಿಗೆ ಯಶಸ್ಸು ದೊರೆಯಲು ಸಾಧ್ಯವೇ ಇಲ್ಲ. ಎಂಬ ರಾಮಾಯಣ ನುಡಿಯು ಸತ್ಯದ ನುಡಿ.

ಯಾ ದೇವಿ ಸರ್ವ ಭೂತೇಶು ವಿದ್ಯಾ ರೂಪೇಣ ಸಂಸ್ಥಿತಾ, ನಮಸ್ತಸೈ ನಮಸ್ತಸೈ ನಮಸ್ತಸೈ 

ಯಾ ದೇವಿ ಸರ್ವ ಭೂತೇಶು ಶಕ್ತಿ ರೂಪೇಣ ಸಂಸ್ಥಿತಾ, ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ 

ಕ್ರಮಿಸಬೇಕಾದ ಹಾದಿ 

ವಿದ್ಯಾ ಅಧಿದೇವತೆ ಮತ್ತು ಶಕ್ತಿ ದೇವತೆಗಳಾಗಿ ಪೂಜಿಸಲ್ಪಡುವ ಮಹಿಳೆ ಎಷ್ಟೆಲ್ಲ ತೊಂದರೆಗೆ ಒಳಗಾಗುತ್ತಿದ್ದಾಳೆ. ಒಂದಿಲ್ಲೊಂದು ದಿನ ಕತ್ತಲೆ ಸರಿದು ಸಂಪೂರ್ಣ ಬೆಳಕು ಕಾಣಲೇಬೇಕು ಎಂಬ ನುಡಿಯಂತೆ ವೇದಕಾಲದ ಮಹಿಳೆಯರ ವೈಭವವನ್ನು ಮತ್ತೆ ಪಡೆಯಲು ಮನಸ್ಸು ಮಾಡಬೇಕಿದೆ. ಶ್ರಮವಹಿಸಿ ಬಹಳಷ್ಟು ಹಾದಿ ಕ್ರಮಿಸಬೇಕಿದೆ. 


2 thoughts on ““ಶಕ್ತಿ ಸ್ವರೂಪಿಣಿ ಸ್ತ್ರೀ”ಜಯಶ್ರೀ ಅಬ್ಬಿಗೇರಿ

  1. ಚೆನ್ನಾಗಿದೆ ಮೇಡಂ ಶಿಮೋಂದಿ ಭವ ಅವರ ಪುಸ್ತಕ The second sex book ನೋಡಿದ್ದರೆ ಚೆನ್ನಾಗಿತ್ತು.

Leave a Reply

Back To Top