ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಡಿಎಸ್.ರಾಮಸ್ವಾಮಿ

ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

ಈ ಕರೋನಾದ ಭಯ ನಮ್ಮೆಲ್ಲರನ್ನೂ ಎಷ್ಟು ಜರ್ಝರಿತಗೊಳಿಸಿದೆ ಎಂದರೆ ನಮ್ಮ ನಿತ್ಯದ ಜೀವನದ ಕನಿಷ್ಠ ಕೆಲಸ ಕಾರ್ಯಗಳಲ್ಲೂ ವಿಪರೀತ ಎಚ್ಚರಿಕೆಯ ಹೆಜ್ಜೆಯನ್ನು ಇಡಬೇಕಾಗಿದೆ. ಒಂದೇ ಸೂರಿನೊಳಗಿದ್ದೂ ಅಪರಿಚಿತರಂತೆ ಬಾಳುವುದು ಅಭ್ಯಾಸವೇ ಆಗಿಬಿಟ್ಟಿದೆ. ನಿತ್ಯವೂ ಬೇಕಾಗುವ ತರಕಾರಿ, ಹಣ್ಣು, ಹೂವು, ದಿನಸಿ ತರುವುದಕ್ಕೂ ಸಮಯ ಹೊಂದಿಸಿಕೊಂಡು ಅವು ಯಾವ ಜಾಗದಲ್ಲಿ ಸಿಗುತ್ತವೆಯೋ ಅಲ್ಲಿಗೆ ದೌಡಾಯಿಸುವ ಪರಿಸ್ಥಿತಿ ಎಲ್ಲ ಊರಲ್ಲೂ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರದ ಕಛೇರಿಗಳು ಅತಿ ಜರೂರು ಎಂದು ಅವು ಭಾವಿಸಿರುವ ಕೆಲಸಗಳನ್ನು ಮಾತ್ರ ನಿರ್ವಹಿಸುತ್ತಿವೆ. ಬ್ಯಾಂಕುಗಳು ವ್ಯವಹಾರಕ್ಕೆ ಇಂಟರ್ನೆಟ್ ಬಳಸಲು ಗ್ರಾಹಕರಿಗೆ ಸಂದೇಶ ಕಳಿಸುತ್ತಿವೆ.

ವಿದ್ಯುತ್ ಬಿಲ್ ಕಟ್ಟುವುದು, ಗ್ಯಾಸ್ ಬುಕ್ ಮಾಡುವುದು, ಪ್ರಯಾಣಕ್ಕಾಗಿ ಬಸ್ಸು,ರೈಲು,ವಿಮಾನದ ಟಿಕೆಟ್ ಪಡೆಯುವುದೂ ಸೇರಿದಂತೆ ಅನೇಕ ವಿಚಾರಗಳು ಈಗ ಅಂಗೈ ಅಗಲದ ಮೊಬೈಲಿನಲ್ಲಿ ಸಾಧ್ಯ ಆಗಿ ಅದನ್ನು ಬಳಸುವವರ ಪ್ರಮಾಣ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಯಾರೂ ಅಲ್ಲಗಳೆಯಲಾರರು. ಕಾಯ್ದಿರಿಸದ ಅಂದರೆ ಸೀಟು ಗ್ಯಾರಂಟಿ ಇಲ್ಲದ ಓಪನ್ ಟಿಕೆಟ್ ಪಡೆಯುವ ಇಂಡಿಯನ್ ರೇಲ್ವೆಯ ಯಾಪ್ ಇರದ ಮೊಬೈಲ್ ಬಳಕೆದಾರರೂ ಇಲ್ಲವೇ ಇಲ್ಲ. ಬೇಕೆನಿಸಿದಾಗ ಎಲ್ಲಿಗೆ ಬೇಕಾದರೂ ಟಿಕೆಟ್ ಖರೀದಿಸುವ ಅವಕಾಶ ಗಂಟೆಗಟ್ಟಲೆ ಕ್ಯೂ ನಿಲ್ಲಬೇಕಾಗುವ ಮತ್ತು ಚಿಲ್ಲರೆಗಾಗಿ ಒದ್ದಾಡಬೇಕಿದ್ದ ಸಂಗತಿಗಳಿಂದ ಮುಕ್ತಿ ದೊರಕಿಸಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮನೆ ಕಂದಾಯ, ನೀರಿನ ವಾರ್ಷಿಕ ಪಾವತಿ ಕೂಡ ಈಗ ಬ್ಯಾಂಕಿನ ಖಾತೆಗೆ ನೇರ ಪಾವತಿ ಮಾಡಬಹುದಾದ ಅವಕಾಶ ಪುರಸಭೆ, ನಗರಸಭೆಗಳು ಮಾಡಿವೆ. ಬಿಲ್ ಕಲೆಕ್ಟರ್ ಹಿಡಿದು, ದುಡ್ಡು ಪಾವತಿಸಿದರೂ ಸಿಗದೇ ಇದ್ದ ರಸೀತಿ ಈಗ ಕ್ಷಣಾರ್ಧದಲ್ಲಿ ಸಿಕ್ಕುವಂತಾಗಿದೆ. ಜೀವ ವಿಮೆ ಮತ್ತು ಸಾಮಾನ್ಯ ವಿಮೆಯ ಪಾವತಿ ಈಗ ಸಲೀಸು. ಅವಧಿಗೆ ಮುನ್ನವೇ ಮೊಬೈಲಿಗೆ ಬಂದು ಬೀಳುವ ಸಂದೇಶವನ್ನದುಮಿ ಕ್ಷಣ ಮಾತ್ರದಲ್ಲಿ ಪೇ ಮಾಡುವುದು ಈಗ ಎಲ್ಲರಿಂದಲೂ ಸಾಧ್ಯವಾಗಿದೆ.

ಈ ಎಲ್ಲಕ್ಕೂ ಕಾರಣವಾದದ್ದು ಅಂಡ್ರಾಯಿಡ್ ಫೋನು ಮತ್ತು ಎಲ್ಲರಿಗೂ ಲಭ್ಯವಾಗಿರುವ ಇಂಟರ್ನೆಟ್ ಸಂಪರ್ಕ. ಮೊದಲೆಲ್ಲ ತಂತಿಯ ಮೂಲಕವೇ ನಡೆಯ ಬೇಕಿದ್ದ ಸಂಪರ್ಕ ಸಾಧನಗಳು ಯಾವಾಗ ತಂತಿ ರಹಿತ ಆದವೋ ಆಗಿನಿಂದಲೇ ಈ ಎಲ್ಲವೂ ಸಾಧ್ಯವಾಯಿತು. ಈಗ ಅಂಡ್ರಾಯಿಡ್ ಫೋನು ಗತ್ತಲ್ಲ, ಅನಿವಾರ್ಯ ಸಂಪರ್ಕ ಸೇತು. ಸರ್ಕಾರವು ಕೊಡುವ ತಿಂಗಳ ರೇಷನ್ ಕೂಡ ಒಟಿಪಿ ಇಲ್ಲದೇ ನಡೆಯಲಾರದ ಅನಿವಾರ್ಯತೆ ಈಗ ಸೃಷ್ಟಿಯಾಗಿದೆ. ನಿತ್ಯ ಸೌಲಭ್ಯಗಳ ಬಳಕೆಗೆ ಇವತ್ತು ಇಂಟರ್ನೆಟ್ ಅನಿವಾರ್ಯವೇ ಆಗಿ ಬದಲಾಗಿದೆ.

ಅದು ಎಂಭತ್ತರ ದಶಕದ ಮಧ್ಯದ ದಿನಗಳು. ಬದುಕಿನ ಅನಿವಾರ್ಯದ ಸಿಲುಕಿಗೆ ಸಿಕ್ಕು ತಮ್ಮ ವಿದ್ಯಾಭ್ಯಾಸ ಅರ್ಧಕ್ಕೇ ಬಿಟ್ಟು ಅತಂತ್ರರಾಗಿದ್ದ ಹಲವರ ಕನಸನ್ನ ನನಸು ಮಾಡಿದ್ದು ಸಂಜೆ ಕಾಲೇಜು ಎಂಬ ಸಂಜೀವಿನಿ. ಮೊಟಕಾಗಿದ್ದ ವಿದ್ಯಾಭ್ಯಾಸವನ್ನು ಮುಂದುವರೆಸಿ ಪದವಿ ಪಡೆದ ಅನೇಕರು ಈಗ ಉನ್ನತ ಅಧಿಕಾರಿಗಳೇ ಆಗಿದ್ದಾರೆ. ಈ ಸಂಜೆ ಕಾಲೇಜುಗಳು ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದ ಕೈಗಾರಿಕಾ ಪ್ರದೇಶಗಳಲ್ಲೂ ಇದ್ದವು. ಅದರ ಮುಂದಣ ಹೆಜ್ಜೆಯೆಂದರೆ ದೂರ ಶಿಕ್ಷಣ ಎಂಬ ಓಪನ್ ಯೂನಿವರ್ಸಿಟಿಯ ಪರಿಕಲ್ಪನೆ. ಅನೇಕ ಕಾರಣಗಳಿಂದ ಅರ್ಧಕ್ಕೇ ನಿಂತಿದ್ದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಸ್ನಾತಕ,ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ನಿಯತ ವಿದ್ಯಾರ್ಥಿಗಳ ಸರಿ ಸಮಕ್ಕೆ ಬರೆದು, ಆ ಪರೀಕ್ಷೆಗಳಲ್ಲಿ ಚಿನ್ನದ ಪದಕ ಪಡೆದ ಅನೇಕ ಪ್ರತಿಭಾವಂತರು ನಮ್ಮ ಮುಂದಿದ್ದಾರೆ. ಈ ಸಂಜೆ ಕಾಲೇಜು ಮತ್ತು ದೂರ ಶಿಕ್ಷಣದ ಮೂಲಕ ಅನೇಕ ಪ್ರತಿಭಾವಂತರು ತಮ್ಮ ಬದುಕು ಕಟ್ಟಿ ಕೊಂಡದ್ದು ಆ ಕಾಲದ ಕೊಡುಗೆಯೇ. ಇವತ್ತಿಗೂ ಬಹುತೇಕ ವಿವಿಗಳು ಅಂಚೆ ಮತ್ತು ತೆರಪಿನ ದೂರ ಶಿಕ್ಷಣವನ್ನು ನೀಡುತ್ತ ವಿದ್ಯಾ ದಾಹಿಗಳನ್ನು ಪೊರೆಯುತ್ತಿವೆ. ಎಲ್ಲ ರಂಗಗಳಲ್ಲಿ ಇರುವ ಹಾಗೆಯೆ ಮೋಸ ವಂಚನೆಗಳ ಜಾಲವೂ ಈ ದೂರ ಶಿಕ್ಷಣ ಕ್ಷೇತ್ರದಲ್ಲಿ ನಡೆದು ಕೆಲವು ಖೊಟ್ಟಿ ವಿವಿಗಳು ಈಗಾಗಲೇ ನಿಷೇದದ ಹಣೆಪಟ್ಟಿ ಪಡೆದಿವೆ.

ಇಂಟರ್ನೆಟ್ ಎಂಬ ಸಂಪರ್ಕ ವಿಶ್ವದ ಯಾವುದೋ ಮೂಲೆಯನ್ನು ಮತ್ತೊಂದು ಮೂಲೆಯಿಂದ ತಲುಪ ಬಲ್ಲ ದೂರಗಾಮೀ ಸಂವೇದಿ. ಈ ಅಂತರ್ಜಾಲದ ಯುಗ ವಸುದೈವ ಕುಟುಂಬಕಂ ಎಂಬ ಆರ್ಷೇಯ ಕಲ್ಪನೆಗೆ ಮತ್ತೊಂದು ಭಾಷ್ಯವನ್ನೇ ಬರೆದಿದೆ ಎಂದರೆ ಅತಿಶಯೋಕ್ತಿ ಅಲ್ಲವೇ ಅಲ್ಲ. ತಿಳಿಯದೇ ಇರುವ ಹಲವು ಸಮಸ್ಯೆಗಳಿಗೆ ಗೂಗಲ್ ಎನ್ನುವ ಸರ್ಚ್ ಎಂಜಿನ್ ತತ್ ಕ್ಷಣವೇ ಉತ್ತರವನ್ನು ಹುಡುಕಿ ಕೊಟ್ಟರೆ ಯಾರೇ ಹೇಳುವ ಸುಳ್ಳನ್ನು ಕ್ಷಣಾರ್ಧದಲ್ಲಿ ಬಯಲು ಮಾಡುವ ಅವಕಾಶ ಕೊಟ್ಟದ್ದೂ ಈ ಅಂತರ್ಜಾಲವೇ.

UGC का बड़ा ऐलान-भारत की टॉप 100 ...

ಈ ನಡುವೆಯೇ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಜೀವನ ಅನೇಕ ಆಧುನಿಕ ತಂತ್ರ ಜ್ಞಾನದ ಸಹಾಯದಿಂದ ಸುಲಭ ಸಾಧ್ಯವಾಗುತ್ತಿದೆ. ಮೇಲೆ ಹೇಳಿದ ಅನೇಕ ಕೆಲಸಗಳು ಇಂಟರ್ನೆಟ್ ಇಲ್ಲದೇ ನಡೆಯಲಾರವು. ಬ್ಯಾಂಕು, ವಿಮೆ, ಆರ್ಟಿಓ, ಸಾರಿಗೆ, ಪೋಲೀಸ್ ಇಲಾಖೆ ಕೂಡ ಈಗ ಡಿಜಿಟಲೈಸ್. ಅಂದರೆ ಕಂಪ್ಯೂಟರಿಲ್ಲದ ಯಾವ ಕಛೇರಿಯೂ ಇವತ್ತು ಹೊಸ ಕಾಲದ ವೇಗಕ್ಕೆ ತೆರೆದುಕೊಳ್ಳಲಾರವು. ಗ್ರಾಮ ಲೆಕ್ಕಿಗನ ಕೃಪೆ ಇದ್ದರೆ ಮಾತ್ರ ಸಿಗುತ್ತಿದ್ದ ಪಹಣಿ ಈಗ ಹತ್ತು ರೂಪಾಯಿ ಕಟ್ಟಿದ ಕೂಡಲೇ ಕೈಯಲ್ಲಿ ಇರುತ್ತದೆ. ಯವುದೇ ಇಲಾಖೆಯ ಯಾರ ಮೇಲೆ ಬೇಕಾದರೂ ಈಗ ನೇರ ದೂರು ಸಲ್ಲಿಸಬಹುದು. ಅಂಥ ಹಲವು ಸ್ತರಗಳ ಮ್ಯಾನೇಜ್ಮೆಂಟ್ ಸಾಧ್ಯವಾಗಿರುವುದೇ ಆಧುನಿಕ ತಂತ್ರಾಂಶಗಳ ಅಭಿವೃದ್ಧಿಯಿಂದಾಗಿ. ಇವತ್ತು ನಮ್ಮ ಕೈಯಲ್ಲಿ ಮೊಬೈಲ್ ಇರಲಾಗಿ ಪ್ರತಿಭೆ ಇದ್ದೂ ಮುನ್ನೆಲೆಗೆ ಬಾರದೇ ಇದ್ದ ಅದೆಷ್ಟು ಜೀವಗಳು ಎಫ್ಬಿಯಲ್ಲಿ ಮಿಂಚುತ್ತಿವೆ ಎಂದರೆ ಅದು ಕೂಡ ಈ ಕಾಲ ನಮಗೆ ಕೊಟ್ಟ ಬಳುವಳಿಯೇ. ಈಗ ಹಲವು ಇಲಾಖೆಗಳು ಅನಗತ್ಯ ಖರ್ಚು ಮಾಡಿ ನಡೆಸುತ್ತಿದ್ದ ಸಮ್ಮೇಳನಗಳನ್ನು, ತರಬೇತಿಗಳನ್ನು ತಂತ್ರಾಂಶದ ನೆರವು ಪಡೆದು ಇದ್ದಲ್ಲೇ ಆನ್ಲೈನ್ ಸಭೆಗಳ ಮೂಲಕ ನಡೆಸುತ್ತಿವೆ.

ಇಂಥೆಲ್ಲ ಅವಕಾಶಗಳೂ ಸಾಧ್ಯತೆಗಳೂ ಇರುವಾಗ ಶಿಕ್ಷಣ ಕ್ಷೇತ್ರದಲ್ಲೂ ಈ ಸೌಲಭ್ಯ ಬಳಸುವುದು ನಿಜಕ್ಕೂ ಅತ್ಯಗತ್ಯ ವಿಚಾರವೇ. ಮೊದಲೆಲ್ಲ ಸಂಗೀತ ಕಲಿಯಲು, ಕಂಪ್ಯೂಟರಿಗೆ ಸಂಬಂಧಿಸಿದ ಹಲವು ಕೋರ್ಸುಗಳನ್ನು ಕಲಿಯಲು ಬೆಂಗಳೂರಿಗೇ ಓಡಬೇಕಿತ್ತು. ಇವತ್ತು ನಮಗೆ ಬೇಕಿರುವ ಯಾವುದೇ ವಿದ್ಯೆಯನ್ನು ಕಲಿಯಲು ಎಲ್ಲಿಗೂ ಹೋಗಬೇಕಾಗಿಲ್ಲ, ಪ್ರಯಾಣ ಮಾಡಬೇಕಿಲ್ಲ, ಸಮಯದ ಹೊಂದಾಣಿಕೆ ಮತ್ತು ಅನಗತ್ಯ ಮಾನಸಿಕ ಒತ್ತಡಗಳೇ ಇಲ್ಲದೆ ನಮಗೆ ನಿಜಕ್ಕೂ ಬೇಕಿರುವುದನ್ನು ಅಂತರ್ಜಾಲದ ತರಗತಿಗಳ ಮೂಲಕ ಕಲಿಯುವುದು ಸಾಧ್ಯವಿದೆ. ಅಲ್ಲದೇ ಕೆಲವೊಂದು ಸಂಸ್ಥೆಗಳು ತಮ್ಮ ಕಲಿಕಾ ತರಗತಿಗಳಿಗೆ ಬೇಕಾದ ಲಿಂಕುಗಳನ್ನು ತರಗತಿಯ ಆರಂಭದಲ್ಲೇ ಕಳಿಸಿ ಆ ತರಗತಿಯು ಪಾಸ್ ವರ್ಡ್ ಕೊಟ್ಟರಷ್ಟೇ ತೆರೆಯುವ ವ್ಯವಸ್ಥೆಯನ್ನೂ ಮಾಡಿ ಕೊಂಡಿವೆ.

ಕಂಪ್ಯೂಟರ್ ನೆಟ್ ವರ್ಕಿಂಗ್ ಮತ್ತು RDBMS ಥರದ ಕೋರ್ಸುಗಳು ಯುಟ್ಯೂಬ್ ಛಾನೆಲ್ಲಿನಲ್ಲಿ ಅದೆಷ್ಟಿವೆ ಎಂದರೆ ಆಸಕ್ತಿ ಮತ್ತು ಕಲಿಕೆಯ ಉತ್ಸಾಹವಿದ್ದವರು ತಾವಿದ್ದೆಡೆಯಿಂದಲೇ ಅದನ್ನು ಕಲಿಯಬಲ್ಲರು.

Consumer travel News In Hindi : COVID-19; coronavirus ; corona ...

ಸದ್ಯ ಚರ್ಚೆಯಲ್ಲಿರುವ ಆನ್ಲೈನ್ ಶಿಕ್ಷಣದ ಅಗತ್ಯತೆ ಇಷ್ಟೆಲ್ಲ ಬರೆದ ಮೇಲೆ ಅತ್ಯಗತ್ಯ ಮಾನ್ಯ ಮಾಡಲೇ ಬೇಕಿರುವ ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿಯೇ ಇದೆ ಎನ್ನುವುದು ಸತ್ಯವಾದರೂ ಯಾವ ತರಗತಿಯಿಂದ ಮತ್ತು ಯಾವ ವಯಸ್ಸಿನ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎನ್ನುವುದರಲ್ಲಿ ವಿಭಿನ್ನ ನಿಲುವು ಮತ್ತು ವಿಭಿನ್ನ ವಾದಗಳೂ ಸಹಜವಾಗಿಯೇ ಹುಟ್ಟಿವೆ. ಏಕೆಂದರೆ ಶಿಕ್ಷಣ ತಜ್ಞರ ಪ್ರಕಾರ ಕಲಿಕೆಯು ವಯಸ್ಸು ಮತ್ತು ಕಲಿಕಾ ಪಠ್ಯ ಹಾಗೂ ಕಲಿಕಾ ಸಾಮಗ್ರಿಗಳ ಮೇಲೆ ನಿಂತಿದೆ. ಈ ಸಂಗತಿಯನ್ನು ಗಮನಿಸಿದರೆ ಪ್ರಸ್ತುತ ಇರುವ ಶೈಕ್ಷಣಿಕ ವ್ಯವಸ್ಥೆಯು ಆನ್ಲೈನ್ ತರಗತಿಗೆ ಬದಲಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆಯೇ ಎಂದರೆ ಉತ್ತರ ನಿರಾಶೆಗೆ ತಳ್ಳುತ್ತದೆ. ಏಕೆಂದರೆ ನಮ್ಮ ಬಹುತೇಕ ಸರ್ಕಾರಿ ಶಾಲೆ ಕಾಲೇಜುಗಳಲ್ಲಿ ವಿದ್ಯುತ್ ಮತ್ತು ಕಂಪ್ಯೂಟರ್ ಇರಲಿ ಶೌಚಾಲಯಗಳು ಮತ್ತು ಅತ್ಯಗತ್ಯ ಬೇಕಿರುವ ನೀರು ಕೂಡ ಇಲ್ಲದಿರುವ ಸ್ಥಿತಿ ಇದೆ. ಹಳ್ಳಿಗಾಡಿನ ಶಾಲೆಗಳ ಶಿಕ್ಷಕರನ್ನೇ ನಿಯಂತ್ರಿಸಲಾಗದ ಶೈಕ್ಷಣಿಕ ವ್ಯವಸ್ಥೆ ನಮ್ಮದು. ಎಲ್ಲ ಇಲಾಖೆಗಳ ಹಾಗೆ ಇಲ್ಲೂ ತುಂಬ ಪ್ರಾಮಾಣಿಕರೂ ನಿಸ್ಪೃಹರೂ ಶಾಲೆ ಎಂದರೆ ತೇದು ಕೊಳ್ಳುವವರೂ ಇದ್ದಾರೆ. ಆದರೆ ಊರಿನ ರಾಜಕೀಯ ಶಾಲೆಗಳ ಮೇಲೂ ಪ್ರಭಾವ ಬೀರುವುದರಿಂದ ಕೆಲವೇ ಕೆಲವರು ಮಾತ್ರ ಇದನ್ನೆಲ್ಲ ಮೆಟ್ಟಿ ನಿಲ್ಲಬಲ್ಲರು. ಎಲ್ಲರೂ ಶ್ರೀರಾಮರೇ ಆದರೆ ರಾವಣನ ಪಾತ್ರ ಯಾರಿಗೆ ಬೇಕು?

ವಯಸ್ಸು ಮತ್ತು ಕಲಿಕೆಯ ದೃಷ್ಟಿಯಿಂದ ಗಮನಿಸಿದರೆ ಪಿಯುಸಿ ಮತ್ತು ಅದರಾಚೆಯ ಓದಿಗೆ ಆನ್ಲೈನ್ ತರಗತಿ ಬಳಸಬಹುದು. ಹದಿನಾರರ ನಂತರ ದೈಹಿಕವಾಗಿ ಮಾನಸಿಕವಾಗಿ ಪ್ರಬುದ್ಧತೆ ಕೂಡ ಇರುತ್ತದೆ. ಆದರೆ ಹದಿ ಹರಯದ ವಿದ್ಯಾರ್ಥಿಗಳನ್ನು ಪಾಲಕರು ಆಗಾಗ ಗಮನಿಸುತ್ತ ತರಗತಿ ಇದ್ದಾಗ ಮಾತ್ರವೇ ಮೊಬೈಲ್ ಅಥವ ಲ್ಯಾಪ್ ಟಾಪ್ ಬಳಸುವಂತೆ ತಾಕೀತು ಇರಬೇಕು.ಇಲ್ಲವಾದಲ್ಲಿ ಬೇಡವಾದ ವೆಬ್ ಸೈಟುಗಳನ್ನೇ ಹದಿ ಹರಯದವರು ಕದ್ದು ಮುಚ್ಚಿ ನೋಡುತ್ತಾರೆ. ಇದಕ್ಕೆ ಅವಕಾಶ ಸಿಕ್ಕಲೇ ಬಾರದು.

ಪ್ರಾಥಮಿಕ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಈ ಆನ್ಲೈನ್ ತರಗತಿ ವ್ಯರ್ಥ. ಏಕೆಂದರೆ ಕಿರು ವಯಸ್ಸಿನ ಮಕ್ಕಳನ್ನು ಅನುನಯದಿಂದ ಪ್ರೀತಿ ಮತ್ತು ಸ್ಪರ್ಶದಿಂದ ಗೆಲ್ಲುತ್ತಲೇ ಕಲಿಸಬೇಕು. ಮನಸ್ಸನ್ನು ಕೇಂದ್ರೀಕರಿಸದೆ ಪಾಠವನ್ನು ಈ ಮಕ್ಕಳು ಹೇಗೆ ಕಲಿತಾವು? ಮನಸ್ಸನ್ನು ನಿಗ್ರಹಿಸಿ ಎಂದು ಹೇಳುವುದು ಸುಲಭ. ಆದರೆ ಸಣ್ಣ ವಯಸ್ಸಿನ ಹುಡುಗ ಬುದ್ಧಿಯ ವಿದ್ಯಾರ್ಥಿಗಳಿಗೆ ಪಾಠವನ್ನು ಆಟದ ಮೂಲಕವೇ ಕಲಿಸಲು ಸಾಧ್ಯ. ನಿಜಕ್ಕೂ ಸರ್ವ ಶಿಕ್ಷಣ ಅಭಿಯಾನದ ಉದ್ದೇಶ ಇಲ್ಲಿ ಸ್ಮರಿಸಲೇ ಬೇಕು. ಇನ್ನು ಪಾಲಕರ ಆರ್ಥಿಕ ಸಾಮರ್ಥ್ಯ ತುಂಬ ಮುಖ್ಯ. ಸರ್ಕಾರಿ ಶಾಲೆಗಳಲ್ಲಿ ಉಚಿತವಾಗಿ ಸಮ ವಸ್ತ್ರ, ಪಠ್ಯ ಪುಸ್ತಕ, ಮಧ್ಯಾಹ್ನದ ಊಟ ಕೊಟ್ಟರೂ ಮಕ್ಕಳ ಸಂಖ್ಯೆ ಕುಸಿಯುತ್ತಲೇ ಇದೆ. ಅತ್ತ ಖಾಸಗಿಯವರ ಆಕರ್ಷಣೆ ಇಂಗ್ಲಿಷ್ ಮೋಹ ಕೂಡ ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿದೆ. ಇನ್ನು ಸರ್ಕಾರವೇ ಆನ್ಲೈನ್ ಎಂದರೆ ಹಳ್ಳಿಗಾಡಿನ ಮಕ್ಕಳು ಸಂಪೂರ್ಣವಾಗಿ ಶಿಕ್ಷಣ ವಂಚಿತರಾಗುತ್ತಾರೆ.

*********

8 thoughts on “ಆನ್ಲೈನ್ ಶಿಕ್ಷಣ – ಸಾಧ್ಯತೆ ಮತ್ತು ಜವಾಬ್ದಾರಿಗಳು.

  1. DSR, ನಿಮ್ಮ ಬರಹ ಅರ್ಥಪೂರ್ಣ, ವೈಚಾರಿಕವಾಗೂ,ಸಕಾಲಿಕ ಮಹತ್ವದ ಅಂಶಗಳನ್ನು ಬಿಡಿಸಿ,ಬಿಡಿಸಿ ಹೇಳಿದ್ದೀರಿ.ನಿಮ್ಮ ಮಾತುಗಳು ಅಕ್ಷರಶಃ ನಿಜ.ಅಪರೂಪದ ,ವಿಶಿಷ್ಟ ,ನೇರ ,ಅತ್ಯುತ್ತಮ ಚಂದದ ಬರಹ.wonderful. wonderful. Wonderful thank you DSR

  2. ಸತ್ಯ ಸರ್‌.‌ಹಳ್ಳಿಗಾಡಿನ ಮಕ್ಕಳನ್ನು ತಲುಪಲು ಅಸಾಧ್ಯ.ಅಲ್ಲದೆ ಆ ವಯಸ್ಸಿನಲ್ಲಿ ಮಗುವಿಗೆ ಹೇರಿಕೆ ಸಲ್ಲದು.ಉನ್ನತ ಶಿಕ್ಷಣ ಪಡವ ಮಕ್ಕಳಿಗೆ ಸೂಕ್ತ.ಖಾಸಗಿ ಸಂಸ್ಥೆ ಗಳ ಒತ್ತಡ ತಡೆಗಟ್ಟಬೇಕು……ಸೂಪರ್

  3. ಪ್ರಸ್ತುತತೆಗೆ ಸ್ಪಂದಿಸುವ ಈ ರೀತಿಯ ಲೇಖನಗಳು ಸಂಗಾತಿಯಲ್ಲಿರಲಿ

  4. ಆನ್ಲೈನ್ ಶಿಕ್ಷಣ ಎನ್ನುವುದು ಹಳ್ಳಿಗರಿಗೆ ಆಕಾಶ ನಕ್ಷತ್ರದಂತೆ. ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್ಲೈನ್ ತರಗತಿಗಳಿಂದ ಕಲಿಯುವ ತುರ್ತಾದರೂ ಏನು? ಪಠ್ಯದ ಆಚೆ ಕಲಿಯುವುದಕ್ಕಿರುವುದರ ಕುರಿತು ಈಗಲಾದರೂ ಯೋಚಿಸದೆ ಓದರೆ ಹೇಗೆ?

  5. ವಾಸ್ತಾವಿಕ ಪ್ರಜ್ಞೆ ಆಳವಾದ ಅಧ್ಯಯನ ಹೊಂದಿದ ಲೇಖನವಿದು ಲೇಖಕರಿಗೆ ಸಂಪಾದಕರಿಗೆ ಅಭಿನಂದನೆಗಳು

  6. ವಾಸ್ತವಿಕ ಪ್ರಜ್ಞೆ ಆಳವಾದ ಅಧ್ಯಯನ ಹೊಂದಿದ ಲೇಖನವಿದು ಲೇಖಕರಿಗೆ ಸಂಪಾದಕರಿಗೆ ಅಭಿನಂದನೆಗಳು

  7. ಡಿ.ಎಸ್.ರಾಮಸ್ವಾಮಿಯವರ ಲೇಖನ ಸಕಾಲಿಕವಾದದ್ದು.ನಮ್ಮದು ಹಳ್ಳಿಗಳ ದೇಶ.ಗುಡ್ಡಗಾಡು ಪ್ರದೇಶದ ಮಕ್ಕಳು ಖಂಡಿತವಾಗಿಯೂ ಶಿಕ್ಷಣದಿಂದ ವಂಚಿತರಾಗುತ್ತಾರೆ.ಅನ್ ಲೈನ್ ತರಗತಿ ನಗರ ಕೇಂದ್ರಿತ ಪ್ರದೇಶಗಳಿಗೆ ಮಾತ್ರ ಸೀಮಿತ.. ಅದರ ಬದಲು ಶೈಕ್ಷಣಿಕ ಪಠ್ಯವನ್ನು30-40 % ಕಡಿತಗೊಳಿಸಿ ನವೆಂಬರ್ ನಂತರ ಶಾಲಾ ಕಾಲೇಜು ಆರಂಭಿಸುವುದು ಸೂಕ್ತ.. ಕಲಿಕೆಗಿಂತ ಸದ್ಯ ಜೀವ ಮುಖ್ಯ..
    ಜೀವ ಉಳಿಸಿಕೊಂಡರೆ ಹೇಗೋ ಬದುಕಬಹುದು.ಶಿಕ್ಷಣ ಕಲಿತ ನೂರಕ್ಕೆ ನೂರರಷ್ಟು ನೌಕರಿ ಪಡೆಯುವ ಸಾಧ್ಯತೆ ತೀರ ಕಡಿಮೆ..
    ವೃತ್ತಿ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಯೋಗಿಸಬಹುದು…
    ಮಕ್ಕಳಿಗೆ ಕೊಡಿಸಿದ ಮೊಬೈಲ್ PUBG ಆಡಲು ಉಪಯೋಗ ಆಗುವುದು ಬಿಟ್ಟರೆ ಶಿಕ್ಷಣ ಕಲಿಯುವ ಸಾಧ್ಯತೆ ಕಡಿಮೆ..
    ಹಿರಿಯ ಮಿತ್ರರಾದ ರಾಮಾಸ್ವಮಿಯವರ ಲೇಖನ ಸಮಯೋಚಿತ ಸಲಹೆಯನ್ನು ನೀಡಿದೆ.

Leave a Reply

Back To Top