ಅಪ್ಪನ ದಿನದ ವಿಶೇಷ-ಜಯಶ್ರೀ ಭ ಭಂಡಾರಿ

ಜೂನ ಮೂರನೇ ಭಾನುವಾರದಂದು ವಿಶ್ವದಾದ್ಯಂತ ಅಪ್ಪಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ತಂದೆ ತಾಯಿ ಮಕ್ಕಳ ಭವಿಷ್ಯ ಬರೆಯುವ ಎರಡು ಶಾಹಿಗಳು. 

ಆ ಎರಡು ಶಾಹಿಗಳು ಮಕ್ಕಳ ಭಾವಿ ಭವಿಷ್ಯತ್ತಿಗೆ ಅಣಿಗೊಳಿಸುತ್ತವೆ. ಇದರಲ್ಲಿ ತಂದೆ ಹೆಚ್ಚು ತಾಯಿ ಹೆಚ್ಚು ಎನ್ನುವ ಪ್ರಮೇಯವೇ ಇಲ್ಲ. ಒಂದು ಬಂಡಿಗೆ ಎರಡು ಚಕ್ರವಿದ್ದಾಗಲೇ ಅದು ಓಡುತ್ತದೆ. ಒಂದು ಚಕ್ರ ಊಣವಾದರೂ ಸಂಸಾರದಲ್ಲಿ ಸರಿಗಮ ಇರಲಾರದು. ತಂದೆ ಇದ್ರೆ ಬಳಗ ಹೆಚ್ಚು ತಾಯಿ ಇದ್ದರೆ ತವರು ಹೆಚ್ಚು ಎಂದು ಹಿರಿಯರು ಹೇಳುತ್ತಾರೆ. ತಾಯಿ ಮಕ್ಕಳ ಹೊಟ್ಟೆ ನೆತ್ತಿ ನೋಡಿದರೆ ತಂದೆ ಅವರ ಇನ್ನಿತರ ಬೇಕು ಬೇಡಗಳ ಎಲ್ಲ ಜವಾಬ್ದಾರಿಯನ್ನು ಬೇಸರಿಸದೇ ನಿರ್ವಹಿಸುತ್ತಾನೆ.

ಮಕ್ಕಳಲ್ಲಿ ಹೆಣ್ಣು, ಗಂಡು ತಾರತಮ್ಯ ತೋರಿಸದೆ ಸಮಾನವಾಗಿ ಬೆಳೆಸುವ ಅಪ್ಪ ನಿಜಕ್ಕೂ ದೊಡ್ಡ ಪರ್ವತವೇ ಸರಿ. ಅವ್ವ ಅದೇಕೋ ಸ್ವಲ್ಪ ಗಂಡು ಮಕ್ಕಳ ಮೇಲೆ ಪ್ರೀತಿ ತೋರಿಸುವುದುಂಟು. ಆದರೆ ಅಪ್ಪ ಹೆಣ್ಣು ಮಕ್ಕಳ ಮೇಲೆ ಜಾಸ್ತಿ ಪ್ರೀತಿ ತೋರಿಸುವವನು. ಅಪ್ಪನ ಹೋಲಿಕೆ ಹೆಣ್ಣು ಮಕ್ಕಳಲ್ಲಿ ಕಂಡು ಬರುತ್ತವೆ. ಅಮ್ಮನ ಹೋಲಿಕೆ ಗಂಡು ಮಕ್ಕಳಲ್ಲಿ ಕಂಡುಬರುತ್ತವೆ. ಅಯ್ಯೋ ಅವಳು ಅಪ್ಪನ ಮಗಳು ಕಣ್ರೀ ಅಂದಾಗ ಆ ಮಗಳ ಮುಖ ನೋಡಬೇಕು ಖುಷಿಯಿಂದ ಅರಳಿರುತ್ತದೆ. ತನ್ನಪ್ಪನಿಗೆ ಏನಾದರೂ ದುಃಖ, ನೋವು ಬಂದರೆ ಮಗಳು ಕಿಂಚಿತ್ ಸಹಿಸಲಾರಳು. ದಿನಂ ಪೂರ್ತಿ ಅಪ್ಪನ ಮಗ್ಗಲು ಬಿಟ್ಟು ಏಳದೆ ಅವನ ಸೇವೆ ಮಾಡುತ್ತಾಳೆ. ಕಂಗಳಲ್ಲಿ ಕಾವಲಿಟ್ಟು ಕಾಯುತ್ತಾಳೆ. ಅದಕ್ಕೆ ಕೆಲವು ಅಪ್ಪಂದಿರು ತನ್ನ ಹೆಣ್ಣು ಮಕ್ಕಳನ್ನು ಅವ್ವ ಎಂದು ಕರೆಯುವರು. ನನ್ನವ್ವ ನನ್ ತಾಯಿ ಹೀಗೆ ಮಗಳನ್ನು ಹೆಮ್ಮೆಯಿಂದ ಹೊಗಳಿ ಅಪ್ಪಿ ಮುದ್ದಾಡುವರು. ಮಗಳು ಅದೃಷ್ಟವಂತರ ಮನೆಯಲ್ಲಿ ಮಾತ್ರ ಜನಿಸುತ್ತಾಳೆಯಂತೆ. ಮಗಳಿಗೆ ಸ್ವಲ್ಪ ನೋವಾದರೂ ತಂದೆ ಕಣ್ಣಲ್ಲಿ ನೀರು ಜಿನಗುತ್ತೆ. ಎಂಥಾ ಅಗಾಧವಾದ ಪ್ರೀತಿ,ಈ ಪ್ರೀತಿಗೆ ಅದ್ಯಾವ ಹೋಲಿಕೆ,. ಇಂಥ ಮಗಳ,ಮಗನ ಪಾಲಿನ ಮಹಾನ ಅತುಲ್ಯನಿಧಿಗೆ ಸ್ನೇಹದ ಒಸಗೆಗೆ ಒಂದು ದಿನಾಚರಣೆ ಇದೆ ಅದು ಹೇಗೆ ಜಾರಿಗೆ ಬಂತು ನೋಡೋಣ

1907ರಲ್ಲಿ ಪಶ್ಚಿಮ ವರ್ಜೀನಿಯಾದ ಮೊನೊಂಗಾಹ್‌ನಲ್ಲಿ ಗಣಿಗಾರಿಕೆ ದುರಂತವೊಂದು ನಡೆಯುತ್ತದೆ. ಈ ಸಂದರ್ಭ ಅಲ್ಲಿ ಕೆಲಸ ಮಾಡುತ್ತಿದ್ದ 361 ಜನ ಗಂಡಸರು ಸಾವನ್ನಪ್ಪುತ್ತಾರೆ. ಅವರಲ್ಲಿ 250 ಅಪ್ಪಂದರಿದ್ದರು. ಅವರ ಸಾವು ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಅನಾಥರನ್ನಾಗಿ ಮಾಡಿತು. ಈ ಘೋರ ದುರಂತದ ನೆನಪಿಗಾಗಿ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ದುರಂತದಲ್ಲಿ ಗ್ರೇಸ್‌ ಗೋಲ್ಡನ್‌ ಕ್ಲೇಟನ್‌ ಎನ್ನುವವರು ತಂದೆ ಕೂಡ ಸಾವನ್ನಪ್ಪಿರುತ್ತಾರೆ. ಅವರು ಈ ದಿನಾಚರಣೆಯನ್ನು ಜಾರಿಗೆ ತರುತ್ತಾರೆ 

 “ಇನ್ನೊಂದು ಕಥೆಯ ಪ್ರಕಾರ ಅಪ್ಪ ಸತ್ತ ನಂತರ 6 ಮಕ್ಕಳನ್ನು ವಿಧವೆ ತಾಯಿಯೊಬ್ಬರು ಒಬ್ಬಂಟಿಯಾಗಿ ಸಾಕಿ ಸಲಹುತ್ತಾರೆ. ಆ 6 ಮಕ್ಕಳಲ್ಲಿ ಸೊನೊರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆ ಕೂಡ ಒಬ್ಬರು. ಇವರು 1909ರಲ್ಲಿ ತಾಯಂದಿರ ದಿನದಂತೆ ತಂದೆ ದಿನವನ್ನೂ ಆಚರಿಸಬೇಕೆಂದು ಕರೆ ನೀಡುತ್ತಾರೆ. ಆಕೆಯ ಆಲೋಚನೆಗೆ ಸ್ಥಳೀಯ ಚರ್ಚ್‌, ಅಂಗಡಿಯವರು, ಸರ್ಕಾರಿ ಅಧಿಕಾರಿಗಳು ಒಪ್ಪಿಗೆ ಸೂಚಿಸುತ್ತಾರೆ. ಹಾಗಾಗಿ ಆಕೆಯ ಆಲೋಚನೆಗೆ ಯಶಸ್ಸು ಕಾಣುತ್ತದೆ. ಇದರೊಂದಿಗೆ 1910, ಜೂನ್‌ 19 ರಂದು ಮೊದಲ ಬಾರಿ ಅಪ್ಪಂದಿರ ದಿನವನ್ನು ಆಚರಿಸಲಾಯಿತು. ನಂತರ ಜಾಗತಿಕ ಮಟ್ಟದಲ್ಲಿ ಜೂನ್‌ ಮೂರನೇ ಭಾನುವಾರ ಅಪ್ಪಂದಿರ ದಿನ ಆಚರಿಸಬೇಕು ಎಂದು ನಿರ್ಧರಿಸಲಾಯಿತು.” ಹೀಗೆ ಅಪ್ಪಂದಿರ ದಿನ ಆಚರಣೆಗೆ ಬಂತು

 “ಅಪ್ಪಂದಿರ ದಿನದ ಮಹತ್ವ.

ಅಪ್ಪಂದಿರ ದಿನವನ್ನು ಅವರ ಪ್ರೀತಿ, ಬೆಂಬಲ, ಮಾರ್ಗದರ್ಶನವನ್ನು ಪಡೆದ ನಾವು ವಿಶೇಷ ದಿನವನ್ನಾಗಿ ಆಚರಿಸಬೇಕು. ಅಪ್ಪನಿಗೆ ಗೌರವ ನೀಡುವ ಉದ್ದೇಶದಿಂದ ಈ ದಿನವನ್ನು ಆಚರಿಸುವುದು ವಿಶೇಷ. ಯಾವ ಪ್ರತಿಫಲ ಅಪೇಕ್ಷಿಸದೆ ತನ್ನ ಸಂಸಾರದ ಜವಾಬ್ದಾರಿಯನ್ನು ಅತ್ಯಂತ ಶ್ರೇಷ್ಠವಾಗಿ ನಿರ್ವಹಿಸುವ ಅಪ್ಪನಿಗೆ ಮಕ್ಕಳು ಈ ಸಂದರ್ಭದಲ್ಲಿ ಏನನ್ನಾದರೂ ಪ್ರೀತಿಯ ಕಾಣಿಕೆಗಳನ್ನ ಕೊಟ್ಟು ಅವರನ್ನು ಗೌರವಿಸಿದರೆ ಅವರಿಗೂ ಒಂದು ರೀತಿಯ ಸಂತೋಷವೇ ಅಲ್ಲವೇ? ನಮ್ಮ ಜೀವನಕ್ಕೆ ಭದ್ರಬುನಾದಿಯನ್ನ ಹಾಕಿ ಬದುಕಿನಲ್ಲಿ ಎಲ್ಲಿಯೂ ಎಡವದಂತೆ ಶಿಸ್ತು,ಸಂಸ್ಕಾರ ನೀಡಿ ಮುನ್ನಡೆಸುವ ಅಪ್ಪನಿಗೆ ನಾವು ಯಾವ ರೀತಿ ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ. ಕೇಳದೆನೇ ಎಲ್ಲವನ್ನ ಕೊಡಿಸಿ ಖುಷಿಪಡುವ ಅಪ್ಪನಿಗೆ ನಾವೇನು ಕೊಡಬಲ್ಲೆವು.. .ನಮ್ಮ ಜೀವನದಲ್ಲಿ ತಂದೆಯ ಪಾತ್ರವನ್ನು ಗೌರವಿಸುವುದು ಬಹಳ ಮುಖ್ಯ. ತಂದೆಯ ಪ್ರೀತಿ, ಬೆಂಬಲ ಮತ್ತು ಮಾರ್ಗದರ್ಶನದಿಂದ ನಾವೆಲ್ಲ ಬದುಕನ್ನು ಕಟ್ಟಿಕೊಳ್ಳುತ್ತೇವೆ. ಒಟ್ಟಾರೆ ನಮ್ಮ ಬದುಕಿನ ಅಡಿಪಾಯವೇ ಆದ ತಂದೆಯನ್ನು ಗೌರವಿಸಿ, ಆಧರಿಸುವುದು ಈ ದಿನದ ಮಹತ್ವವಾಗಿದೆ.”

 “ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದು ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದು ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಮಾತೃ ದಿನಕ್ಕೆ ಇದು ಪೂರಕವಾಗಿದೆ.”

  “Father’s Day Special: ಭಾನುವಾರ ಅಪ್ಪಂದಿರ ದಿನ. ಈ ದಿನದಂದು ತಂದೆ-ಮಕ್ಕಳ ನಡುವಿನ ಪ್ರೀತಿ, ಗೌರವ ಹಾಗೂ ಬಚ್ಚಿಟ್ಟ ಮಾತುಗಳು ಎದೆಯಾಳದಿಂದ ಹೊರ ಹಾಕಲು ಅವಕಾಶ ಸಿಗುತ್ತದೆ. ಇದು ತಂದೆಯ ತ್ಯಾಗ, ಶ್ರಮಕ್ಕೆ ನೀಡುವ ಸಣ್ಣ ಪ್ರಯತ್ನ:. ಅಪ್ಪನ ತ್ಯಾಗ ಪ್ರೀತಿ ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ ತನ್ನ ಹೆಣ್ಣು ಮಕ್ಕಳನ್ನು ಕಲಿಸಿ, ಓದಿಸಿ ಒಳ್ಳೆಯ ಮನೆತನಕ್ಕೆ ಕೊಡುವ ತನಕ ಅಪ್ಪನಿಗೆ ನೆಮ್ಮದಿ ಇರಲ್ಲ. ತನ್ನ ಹೆಣ್ಣು ಮಕ್ಕಳು ವಿದ್ಯಾವಂತೆಯರಾಗಿ ಗಂಡನ ಮನೆಯಲ್ಲಿ ಚೆನ್ನಾಗಿ ಬಾಳುವಂತಾದರೆ ಖುಷಿ ಪಡುವನು.  ಹಾಗೆಯೇ ಗಂಡು ಮಕ್ಕಳು ತಮ್ಮ ಕಾಲ ಮೇಲೆ ನಿಂತು ತಮ್ಮ ಜವಾಬ್ದಾರಿಯನ್ನು ಅರಿತು ಬಾಳುವಂತಾದರೆ ತಂದೆಯ ಶ್ರಮ ಸಾರ್ಥಕ. ತಂದೆ ತಾಯಿ ತಮ್ಮ ಬಾಳ ಸಂಜೆಯಲ್ಲಿ ಏನನ್ನು ನಿರೀಕ್ಷಿಸದೆ ಮಕ್ಕಳಿಗೆ  ಭಾರವಾಗದೇ ಬದುಕಲು ಇಷ್ಟಪಡುತ್ತಾರೆ.. ದೇವರು ತಾನು ಎಲ್ಲ ಕಡೆಯೂ ಇರಲಾಗುವುದಿಲ್ಲವೆಂದೇ ತಂದೆ ತಾಯಿಗಳನ್ನ ಸೃಷ್ಟಿಸಿದನಂತೆ. ತಾನು ಅತ್ಯಂತ ಸಾದಾ ಜೀವನ ನಡೆಸಿ ಮಕ್ಕಳಿಗೆ ಮಾತ್ರ ಎಲ್ಲವನ್ನು ನೀಡುವ ಅದಮ್ಯ ಚೇತನ ತಂದೆ.. ನಾನು ಚಿಕ್ಕವಳಿದ್ದಾಗ ನಮ್ಮ ತಂದೆ ಜೊತೆ ಶಾಪಿಂಗ್ ಹೋಗಿದ್ದೆ ಅಲ್ಲಿ ಸ್ಟೇಷನರಿ ಅಂಗಡಿಯಲ್ಲಿ ಅತ್ಯಂತ ಸುಂದರವಾದ ಕಾಮನಬಿಲ್ಲಿನ. ಬಳೆಗಳನ್ನ ನೋಡಿದೆ. ಅವುಗಳ ಬೆಲೆ ತುಂಬಾ ಹೆಚ್ಚಾಗಿತ್ತು. ಅವು ಹೊಸದಾಗಿ ಬಂದ ಸರ್ಗಂ‌ ಫಿಲಂನಲ್ಲಿ ಹೀರೋಯಿನ್ ಧರಿಸಿದ ಬಳೆಗಳೆಂದು ಅಂಗಡಿವ ಹೇಳಿದ. ಅಪ್ಪನ ಕಿಸೆಗೆ  ಭಾರವೆನಿಸಿದರೂ ಹಿಂದೆ ಮುಂದೆ ನೋಡದೆ ಬಳೆಗಳನ್ನ ಕೊಡಿಸಿಯೇ ಬಿಟ್ಟರು. ಅಪ್ಪನೆಂದರೆ ವಿಶಾಲ ಹೃದಯಿ ವಿಶಾಲವಾದ ಅಂಬರ. ಎಂಬ ಮಾತು ನೂರಕ್ಕೆ ನೂರು ಸತ್ಯ. ನನ್ನ ಅಪ್ಪನಿಗೆ ಏಳು ಜನ ಮಕ್ಕಳು 5 ಹೆಣ್ಣು ಮಕ್ಕಳು ಇಬ್ಬರು ಗಂಡು ಮಕ್ಕಳು ಎಲ್ಲರಿಗೂ ಉತ್ತಮ ಶಿಕ್ಷಣ ಕೊಡಿಸಿ ಜೊತೆಗೆ ಎಲ್ಲರಿಗೂ ನೌಕರಿಯನ್ನ ಕೊಡಿಸಿ. ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದ್ದಾರೆ. ತಮ್ಮ ಒಂದೇ ಚಿಕ್ಕ ಪಗಾರದಲ್ಲಿ ದೊಡ್ಡ ಕುಟುಂಬದ ಜವಾಬ್ದಾರಿಯನ್ನ ನಿರ್ವಹಿಸಿ ಈಗ ಬಾಳಿನ ಮುಸ್ಸಂಜೆಯಲ್ಲಿದ್ದಾರೆ. ಇಂದಿನ ಅಪ್ಪನ ದಿನದ ಸಂದರ್ಭದಲ್ಲಿ ನನ್ನ ಅಪ್ಪನಿಗೆ ದೇವರು ಇನ್ನೂ ಹೆಚ್ಚಿನ ಆಯುಷ್ಯ ಆರೋಗ್ಯ ಕೊಡಲೆಂದು ದೇವರಲ್ಲಿ ಕೇಳಿಕೊಳ್ಳುವೆ.. ನಮಗೆ ದಾರಿದೀಪವಾಗಿ ಕೈಹಿಡಿದು ಮುನ್ನಡೆಸುತ್ತಿದ್ದಾರೆ. ಹೀಗೆ ಪ್ರತಿ ಮಕ್ಕಳ ಜೀವನದಲ್ಲಿ ಅಪ್ಪ ಎಂಬ ಆಕಾಶ ಹೆಗಲ ಮೇಲೆ ಕೂಡಿಸಿಕೊಂಡು ಇಡೀ ಜಗತ್ತನ್ನೇ ತೋರಿಸಿ ಬದುಕಿನ ಜೀವನಾಮೃತವನ್ನೇ ಧಾರೆ ಎರೆಯುತ್ತಾನೆ. ಬೆರಗಿನ ಅಪ್ಪ ,ಬೆವರ ದುಡಿಮೆಯ ಅಪ್ಪ, ಬಂಗಾರದಂತ ಅಪ್ಪ. ಭಾವಜೀವಿ ಅಪ್ಪ. ಬೆದರಿಸೋ ಅಪ್ಪ ದಂಡಿಸೊ ಅಪ್ಪಈ ಅಪ್ಪನ ಬಣ್ಣಿಸಲು ಶಬ್ದಗಳು ಸಾಲವು. ಅಪ್ಪನ ಕೋಪದ ಮುಂದೆ ಅಮ್ಮನೇ ರಾಯಭಾರಿ ಮಕ್ಕಳಿಗೆ. ಅಪ್ಪನ ಕುರಿತಾದ ಎಷ್ಟೊಂದು ಹಾಡುಗಳು, ಎಷ್ಟೊಂದು ಭಾವ ಹೊಮ್ಮಿಸುವ ಅಭಿಮಾನದ ಹೆಮ್ಮೆಯ ಹಾಡುಗಳು ಇಂದು ಎಲ್ಲರ ನಾಲಿಗೆ ಮೇಲೆ ನಲಿಯುತ್ತವೆ. ಅಪ್ಪನ  ಹಾಡುಗಳು ಅಪ್ಪನ ಕುರಿತ ಸ್ಟೇಟಸ್ಗಳು ಅಪ್ಪನೊಂದಿಗಿನ ಚಿಕ್ಕವರಿದ್ದಾಗಿನ ಫೋಟೋಗಳು ಭಾವನಾತ್ಮಕವಾದ ಬೆಸುಗೆ ಇವೆಲ್ಲವುಗಳು ಈ ದಿನ ಎಲ್ಲೆಡೆ ಸಂಭ್ರಮಿಸುತ್ತವೆ. ಅಪ್ಪನ ದಿನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ ವರ್ಷದುದ್ದಕ್ಕೂ ಅಪ್ಪನ ದಿನ ಅಮ್ಮನ ದಿನ ಯಾಕೆಂದರೆ ಅವರನ್ನು ಬಿಟ್ಟು ಬದುಕುವ ಶಕ್ತಿ ಮಕ್ಕಳಿಗೆ ಇರಲ್ಲ ಮಕ್ಕಳನ್ನು ಬಿಟ್ಟು 

 ಬದುಕುವ ಶಕ್ತಿ ತಂದೆ ತಾಯಿಗಳಿರಲ್ಲ. ವಿಶೇಷವಾಗಿ ಸಂಭ್ರಮಿಸಲಿಕ್ಕೆ ಹಾಗೂ ಈ ನೆಪದಲ್ಲಿ ವಿಶೇಷ ಕೊಡುಗೆಗಳನ್ನ ನೀಡಲು ಇದು ಪ್ರಶಸ್ತವಾದ ದಿನವೆಂದು ಆಚರಿಸೋಣ ಅಷ್ಟೇ.

 “ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಾರ ಅಪ್ಪ, ಹಗಲು ಬೆವರಿನ ಕೂಲಿಕಾರ, ರಾತ್ರಿ ಮನೆಯಲಿ ಚೌಕಿದಾರ, ಎಲ್ಲಾ ಕೊಡಿಸುವ ಸಾಹುಕಾರ ಅಪ್ಪ… ಗದರೋ ಮೀಸೆಗಾರ, ಮನಸೇ ಕೋಮಲಾ… ನಿನ್ನಾ ಹೋಲೋ ಕರ್ಣ ಯಾರಿಲ್ಲ, ಅಪ್ಪಾ I love you ಪಾ..


Leave a Reply

Back To Top