ಅಪ್ಪನ ವಿಶೇಷ
ಅಪ್ಪನ ದಿನದ ವಿಶೇಷ-
ಅಮೃತಾ ಉಮೇಶ್ ಶೆಟ್ಟಿ
ಗಜಲ್

ಪ್ರೀತಿಯಮಕ್ಕಳ ಭವಿಷ್ಯದ ಭವ್ಯತೆಗಾಗಿ ಸಂಸಾರದ ಭಾರವನು ಹೊತ್ತವನು ಅಪ್ಪ
ತುತ್ತಿನ ಚೀಲವನು ತುಂಬಿಸಲು ಅಮ್ಮನಕೈಗೆ ಕಾಸನು ಇತ್ತವನು ಅಪ್ಪ
ಉರಿಯುವ ದೀಪದಲಿ ಕರಗಿದ ಬತ್ತಿ ಕಣ್ಣಿಗೆ ಕಾಣಿಸಲಿಲ್ಲ ಅಲ್ಲವೇ
ಮರೆಯಲ್ಲಿಯೇ ಕಷ್ಟಗಳ ಎದುರಿಸಲು ಒಂಟಿತನದಿ ಮೌನದಲಿ ಅತ್ತವನು ಅಪ್ಪ
ಮುನಿದ ರೂಪದಲಿ ಕಂಡರೂ ಮನದಲಿ ಅನುರಾಗದ ಹೂರಣ ಅಡಗಿತ್ತು
ದಿನವೆಲ್ಲಾ ದುಡಿದು ಮನೆಯವರ ಸುಖಕೆ ಜೀವಂತವಾಗಿ ಸತ್ತವನು ಅಪ್ಪ
ಗಳಿಕೆಯ ನಿಧಿಯನು ಸ್ವಾರ್ಥಕೆ ಬಳಸದೆ ಉಳಿಸಿದ ಅಕ್ಷಯ ಪಾತ್ರೆ
ನಾಳಿನ ಬಾಳಿಗಾಗಿ ಸಾವಿರ ಕನಸಿನ ಕೂಸುಗಳನು ಹೆತ್ತವನು ಅಪ್ಪ
ಮೊಲೆಯ ಹಾಲನು ಕೊಡದಿದ್ದರೂ ಅಮ್ಮಿಗೆ ಪಿತೃ ಋಣ ಇದೆ
ನೆಲದಿ ಪೈರನು ಬೆಳೆಸಲು ಒಲುಮೆಯಿಂದ ಹೊಲವನು ಉತ್ತವನು ಅಪ್ಪ
ಅಮೃತಾ ಉಮೇಶ್ ಶೆಟ್ಟಿ