ಸೋಲು ಒಪ್ಪಿಕೊಳ್ಳುವ ಮುನ್ನ ಕೊಂಚ ಪ್ರಶ್ನಿಸಿಕೊಳ್ಳಿ
ಜಯಶ್ರೀ ಅಬ್ಬಿಗೇರಿ
ನಾನು ಕೈ ಹಾಕಿದ ಯಾವ ಕೆಲಸದಲ್ಲೂ ಗೆಲುವು ಸಿಗುತ್ತಲೇ ಇಲ್ಲ. ನನ್ನ ಹಣೆ ಬರಹವೇ ಚೆನ್ನಾಗಿಲ್ಲ. ನಸೀಬು ಕೆಟ್ಟಿದೆ. ಸಾಲು ಸಾಲು ಸೋಲುಗಳು ನನ್ನ ಬೆನ್ನು ಹತ್ತಿವೆ. ಹೀಗೇ ಇನ್ನೊಂದಿಷ್ಟು ಸಮಯ ಕಳೆದರೆ ಜೀವನದ ಆಸೆಗಳೇ ಕಮರಿ ಹೋಗಿ ಬಿಡುತ್ತವೆ. ನನ್ನಿಂದೇನೂ ಮಾಡಲು ಸಾಧ್ಯವಿಲ್ಲವೆಂದು ಊಟ ತಿಂಡಿ ಬಿಟ್ಟು ಕೈ ಕಟ್ಟಿ ಕುಳಿತು ಚಿಂತಿಸಿದರೆ ಬದುಕು ನಿಂತ ನೀರಾಗಿ ಬಿಡುತ್ತದೆ. ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುತ್ತವೆ. ಉಗ್ರ ರೂಪ ತಾಳಿ ಜೀವ ತಿನ್ನುತ್ತವೆ. ಬದುಕು ಬದಲಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ. ಅದೃಷ್ಟ ಹಳಿಯುವುದನ್ನು ಬಿಟ್ಟು ನಾನೇಕೆ ಸೋಲುತ್ತಿದ್ದೇನೆ? ಎಲ್ಲಿ ಎಡುವುತ್ತಿದ್ದೇನೆ ಎಂದು ಕೊಂಚ ಆತ್ಮಾವಲೋಕನ ಮಾಡಿಕೊಂಡರೂ ಸರಿ, ನಮ್ಮ ತಪ್ಪುಗಳು ನಮ್ಮ ಕಣ್ಣಿಗೆ ರಾಚದೇ ಇರವು. ಸೋಲೊಪ್ಪಿಕೊಳ್ಳುವ ಮುನ್ನ ಈ ಸಂಗತಿಗಳತ್ತ ಗಮನ ಹರಿಸಿ. ಕೊಂಚ ಪ್ರಶ್ನಿಸಿಕೊಳ್ಳಿ .
ನಿಮ್ಮ ಇಷ್ಟವೇ ಗುರಿ ಆಗಿದೆಯೇ?
ನೀವಿಟ್ಟುಕೊಂಡ ಗುರಿ ನಿಮಗೆ ಇಷ್ಟವಾಗಿದೆಯೇ? ನಮ್ಮ ಮನೆಯಲ್ಲಿ ಎಲ್ಲರೂ ಇಂಜಿನೀಯರ್ ಆಗಿದಾರೆ. ನಾನು ಬೇರೆ ಕ್ಷೇತ್ರದಲ್ಲಿ ಮಿಂಚುವ ಅವಕಾಶ ಕಮ್ಮಿ . ನನಗೆ ಸಾಮರ್ಥ್ಯವಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಟೀಚರ್ ಆಗೋಕೆ ಇಷ್ಟ. ಆದರೆ ಅಪ್ಪನ ಆಸೆ ಈಡೇರಿಸೋಕೆ ಇಂಜನೀಯರಿಂಗ್ ಸೇರಿಕೊಂಡಿದಿನಿ. ನನ್ನ ಗೆಳತಿಯರು ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದಾರೆ. ನನಗೆ ಲೆಕ್ಕಶಾಸ್ತ್ರ ಅಂದ್ರೆ ಪಂಚ ಪ್ರಾಣ. ಆದರೆ ಇಷ್ಟು ದಿನ ಕೂಡಿ ಕಲಿತ ಗೆಳತಿಯರ ಬಿಟ್ಟು ಹೊಸ ಪರಿಸರ ಹೊಸ ಸ್ನೇಹಿತರ ಜೊತೆ ಹೊಂದಿಕೊಳ್ಳುವುದು ಕಷ್ಟ ಹೀಗಾಗಿ ನಾನೂ ಇದನ್ನೇ ಮಾಡುವೆ ಎಂದು ನಿಮಗಿಷ್ಟವಿಲ್ಲದ ಓದಿಗೆ ಸೇರಿಕೊಳ್ಳುವುದು ಎಷ್ಟು ಸರಿ. ಯಾರಿಗಾಗಿಯೋ ನಿಮ್ಮ ಆಸೆ ಆಕಾಂಕ್ಷೆಗಳನ್ನು ಬಲಿ ಕೊಡುವುದು ಸರಿಯಲ್ಲ. ಅಲ್ಲದೇ ನೀವು ಆಯ್ಕೆ ಮಾಡಿಕೊಂಡಿರುವ ದಾರಿ ನಿಮ್ಮ ಇಷ್ಟದ ದಾರಿ ಅಲ್ಲವೇ ಅಲ್ಲ ಎಂದಾಗ ಮುನ್ನಡೆಯುವುದಾದರೂ ಹೇಗೆ? ನಿಮ್ಮ ಶಕ್ತಿ ಸಾಮರ‍್ಥ್ಯ ಯಾವುದಿದೆಯೋ ನಿಮ್ಮ ಮನಸ್ಸು ಯಾವುದಕ್ಕೆ ಬಲವಾಗಿ ಮಿಡಿಯುತ್ತಿದೆಯೋ ಅದನ್ನೇ ಗುರಿಯಾಗಿಸಿಕೊಳ್ಳಿ. ಇಚ್ಛಾ ಶಕ್ತಿ ಬಲಪಡಿಸಿಕೊಳ್ಳಿ. ‘ಇಚ್ಛಾ ಶಕ್ತಿ ಎಲ್ಲಕ್ಕಿಂತ ಬಲಶಾಲಿಯಾದದ್ದು. ಅದರ ಮುಂದೆ ಎಲ್ಲವೂ ನಡು ಬಗ್ಗಿಸಬೇಕು.’ ಎಂಬ ಪ್ರೇರಣಾತ್ಮಕ ನುಡಿ ಸ್ವಾಮಿ ವಿವೇಕಾನಂದರದು. ಅದು ಸಾರ‍್ವಕಾಲಿಕ ಸತ್ಯವೂ ಕೂಡ.
ಯೋಜನೆಗಳನ್ನು ಹಾಕಿಕೊಂಡಿದ್ದೀರಾ?
ನಿರ್ದಿಷ್ಟ ಗುರಿ ನಿರ್ಧರಿಸಿಯಾದ ಮೇಲೆ, ಗುರಿ ಸಾಧಿಸಲು ಯೋಜನೆಗಳನ್ನು ಹಾಕಿಕೊಳ್ಳಿ. ಯೋಜನೆ ಎನ್ನುವುದು ಮಾನಸಿಕ ದೃಶ್ಯ. ನಾನು ನನ್ನ ಗುರಿಯ ಬಗ್ಗೆ ಸದಾ ಯೋಚಿಸುತ್ತಲೇ ಇರುತ್ತೇನೆ ಆದರೆ ಅದನ್ನು ಇನ್ನೂ ತಲುಪಲಾಗುತ್ತಿಲ್ಲ ಎಂದು ಹಳ ಹಳಿಸಿದರೆ ಪ್ರಯೋಜನವಿಲ್ಲ. ನೀವು ಸದಾ ಯಾವುದರ ಬಗ್ಗೆ ಆಲೋಚಿಸುತ್ತಿದ್ದೀರೋ ಅದೇ ಆಗುವ ಸಂಭವನೀಯತೆ ಹೆಚ್ಚಿದೆ. ಅಂದುಕೊಂಡದ್ದನ್ನು ಸಾಧಿಸಲು ಒಂದು ದಾರಿ ಬೇಕಲ್ಲ ಅದುವೇ ಯೋಜನೆ. ಯೋಜನೆ ಇರದಿದ್ದರೆ ಗಾಳಿ ಬೀಸಿದ ಕಡೆ ಗಂಧ ತೇಲುವಂತೆ ನಿಮ್ಮ ಗುರಿಯ ಪಯಣವೂ ಎಲ್ಲೆಲ್ಲೋ ದಾರಿ ತಪ್ಪಿ ಬಿಡುತ್ತದೆ ಅಲನ್ ಲಕೀನ್ ಹೇಳಿದಂತೆ,’ಯೋಜಿಸಲು ವಿಫಲರಾದರೆ, ವಿಫಲರಾಗಲು ಯೋಜಿಸಿದಂತೆ.’ ಆದ್ದರಿಂದ ದಿನಕ್ಕಿಷ್ಟು ತಿಂಗಳಿಗಿಷ್ಟು ವರ‍್ಷಕ್ಕಿಷ್ಟು ಸಾಧಿಸ್ತೀನಿ ಎಂದು ಯೋಜನೆ ಹಾಕಿಕೊಂಡು ಅದರಂತೆ ಜಾರಿಗೊಳಿಸಬೇಕು.
ಫಲ ಸಿಗುವವರೆಗೆ ತಾಳ್ಮೆ ಇದೆಯಾ?
ಗೆಲುವಿಗಾಗಿ ಕೆಲಸ ಮಾಡುವುದೆನೋ ಸರಿ. ಆದರೆ ಅದಕ್ಕಾಗಿ ಅದೆಷ್ಟು ದಿನ ಇನ್ನೂ ಕಾಯಬೇಕು.? ಕಾಯುವುದಕ್ಕೆ ಒಂದು ಮಿತಿ ಇಲ್ಲವೇ? ಎಂದು ಬೇಸರಿಸಿಕೊಳ್ಳದಿರಿ. ಗೆಲುವು ರಾತ್ರೋ ರಾತ್ರಿ ಸಿಗುವಂಥದ್ದಲ್ಲ. ವರ‍್ಷಗಳವರೆಗೆ ತಪಸ್ಸನ್ನಾಚರಿಸಿದಂತೆ. ಧಿಡೀರ್ ಗೆಲುವು ಕಾಣಿಸಿಕೊಳ್ಳಲು ಅದೇನು ನಮ್ಮ ಕೈಯಲ್ಲಿ ಗೆಲುವಿನ ಮಂತ್ರದಂಡ ಇದೆಯೇ? ಕೊನೆ ಕ್ಷಣದಲ್ಲಿ ಸಹನೆ ಕಳೆದುಕೊಳ್ಳುವುದು ಸೋಲಿಗೆ ಕಾರಣವಾಗುತ್ತದೆ. ಅದಕ್ಕೆ ತಾಳ್ಮೆಗೆ ಬೇಲಿ ಹಾಕದೇ ಪ್ರಯತ್ನಿಸಿ. ಕವಿ ರುಡ್ಯಾರ್ಡ್ ಕಿಪ್ಲಿಂಗ್ ರ ಅನುಭವೋಕ್ತಿಯಲ್ಲಿ,’ ಮರೆಯಲಾರದ ನಿಮಿಷವನ್ನು ಅರವತ್ತು ಸೆಕೆಂಡುಗಳ ಬೆಲೆಯ ಓಟದ ದೂರದೊಂದಿಗೆ ತುಂಬಿದರೆ ಭೂಮಿಯೂ ನಿಮ್ಮದಾಗುತ್ತದೆ. ಮತ್ತು ಅದರೊಳಗಿರುವ ಎಲ್ಲವೂ ಸಹ.’
ಕಾರ‍್ಯಕ್ಷಮತೆ ಕೊನೆಯವರೆಗೂ ಇರಲಿದೆಯೇ?
ಗುರಿ ನಿರ‍್ಧರಿಸಿ, ಯೋಜನೆಗಳನ್ನು ಸಿದ್ದ ಪಡಿಸಿದ ನಂತರ ಅತ್ಯುತ್ಸಾಹದಿಂದ ಆತ್ಮವಿಶ್ವಾಸವನ್ನಿಟ್ಟುಕೊಂಡು ಬಹಳ ದಿನಗಳವರೆಗೆ ತೊಡಗಿಸಿಕೊಂಡು, ಆಮೇಲೆ ಇದ್ಯಾಕೋ ಸರಿ ಹೋಗುತ್ತಿಲ್ಲವೆಂದು ಇಟ್ಟ ದಿಟ್ಟ ಹೆಜ್ಜೆಯನ್ನು ಮುಂದುವರೆಸಲು ಅನುಮಾನ ವ್ಯಕ್ತ ಪಡಿಸದಿರಿ. ಏಕೆಂದರೆ ಇನ್ನೇನು ಗೆಲ್ಲುವುದಕ್ಕೆ ಕೆಲವೇ ಹೆಜ್ಜೆಗಳಿರುತ್ತವೆ. ಅಂಥ ಸಮಯದಲ್ಲಿ ಹಿಂದಡಿ ಇಟ್ಟರೆ ಗೆಲುವು ಮರೀಚಿಕೆಯಾಗುವುದು ಖಚಿತ. ಒತ್ತಡದ ಒಂದು ಕ್ಷಣದಲ್ಲಿ ಶಾಂತತೆಯನ್ನು ಕಾಯ್ದಿರಿಸಿಕೊಂಡರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಅಲಂಕರಿಸುವುದು. ಸಕಾರಾತ್ಮಕ ಪ್ರೇರಣಾತ್ಮಕ ಅಂಶಗಳತ್ತ ಮಾತ್ರ ಗಮನ ಹರಿಸಿದರೆ ದಣಿವಿನ ಸಮಯದಲ್ಲೂ ಪುಟಿದೇಳುವ ಉತ್ಸಾಹವನ್ನು ಪಡೆಯುತ್ತೀರಿ. ಮಾಂಟ್ವೇನ್ ಹೇಳಿದರು.’ ಮನುಷ್ಯರ ಶ್ರೇಷ್ಠ ಮತ್ತು ಭವ್ಯ ಕಲೆಯೆಂದರೆ ಅಂದುಕೊಂಡದ್ದಕ್ಕೆ ತಕ್ಕಂತೆ ಬದುಕುವುದು.’ ಅಂದುಕೊಂಡಂತೆ ಗುರಿ ಸಾಧನೆಗೆ ಕಾರ‍್ಯಕ್ಷಮತೆ ಪ್ರಮಾಣ ಕುಗ್ಗದಿರಲಿ.
ಪರರ ಮಾತಿಗೆ ಕಿವಿಗೊಡುತ್ತಿದ್ದಿರಾ?
ಯಶಸ್ಸಿಗಾಗಿ ನೀವು ಪಡುವ ಶ್ರಮವನ್ನು ಕಂಡ ನಿಮ್ಮ ಆಪ್ತರು ಸ್ನೇಹಿತರು ಕುಟುಂಬ ಸದಸ್ಯರು ನಾವೂ ನಿಮ್ಮ ಹಿತವನ್ನೇ ಬಯಸುತ್ತೇವೆ. ಗೆಲುವಿಗಾಗಿ ಪಡುತ್ತಿರುವ ಕಷ್ಟವನ್ನು ನಮ್ಮಿಂದ ನೋಡಲಾಗುತ್ತಿಲ್ಲ. ಇದರಲ್ಲಿ ನಿನಗೆ ಗೆಲವು ಗೋಚರಿಸುತ್ತಿಲ್ಲವೆಂದು ತಿಳಿ ಹೇಳಿ, ನೀವು ಹಿಡಿದ ದಾರಿ ಬದಲಿಸಲು ಸಲಹೆ ನೀಡುತ್ತಾರೆ. ಕೆಲವೊಮ್ಮೆ ಒತ್ತಾಯಿಸುತ್ತಾರೆ. ಇದೇ ಪ್ರಯತ್ನವನ್ನು ಬೇರೆಡೆಗೆ ಹಾಕಿದರೆ ಇಷ್ಟೊತ್ತಿಗಾಗಲೇ ಗೆಲುವಿನ ದಡ ತಲುಪಿರುತ್ತಿದ್ದಿ ಎಂಬ ಮಾತುಗಳನ್ನು ಕೇಳುತ್ತೀರಿ. ನಿಮ್ಮ ಹಿತೈಷಿಗಳು, ಹತ್ತಿರದವರೂ ಇದೇ ಮಾತನ್ನು ಆಡಬಹುದು. ಆಗ ನಿಮ್ಮ ಮನಸ್ಥಿತಿ ಬದಲಿಸದಿರಿ. ಗುರಿಯತ್ತ ಇಟ್ಟ ಹೆಜ್ಜೆ ಕದಲಿಸದಿರಿ.
ಬದ್ಧತೆ ಸಡಿಲಿಸುತ್ತಿದ್ದೀರಾ?
ಎರಡು ಬಾರಿ ನೊಬೆಲ್ ಪ್ರಶಸ್ತಿ ಪಡೆದ ಅಪರೂಪದ ಸಾಧನೆಗೈದ, ಇತಿಹಾಸದ ಪುಟದಲ್ಲಿ ಮಿಂಚುತ್ತಿರುವ ಮಹಿಳೆಯೆಂದರೆ ಮೇಡಮ್ ಕ್ಯೂರಿ. ಪತಿಯನ್ನು ಕಳೆದುಕೊಂಡ ದುಃಖದ ನಂತರವೂ ಸಂಶೋಧನೆಯನ್ನು ಮುಂದುವರೆಸಿದರು.ವೈದ್ಯಕೀಯ ಕ್ಷೇತ್ರದಲ್ಲಿ ರೇಡಿಯಂ ಉಪಯೋಗಗಳನ್ನು ಪ್ರತಿಪಾದಿಸಿದ್ದಕ್ಕಾಗಿ ನೋಬೆಲ್ ಪ್ರಶಸ್ತಿಗೆ ಭಾಜನರಾದರು. ಇದು ಕ್ಯಾನ್ಸರ್ ರೋಗಿಗಳಿಗೆ ವರದಾನವಾಯಿತು. ಸ್ವಲ್ಪ ಯೋಚಿಸಿ, ಒಂದು ವೇಳೆ ಪತಿಯ ಮರಣದ ದುಃಖದಲ್ಲಿ ಸಂಶೋಧನೆಯ ಬಗೆಗೆ ಇರುವ ಬದ್ಧತೆಯನ್ನು ಬದಿಗೊತ್ತಿದ್ದರೆ ಆಕೆಯ ಸಂಶೋಧನೆಯ ಫಲ ಜನ ಸಮುದಾಯಕ್ಕೆ ಲಭಿಸುತ್ತಿತ್ತೇ? ಬದ್ಧತೆ ಇದ್ದರೆ ಯಾವ ನೋವು ಸಂಕಟಗಳೂ ನಮ್ಮನ್ನು ಬಾಧಿಸವು. ನಿಮ್ಮೊಂದಿಗಿದ್ದವರು ಈಗಾಗಲೇ ಗೆಲುವಿನ ದಡ ಸೇರಿದ್ದಾರೆ ಎಂಬ ಭಯದಲ್ಲಿ ನಿಮ್ಮ ಬದ್ಧತೆಯನ್ನು ಸಡಿಲಿಸಬೇಡಿ.
ಅಡ್ಡ ದಾರಿಗಳನ್ನು ಆಯ್ಕೆ ಮಾಡಿಕೊಂಡಿದ್ದೀರಾ?
ಗೆಲುವು ಸಾಧಿಸಲು ಯಾವುದೇ ಅಡ್ಡ ದಾರಿಗಳಿಲ್ಲ. ಎಂಬ ಕಟು ಸತ್ಯವನ್ನು ಒಪ್ಪಿಕೊಳ್ಳದೇ ಇದ್ದರೆ ಸೋಲಿಗೆ ಆಹಾರವಾಗಿಸುತ್ತದೆ. ಯಶಸ್ಸು ಧುತ್ತನೇ ದೊರೆಯಬೇಕೆಂದು ಅಡ್ಡದಾರಿಗಳ ಬೆನ್ನು ಹತ್ತದಿರಿ. ಎಲ್ಲರೆದರೂ ಮಾನ ಕಳೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ವಿಜಯ ಪಥ ಧೀರ್ಘವಾಗಿರುತ್ತದೆ. ಧೀರೂಬಾಯಿ ಅಂಬಾನಿಯವರು ಕಟ್ಟಿದ ೬೫ ಸಾವಿರ ಕೋಟಿ ರೂಪಾಯಿಯ ದೊಡ್ಡ ರಿಲಾಯನ್ಸ್ ಕಂಪನಿ ರಾತ್ರೋ ರಾತ್ರಿ ಎದ್ದು ನಿಂತಿಲ್ಲ. ಧೀರೂಬಾಯಿಯವರ ಹಲವಾರು ವರ್ಷಗಳ ಅವಿರತ ಶ್ರಮವೇ ಸಂಸ್ಥೆಯು ಬೃಹದಾಕಾರವಾಗಿ ಬೆಳೆದು ನಿಲ್ಲಲು ಕಾರಣವಾಯಿತು. .
ಹಾಲಿನಲ್ಲಿ ಕರಗಿಸಿದ ಸಕ್ಕರೆಯಂತೆ ಗೆಲುವಿಗೆ ಬೇಕಾದ ಅಂಶಗಳೆಲ್ಲವೂ ನಮ್ಮೊಳಗೇ ಇವೆ. ಅವುಗಳನ್ನು. ಸೋಲು ಒಪ್ಪಿಕೊಳ್ಳುವ ಮುನ್ನ ತಪ್ಪದೇ ಪಾಲಿಸಿದರೆ ಗೆಲುವಿನ ರುಚಿ ನೋಡಲು ಖಂಡಿತ ಸಾಧ್ಯ.
***************
.
inspired thoughts mam super