ಬಣ್ಣ-ರೇಖೆಗಳ ಜೊತೆಯಾಟ

ಪಕ್ಷಾತೀತ ಕಲಾವಿದ ಅನಾಥ ಶಿಶುವಿನಂತೆ’


ಎಂ.ಎಲ್.ಸೋಮವರದ

ಎಂ.ಎಲ್.ಸೋಮವರದ ದೇಶ ಕಂಡ ಉತ್ತಮ ಕಲಾವಿದರಲ್ಲಿ ಒಬ್ಬರು. ಮಂಡ್ಯದ ವಿ.ವಿ.ನಗರದ ಕಲ್ಲಹಳ್ಳಿ ನಿವಾಸಿ. ತುಂಬಾ ನಿಷ್ಠುರ ವ್ಯಕ್ತಿತ್ವದ ಸೋಮವರದ , ಜೀವನದಲ್ಲಿ ಕಷ್ಟಗಳನ್ನೇ ಹೆಚ್ಚು ಹೊದ್ದವರು. ನ್ಯಾಯ, ನೈತಿಕ ಮತ್ತು ವೈಚಾರಿಕ ನಿಲುವಿನ ಕಲಾವಿದ. ವೈಚಾರಿಕ ಮನೋಭಾವದಿಂದ ಅನೇಕ ಅವಕಾಶಗಳನ್ನು ಕಳೆದುಕೊಂಡವರು. ಎಂ.ಎಲ್.ಸೋಮವರದ ಬೆಂಗಳೂರಿನ ಕೆನ್ ಕಲಾ ಶಾಲೆಯಿಂದ 1987ರಲ್ಲಿ ಡಿ.ಎಂ.ಸಿ. ಪದವಿ ಪಡೆದವರು. 2008 ರಲ್ಲೇ ಮೈಸೂರು ಮುಕ್ತ ವಿ.ವಿ.ಯಿಂದ ಬಿ.ಎಫ್.ಎ. ಅಧ್ಯಯನ ಮಾಡಿದರು. ಮಂಡ್ಯ, ಮೈಸೂರು, ಶ್ರೀರಂಗ ಪಟ್ಟಣ, ಕಾರವಾರ ಸೇರಿದಂತೆ ಹತ್ತು ಹಲವು ಕಡೆ ಚಿತ್ರಕಲಾ ಶಿಬಿರಗಳಲ್ಲಿ ಭಾಗವಹಿಸಿ, ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಚಿತ್ರಗಳನ್ನು ಶಿಬಿರಗಳಲ್ಲಿ ಬಿಡಿಸಿದ್ದಾರೆ. ಕಲಾ ಜಾತ್ರೆ, ಚಿತ್ರ ಸಂತೆ, ಜಪಾನ್ ಮಾದರಿ ಗದ್ದೆಚಿತ್ರ, ಬಹುರೂಪಿ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. 2014ರಲ್ಲಿ ಟ್ಯಾಗೋರ್ ಚಿತ್ರ ಕಲಾಶಾಲೆ ಕಾರವಾರದಲ್ಲಿ ಚಿತ್ರಕಲಾ ಪ್ರದರ್ಶನ ಮಾಡಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಗುಟ್ಟು ಹೇಳಿಕೊಟ್ಟಿದ್ದಾರೆ. 2019ರಲ್ಲಿ ಲಲಿತಾ ಕಲಾ ಅಕಾಡೆಮಿ ಏರ್ಪಡಿಸಿದ್ದ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಸೋಮವರದ ಇಲ್ಯುಸ್ಟ್ರೈಷನ್ ,ಅಕ್ಷರ ವಿನ್ಯಾಸ ಮಾಡುವುದರಲ್ಲಿ, ರೇಖಾಚಿತ್ರ ಬಿಡಿಸುವುದರಲ್ಲಿ ಪಳಗಿದವರು. ಇವರ ಚಿತ್ರಗಳು ಮಯೂರದಲ್ಲಿ ಕತೆ, ಕವಿತೆ. ಲೇಖಕರ ಪರಿಚಯದ ವಿಭಾಗಗಳಲ್ಲಿ ಪ್ರಕಟವಾಗಿವೆ. ಅಲ್ಲದೇ ಪ್ರಜಾವಾಣಿ, ಭಾವನಾ, ಸುಧಾ, ಕಸ್ತೂರಿ, ಅನ್ವೇಷಣೆ,ಪೈರು ಪಚ್ಚೆ, ವಿಜಯಕರ್ನಾಟಕ, ಚಂದ್ರಿಕೆ ಹೀಗೆ ಹಲವು ದಿನ ಪತ್ರಿಕೆ, ವಾರ ಪತ್ರಿಕೆ, ಮಾಸ, ತ್ರೈಮಾಸಿಕ ಪತ್ರಿಕೆಗಳಲ್ಲಿ ಅವರ ಚಿತ್ರಗಳು ಪ್ರಕಟವಾಗಿವೆ. ಸೋಮವರದ ವೈಚಾರಿಕ ಪ್ರಜ್ಞೆಗೆ ಚಿತ್ರಕಲೆಯನ್ನು ಬಳಸಿದ ಕಲಾವಿದರೂ ಹೌದು. ನಾಡಿನ ವಿವಿಧ ಲೇಖಕರ ಕಥಾ, ಕವಿತಾ, ಪ್ರಬಂಧ ಸಂಕಲನಗಳಿಗೆ ಮುಖಪುಟ ರಚಿಸಿದ್ದಾರೆ. “ಕಡಲ ದಂಡೆಗೆ ಬಂದ ಬಯಲು” ಕಥಾ ಸಂಕಲನ ಹಾಗೂ “ಬಿಸಿಲ ಬಯಲ ಕಡಲು” ಕವನ ಸಂಕಲನಕ್ಕೆ ಮುಖಪುಟವನ್ನು ಸಹ ಕಲಾವಿದ ಎಂ.ಎಲ್.ಸೋಮವರದ ಮಾಡಿದ್ದಾರೆ. ಅಮೆರಿಕಾದಲ್ಲಿನ ಕೆಲ ಕನ್ನಡಿಗರು ಸೋಮವರದ ಅವರ ಚಿತ್ರಗಳನ್ನು ಕೊಂಡು ಅವರ ಮನೆಗಳನ್ನು ಅಲಂಕರಿಸಿಕೊಂಡಿದ್ದಾರೆ. ದೆಹಲಿಯಲ್ಲಿ ನಡೆದ ಸಾವಯವ ಸಮ್ಮೇಳನಕ್ಕೆ ಬಂದಿದ್ದ ಮಲೇಷಿಯಾದ ಓರ್ವ ಮಹಿಳೆ, ಇವರು ಸೀರೆ ಮೇಲೆ ರೂಪಿಸಿದ ವಿನ್ಯಾಸ ಇಷ್ಟಪಟ್ಟು ಖರೀದಿಸಿದ್ದರು. ಜರ್ಮನಿಯ ಪ್ರಜೆ ಇವರ ಒಂದು ಕಲಾಕೃತಿಯನ್ನು ಸಹ ಕೊಂಡುಕೊಂಡಿದ್ದರು.
……………………………………………………………………..

ಪ್ರಶ್ನೆ : ನೀವು ಚಿತ್ರಗಳನ್ನು ಏಕೆ ಬರೆಯುತ್ತೀರಿ?


ಉತ್ತರ : ನನ್ನ ಮತ್ತು ನನ್ನಕುಟುಂಬದ ಅನಿವಾರ್ಯ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಚಿತ್ರ ಮತ್ತು ಬಣ್ಣಗಳ ಜೊತೆ ಆಟವಾಡಿ ಹಣ ಸಂಪಾದಿಸುತ್ತೇನೆ.

ಪ್ರಶ್ನೆ :ಚಿತ್ರ ಹುಟ್ಟುವ ಕ್ಷಣಯಾವುದು?


ಉತ್ತರ: ಕಲೆ ಮತ್ತು ಚಿತ್ರ ಗ್ರಾಹಕರ , ಚಿತ್ರಗಳ ಖರೀದಿಸುವವರ ಅವಶ್ಯಕತೆಯ ಅಪೇಕ್ಷೆಯ ವಿನ್ಯಾಸಗಳಾದುದರಿಂದ , ಹೆಚ್ಚಿನ ಪಾಲು ಹಣ ಸಂಪಾದನೆಯ ಕ್ಷಣವಾಗಿರುತ್ತದೆ.

ಪ್ರಶ್ನೆ : ನಿಮ್ಮ ಚಿತ್ರಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು ? ಪದೇ ಪದೇ ಕಾಡುವ ವಿಷಯ ಯಾವುದು ?


ಉತ್ತರ : ನನ್ನ ಚಿತ್ರಗಳ ವಸ್ತು ಹೆಚ್ಚಿನ ಪಾಲು ಗ್ರಾಹಕರ ಇಚ್ಛೆಗನುಸಾರವಾಗಿರುತ್ತದೆ. ವೈಯಕ್ತಿಕ ಕಲಾಪ್ರದರ್ಶನದ ಉದ್ದೇಶದ ಸಂದರ್ಭದಲ್ಲಿ ನನ್ನ ಸುತ್ತಲಿನ ಜಗತ್ತಿನ ಅನುಭವಗಳನ್ನು ನನ್ನದೇ ರೀತಿಯಲ್ಲಿ ಅಭಿವ್ಯಕ್ತಿಗೊಳಿಸುತ್ತೇನೆ. ಪದೇ ಪದೇ ಕಾಡುವ ವಿಷಯ ಮನುಷ್ಯನ ಸ್ವಾರ್ಥ ಮತ್ತು ಭ್ರಷ್ಟಾಚಾರ.

ಪ್ರಶ್ನೆ : ಕವಿತೆಗಳಲ್ಲಿ ಬಾಲ್ಯ,ಹರಯಇಣುಕಿದೆಯೇ?

ಉತ್ತರ : ನನ್ನರೇಖಾ ಚಿತ್ರಗಳಲ್ಲಿ ಬಾಲ್ಯಕ್ಕಿಂತ ಹೆಚ್ಚಾಗಿ ಹರೆಯ ಇಣುಕಿದೆ.

ಪ್ರಶ್ನೆ : ರೇಖೆಗಳು ಕಲೆಯ ಶಾಸ್ತ್ರೀಯ ನೆಲೆ ಅಂತಾರೆ , ಈ ಬಗ್ಗೆ ಏನು ಹೇಳುವಿರಿ ?

ಉತ್ತರ : ರೇಖೆಗಳು ಚಿತ್ರಕಲೆಯ ಜೀವಾಳ. ಒಟ್ಟು ಚಿತ್ರಕಲೆಯೇ ಶಾಸ್ತ್ರೀಯ.

ಪ್ರಶ್ನೆ : ಬೇಲೂರು ಹಳೇಬೀಡು ಮತ್ತು ಬಾದಾಮಿ, ಪಟ್ಟದಕಲ್ಲಿನ ಶಿಲ್ಪಗಳಲ್ಲಿನ ವಿಶೇಷತೆ ಏನು ?

ಉತ್ತರ : ಬೇಲೂರು, ಹಳೇಬೀಡಿನ ಶಿಲಾಬಾಲಕಿಯರಲ್ಲಿ ಬೆಡಗು, ಬಿನ್ನಾಣ, ಸೂಕ್ಷ್ಮಕುಸುರಿ ಇದ್ದು ಕೌಶಲ್ಯವೇ ಮೇಲುಗೈ ಸಾಧಿಸಿದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲಿನ ಶಿಲಾಬಾಲಿಕೆಯರಲ್ಲಿ ಕಲಾತ್ಮಕತೆ ಮೇಲುಗೈ ಸಾಧಿಸಿದೆ.

ಪ್ರಶ್ನೆ: ಪ್ರಸ್ತುತರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಉತ್ತರ : ಪ್ರಸ್ತುತ ರಾಜಕೀಯ ಸನ್ನಿವೇಶ ಪ್ರಜಾಪ್ರಭುತ್ವದ ಬೇರುಗಳನ್ನು ಕತ್ತರಿಸುತ್ತಾ ಸಮಾಜ ಸುಧಾರಣೆಯ ಮುಖವಾಡತೊಟ್ಟು ಕೇಕೆ ಹಾಕಿ ವಿಜೃಂಭಿಸುತ್ತಿದೆ.

ಪ್ರಶ್ನೆ: ಧರ್ಮ, ದೇವರು ವಿಷಯದಲ್ಲಿ ನಿಮ್ಮ ನಿಲುವು ಏನು?


ಉತ್ತರ :ಧರ್ಮ ಬೇಕಿಲ್ಲ. ದೇವರೂ ಬೇಕಿಲ್ಲ. ಮನುಷ್ಯತ್ವವಿರುವ ಮನುಷ್ಯರು ಬೇಕು. ಪ್ರಕೃತಿ ಸಹಜವಾಗಿರಬೇಕು.

ಪ್ರಶ್ನೆ: ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನು ಹೇಳಬೇಕು ಅನಿಸುತ್ತಿದೆ ?

ಉತ್ತರ : ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಭ್ರಷ್ಟಾಚಾರದಿಂದ ಬದುಕುತ್ತಿದೆ. ನಿಜವಾದ ಸಂಸ್ಕೃತಿ ಕೊನೆಯುಸಿರೆಳೆಯುತ್ತಿದೆ.

ಪ್ರಶ್ನೆ: ಚಿತ್ರಕಲಾ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?

ಉತ್ತರ :ಚಿತ್ರ, ಕಲಾಲೋಕವೇ ರಾಜಕಾರಣದಲ್ಲಿ ಮುಳುಗಿ ತೇಲುತ್ತಿದೆ. ಯಾವ ಪಕ್ಷಕ್ಕೆ ಯಾವ್ಯಾವ ಕಲಾವಿದರು ಎಷ್ಟೆಷ್ಟು ನಿಷ್ಠರೋ , ಅಷ್ಟರ ಮಟ್ಟಿಗೆ ಫಲಾನುಭವಿಗಳು.
ಪಕ್ಷಾತೀತ ಕಲಾವಿದ ಮಾತ್ರ ಅನಾಥ ಶಿಶುವಿನಂತೆ.

ಪ್ರಶ್ನೆ: ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ?

ಉತ್ತರ : ದೇಶದ ಚಲನೆ ಬುಲ್ಡೋಜರ್ ನಂತಾಗಿದೆ.

ಪ್ರಶ್ನೆ: ಚಿತ್ರಕಲೆಯ ಬಗ್ಗೆ ನಿಮ್ಮ ಕನಸುಗಳು ಏನು?

ಉತ್ತರ :ಆರ್ಟ್ ಪೈಂಟಿಂಗ್ಸ್ ನನ್ನನ್ನು ಪೋಷಿಸುವುದರ ಜೊತೆಗೆ ನನ್ನ ಭಾವನೆಗಳ ಅಭಿವ್ಯಕ್ತಿ ಮಾಧ್ಯಮವಾಗಿ ದೃಶ್ಯ ಸಂಪುಟವಾಗಬೇಕು.

ಪ್ರಶ್ನೆ: ನಿಮ್ಮಇಷ್ಟದ ಸ್ವದೇಶಿ ಚಿತ್ರಕಲಾವಿದರು ಯಾರು ?


ಉತ್ತರ :ಕರ್ನಾಟಕದ ಆರ್.ಎಂ.ಹಡಪದ್, ಎಂ.ಬಿ.ಪಾಟೀಲ್, ವಿ.ಬಿ.ಹಿರೇಗೌಡರ್, ಯೂಸುಫ್ ಅರಕ್ಕಲ್, ಕೆ.ಕೆ.ಹೆಬ್ಬಾರ್ ಹಾಗೆಯೇ ದೇಶದ ಹೆಸರಾಂತ ಕಲಾವಿದರಾದ ಎಂ.ಎಫ್.ಹುಸೇನ್, ಜಾಮಿನಿರಾಯ್, ಕೆ.ಜಿ.ಸುಬ್ರಹ್ಮಣ್ಯಮ್, ರವಿವರ್ಮ ಇವರು ನನ್ನ ಕಾಡಿದ ಕಲಾವಿದರು.

ಪ್ರಶ್ನೆ: ನಿಮ್ಮಇಷ್ಟದ ವಿದೇಶಿ ಚಿತ್ರಕಲಾವಿದರು ಯಾರು ?

ಉತ್ತರ : ವಿದೇಶದ ಕಲಾವಿದರಾದ ಮೈಕೆಲ್ ಏಂಜೆಲೋ, ಲಿಯೋನಾರ್ಡ್ ಡಾವಿಂಚಿ, ರೆಂಬ್ರಾಂಟ್, ಸಾಲ್ವೆಡರ್ಡಾಲಿ, ವ್ಯಾನ್ಗಾಗ್, ಪಿಕಾಸೋ.

———–.

ಕಲಾವಿದರ ಕೃತಿಗಳ ಫೋಟೊ ಆಲ್ಬಂ

***********

ನಾಗರಾಜ ಹರಪನಹಳ್ಳಿ

ಲೇಖಕರ ಬಗ್ಗೆ:

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

One thought on “

  1. ಬಣ್ಣದ ಚಿತ್ತಾರಗಳು ಬದುಕಿನ ಗೂಡಾರ್ಥಗಳನ್ನು ಬಿತ್ತರಿಸುವ ಮಾಧ್ಯಮಗಳು…..ಚೆನ್ನಾಗಿ ಬಿಂಬಿಸಿದ್ದಿರಿ

Leave a Reply

Back To Top