“ಪಮ್ಮಿ” ಹನಿಗವಿತೆಗಳು
ಕನ್ನಡದಲ್ಲಿ ಚುಟುಕು ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ.ನಮ್ಮಜನಪದ ತ್ರಿಪದಿಗಳು ಮೂರೆ ಸಾಲಿನಲ್ಲಿ ಥಟ್ ಅಂತ ಒಂದು ವಸ್ತುವಿಷಯದ ಮೇಲೆ ಬೆಳಕು ಚೆಲ್ಲಿ ಬೆಳಗಿಸಿಬಿಡುವ ಮಿಣುಕು ಹುಳುಗಳಂತಹವು.ಜೀವನಾನುಭವದಿಂದ ಮೂಡಿದ ನುಡಿಮುತ್ತುಗಳು.ಹೊಸಗನ್ನಡದಲ್ಲಿ ಚುಟುಕುಗಳ ಬ್ರಹ್ಮನೆಂದೆ ಖ್ಯಾತರಾದ ದಿನಕರ ದೇಸಾಯಿ ಅವರ ದ್ವಿಪದಿ, ಬೀಚಿ ಅವರ ಹಾಸ್ಯದ ಚುಟುಕುಗಳು,ದುಂಡೀರಾಜ್ ಅವರ ಪಂಚ್ ಗಳು ಪ್ರಸಿದ್ದಿಯಾದವು.ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಕಂದ ಪದ್ಯಗಳು ತಾತ್ವಿಕ ವಿಚಾರಗಳನ್ನು ತುಂಬಿಕೊಂಡೆ ತೆನೆಗಳು.ಚುಟುಕುಗಳ ಮುಖ್ಯ ಲಕ್ಷಣವೇ ಯಾವ ವಿಷಯವನ್ನಾದರೂ ಪರಿಣಾಮಕಾರಿಯಾಗಿ ಚಿಕ್ಕದಾಗಿ ಚೊಕ್ಕಾವಾಗಿ ಭಾವ ಸ್ಪುರಿಸುವಂತೆ ಹೇಳಿಬಿಡುವುದು.ಕೊನೆಯಲ್ಲಿ ಪಂಚ್ ಇರಬೇಕು ಅಂತಾರ,ಅದು ಪದಗಳ ಮೂಲಕ ಇಲ್ಲಾ ಅರ್ಥದಲ್ಲಿ ಮೂಡಿಸುವ ಪಂಚ್ ಆದರೂ ಆಗಬಹುದು.ಒಟ್ಟಿನಲ್ಲಿ ಹನಿಯಲ್ಲಿ ಕಡಲು,ಕನ್ನಡಿಯಲ್ಲಿ ಕರಿ ಎಂಬಂತೆ ಮೂರು ನಾಲ್ಕೋ ಸಾಲಿನಲ್ಲೇ ಬ್ರಹ್ಮಾಂಡ ತೋರಿಬಿಡುವ ಶಕ್ತಿಯುಳ್ಳವು ಚುಟುಕುಗಳು.ಕೆಲವು ಗಂಭೀರ,ಕೆಲವು ಹಾಸ್ಯಭರಿತ, ಮತ್ತೆ ಕೆಲವು ಜಟಿಲ,ಮತ್ತಷ್ಟು ಸರಳ,ಸರಾಗ ..ಹೀಗೆ ಧೊಪ್ಪೆಂದು ಆಗಸದಿಂದ ಗಟ್ಟಿ ಮಳೆಹನಿಯೊಂದು ಕಾರ್ಮೋಡ ಸೀಳಿಕೊಂಡು ಧರೆಗೆ ಬಿದ್ದಂತೆ.
” ಮೌನವೆಂದರೆ…
ಮಾತಿಲ್ಲದ ಮನೆಯೇ
ಮಾತುಬಾರದ ಮಗಳೆ
ಇದ್ಯಾವುದೂ ಇಲ್ಲವಾದರೆ! ಮೌನವೆಂದರೆ…
ಮುನಿಸಿಕೊಂಡ
ಮಾತಿರಬೇಕು.”.. ದೇಸು ಆಲೂರು
ಮಾತು ಮೌನದ ನಡುವಿನ ಸಂಬಂಧ ಮತ್ತು ವ್ಯತ್ಯಾಸವನ್ನು ಹೇಳುವ ಈ ಚುಟುಕು ದೇಸು ಆಲೂರು ಅವರದು.ಬಾಯಿ ತೆರೆದರೆ ಸಾಕು ಹಾಸ್ಯ ಚಟಾಕಿಗಳ ಹಾರಿಸುತ್ತಾ,ಎಲ್ಲರನ್ನೂ ನಗಿಸಿ,ತನ್ನ ಸುತ್ತಮುತ್ತ ಸದಾ ಉತ್ಸಾಹದ ಅಲೆಯನ್ನು ಮೂಡಿಸಿಕೊಂಡುಬಿಡುವ ಚುಟುಕು ಕವಿ ದೇಸು ಅವರು.ಶಾಲೆ ಕಾಲೇಜುಗಳಿಗಿಂತ ಭಿನ್ನವಾದ ಕಲಿಕೆಯನ್ನು ಜೀವನದುದ್ದಕ್ಕೂ ಕಲಿಯುತ್ತಾ ಬಂದಿರುವ ದೇಸು ಅವರು ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು.ದುಡಿಮೆಯನ್ನೇ ದೈವವಾಗಿಸಿ ಬದುಕುತ್ತಿರುವವರು.
“ಪಮ್ಮಿ”.. ಹರಿಣಿ ಹೆಸರಿನ ಹೆಂಡತಿಯನ್ನು ಪಮ್ಮಿಯಾಗಿಸಿ,ಆಗಾಗ ತಮಾಷೆಗೆ ಡುಮ್ಮಿ ಎನ್ನುತ್ತಾ,ಸಮಯಕ್ಕೆ ತಕ್ಕಂತೆ ನೀನೀಗ ಎರಡು ಮಕ್ಕಳ ಮಮ್ಮಿ ಎನ್ನುತ್ತಲೂ ತಮ್ಮ ದಾಂಪತ್ಯ ಜಗತ್ತನ್ನು ತೆರೆದಿಡುವ ದೇಸು ಅವರ ಚುಟುಕುಗಳು ಕಚಗುಳಿಯಿಡುವ ಮಾತ್ರೆಗಳು.ಪಮ್ಮಿ ಸಂಕಲನದ ಬಹುಪಾಲು ಹನಿಗವನಗಳು ಹಾಸ್ಯದ ಪಟಾಕಿಗಳೇ.
” ತವರಿನಲ್ಲಿದ್ದ
ನನ್ನಾಕೆಗೆ ಕಾಗದ ಬರೆದೆ..
ಪ್ರಿಯೆ,ಈ ಓಲೆ ತಲುಪಿದ
ತಕ್ಷಣ
ನಿನ್ನ ಕ್ಷೇಮದ ವಿಚಾರ
ತಿಳಿಸತಕ್ಕದ್ದು
ಅತ್ತ ಕಡೆಯಿಂದ ಕಾಗದ
ಬಂತು..ರೀ….
ನಿಮ್ಮ ಕಾಗದ ಸಿಕ್ಕಿದೆ,ಆದರೆ…
ವಾಲೆ ಮಾತ್ರ ಸಿಕ್ಕಿಲ್ಲ..”
ಹೆಂಡತಿಯನ್ನು ಪೆದ್ದತನದಲಿ ಕಾಣಿಸುವ ಇವರ ಬಹಳಷ್ಟು ಚುಟುಕುಗಳು ಅವಳು ಮೊದ್ದು,ಪೆದ್ದು,ಮುದ್ದು,ಸಿಡುಕು,ಕ್ಯಾತೆ ತೆಗೆವಾಕೆ ಎನ್ನುತ್ತಲೇ ಅವಳಿಲ್ಲದೆ ಬಾಳಿಲ್ಲಾ.ಅವಳ ಮಾತು,ಮುನಿಸು,ಸಿಟ್ಟಿಲ್ಲದೆ ಇರಲಾಗುವುದಿಲ್ಲವೆಂಬ ಪ್ರೀತಿಯನ್ನೂ ತೋರುತ್ತದೆ.
” ಪಮ್ಮಿಗೂ..ನನಗೂ ನಿತ್ಯ ಕದನ
ಕದನದಲ್ಲೂ ಹೊಳೆಯುವುದು
ನನ್ನವಳ ವದನ “
ಪಮ್ಮಿ ತುಂಬಾ ಒಳ್ಳೆಯವಳಂತೆ ಪಕ್ಕದ ಮನೆಯಾಕೆ ಹೇಳ್ತಿದ್ರು ಎನ್ನುವ ದೇಸು,ಮಡದಿಯನ್ನು ರೇಗಿಸುತ್ತಾ,ಕಿಚಾಯಿಸುತ್ತಾ,ನಗಿಸುತ್ತಾ ಇಬ್ಬರು ಮಕ್ಕಳೊಡನೆ ಬಾಳ ಕಡಲನ್ನು ನಗುತ್ತಲೇ ಈಜುತ್ತಿದ್ದಾರೆ.
‘ ಮಹಿಳೆ..ಮಧ್ಯದ ಅಕ್ಷರ ತೆಗೆದರೆ ಹೊಳೆ..
ತೆಗೆಯದಿದ್ದರೆ ಮಹಿಳೆ
ಮಳೆ ಪ್ರತೀ ಜೀವನಾಡಿಯ ಉಸಿರು..
ಮಹಿಳೆ,ಗಂಡಿನ ಯಶಸ್ಸಿನ ಉಸಿರು.. “
ಎಂದೆನ್ನುತ್ತಾ ಪಮ್ಮಿಯೆ ಎಲ್ಲಾ ಎನ್ನುತ್ತಾರೆ.
” ಗತ್ತು..ಅದೇನು ಗತ್ತೇ ಹುಡುಗಿ
ಆ ಮುಂಗುರುಳಿಗೆ..!
ಬಾಚಿ ತಬ್ಬಿ ನಗುತಿದೆ
ನಿನ್ನ ಕೊರಳಿಗೆ..”
” ಸಾಂಗತ್ಯ..
ಶೃಂಗಾರ ಸಂಗತ್ಯ,ನವರಸದ ನೇಪಥ್ಯ
ಸಮರಸದ ದಾಂಪತ್ಯ, ಕಾಲನಿಗೂ ಅಭೇದ್ಯ..”
ಎಂದು ದಾಂಪತ್ಯದ ಅರ್ಥ ತಿಳಿದವರು ದೇಸು.ಮಡದಿ,ಮಗಳ ಕಣ್ಣುಗಳೇ ಮನೆಯ ನಾಲ್ಕು ಕಣ್ಣುಗಳೆಂದು ಸಂಭ್ರಮಿಸಿ,ಸಂಬಂಧಗಳೇ ಸತ್ತ ಮೇಲೆ ಭಾವನೆಗಳಿಗೆ ಕೆಲಸವಿಲ್ಲವೆಂದು ಸಂಬಂಧಗಳ ಜೋಪಾನ ಮಾಡುವವರು.
” ಅಮ್ಮನ ಮಾತಿಗೆ ಮನಸು ನಗುತದೆ
ಮುಂದೆ ಹೋಗುತಿಲ್ಲ ಅಪ್ಪನ ವಯಸ್ಸು
ಹತ್ತು ವರ್ಷದಿಂದ ಒಂದೇ ಮಾತು
ನಿಮ್ಮಪ್ಪನಿಗಿನ್ನೂ ಐವತ್ತು..”
ಎನ್ನುತ್ತಲೇ ಅಗಲಿದ ಅಮ್ಮನನ್ನು ಆಕಾಶದ ಚುಕ್ಕಿಗಳಲ್ಲಿ ಕಾಣುತ್ತಾ,ಅಲ್ಲಿ ಚನ್ನಾಗಿರಮ್ಮಾ..ಇಲ್ಲಿ ನಾವು ಚನ್ನಾಗಿರುತ್ತೇವೆ ಎಂದು ಭಾವುಕರಾಗಿಬಿಡುತ್ತಾರೆ.
” ದೇಸು ಕನ್ನಡದ ಕೂಸು” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಈ ಕನ್ನಡಮ್ಮನ ಮಗ,ಕನ್ನಡ ಸಾಹಿತ್ಯ ಸೇವೆಗೆ ಸದಾ ನಿಂತಿರುವ ಕನ್ನಡದ ಬಂಟ. ಏನಕ್ಕಾ ಸಮಾಚಾರ ಎಂದೆನ್ನುತ್ತಾ ಕಣ್ಣರಳಿಸಿ ನಗುಮೊಗದಲಿ ಎದುರಾಗುವ ಈ ತಮ್ಮನ ಮನೆ, ಮನ ಸದಾ ಹೀಗೇ ಸಂತಸದಿಂದಿರಲಿ..ಇವರಿಂದ ಇನ್ನಷ್ಟು ಮತ್ತಷ್ಟು ಹನಿಗವನಗಳೊಂದಿಗೆ ಗಂಭೀರ ಸೃಜನಶೀಲ ಸಾಹಿತ್ಯದ ಹಲವು ಪ್ರಕಾರಗಳ ಬೆಳೆ ಉಲುಸಾಗಿ ಬೆಳೆಯಲಿ.
” ಕಬ್ಬಿಗರೆದೆಯಲಿ ನಲಿದಿದೆ
ಕನ್ನಡ
ಹಿಗ್ಗಿದೆ ಕನ್ನಡ ಹಿರಿದಿದೆ ಕನ್ನಡ
ಕನ್ನಡಿಗರ ಮನೆ ಮನದಲಿ
ನೆಲೆಸಿದೆ ಕನ್ನಡ”
ಕನ್ನಡಕ್ಕಾಗಿ ಮಿಡಿವ,ತುಡಿವ ದೇಸುರವರ ಕನ್ನಡ ಸೇವೆ ನಿರಂತರವಾಗಲಿ.
|*******
ಸುಜಾತಾ ಲಕ್ಷ್ಮೀಪುರ
ಉತ್ತಮ ಪುಸ್ತಕ ವಿಮರ್ಶೆ ಸುಜಾತ
ಧನ್ಯವಾದಗಳು
ಕವಿ ದೇಸು ಅವರ ಬಗ್ಗೆ ಮತ್ತು ಅವರ ಪಮ್ಮಿ ಪುಸ್ತಕದ ಬಗ್ಗೆ ಅದ್ಭುತವಾಗಿ ವಿಮರ್ಶೆ ಮಾಡಿದ್ದೀರಿ ಮೇಡಂ… ವಿಮರ್ಶೆ ಓದಿದ ನಂತರ ಪುಸ್ತಕವನ್ನು ಓದಬೇಕೆಂಬ ಆಸೆ ಇನ್ನೂ ಹೆಚ್ಚಾಗಿದೆ ಮೇಡಂ..
ಧನ್ಯವಾದಗಳು
ಭಾಷಾ ಸೌಂದರ್ಯದೊಂದಿಗೆ ಸಾಹಿತ್ಯದ ತತ್ವವಡಗಿದೆ… ವಿಮರ್ಶೆಯನ್ನು ಓದಿದ ನಂತರ ಪುಸ್ತಕವನ್ನು ಓದಬೇಕೆಂಬ ಭಾವ ಮೂಡುತ್ತದೆ. ನಿಮ್ಮ ಸಾಹಿತ್ಯ ಸಿಂಚನ ಮತ್ತಷ್ಟು ಓದುಗರನ್ನು ಸೃಷ್ಟಿಸಲಿ… ಶುಭವಾಗಲಿ.
ಧನ್ಯವಾದಗಳು ಮೇಡಮ್
ಸೂಪರ್ ಅಕ್ಕ.
ಒಬ್ಬ ಬರಹಗಾರನಿಗೆ ಇದಕ್ಕಿಂತ ಖುಷಿ ಬೇಕಾ!!!
ನಿಮ್ಮ ಸೃಜನಶೀಲ ಬರವಣಿಗೆಗೂ, ಬರೆಯುವ ಶೈಲಿಗೂ, ಭಾಷಾ ಪಾಂಡಿತ್ಯಕ್ಕೂ, ಚಮತ್ಕಾರಕ್ಕೂ, ಪದಗಳನ್ನು ಪೋಣಿಸುವ ಪರಿಗೂ…..ಈ ತಮ್ಮನ ಕೋಟಿ ನಮನಗಳು. ಶುಭವಾಗಲಿ.
Kav
ಪಮ್ಮಿ….(ಹನಿಗವಿತೆಗಳು)
ಕವಿ ದೇಸು ಆಲೂರು ಅವರ ‘ಪಮ್ಮಿ’ ಹನಿಗವಿತೆಗಳು ಅದ್ಭುತವಾದ ಭಾವ ಬಂಧನಗಳ ಸಂಗಮ.ಅವರ ಸಾಹಿತ್ಯ ಮಾನವ ಸಂಬಂಧಗಳಾದ ಅಪ್ಪ – ಅವ್ವ, ಹೆಂಡತಿ – ಮಕ್ಕಳು , ಬಡತನ – ಸಿರಿತನ , ದುಃಖ – ಸುಖ, ದಾಂಪತ್ಯ, ನಗುಗಳ ಆಗರ .
ಬರಹಕ್ಕೂ ಜೀವನಕ್ಕೂ ನೇರವಾಗಿ ಬದುಕಿದ ಸರಳ ಸಹೃದಯ ಸ್ನೇಹಜೀವಿ ಕವಿ , ರಂಗಭೂಮಿ ಕಲಾವಿದ , ಚುಟುಕು ಕವಿ ದೇಸು ಅವರ ಮಾತಿನಲ್ಲಿ , ಸಾಹಿತ್ಯದಲ್ಲಿ ಕಾಣುತ್ತೇವೆ .
ಪಮ್ಮಿ ಕವನ ಸಂಕಲನ ವಿಮರ್ಶೆ ಮಾಡಿದ ಕವಿಯತ್ರಿ ಸುಜಾತ ಅವರು ಸುಂದರವಾಗಿ ಬರೆದಿದ್ದಾರೆ . ಪಮ್ಮಿ ಹನಿಗವಿತೆಗಳು ಇಟ್’ಸ್ ಎಲಿಮೆಂಟ್ಸ್ ಆಫ್ ಗುಡ್ ಹ್ಯೂಮನ್ ದೊರೆಯುತ್ತದೆ .
ಕಲಾದೇವತೆ , ಸರಸ್ವತಿ ಕವಿ ದೇಸು ಅವರಿಗೆ ಇನ್ನೂ ಹೆಚ್ಚು ಸಾಹಿತ್ಯದ ಕೊಡುಗೆ ನೀಡುವಂತಾಗಲಿ…
– ಯೂಸಫ್.ಹೆಚ್.ಬಿ.
ಚಂದದ ಪರಿಚಯ