ಪ್ರಸ್ತುತ

ಕೊರೊನಾ ಕಾಲದ ರಂಗಸಂಸ್ಕೃತಿ ಚಿಂತನೆಗಳು

Sunil Deepak - Cultural events in Guwahati, Assam

ಮಲ್ಲಿಕಾರ್ಜುನ ಕಡಕೋಳ

ಕೊರೊನಾ ಎಂಬ ಕರಾಳ ರಾಕ್ಷಸ ಹಾವಳಿಯಿಂದಾಗಿ ಮನುಷ್ಯರ ಬದುಕು ತೀವ್ರ ಸ್ವರೂಪದ ಆಘಾತವನ್ನು ಎದುರಿಸುವಂತಾಗಿದೆ. ಸಾಂಸ್ಕೃತಿಕ ಬದುಕಿಗೂ ತೀವ್ರವಾದ ಪೆಟ್ಟು ಬಿದ್ದಿದೆ. ನಿಸ್ಸಂದೇಹವಾಗಿ ಅದನ್ನು ಯಾರೂ ಅಲ್ಲಗಳೆಯಲಾರರು. ಹಾಗಂತ ಕೊರೊನಾ ಪೂರ್ವದಲ್ಲಿ ನಮ್ಮ ಸಾಹಿತ್ಯ, ಸಂಗೀತ, ನಾಟಕ ಹೀಗೆ ಎಲ್ಲಾ ಕಲೆಗಳಿಗೆ ಸಿಗುತ್ತಿದ್ದ ಪ್ರೋತ್ಸಾಹ, ಸಹಾಯ, ಸಹಕಾರ, ಅಭಿವ್ಯಕ್ತಿ ಸ್ವಾತಂತ್ರ್ಯ ಅಮೋಘವಾಗಿತ್ತು. ಅದರಿಂದಾಗಿ ಅತ್ಯಂತ ಸಮೃದ್ಧವಾದ ಸಾಂಸ್ಕೃತಿಕ ಬದುಕು ಮೈಮನ ತುಂಬಿ ಚೆಂಗುಲಾಬಿಯಂತೆ ಅರಳಿಕೊಂಡಿತ್ತೆಂದು ಭ್ರಮಿಸಬೇಕಿಲ್ಲ. ಈಗ ಕೊರೊನಾ ಬಂದಮೇಲೆ ಅಂತಹ ಸಾಂಸ್ಕೃತಿಕ ವೈಭವ, ಅನನ್ಯತೆಗಳನ್ನೆಲ್ಲ ಕೊರೊನಾ ಇಡಿಯಾಗಿ ನುಂಗಿ ನೊಣೆಯಿತು, ಎಂಬ ಸೋಂಕಿತನೆಪ ಹುಡುಕಿ ವರ್ತಮಾನದ ವೈರಾಣು ಹಳಿಯಮೇಲೆ ನಿಂತು ಹಳೆಯ ಹಂಬಲಿಕೆಗಳನ್ನು ತೋಡಿಕೊಳ್ಳುವ ಹೊಸದೊಂದು ಪ್ಯಾಸಿನೆಟಿಂಗ್ ಹಳಹಳಿಕೆ ಹುಟ್ಟಿಕೊಂಡಿದೆ.

ಯಾವುದೇ ಸಾಹಿತ್ಯ, ಕಲೆ, ಸಂಗೀತ, ನಾಟಕ, ಜನಸಂಸ್ಕೃತಿಯು ಇಂತಹ ವೈರಸ್, ಬ್ಯಾಕ್ಟೀರಿಯಾಗಳಿಗೆ ಬಲಿಯಾಗುವಷ್ಟು ದುರ್ಬಲವಾಗಿರುವುದಿಲ್ಲ ಎಂಬುದನ್ನು ಮರೆಯಬಾರದು. ವೈರಾಣುಗಳು ಮನುಷ್ಯರಜೀವ ಕೊಲ್ಲಬಹುದು. ಆದರೆ ಅವಕ್ಕೆ ಮನುಷ್ಯನೊಳಗಿನ ಸಾಂಸ್ಕೃತಿಕ ಬದುಕನ್ನು, ಅದರ ಮೌಲ್ಯಗಳನ್ನು ಕೊಲ್ಲಲಾಗದು. ಸಾಂಸ್ಕೃತಿಕ ಬದುಕು ಮನುಷ್ಯರ ನಿತ್ಯದಜೀವ ಬದುಕಿಗಿಂತ ಹೆಚ್ಚು ಗಟ್ಟಿಮುಟ್ಟು. ಪ್ಲೇಗ್, ಕಾಲರಾ, ಇನಫ್ಲುಯೆಂಜಾ ಮೊದಲಾದ ಸಾಂಕ್ರಾಮಿಕ ರೋಗಗಳ ಆಪತ್ತಿನ ಕಾಲದಲ್ಲಿ ಹುಟ್ಟಿಕೊಂಡ ಕಲೆ, ಸಾಹಿತ್ಯ ಕೃತಿಗಳಿಗೆ ಸಾವಿಲ್ಲ. ಆದರೆ ಆ ಕಾಲದ ರೋಗಗಳಿಗೆ ಸಾವುಬಂತು. ರೋಗಕಾಲದಲ್ಲಿ ಜನ್ಮತಾಳಿದ ಕೃತಿಗಳು ಅಜರಾಮರ. ಹೀಗೆಯೇ ಇಂದಲ್ಲ ನಾಳೆ ಕೊರೊನಾ ಹೋಗಿಯೇ ಹೋಗುತ್ತದೆ. ಆದರೆ ಅದೀಗ ಸೃಷ್ಟಿಸುತ್ತಿರುವ ” ಭೀಕರತೆ ” ನಮಗೆಲ್ಲ ಸವಾಲು ಆಗಬೇಕಿದೆ. ಅದು ಸಾಂಸ್ಕೃತಿಕ ಸೇನಾನಿಗಳು ಎದುರಿಸಬೇಕಾದ ನಿಜವಾದ ಸವಾಲು. ಸಾಂಸ್ಕೃತಿಕ ಚಟುವಟಿಕೆಗಳು ಸ್ಥಗಿತಗೊಂಡ ಮಾತ್ರಕ್ಕೆ ಅದು ಜನಸಂಸ್ಕೃತಿಯ ಸ್ಥಗಿತತೆ ಮತ್ತು ಸಾವು ಎಂದರ್ಥವಲ್ಲ.

ಸಂಸ್ಕೃತಿಯ ಜೀವಬೇರುಗಳು ಆಳದಲ್ಲಿ ಅಂತರ್ಜಲದಂತೆ ನಿರಂತರ ಹರಿಯುತ್ತಿರುತ್ತವೆ. ಹಾಗೆಯೇ ಭೂಮಿಯೊಳಗೊಂದು ರಂಗಭೂಮಿಯ ಜುಳುಜುಳು ನೀರಧಾರೆ ಅಂತಃಶ್ರೋತವಾಗಿ ಹರಿಯುತ್ತಿರುತ್ತದೆ. ಅದೊಂದು ಹಾಳತವಾಗಿ ಹರಿಯುವ ರಂಗಧಾರೆ. ವೃತ್ತಿನಿರತರ ಅಸಡ್ಡೆತನದಿಂದ ವೃತ್ತಿಪರತೆ ಮುಕ್ಕಾಗುತ್ತಿದೆ ಎಂಬುದು ನೆನಪಿಸಿಕೊಳ್ಳಬೇಕಿದೆ. ಬೇಕಾದರೆ ಹವ್ಯಾಸಿಗಳು ಗುಣಾತ್ಮಕ ವೃತ್ತಿಪರತೆ ಮರೆತರಡ್ಡಿಯಿಲ್ಲ. ನಾಟಕವನ್ನೇ ವೃತ್ತಿ ಮಾಡಿಕೊಂಡಿರುವ ವೃತ್ತಿನಿರತರು ವೃತ್ತಿಪರತೆಯ ಗುಣಗ್ರಾಹಿ ರಂಗಭೂಮಿ ಕಟ್ಟದಿದ್ದರೇ ಅದು ಅಕ್ಷಮ್ಯವಾದೀತು. ರಂಗಭೂಮಿ ಕುರಿತಾದ ತಮ್ಮ ಹತ್ತಿಪ್ಪತ್ತು ವರ್ಷಗಳ ಕೆಲಸ ತೃಪ್ತಿಕರವಾಗಿಲ್ಲ ಎಂಬುದನ್ನು ಕೊರೊನಾ ಕಾಲದ ಸಾಮಾಜಿಕ ಜಾಲತಾಣದ ಚಿಂತನ, ಚರ್ಚೆಗಳು ಒಪ್ಪುತ್ತವೆ. ಇಷ್ಟು ವರ್ಷಗಳ ಕಾಲ ಇದಕ್ಕಾಗಿ ವ್ಯಯವಾಗಿರುವ ಸರಕಾರದ ಕೋಟಿ, ಕೋಟಿ ಹಣ ಜನರ ಹಣವೇ ಆಗಿರುವುದರಿಂದ ಅದನ್ನು ಸಾರ್ವಜನಿಕವಾಗಿ ದುರುಪಯೋಗ ಎಂತಲೇ ಭಾವಿಸಬೇಕಾಗುತ್ತದೆ. ಹಾಗಾದರೆ ಜನಪರ ರಂಗಭೂಮಿ, ಗುಣಾತ್ಮಕ ಮೌಲ್ಯದ ರಂಗಭೂಮಿ ಗಗನ ಕುಸುಮವೇ.? ಕಡೆಯಪಕ್ಷ ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಕಲಾತ್ಮಕತೆಯೊಂದಿಗೆ ರಂಗಸಂಸ್ಕೃತಿಯು ಜನಚಳವಳಿಯಾಗಿ ರೂಪುಗೊಂಡಿತ್ತು. ಅಂದಿನ ಎಲ್ಲಾ ಪ್ರಗತಿಪರ ಚಳವಳಿಗಳಿಗೆ ಸಮಷ್ಟಿಪ್ರಜ್ಞೆಯ ವಿಚಾರಗಳು ಸಂವೇದನಾಶೀಲ ಆಶಯಗಳಾಗಿದ್ದವು. ಎಚ್ಚರಗಳಾಗಿದ್ದವು. ಅಂತಹ ಚಾರಿತ್ರಿಕ ಸಂಗತಿಗಳನ್ನು ನೆನೆಯುವುದು ಈಗಿನ ಕೆಲವರಿಗೆ ಅಲರ್ಜಿ. ಒಂದುಬಗೆಯ ಎಸಿಡಿಟಿ. ಹಾಗಾದರೆ ಇನ್ನುಮುಂದೆ ಸಾಂಸ್ಕೃತಿಕ ಬದ್ಧತೆ, ಆಶಯಗಳ ಅಗತ್ಯವಿಲ್ಲವೇ.? ಕಾರ್ಪೊರೇಟ್ ಬೀಜಗಣ್ಣುಗಳಿಂದ ಸಂಸ್ಕೃತಿ ನಿರ್ಮಾಣ ಕಾರ್ಯದ ಬಿತ್ತುಣಿಕೆ ಸಾಧುವೇ.? ಸಾಧ್ಯವೇ.? ಹಾಗೆ ನೋಡಿದರೆ ಇದು ಕೇವಲ ಕನ್ನಡ ಸಂದರ್ಭದ ವಿದ್ಯಮಾನ ಆಗಿರದೇ ಬಹುಪಾಲು ವರ್ತಮಾನ ಭಾರತದ ಸಾಂಸ್ಕೃತಿಕ ಸಂದರ್ಭವೂ ಇದೇ ಆಗಿದ್ದೀತು.?

ಸರಕಾರದ ನಾಲ್ಕು ರಂಗಾಯಣಗಳು ಮತ್ತು ಆರಂಭ ಹಂತದಲ್ಲಿರುವ ಕೊಂಡಜ್ಜಿ ವೃತ್ತಿ ರಂಗಭೂಮಿ ಕೇಂದ್ರ ಹೊರತುಪಡಿಸಿ, ರಾಜ್ಯದಲ್ಲಿ ಅಜಮಾಸು ಎಪ್ಪತ್ನಾಲ್ಕು ರೆಪರ್ಟರಿಗಳು ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನ ಪಡೆಯುತ್ತಿವೆ. ಒಬ್ಬೊಬ್ಬ ಕಲಾವಿದನಿಗೆ ಮಾಸಿಕ ಆರುಸಾವಿರ. ಪ್ರಾಚಾರ್ಯನಿಗೆ ಅದರ ಎರಡರಷ್ಟು ಪಗಾರ. ಹೀಗೆ ಒಂದೊಂದು ರೆಪರ್ಟರಿಯಲ್ಲಿ ಹದಿನೈದಿಪ್ಪತ್ತು ಮಂದಿಯ ಲೆಕ್ಕದಲ್ಲಿ ಅನುದಾನ ಪಡೆಯುತ್ತಿವೆ. ರೆಪರ್ಟರಿ ನಡೆಸುತ್ತಿದ್ದೇವೆಂದು ನಟಿಸುತ್ತಿರುವವರು ಇಲ್ಲದಿಲ್ಲ. ಹೀಗೆ ಫೇಕ್ ರೆಪರ್ಟರಿಗಳಂತೆ ಕೆಲವು ವೃತ್ತಿನಾಟಕ ಕಂಪನಿಗಳು ಸರಕಾರದ ಹಣ ಪೋಲು ಮಾಡುತ್ತಿರುವ ರಂಗಸಂಸ್ಕೃತಿಯ ಬದ್ಧತೆ, ಬನಾವಟಿ ಎಂತಹುದೆಂದು ಬಿಚ್ಚಿ ಹೇಳಬೇಕಿಲ್ಲ. ವರ್ತಮಾನದ ಕೆಲವರ ಈ ಅಡ್ಡಹಾದಿ ರಂಗನಡೆಯನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸುವವರಿಲ್ಲ. ಇದಕ್ಕೆ ಸಂಬಂಧಿಸಿದ ಅಧಿಕಾರಶಾಹಿ ಹಾಗೂ ಮಧ್ಯವರ್ತಿಗಳ ನೇಪಥ್ಯ ಹುನ್ನಾರ ಬಣ್ಣಿಸಲಸದಳ. ಇದೊಂದು ಸಾಂಸ್ಕೃತಿಕ ದಲ್ಲಾಳಿಗಳ ದೊಡ್ಡಜಾಲ. ಈ ಜಾಲ, ಹುನ್ನಾರಗಳ ಒಳಮರ್ಮ ಹೊರ ಬರಬೇಕಿದೆ. ಆಗ ಸರಕಾರಿ ಸಾಹಿತಿ, ಕಲಾವಿದರ ಸಂಸ್ಕೃತಿಯ ಚಿಂತನಕೋರ ಅಸಲಿ ಬಣ್ಣಗಳು ಬಟಾ ಬಯಲಾಗುತ್ತವೆ.

ರಂಗಸಂಸ್ಕೃತಿಯ ಚಿಂತನೆಗಳೆಂದರೆ ಬಹುಪಾಲು ಬುದ್ದಿಜೀವಿ ರಂಗತಜ್ಞರಿಗೆ ಆಧುನಿಕ ರಂಗಭೂಮಿಯದೇ ಅಗಾಧ ನೆನಹು. ಆಧುನಿಕೋತ್ತರದ ಗಿಳಿಪಾಠಗಳ ಪಾಂಡಿತ್ಯ ಪ್ರದರ್ಶನ. ನಾಟಕಗಳೂ ಸರಳತೆಯಿಂದ ಸಾವಿರ ಮೈಲುದೂರ. ಅವು ಜನಸಾಮಾನ್ಯರಿಗೆ ಅಲ್ಲವೇಅಲ್ಲ ಎನ್ನುವುದು ಅತಿಶಯೋಕ್ತಯೇನಲ್ಲ. ಆದರೆ ಇವತ್ತಿಗೂ ಪ್ರಜಾಸತ್ತಾತ್ಮಕ ಬಾಹುಳ್ಯದ ಪ್ರೀತಿ ಉಳಿಸಿಕೊಂಡಿರುವ ನಾಡಿನ ಹಳ್ಳಿ ಹಳ್ಳಿಗಳಲ್ಲೂ ಲೋಕಮೀಮಾಂಸೆಗೆ ಭಾಜನವಾದುದು ಕಂಪನಿಶೈಲಿ ನಾಟಕಗಳು. ನೂರೈವತ್ತು ವರ್ಷಗಳ ರಂಗಸಂಸ್ಕೃತಿಯ ಅನನ್ಯತೆ ಬದುಕಿದ ಇಂತಹ ವೃತ್ತಿರಂಗಭೂಮಿಯ ದ್ಯಾಸವೇ ಸೋಕಾಲ್ಡ್ ಬುದ್ದಿಜೀವಿಗಳಿಗೆ ಇರುವುದಿಲ್ಲ. ಅಷ್ಟಕ್ಕೂ ಸಂಸ್ಕೃತಿಯ ನಿರ್ಮಾಪಕರಂತೆ ಫೋಜು ಕೊಡುವವರು ಟೀವಿಗಳಲ್ಲಿ, ಯು ಟ್ಯೂಬುಗಳಲ್ಲಿ ಪಾಂಡಿತ್ಯಪೂರ್ಣ ಚರ್ಚೆಮಾಡುವವರು ಸಧ್ಯದ ಕೊರೊನಾ ನಿವಾರಣೆಯಲ್ಲಿ ತಮ್ಮ ಪಾತ್ರವೇನೆಂದು ತಮಗೆ ತಾವೇ ಪ್ರಶ್ನಿಸಿಕೊಳ್ಳುವ ಬದಲು ರಂಗನಾಟಕಗಳ ಪ್ರದರ್ಶನಗಳಿಲ್ಲ, ಕೂಡಲೇ ಸರಕಾರ ನೆರವಾಗಬೇಕೆಂದು ಇನ್ನೂ ಮುಂತಾಗಿ ಪಾಂಡಿತ್ಯದ ಒಣತೌಡು ಕುಟ್ಟುತ್ತಿದ್ದಾರೆ ಅನಿಸುತ್ತಿದೆ.

ಹಾಗೆಂದು ಸರಕಾರದಲ್ಲಿ ನೆರವು ಯಾಚಿಸಬಾರದೆಂಬುದು ನನ್ನ ಉದ್ದೇಶವಲ್ಲ. ಕೊರೊನಾ ಕಾಲದಲ್ಲಿ ಕೋಟಿ ಕೋಟಿ ವಲಸಿಗ ಕೂಲಿಕಾರರು, ವೃದ್ಧರು, ಸಣ್ಣಸಣ್ಣ ಮಕ್ಕಳು, ಬಸುರಿ, ಬಾಣಂತಿಯರು ನೂರಾರು ಮೈಲುಗಟ್ಟಲೇ ಕಾಲ್ನಡಿಗೆಯಲ್ಲಿ ನಡಕೊಂಡು ಹೋದವರು. ಅವರ ಅಂಗಾಲುಗಳು ಕೆಂಡದಂತೆ ಕಾದ ಹಂಚಿನ ಮೇಲಿನ ರೊಟ್ಟಿಯಾದುದು, ಆದರೆ ಹಸಿವಿನಿಂದ ಸುಡುವ ಹೊಟ್ಟೆಗೆ ರೊಟ್ಟಿಯಿಲ್ಲದೇ ನಡುದಾರಿಯಲ್ಲೇ ಪ್ರಾಣ ಬಿಟ್ಟವರೆಷ್ಟೋ..!? ಇವರೆಲ್ಲರಿಗೂ ತಮ್ಮ ಹುಟ್ಟೂರುಗಳನ್ನು ಮುಟ್ಟಲೇಬೇಕೆಂಬ ನೆಲಧರ್ಮಪ್ರೀತಿಯ ಗುರಿಯಿತ್ತು. ಹಾಗೆ ಹುಟ್ಟೂರು ಮುಟ್ಟಿದಮೇಲೆ ಅಲ್ಲಿಯೇ ಬದುಕು ಕಟ್ಟಿಕೊಳ್ಳುವ ಬದುಕಿನ ಯಥಾರ್ಥ ಕನಸುಗಳಿದ್ದವು. ಕೋಟಿ ಕೊಟ್ಟರೂ ಮರಳಿ ಪೇಟೆಗೆ ಬರುವುದು ಬೇಡವೆಂಬ ಕಣ್ಣೀರಿನ ಸಂಕಟಗಳಿದ್ದವು.

ಕಡೆಯಪಕ್ಷ ಇಂತಹ ಸಹಸ್ರಾರು ಸಂಕಟಗಳನ್ನು ಕತೆ, ಕಾದಂಬರಿ, ನಾಟಕಗಳಲ್ಲಿ ಹೇಗೆ ತರುವುದೆಂಬ ಗಂಭೀರ ಚರ್ಚೆಗಳು ಜರುಗುತ್ತಿಲ್ಲವೆಂಬ ಇರಾದೆ ನನ್ನದು. ಇನ್ನು ಈ-ಪಂಡಿತರು ಸಾಮಾನ್ಯ ಜನರ ಸಂಕಷ್ಟಗಳಿಗೆ ಪ್ರಾಣಮಿತ್ರರಂತೆ ಸ್ಪಂದಿಸಿದ್ದು, ನೆರವು ಮಾಡಿದ್ದು ಅಷ್ಟಕ್ಕಷ್ಟೇ. ಹಾಗೆ ಮಾಡಿದ ಕೆಲವರಿಗೆ ನೆರವಿಗಿಂತ ಬೆಂಕಿಬಿದ್ದ ಮನೆಯಲ್ಲಿ ಗಳಗಳನ್ನು ಹಿರಿದಂತೆ ತಮ್ಮ ಇಮೇಜಿಗೆ ಸಿಗಬೇಕಾದ ಕೀರ್ತಿಕಾಮನೆಯ ತಲಬು. ದುಃಸ್ಥಿತಿಯಲ್ಲಿರುವ ಕಲಾವಿದರಿಗೆ ಸರಕಾರ ನೀಡುವ ಎರಡುಸಾವಿರ ರುಪಾಯಿಗಳಿಗೂ ದೇಹಿ ಎಂದು ಅರ್ಜಿಗುಜರಾಯಿಸಿದ ಕಾರು, ಬಂಗಲೆಗಳುಳ್ಳ ಅನುಕೂಲಸ್ಥ ಕೆಲವು ರಂಗಕರ್ಮಿಗಳು ನಮ್ಮನಡುವಿದ್ದಾರೆ. ಇಂಥವರು ಹತ್ತಾರು ವರ್ಷಕಾಲ ರಂಗಭೂಮಿಯಲ್ಲಿ ಹೆಸರು ಮಾಡಿದವರು. ರೆಪರ್ಟರಿಗಳಲ್ಲಿ ಕಲಿತು ಬಂದವರು. ಕಡೆಯಪಕ್ಷ ಅಲ್ಲಿ ಇವರು ಮಾನವೀಯತೆಯ ಪಾಠ ಕಲಿಯಲಿಲ್ಲವೇ.? ಅಥವಾ ಸೋಕಾಲ್ಡ್ ರೆಪರ್ಟರಿಗಳು ಇಂತಹ ಕೆಲವರಿಗೆ ಅಂತಃಕರಣದ, ನಿಸ್ವಾರ್ಥದ ಪಾಠ ಹೇಳಿ ಕೊಡಲಿಲ್ಲವೇ.?

ಕೊರೊನಾ ಕೇವಲ ದೈಹಿಕ ಬಾಧೆಯಾಗಿ ಮನುಷ್ಯರ ಜೀವ ಹೊತ್ತೊಯ್ಯುತ್ತಿಲ್ಲ. ಅದು ಮನುಷ್ಯ ಮನುಷ್ಯರ ನಡುವೆ ಸೃಷ್ಟಿಸುತ್ತಿರುವ ಅಂತರ ಕೇವಲ ದೈಹಿಕ ಅಂತರವಾಗಿರದೇ ಸಾಮಾಜಿಕ ಅಂತರ ಎಂದು ಅಪಾರ್ಥದ ಹೆಸರಿಂದ ಕರೆಸಿಕೊಂಡಿತು. ಹೀಗೆ ಮಾಡುವ ಮೂಲಕ ಕೆಲಮಟ್ಟಿಗೆ ನೇಪಥ್ಯದಲ್ಲಿದ್ದ ಹಲವು ಭಾರತಗಳು ಬಯಲುರಂಗಕ್ಕೆ ಬಂದವು. ಮುಖ್ಯವಾಗಿ ಬಾಲ್ಕನಿ ಭಾರತ, ನೆಲಭಾರತಗಳು ಬಹಳ ಸ್ಪಷ್ಟವಾಗಿ ಗೋಚರಗೊಂಡವು. ಯಾರನ್ನೋ ಸಂಪ್ರೀತಗೊಳಿಸಲು ಬಾಲ್ಕನಿ ಭಾರತದಲ್ಲಿ ನಿಂತು ಬೆಳಕಿನ ಹಣತೆ ಹಚ್ಚಿದ ಕಣ್ಣುಗಳಿಗೆ ಕತ್ತಲೆಯ ನೆಲದಲ್ಲಿ ನಡೆದುಕೊಂಡು ಹೋಗುತ್ತಿರುವ ನೆಲಭಾರತದ ಕೋಟಿ, ಕೋಟಿ ಮಂದಿ ಕಾಣಿಸಲೇಇಲ್ಲ. ಹಾಗೆಯೇ ಎಂದಿನಂತೆ ಗ್ರಾಮಭಾರತ ಮತ್ತು ನಗರ ಭಾರತ, ಸ್ಲಂಭಾರತ, ಹಸಿವಿನ ಭಾರತ, ಹೊಟ್ಟೆತುಂಬಿದ ಭಾರತ ಹೀಗೆ ಹತ್ತುಹಲವು ಭಾರತಗಳನ್ನು ತುಂಬಾ ನಿಚ್ಚಳವಾಗಿ ಕೊರೊನಾ ವಿಂಗಡಿಸಿ ತೋರಿಸಿತು.

ಇನ್ನೊಂದು ಅಪಾಯದ ಮತ್ತು ಸುಳ್ಳು ಸಂಗತಿಯೆಂದರೆ ಕೊರೊನಾದ ಮೂಲವೇ ಒಂದು ಅಲ್ಪಸಂಖ್ಯಾತ ಸಮುದಾಯ. ಹಾಗಂತ ಕೆಲವು ಖಾಸಗಿ ಟೀವಿಗಳು ಕುತ್ಸಿತ ನಿರ್ಧಾರದ ಸುದ್ದಿಗಳನ್ನು ಬಿತ್ತರಿಸಿದವು. ಅವಕ್ಕೆ ತಮ್ಮ ಜಾಣತನದ ಬಿತ್ತರಿಕೆಯ ಖುಷಿಯ ಮುಂಚೂಣಿ. ಕೊರೊನಾದ ಈ ತೆರನಾದ ವಿಭಜನೆಗಳು ಸ್ವಾತಂತ್ರ್ಯೋತ್ತರ ಭಾರತದ ಕ್ಷಣಗಳನ್ನು ನೆನಪಿಸುವ ಸಾಮಾಜಿಕ ಅಸ್ವಸ್ಥತೆಗಳನ್ನು ನಿರ್ಮಿಸಿತು. ಕೊರೊನಾಕಿಂತಲೂ ಅಪಾಯಕಾರಿಯಾದ ಕೋಮು ದ್ವೇಷದಕ್ರಿಮಿಗಳು ಅವಕಾಶ ಬಳಸಿಕೊಂಡವು. ಸಣ್ಣದೊಂದು ಸಮಾಧಾನದ ಸಂಗತಿಯೆಂದರೆ ಮಂದಿರ, ಮಸೀದೆ, ಚರ್ಚುಗಳಿಗೆ ಕೆಲವು ತಿಂಗಳ ಮಟ್ಟಿಗಾದರೂ ಬೀಗ ಜಡಿಸಿ ಪವಾಡ ಮಾಡಿದ ಕೀರ್ತಿ ಕೊರೊನಾಕ್ಕೆ ಸಲ್ಲಬೇಕು.

ಕೊರೊನೋತ್ತರ ಭಾರತ, ಅದರ ಸಾಂಸ್ಕೃತಿಕ ಬದುಕಿನ ಚಿಂತನೆಗಳು ಹೇಗಿರಬೇಕೆಂಬ ಸಿದ್ದತೆಗಳನ್ನು ಕೆಲವು ಸ್ಥಾಪಿತ ಸಂಘಟನೆಗಳು ಈಗಾಗಲೇ ನೀಲನಕ್ಷೆ ರೂಪಿಸತೊಡಗಿವೆ. ಸಾವು ನೋವಿನ ಸೂತಕದ ಮನೆಯಲ್ಲಿ ಸಡಗರ, ಸಂಭ್ರಮಗಳು ಸಾಧ್ಯವೇ.? ಇಂಥದರ ನಡುವೆ ಗಡಿಯಲ್ಲಿ ಯುದ್ಧದ ಕಾರ್ಮೋಡಗಳು ಗಸ್ತು ಹೊಡೆಯುತ್ತಿವೆ. ದೀಪವು ನಿನ್ನದೇ ಗಾಳಿಯೂ ನಿನ್ನದೇ ಆರದಿರಲಿ ಬೆಳಕು ಎಂಬ ಹಾಡಿನ ಪಾಡು ಜನಸಾಮಾನ್ಯರದು. ತಾತ್ಪೂರ್ತಿಕವಾಗಿ ಸ್ಥಗಿತಗೊಂಡ ಸಂಸ್ಕೃತಿಯ ಜೀವಧಾರೆ ಮತ್ತೆ ಉಕ್ಕಿ ಹರಿಯುವುದು ಕಾಣಬಲ್ಲೆನೆಂಬ ಕನಸುಗಳು ನನ್ನಲ್ಲಿ ಯಾವತ್ತೂ ಬತ್ತುವುದಿಲ್ಲ.
ಮಲ್ಲಿಕಾರ್ಜುನ ಕಡಕೋಳ

4 thoughts on “ಪ್ರಸ್ತುತ

  1. ತುಂಬ ಅರ್ಥಪೂರ್ಣ,ಸಕಾಲಿಕ ಬರಹ..ಕೊರೋನೋತ್ತರ ಕಾಲಘಟ್ಟವನ್ನು ಎದುರಿಸಲು ರಂಗಭೂಮಿ ಸೇರಿದಂತೆ ನಮ್ಮೆಲ್ಲ ಸಂಸ್ಕೃತಿಯ ಪ್ರತೀಕಗಳು ಮೇಲೆದ್ದು ನಿಲ್ಲಲು ಅಗತ್ಯವಾದ ಜೀವದ್ರವ್ಯದಂತಿದೆ ಲೇಕನ.

  2. ಸಕಾಲಿಕ ,ವಿಚಾರಪೂರ್ಣ .ಆರೋಗ್ಯಕರ ಮನಸ್ಸಿರುವ ಎಲ್ಲ ರಂಗಕರ್ಮಿಗಳು ಯೋಚಿಸುತ್ತಿರುವುದು ಇದನ್ನೇ .
    ದನಿಯಾದುದಕ್ಕೆ ವಂದನೆಗಳು ಗೆಳೆಯ .

    1. ಕರೋನ ಬಗ್ಗೆ ಜ್ಞಾನ ತುಂಬಿಕೊಂಡು ಜನಸಮುದಾಯಕ್ಕೆ ವಿವಿಧ ರೀತಿಯಿಂದ ಧೈರ್ಯ ತುಂಬಿ ಕರೋನ ಭಯ ಓಡಿಸುತ್ತಿರುವ ಹಾಗೂ ಕರುನಾ ರೋಗದ ಮಾಹಿತಿಯನ್ನು ಜನಸಮುದಾಯಕ್ಕೆ ತಿಳಿಸುತ್ತಾ ಆರೋಗ್ಯವಂತ ಸಮಾಜ ನಿರ್ಮಿಸಲು ಶ್ರಮಿಸುತ್ತಿರುವ ಹಾಗೂ ಆರೋಗ್ಯ ಇಲಾಖೆ ವಿಶೇಷವಾಗಿ ಆರೋಗ್ಯ ಸಹಾಯಕ ಮತ್ತು ಮೇಲ್ವಿಚಾರಕರ ಮೇಲೆ ಇರುವ ಕಾಳಜಿಯನ್ನು ಮರೆಯಲು ಸಾಧ್ಯವಿಲ್ಲ ಮಲ್ಲಿಕಾರ್ಜುನ್ ತಮಗೆ ಅನಂತ ಧನ್ಯವಾದಗಳು

Leave a Reply

Back To Top