ಅಪ್ಪ
ವೀಣಾ ನಿರಂಜನ್
ಯಾಕೋ ನಾನು
ಇವತ್ತಿಗೂ ಕೂಡ
ಬೆಳೆದು ದೊಡ್ಡವಳಾಗಲೇ ಇಲ್ಲ!
ಅಪ್ಪ ಮಾತ್ರ
ಎಂದಿನಂತೆ ನನ್ನೊಳಗೆ
ಬೆಳೆಯುತ್ತಲೇ ಇದ್ದಾನೆ
ಅಪ್ಪನ ಅಸ್ಪಷ್ಟ ನೆನಪು
ಕಾಡಿದಾಗಲೆಲ್ಲ
ನನ್ನವನೆದುರಿಗೆ ಮಗುವಾಗಿ
ಬಿಡುವ ನಾನು
ಸುಖಾಸುಮ್ಮನೆ
ರಚ್ಚೆ ಹಿಡಿಯುತ್ತೇನೆ
ಹುಸಿ ರಂಪ
ಎರಡು ಹನಿ ಕಣ್ಣೀರು
ಬಾಲ್ಯದ ಸವಾರಿ
ಮಾಡಿಬಿಡುವ ಮನಸ್ಸು
ಅಪ್ಪನ ಕಾಯಿಲೆ
ಅಮ್ಮನ ಗೋಳು
ಸರೀಕರ ತಾತ್ಸಾರ
ನಮ್ಮಗಳ ಅಕಾಲ ಗಾಂಭೀರ್ಯತೆ
ಎಷ್ಟು ನೀರು ಹಿಡಿದೀತು
ಪುಟ್ಟ ಬೊಗಸೆ !
ಪಾಳುಬಿದ್ದ ಅಪ್ಪನ ಮಹಾಮನೆ
ಗೋಡೆ ಮಣ್ಣ ತಾರಸಿಯ
ಮೇಲೆಲ್ಲ ಹುಲ್ಲು ಕಳೆ
ಸಸ್ಯಗಳದೇ ಕಾರುಬಾರು
ಬಿರಿದು ಚೂರಾದ ಕಂಬಗಳು
ಎಷ್ಟು ಕತೆಗಳ ಹೇಳಿದರೂ
ಮುಗಿಯದು ಇತಿಹಾಸ.
ಮುದಿ ಹೆಂಗಸು ಹಜರತ್ ಬಿ
ಇಂದಿಗೂ ಸ್ಮರಿಸುತ್ತಾಳೆ
ಅಪ್ಪ ಕೊಡಿಸಿದ ಸರ್ಕಾರಿ ಮನೆ
ಮತ್ತು ವಿಧವಾ ಪಿಂಚಣಿಯನ್ನು
ಬಿಕ್ಕುತ್ತವೆ ರಾತ್ರಿಗಳು
ಅಪ್ಪನ ಅಪೂರ್ಣ ಕನಸುಗಳು
ಗೋರಿಯೊಳಗೆ
ಅರೆ ಬಿರಿದ ಕಣ್ಣುಗಳಲ್ಲಿ
ಏನನ್ನೋ ಧೇನಿಸುತ್ತ…
ಬೆಚ್ಚಿ ಬೀಳುವ ನಾನು
ನನ್ನವನ ಮುಸುಕಿನೊಳಗಿನ
ಕೈಯನ್ನು ಅದುಮಿ
ಗಟ್ಟಿಯಾಗಿ ಹಿಡಿದು ಕಣ್ಣೀರಾಗುತ್ತೇನೆ
ಅಪ್ಪನ ಬುದ್ಧ
ಅಪ್ಪನ ಅಲ್ಲಮ
ಎಲ್ಲ ಒಂದೇ ಆಗಿ
ಜಂಗಮ ಸ್ವರೂಪಿ ಆತ್ಮ
ಸಂತೈಸುತ್ತದೆ
ಅಪ್ಪ ಎಂದರೆ
ಅಪೂರ್ಣ ಕನಸು
ಅರ್ಧ ಬರೆದಿಟ್ಟ ಕವಿತೆ
ಚದುರಿದ ಹಲವು ಚಿತ್ರಗಳು…
********
ಮನ ಮುಟ್ಟುವ ಕವಿತೆ
ಚಂದದ, ಕಾಡುವ ಕವಿತೆ