ಕಾವ್ಯಯಾನ

ಸಮುದ್ರ ಸಂಗೀತ

Photo of Man Playing Ukulele On Seashore

ಫಾಲ್ಗುಣ ಗೌಡ ಅಚವೆ.

ದೂರ ದಿಗಂತದಿಂದ ಓಡಿ ಬರುವ
ಅಲೆಗಳು ದಂಡೆಗೆ ಅಪ್ಪಳಿಸುತ್ತಿವೆ
ನಿರಾಳವಾಗುತ್ತಿವೆ.
ಗುರಿಯ ಸಾಫಲ್ಯತೆ
ಪ್ರಯತ್ನದ ಫಲವತ್ತತೆ
ಸಾರುತ್ತಿದೆ ಕಡಲು
ಹಾಗೆ ಒಳಗೆ ಇಣುಕಿದರೆ
ದಂಡೆಯ ಮೌನ ಸಂಗೀತ
ಕೇಳುವುದು.

ಸತ್ತ ಮೀನು ಸೌದೆ ಕೋಲು
ಎಲ್ಲವನ್ನೂ ದಂಡೆಗೆಸೆವ
ತಾನು ಶುಭ್ರಗೊಳ್ಳುವ ಪರಿ
ಅಚ್ಚರಿ!
ಒಂದು ಕ್ಷಣ ಮನದಲ್ಲಿಣುಕಿದರೆ
ನಿನ್ನೊಳಗಿನ ದ್ವೇಷ, ಅಸೂಯೆ
ಕೋಪ ಸಣ್ಣತನಗಳ ಇದೇ
ದಂಡೆಯಲ್ಲಿ ಬಿಟ್ಟು ಹೊರಡುವೆ
ನಿಶ್ಕಲ್ಮಶ ಮನಸ ಹೊತ್ತು.

ಶರಧಿಯೋಳಗಿನ ಆಳ ವಿಸ್ತಾರ
ಭೋರ್ಗರೆತ,ಭರತ ಇಳಿತಗಳು
ಲಾಗಾಯ್ತಿನಿಂದಿಲ್ಲಿವರೆಗೆ
ಸೇರುವ ಹೊಳೆಹಳ್ಳ,ನದಿಗಳು
ಕೂಡುತ್ತಲೇ ಇವೆ.
ಎಲ್ಲ ಇದ್ದು ಇಲ್ಲದಂತಿರುವ
ಸಮುದ್ರ ಸಮತೋಲನದ ಪಯಣ
ನಿನ್ನೊಳಗೆ ಬಿಂದು ಸಿಂಧುವಾಗಲಿ.

ಆಗಾಗ್ಗೆ ಅಥವಾ ಸಂಜೆಯಲ್ಲಿ
ಸಣ್ಣಗೆ ಅಲೆವ ಅಲೆ ತನ್ನೊಳಗಿನ
ಸುಪ್ತ ಸಂಗೀತ ಸೃಷ್ಟಿಸುವುದು
ನಿನ್ನೊಳಗಿನ ಮಂದ್ರ ಮನಸು
ಅದನು ಕೇಳುವುದು.

ಗಿಟಾರು ಹಿಡಿದು ಹೊರಟರೆ
ಸಂಗೀತ ಹೃದಯಕೆ ಬರೋಲ್ಲ
ಅದರೊಳಗಿನ ತಂತಿಗಳು
ಮೂಡಿಸುವ ತನನ
ನಾದಗಳು ನಿನ್ನ ಮಂತ್ರ ಮುಗ್ಧಗೊಳಿಸುವುದು.
ನಿನ್ನ ನೆರಳು ನಿನ್ನ ಅಸ್ತಿತ್ವ ಹೇಳುವುದು.!!

*******

3 thoughts on “ಕಾವ್ಯಯಾನ

  1. ಸಮುದ್ರದ ಸಂಗೀತ ಗಮ್ಯವಾದದ್ದು,ಕರ್ಣ ಕೋಮಲ ವರ್ಣನಾತೀತ. ಸುಂದರವಾಗಿ ಸೆರೆಹಿಡಿದಿದ್ದೀರಿ ಸರ್

  2. ಕಡಲ ಒಡಲಲ್ಲೇ ಜೀವನ ಪಾಠ..ಚೆನ್ನಾಗಿದೆ ಸರ್

  3. ಚನ್ನಾಗಿದೆ…. ಕವಿ ಮನಸು ದಂಡೆಯೊಂದಿಗೆ ಮಾತಾಡದೇ ಇರುವ ಮಾತುಗಳು ಅನಾವರಣವಾಗುವ ಬಗೆ ಅದ್ಭುತ….

Leave a Reply

Back To Top