“ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ?”ಕನಕದಾಸರಕೀರ್ತನೆಗಳ ಕುರಿತು ವೈ ಎಂ ಯಾಕೊಳ್ಳಿ ಅವರ ವಿಶೇಷ ಬರಹ

  ಅಂತರಂಗದಲ್ಲಿ ಹರಿಯ ದಾಸರಾದರೂ ಕನಕದಾಸರು ಮುಖ್ಯವಾಗಿ ಸಮಾಜ ಸುಧಾರಕರು. ಜಗತ್ತಿನ ಜನ ತಪ್ಪು ದಾರಿಯಲ್ಲಿ ನಡೆಯಬಾರದು ಎನ್ನುವು ಅವರ ಪ್ರಮುಖ ಕಾಳಜಿಯಾಗಿತ್ತು. ದಾಸರಾದ ಮೆಲಂತೂ ಅವರು ಬದುಕಿದ್ದು ಜನರ ನಡುವೆಯೇ ಹೀಗಾಗಿ ಸಾಮಾನ್ಯರ ಬದುಕು ಸುಧಾರಿಸಬೇಕು ಎನ್ನುವದು ಅವರ ವಿಚಾರವಾಗಿತ್ತು .ಹೀಗಾಗಿ ಅವರು ಸಾರುವ ತತ್ವಗಳು ನಮ್ಮ ಅನುದಿನದ ಬದುಕನ್ನು ತಿದ್ದುವದರತ್ತವೇ ಮುಖ ಮಾಡಿದ್ದುದನ್ನು ನಾವು ನೋಡುತ್ತೇವೆ.
.  ‘ಲೋಕ ನೀತಿ’ ಎಂಬ ಪದಕ್ಕೆ ಸಮಾಜಕ್ಕೆ ಯೋಗ್ಯವಾಗಿ ಬದುಕುವುದಕ್ಕೆ ಬೇಕಾದ ಮಾರ್ಗದರ್ಶಕ ಮಾತುಗಳು ಎಂಬ ಅರ್ಥವನ್ನು ನೀಡಬಹುದು. ಹಾಗೆ ನೋಡಿದರೆ ಅವರ ಒಂದೊAದು ಕೀರ್ತನೆಯು ಲೋಕನೀತಿಯ ಶಾಸನಗಳೇ ಆಗಿವೆ ಎಂದರೂ ಅತಿಶಯೋಕ್ತಿ ಏನಲ್ಲ. ಈ ಲೇಖನದಲ್ಲಿ ಅವರು ಸಾರಿದ ಸತ್ಯವಂತರ ಸಂಗವಿರಲು ಎಂಬ ಕೀರ್ತನೆಯಲ್ಲಿ ಹೇಳಿದ ಕೆಲವು ಲೋಕನೀತಿಗಳನ್ನು ವಿವರಿಸಲು ಪ್ರಯತ್ನಿಸಲಾಗಿದೆ.
      ‘ಸತ್ಯ’ ಬಾರತೀಯರ ಬದುಕಿನ ಪರಮ ಮೌಲ್ಯ . ಇಲ್ಲಿನ ಪ್ರಾಣಿಯೂ ಕೂಡ ‘ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’ ಎಂದು ನಂಬಿತ್ತು ಎಂದು ನಮ್ಮ ಗೋವಿನ ಹಾಡು ಹೇಳುತ್ತದೆ  ಎಂಬುದು ನಾವು ನಂಬಿದ ಆದರ್ಶ. ಸತ್ಯವನ್ನು ಬಿಟ್ಟು ಬದುಕುವ ಬದುಕನ್ನು ಕನಕದಾಸರು ಒಪ್ಪುವುದಿಲ್ಲ. ಸತ್ಯ ಮತ್ತು ನೀತಿಗಳು ಬದುಕಿನ ಎರಡು ಕಣ್ಣುಗಳು ಎನ್ನುವ ಕನಕದಾಸರು ಸತ್ಯವನ್ನು ಬಿಟ್ಟು ಬದುಕುವವರ ಸಂಗವೇ ನಮಗೆ ಬೇಡ ಎನ್ನುವ ಕೀರ್ತನೆಯೊಂದನ್ನು ಬರೆದಿದ್ದಾರೆ.
ಅಂದರೆ ಸತ್ಯವನ್ನು ಬಿಟ್ಟು ನಾವು ಬದುಕುವದಲ್ಲ, ಅದನ್ನು ಬಿಟ್ಟು ಬದುಕುವವರ ಸಾಂಗತ್ಯ ನಮಗೆ ಬೇಡ ಎನ್ನುತ್ತಾರೆ.


ಸತ್ಯವಂಗರ ಸಂಗವಿರಲು ತೀರ್ಥವ್ಯಾತಕೆ
ನಿತ್ಯ ಪರಮಜ್ಞಾನಿಯಾದ ಮೇಲೆ ಚಿಂತೆಯಾತಕೆ

ಸತ್ಯವನ್ನು  ದೇವರ ಮುಂದಿರುವ ತೀರ್ಥಕ್ಕೆ ಹೋಲಿಸುವ ಕನಕದಾಸರು  ಸತ್ಯದ ಪಥದಲ್ಲಿ ನಡೆಯುವದಕ್ಕಿಂತ ಮತ್ತೊಂದು ತೀರ್ಥ ನಮಗೆ ಬೇಕಿಲ್ಲ ಎನ್ನುತ್ತಾರೆ. ಹರಿಯುವ ನೀರನ್ನು ತೀರ್ಥ ಎಂದು ನಂಬಿಕೊಂಡು ಬಂದವರು ನಾವು.ಆದರೆ ಅದು ತೀರ್ಥವಲ್ಲ ,ಯಾರು ಸತ್ಯವಂತರಾಗಿರುವರೋ ಅವರ ನಡೆಯಲ್ಲಿ ನುಡಿಯಲ್ಲಿ ತೀರ್ಥ ಎಂದರೆ ಪವಿತ್ರವಾದ ಬದುಕಿನ ಪಥದಲ್ಲಿ ತೀರ್ಥವಿದೆಯೇ ಹೊರತು ಹರಿಯುವ ನೀರಿನಲ್ಲಿ ತೀರ್ಥವಿದ್ದಿರಲಾರದು .ತೀರ್ಥವೆಂದರೆ ಸ್ವತ: ಆಚರಿಸುವ, ನಡೆದು ತೋರುವ ದಾರಿ ಎಂಬ ಅರ್ಥವನ್ನು ಕನಕದಾಸರು ಸತ್ಯಕ್ಕೆ ನೀಡುತ್ತಾರೆ. ಅಂತಹ ಪವಿತ್ರವಾದ ತೀರ್ಥವೇ ನಮ್ಮ ಮುಂದೆ ಇರಲಾಗಿ ಹರಿವ ನೀರನ್ನು ತೀರ್ಥವೆಂದೇಕೆ ಕರೆಯಬೇಕು?ಎನ್ನುವ ವೈಚಾರಿಕ ಸತ್ಯ ಅಲ್ಲಿನದು ಇದನ್ನೆ ಇವರ ಸಮಕಾಲಿನ ಕವಿ ಸರ್ವಜ್ಞ ತನ್ನ ತ್ರಿಪದಿಯಲ್ಲಿ

ಸತ್ಯ ರ ನಡೆ ತೀರ್ಥ ಸತ್ಯರ ನುಡಿ ತೀರ್ಥ
ಸತ್ಯರ ಸಂಗವದು ಪರಮ ತೀರ್ಥ
ಹರಿವ ನೀರೆತ್ತನದು ತೀರ್ಥ?

ಎಂದು ಪ್ರಶ್ನಿಸಿದ್ದನು. ಬರಿ ಹರಿವ ನೀರನ್ನೇ ತೀರ್ಥವೆಂದು ನಂಬಿ ನಿಜದಲ್ಲಿ ಸತ್ಯದ ದಾರಿಯನ್ನು ಮರೆತಿರುವವರನ್ನು ಟೀಕಿಸುತ್ತಾರೆ. ಇದರ ನಂತರದ್ದು ಜ್ಞಾನಿಯಾಗುವ ದಾರಿ. ಜ್ಞಾನ ಎಂಬ ಪದಕ್ಕೆ ಸಾಮಾನ್ಯವಾದ ಅರ್ಥ ತಿಳುವಳಿಕೆ ಎಂದಾದರೆ ದಾಸರು ಹೇಳುವಲ್ಲಿ ‘ಜ್ಞಾನದ ಅರ್ಥ ಶಿವನ ಜ್ಞಾನ ಎಂಬುದಾಗಿದೆ.ಅದು ಪರಮ ಜ್ಞಾನ . ನಮ್ಮ ಬದುಕಿಗೆ ದಾರಿ ತೋರುವ ಜ್ಞಾನ ತಿಳಿದರೆ ಅದನ್ನೇ ತಿಳಿಯಬೇಕು “ಸಾವು ಬಾರದ ಓದು ಓದಬೇಕು” ಎಂದಿದ್ದರು ಶರಣರು.ಅದು ನಿಜವಾದ ಜ್ಞಾನ. ಇದನ್ನು ಪಡೆಯುವದೇ ಮನುಷ್ಯನ ಜೀವಿತದ ಗುರಿ.
ಮೆಲಿನ ಎರಡು ಸಾಲುಗಳನ್ನು ಸಮರ್ಥಿಸಿಕೊಳ್ಳುವ ಬೇರೆಬೇರೆ ಉದಾಹರಣೆಗಳನ್ನು ಕನಕದಾಸರು ಕೀರ್ತನೆಯುದ್ದಕ್ಕೂ ನೀಡುತ್ತ ಹೋಗುತ್ತಾರೆ.

     ನಾವು ಗಳಿಸುವ ಧನದ ಪರಮ ಪ್ರಯೋಜನವೆಂದರೆ  ತನಗೆ ಉಪಯೋಗವಾಗಬೇಕು ತನಗೂ ಉಪಯೋಗವಾಗದ ಇತರರಿಗೂ ಉಪಯೋಗವಾಗದ ಧನ ಇದ್ದೂ ವ್ಯರ್ಥ.ಆದ್ದರಿಂದಲೇ ಧನ ಗಳಿಸಿ ಗಳಿಸಿ ಒಂದೆಡೆ ಕೂಡಿಡುವದನ್ನು ಶರಣರು ವಿರೋಧಿಸಿದ್ದರು ಗಳಿಸುವುದೇ ನಮ್ಮ ಬಳಕೆಗಾಗಿ. ಎನ್ನುವ್ಯವಹಾರ ಜ್ಞಾನ ಕನಕದಾಸರದು ಅಂತೆಯೇ ಅವರು ಕೀರ್ತನೆಯ ಮುಂದಿನ ಭಾಗದಲ್ಲಿ

ತಾನು ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ
ಮಾನಹೀನನಾಗಿ ಬಾಳ್ವ ಮನುಜನ್ಯಾತಕೆ
ಜ್ಞಾನವಿಲ್ಲದೆ ನೂರುಕಾಲ ಬದುಕಲ್ಯಾತಕೆ
ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ

ಕನಕದಾಸರು ಜ್ಞಾನದ ಮಹತ್ವ ವನ್ನು ಅರಿತಿದ್ದರು. ಅದೊಂದೆ ನಮ್ಮನ್ನು ಬೆಳ:ಕಿನೆಡೆಗೆ ಕರೆದೊಯ್ಯುವ ದಿವ್ಯ ಮಂತ್ರ ಎಂದವರಿಗೆ ತಿಳಿದಿತ್ತು ಅದಕ್ಕೆ ಓದಲರದ ಸಮಾಜಕ್ಕೆ ಅವರು ‘ಜ್ಞಾನವಿಲ್ಲದೆ ನೂರು ಕಾಲ ಬದುಕಲ್ಯಾತಕೆ’ ಎನ್ನುವ ಪ್ರಶ್ನೆ ಕೇಳಿದ್ದರು.
   ತಮ್ಮ ಬದುಕಿನ ಮೂಲಕ ಕನಕದಾಸರು ಸಾರಿದ್ದು ಜ್ಞಾನವನ್ನು ಬದುಕಿನಲ್ಲಿ ಗಳಿಸಬೇಕು ಎಂಬುದನ್ನು ಹಣ ಗಳಿಸುವದು ಮುಖ್ಯವಲ್ಲ ಎನ್ನುವ ಕನಕದಾಸರು ಜ್ಞಾನವನ್ನು ಗಳಿಸುವುದೇ ಮುಖ್ಯ ಎಂಬ ಲೋಕ ಸತ್ಯವನ್ನು ಜಗತ್ತಿಗೆ ಸಾರುತ್ತಾರೆ. ಇಂತಹ ಜ್ಞಾನವನ್ನು ತನ್ನದಾಗಿಸಿಕೊಂಡವನು ನಿತ್ಯಜ್ಞಾನಿ ಎನಿಸಿಕೊಳ್ಳುತ್ತಾನೆ ಅವನಿಗೆ ಚಿಂತೆ ಎಂಬುದು ಇರಲಾರದು ಎಂದು ಮೊದಲ ಸಾಲಿನಲ್ಲಿಯೆ ಸಾರಿದ್ದರು. ಪದ್ಯದ ಕೊನೆಯ ಸಾಲಿನಲ್ಲಿ ಇನ್ನೂ ಹೆಚ್ಚು ಸಾಮಜಿಕವಾಗುವ ದಾಸರು ಭೋಗಗಳಲ್ಲಿ ಅತ್ಯುತ್ಕೃಷ್ಟವಾದದು ಗಂಡು ಹೆಣ್ಣಿನ ಸಾಂಗತ್ಯ ಎನ್ನುವ ಸತ್ಯವನ್ನು ಸಾರುತ್ತಾರೆ. ಅದನ್ನು ಮೀರಿದ ಭೋಗ ಇರಲಾರದು ಎನ್ನುವ ಲೋಕಜ್ಞಾನ ಅವರದು. ಇನ್ನುಳಿದ ಯಾವ ಭೋಗಗಳೂ ಅದರ ಮುಂದೆ ಸಮನಲ್ಲ ಎನ್ನುವ ಕನದಾಸರು ಮಾನಿನಿಯನ್ನು ತೊರೆದ ಮೇಲೆ ಇನ್ಯಾವುದು ಪುರುಷನಿಗೇ ಅಗತ್ಯವಿಲ್ಲ ಎನ್ನುತ್ತಾರೆ. ಅಥವಾ ಪುರುಷನ ಸಂಗ ತೊರೆದ ಸ್ತ್ರೀಗೆ ಇನ್ಯಾವ ಭೋಗವೂ ಸಮನಿಸದು ಎಂಬ ಅರ್ಥವನ್ನು ಇಲ್ಲಿ ಗ್ರಹಿಸಬಹುದು.  

     ಬದುಕಿನ ಬಹಳಷ್ಟು ಲೌಕಿಕ ಸತ್ಯಗಳನ್ನು ಈ ಕೀರ್ತನೆ ಒಳಗೊಂಡಿದೆ. ಅವುಗಳಲ್ಲಿ ಮಕ್ಕಳು ಹೇಗಿರಬೇಕು? ಎಂಬುದು ಒಂದು. ಪ್ರತಿತಂದೆ ತಾಯಿಯ ಕೀರ್ತಿಯನ್ನು ಬೆಳಗಿಸಬೇಕದವರು ಅವರ ಮಕ್ಕಳೇ. ಕೇವಲ ಅವರಿಂದ ಬಂದ ದೇಹ ಸಂತಾನ ಮಾತ್ರವಾಗಿರದೆ ಅವರ ಹೆಸರು ಉಳಿಸುವ ಕಾರ್ಯವನ್ನು ಮಕಜ್ಕಳಾದವರು ಮಾಡಬೇಕು ಎಂಬುದು ಒಂದು ಅದರ್ಶ. ಆದ್ದರಿಂದಲೇ ಮಕ್ಕಳಿಲ್ಲದವರಿಗೆ ಮೋಕ್ಷವಿಲ್ಲ ಎಂಬ ಮಾತು ಇದೆ. ಇದೆಲ್ಲವನ್ನು ಸೂಚಿಸುತ್ತ ಕೀರ್ತನೆ ಹೀಗೆ ಮುಂದುವರೆದಿದೆ.

ಮಾತು ಕೇಳದೆ ಮಲೆತು ನಡೆವ ಮಕ್ಕಳ್ಯಾತಕೆ
ಪ್ರೀತಿಯಿಲ್ಲದ ಎಡೆಯಲಿಕ್ಕಿದ ಅನ್ನವ್ಯಾತಕೆ
ನೀತಿಯರಿತು ನಡೆಯದಿರುವ ಬಂಟನ್ಯಾತಕೆ
ಸೋತ ಹೆಣ್ಣಿಗೆ ಓತು ನಡೆಯದಿರುವ ಪುರುಷನ್ಯಾತಕೆ

       ಬದುಕಿನ ಹಲವು ಬಂಧಗಳ ಬಗೆಗೆ ನಮ್ಮ ನಿಲು ವು ಏನಾಗಿರಬೇಕು ಎನ್ನುವದು ಕನಕದಾಸರ ಚಿಂತನೆಯಾಗಿದೆ. ಮಾತು ಕೇಳದಿದ್ದರೆ ಮಕ್ಕಳಲ್ಲ ಎನ್ನುವದು ಅವರ ಅಭಿಪ್ರಾಯ . ಎಲ್ಲಿ ಪ್ರೀತಿಯಿಲ್ಲವೋ ಅಲ್ಲಿ ಊಟಕ್ಕೂ ಹೋಗಬಾರದು .ಪ್ರೀತಿಯಿರದೆ  ನೀಡುವ ಊಟ ಊಟವೇ ಅಲ್ಲ ಎಂದು ಕನಕದಾಸರ ಸ್ಪಷ್ಟ ಅಬಿಪ್ರಾಯ ಅದು ಮನೆಯಾದರೂ ಅಷ್ಟೇ. ಹೊರಗಾದರೂ ಅಷ್ಟೇ. ಸೇವಕ ನಮ್ಮವನಾದ ಮೇಲೆ ಅವನಲ್ಲಿ ನಿಷ್ಠೆ ನೀತಿ ನಿಯಮಗಳು ಇರಬೆಕು. ಇರದಿದ್ದರೆ ಅವನಿಂದ ಸೇವಿಸಿಕೊಂಡು  ಲಾಭವಿಲ್ಲ ಎನ್ನುವ ಕನಕದಾಸರು ಕೊನೆಯ ಸಲಿನಲ್ಲಿ ತೀರ  ಲೌಕಿಕರಾಗಿ ಸೋತ ಹೆಣ್ಣಿಗೆ ಓತು ನಡೆಯದ ಪುರುಷನೇತಕೆ’ ಎನ್ನುವ  ಪ್ರಶ್ನೆಯೆತ್ತುತ್ತಾರೆ. ತಾನಾಗಿಯೆ ಒಲಿದು ಬಂದ ಹೆಣ್ಣಿನ ಪ್ರೀತಿಯನ್ನು ಸ್ವೀಕರಿಸದ ಪುರುಷನು ಇದ್ದರು ಅಷ್ಟೇ ಇರದಿದ್ದರೂ ಅಷ್ಟೇ ಎನ್ನುತ್ತಾರೆ. ಮುಂದುವರೆದು

ಸನ್ನೆಯರಿತು ನಡೆಯದಿರುವ ಸತಿಯು ಯಾತಕೆ
ಮನ್ನಣೆಯಿಂದ ನಡೆಸದಿರುವ ದೊರೆಯು ಯಾತಕೆ
ಮುನ್ನ ಕೊಟ್ಟು ಪಡೆಯದಿನ್ನು ಬಯಸಲ್ಯಾತಕೆ
ಚೆನ್ನ ಆದಿಕೇಶವನಲ್ಲದೇ ದೈವವ್ಯಾತಕೆ

    ಸತಿಯಾದವಳು ಕೂಡ ಗಂಡನ ಸಮಯ ಸಂದರ್ಭ ನೋಡಿಕೊಂಡು ಅವನಿಗೆ ಕೊಡಬೇಕಾದ ಗೌರವ  ಕೊಡುತ್ತ ಬದುಕಬೇಕು ಇರದಿದ್ದರೆ ಆ ಕುಟುಂಬಕ್ಕೂ ನೆಲೆ ಇರುವುದಿಲ್ಲ. ಹಗೆಯೇ ದೊರೆಯಾದವನು ಗೌರವ ಕೊಡದಿದ್ದರೆ ಅವನಲ್ಲಿ ಸೇವೆ ಸಲ್ಲಿಸಿಯೂ ವ್ಯರ್ಥ ಎನ್ನುತ್ತಾರೆ ಕನಕದಾಸರು. ದನದ ವಿಷಯದಲ್ಲಿ ಯಾರಿಗಾದರೂ ಏನಾದರೂ ಕೊಟ್ಟರೆ ಮರಳಿ ಅದನ್ನು ನಾವು ಅವರಿಂದ ಬಯಸಬಾರದು ಎನ್ನುವದು ನಿಯಮ  ಕೊನೆಯದಾಗಿ ಏಕದೇವೋಪಾಸಕರಾದ ಕನಕದಾಸರು ತನ್ನ ಆರಾಧ್ಯ ದೈವ ಚೆನಕೇಶವರಾಯನಲ್ಲ ದೇ ಬೇರೆ ದೈವಗಳು ನಮಗೆ ಬೇಕಿಲ್ಲ ಎನ್ನುವ ತಿರ್ಮಾನಕ್ಕೆ ಬರುತ್ತಾರೆ.

      ಒಟ್ಟಾರೆ ಕನಕದಾಸರ ಈ ಕೀರ್ತನೆ ಬದುಕಿನ ಹಲವು ಲೊಕನ್ಯಾಯಗಳನ್ನು ಸಾರುತ್ತದೆ. ಮತ್ತು ಬದುಕು ಸಾರ್ಥಕ ಬದುಕಾಗಬೆಕಾದರೆ ಅದು ಅನುಸರಿಸಬೇಕದ ನಿಯಮಗಳನ್ನು ಸ್ಪಷ್ಟವಾಗಿ ಸಾರಿದೆ.  ಸಾಮಜಿಕ ಬದುಕಿಗೆ ಮಾರ್ಗದರ್ಶನ ಮಾಡುವ ಇಂಥ ಸೂತ್ರಗಳಿಂದ ಅವರು ಕೀರ್ತನೆಗಳಿಗೆ ಹೆಚ್ಚು ಮೌಲ್ಯ ಬಂದಿದೆ ಎನಿಸುತ್ತದೆ.


Leave a Reply

Back To Top