ಕಾವ್ಯ ಸಂಗಾತಿ
ಶಕುಂತಲಾ ಎಫ್ ಕೋಣನವರ
ಗಜಲ್


rನಗ್ನತೆಗೆ ನಾಚದಿರು ಸಿರಿದಳಿರ ತೆಕ್ಕೆಯಿಂದ ಅರಳಿಬಿಡು ಒಮ್ಮೆ
ಭಗ್ನ ಕನಸಿಗೆ ಬಣ್ಣ ತುಂಬಲು ಹೃದಯ ನಂದನಕೆ ಮರಳಿಬಿಡು ಒಮ್ಮೆ
ಯಾರಿಗಾಗಿ ತುಟಿಯರಳಿಸಿ ನಿಂತಿರುವೆ ಕೆಂಪು ಗುಲಾಬಿಯೆ
ನಾರಿ ಮುಡಿಯ ಸಿಂಗರಿಸಲು ಈ ರಸಿಕನೆಡೆಗೆ ಹೊರಳಿಬಿಡು ಒಮ್ಮೆ
ಕೆಂಡದಂಥ ಕಂಗಳಲ್ಲಿ ಪ್ರೇಮದ ಹೊಳೆ ಹರಿಸಬೇಕಿದೆ ಕುಸುಮವೆ
ಬೆಂಡಾದ ಭಾವಗಳಿಗೆ ಜೀವರಸ ತುಂಬಿ ಪರಾಗ ಹರಡಿಬಿಡು ಒಮ್ಮೆ
ತುಂತುರು ಹನಿಗಳ ಮಂತ್ರಾಕ್ಷತೆ ಧರಿಸಿ ಅಂತರಂಗ ಕೆಣಕುವೆಯಾ
ಸಂತನೂ ಶೃಂಗಾರಕಾವ್ಯ ಬರೆವ ಚೆಲುವ ಕಂಡು ಮೆರೆದುಬಿಡು ಒಮ್ಮೆ
ಪ್ರೀತಿಯ ಸಂಕೇತವಾಗಿ ಗೌರವ ಪಡೆದೆ ವಸುಧೆಯಲಿ ಅನವರತ
ಗೀತೆಯ ಹಾಡುವೆ ಮನದುಂಬಿ ಕ್ಷಣಕಾಲ ಮುಳ್ಳನು ಸರಿಸಿಬಿಡು ಒಮ್ಮೆ
ಹಗಲು ರಾತ್ರಿಗಳನೊಂದು ಮಾಡಿ ಮುನಿಸಿಕೊಂಡಿಹಳೆನ್ನ ಸಖಿ
ಸೊಗದ ದಿನಕಾಗಿ ಪಕಳೆಯಿಂದ ರಂಗವಲ್ಲಿ ಬಿಡಿಸಿಬಿಡು ಒಮ್ಮೆ
ಮರೆಯದೆ ನೀರೆರೆವೆ ಹುಲುಸಾದ ಮೊಗ್ಗುಗಳು ಮೈದಳೆಯಲು
ಕರೆಯದೆ ಬರಲೆನ್ನ ಶಕು ಗಾಳಿಯಲಿ ಸೌರಭ ಬೆರೆಸಿಬಿಡು ಒಮ್ಮೆ
***
ಶಕುಂತಲಾ ಎಫ್ ಕೋಣನವರ