ಕಥಾಯಾನ

ಕಾಲೋ ಜಗದ್ಭಕ್ಷಕಃ

city loneliness | GemmaSchiebeFineArt

ಅನುಪಮಾ ರಾಘವೇಂದ್ರ


‘ಮಕ್ಕಳು ಮೊಮ್ಮಕ್ಕಳು ಜೊತೆಯಲ್ಲಿದ್ದರೆ ಇಳಿ ವಯಸ್ಸಿನಲ್ಲೂ ವಯಸ್ಸು ಇಳಿಯುತ್ತದೆ’ ಎಂದು ಎಲ್ಲೋ ಓದಿದ್ದು ನೆನಪಾಗಿ ನಸು ನಗು ಬಂತು. ಪಕ್ಕದಲ್ಲೇ ಕುಳಿತಿದ್ದ ಮೊಮ್ಮಗ ಕಿಶನ್ “ಏನಜ್ಜೀ….. ನಗ್ತಾ ಇದ್ದೀರಿ. ನಂಗೂ ಹೇಳಿ” ಎಂದ. “ಪುಟ್ಟಾ … ನೀನು ಹುಟ್ಟಿದ ಮೇಲೆ ಮೊದಲ ಸಲ ಇಷ್ಟು ದಿನ ಈ ಅಜ್ಜಿಯ ಮನೆಯಲ್ಲಿ ಉಳಿದುಕೊಂಡದ್ದಲ್ವಾ …… ನೀನಿಲ್ಲಿರಲು ಕೊರೋನಾ ಒಂದು ನೆಪವಾಯ್ತಲ್ಲಾ ಅಂತ ನೆನೆಸಿ ನಗು ಬಂತು” ಎಂದೆ. “ಹೌದಜ್ಜೀ …… ಹಳ್ಳಿ ಮನೆ ಅಂದ್ರೆ ಇಷ್ಟು ಚೆನ್ನಾಗಿರ್ತದಾ……? ತೋಟ, ಗುಡ್ಡೆ , ತೋಡು, ಕಾಡು …. ವಾಹ್ ಮಜವೇ ಮಜ. ಇಷ್ಟು ಸಲ ಬಂದಾಗಲೂ ಇದೆಲ್ಲ ನೋಡೇ ಇರ್ಲಿಲ್ಲ” ಎಂದ. “ಹೌದು ಪುಟ್ಟಾ… ಹಳ್ಳಿ ಎಂದರೆ ಅಮ್ಮನ ಮಡಿಲಿನ ಹಾಗೆ. ಹಚ್ಚ ಹಸಿರು…. ನಿತ್ಯ ನೂತನ…..” ಎಂದು ನಾನು ನನ್ನಷ್ಟಕ್ಕೇ ಬಡಬಡಿಸುತ್ತಲೇ ಇದ್ದೆ. ಕಿಶನ್ ಅಂಗಳದಲ್ಲಿ ಓಡಾಡುತ್ತಿದ್ದ ನವಿಲುಗಳ ಹಿಂಡನ್ನು, ಕಳ್ಳ ಹೆಜ್ಜೆ ಇಟ್ಟು ಹಿಂಬಾಲಿಸುತ್ತಾ ನಡೆದಿದ್ದ.


ಹದಿನೆಂಟನೇ ವಯಸ್ಸಿನಲ್ಲಿ ಈ ಮನೆಗೆ ಕಾಲಿಟ್ಟವಳು ನಾನು. ನಮ್ಮ ಹಾಲಿನಂತಹ ಸಂಸಾರಕ್ಕೆ ಜೇನಾಗಿ ಬಂದವರು ಮಿಥುನ್, ಮೈಥಿಲಿ. ಮಗ ವೈದ್ಯನಾದ. ಮಗಳು ತನ್ನಿಚ್ಛೆಯಂತೆಯೇ ಇಂಜಿನಿಯರ್ ಆದಳು. ಮಗನ ಕೈ ಹಿಡಿದ ಶಮಾ ದಂತ ವೈದ್ಯೆ. ಅನಘಾ , ಅಮೋಘ ಮುದ್ದಾದ ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸವಾಗಿದ್ದು , ವಾರಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ. ಮೈಥಿಲಿಯ ಗಂಡ ಶ್ರೀರಾಮ ಬೆಂಗಳೂರಿನಲ್ಲಿ ಇಂಜಿನಿಯರ್. ಇತ್ತೀಚೆಗಷ್ಟೇ ಅಮೇರಿಕಾದ ಒಂದು ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿ ಅಲ್ಲಿಗೆ ಹೋಗಿ ಮನೆ ಮಾಡಿದ್ದಾನೆ . ಮೈಥಿಲಿಯೂ, ಮೊಮ್ಮಗ ಕಿಶನ್ ಇನ್ನೇನು ಸದ್ಯದಲ್ಲಿಯೇ ಅಲ್ಲಿಗೆ ಹೋಗುವವರಿದ್ದರು . ಹೋಗುವ ಮೊದಲು ಊರಿಗೆ ಬಂದವರು ಲಾಕ್ ಡೌನ್ ಕಾರಣದಿಂದ ಇಲ್ಲಿ ಉಳಿಯಬೇಕಾಯ್ತು.
ಆರು ವರ್ಷ ವಯಸ್ಸಿನ ಕಿಶನ್ ಪ್ರಶ್ನೆಗಳ ಭಂಡಾರ. “ಅಜ್ಜೀ ಇಲ್ಲಿ ಹಾಲು ಯಾಕೆ ಇಷ್ಟು ರುಚಿಯಾಗಿದೆ…?” ಎಂದು ಕೇಳುತ್ತಾ ಚಪ್ಪರಿಸುತ್ತಾ ಹಾಲು ಕುಡಿಯುತ್ತಿರುವ ಮಗನನ್ನು ನೋಡಿ ಮೈಥಿಲಿಗೂ ಆಶ್ಚರ್ಯವಾಯ್ತು. ಬೆಂಗಳೂರಿನಲ್ಲಿ ಅವನಿಗೆ ಒಂದು ಲೋಟ ಹಾಲು ಕುಡಿಸುವುದೆಂದರೆ ಒಂದು ದೊಡ್ಡ ಸಾಧನೆ. “ಪುಟ್ಟಾ … ಇದು ನಮ್ಮ ದನದ ಹಾಲು. ಶುದ್ಧವಾಗಿರ್ತದೆ. ಅಲ್ಲಿ ಪ್ಯಾಕೆಟ್ ಹಾಲಿಗೆ , ಹಾಲು ಕೆಡದಂತೆ ಇಡಲು ಕೆಲವು ರಾಸಾಯನಿಕಗಳನ್ನು ಸೇರಿಸ್ತಾರೆ” ಎಂದೆ. ಕೊರೋನಾದಿಂದಾಗಿ ಹೊರಗಿನ ತರಕಾರಿ ಸಿಗದೆ ಹೋದರೂ ನಮಗೆ ತರಕಾರಿಗಳ ದಾರಿದ್ರ್ಯಬರಲೇ ಇಲ್ಲ. ಕಿಶನ್ ಗೆ ಇದೂ ಆಶ್ಚರ್ಯದ ಸಂಗತಿಯೇ…. “ಪೇಟೆಗೆ ಹೋಗದೇ ಇದ್ದರೂ ಇಷ್ಟೊಂದು ತರಕಾರಿ ಎಲ್ಲಿಂದ….?” ಹಲಸಿನ ಕಾಯಿ , ಹಲಸಿನ ಬೇಳೆ , ಬಾಳೆಕಾಯಿ , ಬಾಳೆದಂಡು , ಬಾಳೆ ಹೂ , ಬಸಳೆ , ನೆಲಬಸಳೆ, ತೊಂಡೆಕಾಯಿ, ಬೆಂಡೆಕಾಯಿ, ಬದನೆ , ಒಂದೆಲಗ , ವಿಟಮಿನ್ ಸೊಪ್ಪು……ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾನು ದಿನಕ್ಕೊಂದು ಸೊಪ್ಪಿನ ತಂಬುಳಿ ಮಾಡುವುದನ್ನು ನೋಡಿದ ಕಿಶನ್ , ಬಹಳ ಅಸ್ಥೆಯಿಂದ ಕಮ್ಯೂನಿಸ್ಟ್ ಸೊಪ್ಪು ಕೊಯ್ದು ತಂದು ನನ್ನ ಬಳಿ ಹಿಡಿದಿದ್ದ.


ಅಜ್ಜನೂ , ಮೊಮ್ಮಗನೂ ತೋಟ , ಗುಡ್ಡೆ ಎಂದು ಸುತ್ತೀ ಸುತ್ತಿ ಮಾವಿನ ಹಣ್ಣು , ಗೇರು ಹಣ್ಣು , ಕುಂಟಾಂಗಿಲ , ನೇರಳೆಹಣ್ಣು , ಮುಳ್ಳು ಹಣ್ಣು ಕೊಯ್ದು ತಿಂದು ಈಗ ಕಾಡಿನ ಹಣ್ಣುಗಳೆಲ್ಲ ಮೊಮ್ಮಗನಿಗೂ ಚಿರಪರಿಚಿತ. ಕೆರೆಯ ನೀರಿನಲ್ಲಿ ಆಟವಾಡುವಾಗ ಅವನ ಪುಟ್ಟ ತಲೆಯೊಳಗೆ “ಈ ನೀರು ಯಾಕೆ ಇಷ್ಟು ಚೆನ್ನಾಗಿದೆ…… ಹೇಗೆ ಇಷ್ಟು ತಂಪಾಗಿದೆ …” ನೂರೆಂಟು ಪ್ರಶ್ನೆಗಳು. ಬೆಂಗಳೂರಿನಲ್ಲಿ ದಿನವಿಡೀ ಶಾಲೆ ,ಟ್ಯೂಷನ್ ಎಂದು ಕಳೆದು ಹೋದರೂ ವಾರಂತ್ಯದಲ್ಲಿ ಮೊಬೈಲ್ , ಕಂಪ್ಯೂಟರ್ , ಟಿ.ವಿ. ಕಿಶನ್ ನ ಪ್ರಪಂಚವಾಗಿತ್ತು. ಇಲ್ಲಿ ಬಂದ ಮೇಲೆ ಗೂಡಿನಿಂದ ಹೊರಗೆ ಬಿಟ್ಟ ಹಕ್ಕಿಯಂತಾಗಿದ್ದ. ಟಿ.ವಿ. , ಕಂಪ್ಯೂಟರ್ ಗಳ ನೆನಪೇ ಇಲ್ಲ. ಮೊಬೈಲ್ ನೆನಪಾಗುತ್ತಿದ್ದುದು ವಿಡಿಯೋ ಕರೆ ಮಾಡಿ ಅಪ್ಪನ ಬಳಿ ಮಾತನಾಡಲು ಮಾತ್ರ. ಅಲ್ಲಿ ಪಿಜ್ಜಾ , ಬರ್ಗರ್ ಇಲ್ಲದೇ ವಾರ ಮುಗಿಯುತ್ತಿರಲಿಲ್ಲ. ಇಲ್ಲಿ ಅದ್ಯಾವುದರ ನೆನಪೂ ಅವನಿಗಿಲ್ಲ. ಆಶ್ಚರ್ಯವೆಂದರೆ ಯಾವಾಗಲೂ ಗಂಟು ನೋವೆಂದು ಎಣ್ಣೆ ಉಜ್ಜಿಸಿಕೊಳ್ಳುತ್ತಿದ್ದ ಯಜಮಾನರಿಗೆ ಈಗ ಹದಿನೈದು ದಿನಗಳಿಂದ ತನಗೆ ನೋವಿದೆ ಎಂಬುದೇ ಮರೆತು ಹೋಗಿತ್ತು. ನನ್ನ ಸೊಂಟ ನೋವೂ ಅಷ್ಟೇ……. ನಾವಿಬ್ಬರೂ ಮತ್ತೆ ಚಿಕ್ಕ ವಯಸ್ಸಿಗೆ ಕಾಲಿಡುತ್ತಿರುವ ಅನುಭವ. ಇದು ನಮ್ಮ ಜೀವನದಲ್ಲಿ ಕೊರೋನಾ ಪರಿಣಾಮದ ಒಂದು ಮುಖ .
ಮಗ ಮಿಥುನ್ ನಗರದಲ್ಲಿ ಪ್ರಸಿದ್ಧ ವೈದ್ಯ. ಕೊರೋನಾ ಚಿಕಿತ್ಸೆಗಾಗಿ ಸಿದ್ಧರಾಗಿರುವ ವೈದ್ಯರ ತಂಡದಲ್ಲಿ ಅವನೂ ಒಬ್ಬ . ಸೊಸೆಯೂ , ಮೊಮ್ಮಕ್ಕಳೂ ನಗರದಲ್ಲೇ ಇದ್ದರೂ ಅವರಿಗೂ ಮಗನ ಭೇಟಿ ಇಲ್ಲ. ಪ್ರತಿ ದಿನ ಪ್ರತಿ ಕ್ಷಣ ಆತಂಕ. ನನ್ನ ಮನಸ್ಸು , ನಮ್ಮ ದೇಶ ಸೇವೆಗಾಗಿ ನಿಂತ ಸೈನಿಕರನ್ನು ಒಂದು ಕ್ಷಣ ನೆನೆಸಿಕೊಂಡಿತು. ಮಗ ಒಳ್ಳೆಯ ಕೆಲಸ ಮಾಡುತ್ತಿದ್ದಾನೆಂಬ ಸಮಾಧಾನವಿದ್ದರೂ, ಕೊರೋನಾದ ಕರಾಳ ಛಾಯೆಯನ್ನು ನೆನೆಸಿ ಕೈಕಾಲು ನಡುಗುತ್ತಿತ್ತು. ಈ ಸಮಯದಲ್ಲೇ ಹುಚ್ಚು ಮನಸ್ಸಿನ ಹತ್ತು ರೂಪಗಳ ಪರಿಚಯವಾಗಿದ್ದು.


ಬೈಲಿನ ಮಾಲಿಂಗ ಬಂದು ಅಂಗಳದ ಬದಿಯಲ್ಲಿ ನಿಂತು “ಅಕ್ಕಾ” ಎಂದು ಕರೆದ. “ಹೋ…ಮಾಲಿಂಗಾ… ಏನು ವಿಶೇಷ….?” “ಎಂತ ಹೇಳುದು ಅಕ್ಕಾ… ಈ ಕೊರೋನಾ ಮಾರಿ ನಮ್ಮನ್ನು ಸರ್ವನಾಶ ಮಾಡಿತು” ಎಂದು ಗೋಳಾಡಿದ. “ಸಮಾಧಾನ ಮಾಡಿಕೋ ಮಾಲಿಂಗಾ…… ಏನಾಯ್ತು ಹೇಳು…..” ಎಂದೆ. “ನಾನು ದಿನಾ ಕೆಲಸಕ್ಕೆ ಹೋದರೆ ಮಾತ್ರ ನಮ್ಮ ಮನೆ ನಡೆಯುವುದು. ಈಗ ಒಂದು ತಿಂಗಳಾಯ್ತು ಕೆಲಸ ಇಲ್ಲದೆ. ರೇಶನ್ ಇಲ್ಲ. ವಯಸ್ಸಾದ ಅಮ್ಮನ ಔಷಧಿ ಮುಗಿದಿದೆ. ಮಗಳು ತುಂಬಿದ ಬಸುರಿ. ಹೆಂಡತಿಗೂ ಪ್ರೆಶರ್ ಹೆಚ್ಚು ಕಮ್ಮಿ ಆಗ್ತಾ ಇರ್ತದೆ. ಎಂತ ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ.” ಎಂದು ಕಣ್ಣೀರಿಟ್ಟ. “ಹೌದು ಮಾಲಿಂಗ . ಹೆಚ್ಚಿನವರ ಸ್ಥಿತಿಯೂ ಹೀಗೇ ಇದೆ. ದೊಡ್ಡ ದೊಡ್ಡ ಬಿಸಿನೆಸ್ ನೆಲ ಕಚ್ಚಿದೆ. ವ್ಯಾಪಾರ , ವಹಿವಾಟುಗಳು ಏರುಪೇರಾಗಿವೆ. ಮಕ್ಕಳ ವಿದ್ಯಾಭ್ಯಾಸ ಎಲ್ಲ ಹಾಳಾಯ್ತು. ಕೊರೋನಾ ಯಾರನ್ನೂ ಬಿಟ್ಟಿಲ್ಲ…..” ಎಂದೆ. “ಅದೆಲ್ಲ ಹೋಗ್ಲಿ. ನನ್ನ ಮನೆ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಪಂಚಾಯ್ತಿಂದ ಮನೆ ಕಟ್ಟಿಸಿ ಕೊಡ್ತಾರೆ ಅಂತ ಸುದ್ಧಿ ಇತ್ತು . ಇನ್ನು ಅದ್ಯಾವುದೂ ನಡೀಲಿಕ್ಕಿಲ್ಲ” ಎಂದ. ಅವನ ಪರಿಸ್ಥಿತಿ ನೆನೆದು ಸಂಕಟ ಆಯ್ತು. ಒಂದು ಬಾಳೆ ಗೊನೆ , ಸ್ವಲ್ಪ ತರಕಾರಿ, ಸ್ವಲ್ಪ ಅಕ್ಕಿ, ಸ್ವಲ್ಪ ಹಣ ಕೊಟ್ಟು “ಹೆದರ್ಬೇಡ. ಎಲ್ಲ ಒಳ್ಳೆದಾಗ್ತದೆ. ಒಂದು ಮಾತು ನೆನಪಲ್ಲಿಟ್ಟುಕೋ ಈ ಸಮಯ ಕಳೆದು ಹೋಗುವುದು” ಎಂದೆ. ಮಾಲಿಂಗ ಹೊರಟು ಹೋದ. ಇಷ್ಟನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಕಿಶನ್ ಗೆ ಒಂದು ಮಾತ್ರ ಅರ್ಥ ಆಗಿರಲಿಲ್ಲ. “ಅಜ್ಜೀ…. ಎಲ್ಲ ಗೊತ್ತಾಯ್ತು. ನೀವು ಕೊನೆಯಲ್ಲಿ ಹೇಳಿದ ಒಗಟು ಮಾತ್ರ ಅರ್ಥ ಆಗ್ಲಿಲ್ಲ” ಎಂದ. “ಒಗಟಾ… ನಾನು ಒಗಟು ಹೇಳಿಯೇ ಇಲ್ವಲ್ಲಾ” ಎಂದೆ. “ನೀವು ‘ಈ ಸಮಯ ಕಳೆದು ಹೋಗುವುದು’ ಅಂತ ಹೇಳಿದ್ರಲ್ಲಾ… ಅದೇನು…?” ಎಂದ. “ಹೋ ….. ಅದಾ…. ನೋಡು ಪುಟ್ಟಾ… ಕಾಲ ಎಲ್ಲವನ್ನೂ ಮರೆಸುತ್ತದೆ. ಅಲ್ವಾ……”ಎಂದೆ. “ಅಂದ್ರೇ…..?” ಪುಟ್ಟನ ರಾಗ. “ಈಗ ನೋಡು ನೀನೀಗ ಇಲ್ಲಿ ಎಷ್ಟು ಸಂತೋಷದಲ್ಲಿದ್ದೀಯ ? ಈ ಸಮಯ ಕಳೆದು ಹೋದರೆ……. ಮತ್ತೊಮ್ಮೆ ನಿನ್ನ ಜೀವನ ಯಾಂತ್ರಿಕ ಬದುಕಾಗ್ತದೆ . ಅಲ್ವಾ…..ಈಗ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೋ….. ಜೀವನದಲ್ಲಿ ನಿನಗೆ ಬೇಸರವಾದಾಗಲೆಲ್ಲ ಈ ಮಾತನ್ನು ನೆನೆಸಿಕೋ. ಮನಸ್ಸಿಗೆ ಸಮಾಧಾನವಾಗುತ್ತದೆ. ಕಷ್ಟದಲ್ಲಿರುವವರು ಈ ಮಾತನ್ನು ನೆನೆಸಿಕೊಂಡರೆ ‘ಈಗ ಕಷ್ಟ ಕಾಲ. ಈ ಕಾಲ ಕಳೆದು ಹೋದರೆ ಮುಂದೆ ಬರುವ ಕಾಲ ನಮಗೆಲ್ಲರಿಗೂ ಒಳ್ಳೆಯದನ್ನೇ ಮಾಡ್ತದೆ’ ಎಂಬ ಧನಾತ್ಮಕ ಚಿಂತನೆ ಮೂಡ್ತದೆ. ಕಾಲೋ ಜಗದ್ಭಕ್ಷಕಃ .ಅಂದರೆ ‘ಕಾಲ ಜಗತ್ತಿನ ಎಲ್ಲವನ್ನೂ ತಿಂದು ತೇಗುವವ’ ಎಂದರ್ಥ ಕಾಲವು ಎಲ್ಲವನ್ನೂ ಕಬಳಿಸುತ್ತಲೇ ಇರುತ್ತದೆ. ಜೀವನದಲ್ಲಿ ಅದೆಷ್ಟೋ ಸಿಹಿ – ಕಹಿ ಘಟನೆಗಳು ಸಂಭವಿಸಿರುತ್ತವೆ. ನಮ್ಮದು ಸಿಹಿಯನ್ನು ಮರೆಸಲು ಸಿದ್ಧವಿಲ್ಲದ , ಕಹಿಯನ್ನು ಮರೆಯಲು ಸಾಧ್ಯವಾಗದ ಮನಸ್ಥಿತಿ. ಆದರೆ ಸಮಯವು ಯಾವ ಬೇಧವನ್ನೂ ತೋರದೆ ಎಲ್ಲವನ್ನೂ ಮರೆಸುತ್ತದೆ” ಎಂದು ಒದರುತ್ತಲೇ ಇದ್ದೆ. ನನ್ನ ಮಾತು ಆರರ ವಯಸ್ಸಿನ ಕಿಶನ್ ಗೆ ಅರ್ಥವಾಗದ ಹಂತಕ್ಕೆ ತಲುಪಿದ್ದು ನನ್ನರಿವಿಗೆ ಬರುವ ಮೊದಲೇ ಕಿಶನ್ ಹೂವಿನ ಗಿಡದಲ್ಲಿ ಕುಳಿತಿದ್ದ ಪಾತರಗಿತ್ತಿಯ ಬೆನ್ನು ಹತ್ತಿದ್ದ.

ಮರುದಿನ ಬೆಳಗ್ಗೆ ಅಪ್ಪನಿಗೆ ಕರೆ ಮಾಡಿ ಮಾತನಾಡುತ್ತಿದ್ದ ಕಿಶನ್ ಇಲ್ಲಿನ ವಿದ್ಯಮಾನಗಳನ್ನು ಬಹಳ ಉತ್ಸಾಹದಲ್ಲಿ ವರ್ಣಿಸುತ್ತಿದ್ದ. ಆಗ ಅಲ್ಲಿಂದ ಶ್ರೀರಾಮ “ಕಿಶೂ …….. ನಿನಗಲ್ಲಿ ಮಜವೋ ಮಜ ಅಲ್ವಾ… ನನಗಿಲ್ಲಿ ಯಾರಿಲ್ಲ. ತುಂಬ ಬೋರಾಗ್ತಿದೆ. ಅಳ್ಬೇಕು ಅನಿಸ್ತಿದೆ” ಎಂದ. ಕಿಶನ್ “ಅಪ್ಪಾ ಬೇಸರ ಮಾಡ್ಕೊಳ್ಬೇಡಿ. ಈ ಸಮಯವು ಕಳೆದು ಹೋಗ್ತದೆ” ಎಂದು ಮುದ್ದು ಮುದ್ದಾಗಿ ಹೇಳಿದಾಗ ನಮಗೆಲ್ಲ ನಗಬೇಕೋ ಅಳಬೇಕೋ ಎಂದರಿವಾಗದ ಪರಿಸ್ಥಿತಿ.


ಹೌದಲ್ಲಾ…… ‘ಈ ಸಮಯವು ಕಳೆದು ಹೋಗುತ್ತದೆ’ ಕೊರೋನಾ ಮುಗಿದು ಎಲ್ಲೆಡೆ ಶಾಂತಿ ನೆಲೆಸುತ್ತದೆ. ಮಗಳು , ಮೊಮ್ಮಗ ಅಮೇರಿಕಾ ಹೋಗುತ್ತಾರೆ. ಮತ್ತೆ ಅವರನ್ನು ಕಾಣಲು ಅದೆಷ್ಟು ಕಾಲ ಕಾಯಬೇಕೋ….. ಮತ್ತೆ ಏಕಾಂಗಿತನ……. ಮತ್ತೆ ವಾರಕ್ಕೊಮ್ಮೆ ಬರುವ ಮಗ , ಸೊಸೆ, ಮೊಮ್ಮಕ್ಕಳ ನಿರೀಕ್ಷೆ…….. ಇದುವೇ ಜೀವನ . ಕಾಲಾಯ ತಸ್ಮೈ ನಮಃ

~~~~

5 thoughts on “ಕಥಾಯಾನ

Leave a Reply

Back To Top