ಆ ಹನಿಯೊಂದು ಒಡೆದು..
ಬಿದಲೋಟಿ ರಂಗನಾಥ್
ತಣ್ಣನೆಯ ಗಾಳಿಗೆ ಮೈ ಬಿಟ್ಟು ಕೂತೆ
ಬಿದ್ದ ಹನಿಯೊಂದು ಒಡೆದು ಮುತ್ತಾಯ್ತು
ಕಚಗುಳಿಯಿಟ್ಟ ಆ ಹನಿಯನ್ನು ಮತ್ತೆ ಮತ್ತೆ ಹುಡುಕಿದೆ…
ಇಲ್ಲ, ಸಿಗಲೇ ಇಲ್ಲ
ಇದಾದ ಮೇಲೆ ಅದೆಷ್ಟೋ ಹನಿಗಳು
ನನ್ನ ಮೈ ಮುಟ್ಟಿರಬಹುದು
ಆ ಹನಿ ಕೊಟ್ಟ ಸ್ಪರ್ಶದ ಅಮಲು
ನನ್ನ ಮನಸನು ಮುಟ್ಟಲೇ ಇಲ್ಲ
ಮತ್ತೆ ಬೇಸಿಗೆ
ಬಿರು ಬಿಸಿಲ ಝಳ
ಆದರೂ ಕಾಯುವುದ ಮಾತ್ರ ಮರೆಯಲಿಲ್ಲ
ಬರುವ ಮಳೆ ಗಾಲದ ಹೆಜ್ಜೆ ಮೂಡುವವರೆಗೆ…
ಪ್ರತಿಸಲ ಮೋಡ ಗರ್ಭಕಟ್ಟಿದಾಗೆಲ್ಲ
ಏನೋ ಪುಳಕಿತ ಕಾತರ ರೋಮಾಂಚನ
ಆ ಹನಿಯ ಸ್ಪರ್ಶಕ್ಕಾಗಿ.
ಯಾವುದಾ ಹನಿ ?
ಪ್ರಶ್ನೆಯ ಬಟ್ಟೆಯಲಿ ನೂರಾರು ಚಿತ್ತಾರ
ಕಾಲಗಳು ಸರಿದವು
ಕೊಳಲು ಕೀರಲಾಯಿತು
ಜೀವಧ್ವನಿಯೊಂದು ಮೋಡದ ಕಡೆ ಕಣ್ಣಾಸಿತು
ಪಟ ಪಟನೇ ಬೀಳುವ
ಇಷ್ಟೊಂದು ಹನಿಗಳಲ್ಲಿ
ಮೈ ತೊಯ್ದು ಹೋಗಿದೆ
ನನ್ನೊಳಗಿನ ಜೀವ ಮಾತ್ರ ಆ ಹನಿಗಾಗಿಯೇ
ಕಾತರಿಸಿದೆ
ಕಾಯುವೆ..
ಕಾಲಗರ್ಭ ಮುಗಿಲು ಸೇರುವವರೆಗೂ
ಆ ಹನಿಯು ಮತ್ತೆ ಕಾಲೂರಿ
ಜಡಜೀವತ್ವದ ಕಣ್ಣಂಚು ಬೆಳಗುವವರೆಗು.
********