ಕಾವ್ಯಯಾನ

ಗೆಳೆಯನೊಬ್ಬನ ಸ್ವಗತ

Chhattisgarh BJP MLAs oppose eggs on mid-day meal menu in govt ...

ನಟರಾಜು ಎಸ್. ಎಂ.

ಊರ ಮಾರಿ ಗುಡಿಯ ಮುಂದೆ
ಆಡುತ್ತಿದ್ದ ಗೆಳೆಯರ ಜೊತೆಗೂಡಿ
ಆಟದ ಮಧ್ಯೆ ಟೈಂ ಪಾಸ್ ಎಂದಾಗ
ಬಸವೇಶ್ವರ ಗುಡಿಯ ಜಗುಲಿಯ ಮೇಲೆ
ಗೆಳೆಯರ ಮಧ್ಯೆ ಕಾಲು ಇಳಿಬಿಟ್ಟು ಕುಳಿತ್ತಿದ್ದ

ತಮ್ಮ ಹುಡುಗರ ಜೊತೆ ಕುಳಿತ
ಆ ಹುಡುಗನ ನೋಡಿ
‘ಯಾರ್ ಮಗಾನ್ಲಾ ನೀನು
ನೋಡ್ದಾ ನಿನ್ ದೈರ್ಯಾನಾ?’
ಗದರಿದ್ದರು ಅವನ ಗೆಳೆಯನೊಬ್ಬನ ತಾಯಿ
ತನ್ನ ಗೆಳೆಯರ ಜೊತೆ ಆಟವಾಡೋದು ತಪ್ಪಾ?
ಅವರ ಪಕ್ಕ ಕುಳಿತುಕೊಳ್ಳೋದು ತಪ್ಪಾ?
ಎಂದೆಣಿಸುತಾ ಎದ್ದು ಮೌನವಾಗಿ
ಆ ಹುಡುಗ ಮನೆ ಕಡೆಗೆ ನಡೆದಿದ್ದ

ಸ್ಕೂಲಿನಲಿ ಮಧ್ಯಾಹ್ನದ ಬಿಸಿಯೂಟಕೆ
ಗೆಳೆಯರೊಡಗೂಡಿ ಮಿಲ್ಲಿನಲಿ
ಗೋಧಿ ನುಚ್ಚು ಮಾಡಿಸಿದ
ಗೋಧಿ ನುಚ್ಚಿನ ಮೂಟೆಯನ್ನೊತ್ತು
ಖುಷಿಯಾಗಿ ನುಚ್ಚು ಬೇಯಿಸುವ ಕೋಣೆಗೆ ನುಗ್ಗಿದ್ದ

‘ಲೋ ನೀವು ಅಡುಗೆ ಮನೆಗೆ ಬರಬಾರ್ದು ಕಣ್ಲಾ
ತಣಿಗೆ ತಪ್ಲೆ ಮುಟ್ ಬಾರ್ದು ಅಂದಿದ್ದರು ಅವನ ಮೇಷ್ಟ್ರು
ಯಾಕ್ ಸಾರ್ ಬರಬಾರ್ದು ಯಾಕ್ ಮುಟ್ ಬಾರ್ದು
ಎಂದು ತನ್ನ ಗುರುಗಳ ಕೇಳುವ ಮನಸಾದರೂ
ಯಾಕೋ ಮತ್ತೆ ಮೌನವಾಗಿ ತನ್ನ ಮನೆ ಕಡೆಗೆ ನಡೆದಿದ್ದ

ಮೌನವಾಗಿ ನಡೆದಿದ್ದವನ ಮನದಲಿ
ಅದೆಷ್ಟು ನೋವಿನ ಮಾತುಗಳಿದ್ದವೋ
ಆಡಲಾರದ ಮಾತಿಗೆ ಪದಗಳ ರೂಪ ನೀಡಿ
‘ಜಾತಿಯಲಿ ಹೊಲೆಯನಾದರೂ
ನಾನು ನಿಮ್ಮ ಗೆಳೆಯನಲ್ಲವೇ?’ ಎಂದು
ಸಾಲೊಂದನು ಬರೆದು ಮತ್ತೆ ಮೌನಿಯಾದ…
************

Leave a Reply

Back To Top