ಗಝಲ್
ಡಾ.ಗೋವಿಂದ ಹೆಗಡೆ
ಮಾಸಿಹೋದ ನಗುವಿಗೇಕೆ ಬಣ್ಣ ಮೆತ್ತುವೆ
ಕರಗಿಹೋದ ನಲಿವಿಗೇಕೆ ಬಣ್ಣ ಮೆತ್ತುವೆ
ದಾರಿ ನಡೆ ನಡೆಯುತ್ತ ಸರಿಯಿತು ಕಾಲ
ಕಂದಿಹೋದ ಕೆನ್ನೆಗೇಕೆ ಬಣ್ಣ ಮೆತ್ತುವೆ
ಏರುವ ಖುಷಿ ಮುಗಿದು ಇಳಿಜಾರು ಈಗ
ಕಾಂತಿ ಕಳೆದ ಕಣ್ಣಿಗೇಕೆ ಬಣ್ಣ ಮೆತ್ತುವೆ
ಯಾವಾಗ ಅದು ಎದೆಯಲ್ಲಿ ಬೆಳಕಾಡಿದ್ದು
ಅರ್ಥ ಕಳೆದ ಮಾತಿಗೇಕೆ ಬಣ್ಣ ಮೆತ್ತುವೆ
ಮಾತು ಮನಸು ಕೃತಿಗಳಲ್ಲಿ ಮೇಳವೆಲ್ಲಿದೆ
ಋಜುತೆ ಮರೆತ ನಡತೆಗೇಕೆ ಬಣ್ಣ ಮೆತ್ತುವೆ
ಹೆಳವ ಹೆಜ್ಜೆಗಳಲಿ ಈಗ ಸಾಗಿದೆ ಪಯಣ
ರೆಕ್ಕೆ ಸವೆದ ಹಕ್ಕಿಗೇಕೆ ಬಣ್ಣ ಮೆತ್ತುವೆ
ಯಾವ ರಂಗು ಬಳಿದರೇನು ‘ಜಂಗಮ’ನಿಗೆ
ಕನಸು ಹರಿದ ಬದುಕಿಗೇಕೆ ಬಣ್ಣ ಮೆತ್ತುವೆ
******
ಚಂದದ ಗಜಲ್
ವಿಷಾದದ ಛಾಯೆ ತುಳುಕಿಸುವ ಕವನ, ಮನ ತಟ್ಟುತ್ತದೆ.
“ಕನಸು ಹರಿದ ಬದುಕಿಗೇಕೆ ಬಣ್ಣಕಟ್ಟುವೆ”
ಅಭಿನಂದನೆಗಳು ಮಾಲತಿಶ್ರೀನಿವಾಸನ್
ಬಹಳ ಚೆಂದ