ಮಳೆ ಒಲವು
ವಸುಂಧರಾ ಕದಲೂರು
ಸಂಜೆ ಮಳೆ, ಹನಿಗಳ ಜೊತೆ
ನೆನಪುಗಳನು ಇಳಿಸಿತು
ತೋಯ್ದ ಮನದಲಿ ಬಚ್ಚಿಟ್ಟ
ನೆನಪುಗಳ ಮೊಗ್ಗು ಅಂತೆ
ಮಣ್ಣ ಘಮಲಿನಂತೆ ಹರಡಿತು
ಇರುಳ ರಾಗ ಕದಪ ಮೇಲೆ
ನವ ಯೌವನದ ಅಲೆಗಳಲಿ
ರಂಜಿಸಿತು ಮನವು ಮಧುರ
ರಾಗ ಗುನುಗುವಂತೆ ಅಂತೆ
ಹೊಸೆದು ಹೊಸತು ಹಾಡಿತು
ಮನವು ತೋಯ್ದ ಪರಿಗೆ
ತನುವು ತಾನು ನಡುಗಿತು
ಬಳ್ಳಿ ಚಿಗುರು ಮರವನಪ್ಪಿ
ಬೆಚ್ಚಗಾಗುವಂತೆ ಅಂತೆ
ನೆಚ್ಚು ಹೆಚ್ಚಿ ಬಲವಾಯಿತು
ಅಧರ ಬಿರಿದು ಮಧುರ
ನುಡಿದು ಪಿಸು ಮಾತಿನ
ಬಿಸಿ ಎದೆಗೆ ಇಳಿದಂತೆ
ಅಂತೆ ಒಲವು ಆವರಿಸಿತು
ಮಳೆಯೆಂದರೆ ಒಲವು
ಒಲವೆಂದರೆ ನೆನೆದ ನೆಲದ
ಒದ್ದೆಯಂತೆ ಅಂತೆ ಎಂದು
ಮತ್ತೆ ಸಾರಿತು ಮನವು
ಮಧುರವಾಗಿ ನಡುಗಿತು
********