ಕಾವ್ಯ ಸಂಗಾತಿ
ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು
ಪಿಂಡದ ಮಾತು..!

ಸೂತಕವೆದುರುಗೊಂಡ ಮನೆಯಂಗಳದಿ/
ಚಿತೆ ಏರಿದ ಆತ್ಮ ಮೌನವಾಗಿ//ಉಸಿರು ಚೆಲ್ಲಿದ ಪ್ರೀತಿಗೆ /
ಗೋಳಿಟ್ಟು ಕಣ್ಣಾಲಿಗಳು ಒಣಗಿ/ ಬತ್ತಿದೆದೆಯಲಿ ಉಮ್ಮಳಿಸಿದ ದುಮ್ಮಾನಕೆ //
ಬಿಕ್ಕಳಿಕೆ ಊರುಗೋಲು//
ಗಂಧ ತೈಲ ಸಿಂಗಾರಕಲ್ಲ/
ನಾರುವ ದೇಹವ ನಾರಿನಿಂದ ಪೋಣಿಸಿದ ಹೂಮಾಲೆ ಮರೆಮಾಚಿ// ಹೆಂಡತಿ ಮಕ್ಕಳು
ಸತ್ತವನ ವಾತ್ಸಲ್ಯವ ನೆನೆದು/
ಅಳುವ ಹೊತ್ತಿಗೆ ಸಿದಿಗೆ ಚತುರ್ಭುಜ ವೇರಿದಾಗ //
ಆಶರೀರ ವಾಣಿಯೊಂದು…………!
ಅಳುವಿರೇಕೆ ಬಂಧುಗಳೇ/ ಹೋಗುವೆ ನಾ ಎಲ್ಲಿ ಗೆ//
ನಿಯಮವದು ಕಾಲನ ಕೈಯಲ್ಲಿ/ ಆಗಲೇ ಹೋದರಲ್ಲ //
ಅಜ್ಜ.. ಅಪ್ಪ… ಅಮ್ಮ… ಅವರ ಜಾಗಕ್ಕೆ ನಾನು/
ನಾಳೆ ಮತ್ತೊಬ್ಬರು//
ನಡೆಯಲಿ ದೇಹದ ಮೆರವಣಿಗೆ /ನಾಲ್ವರ ಭುಜದ ಮೇಲೆ ಮಸಣದೆಡೆಗೆ//
ಸುಡಗಾಡು ಜನ ..ಅಲ್ಲು ಮತ್ತದೇ ವ್ಯಾಜ್ಯ//
ಆರು ಮೂರರ ಅಡಿ ಹಿಡಿದು /ಮನೆ ಮಾಡಿದವ ಬಾಬ್ತು ಕೇಳದಿರನು/
ಇಂದಿಗೆ ಅನ್ನದ ಋಣವು ತೀರಿತೆಂದು/ ಜಗಕ್ಕೆ ಸಾರಿ ಹೇಳಲು //ಹಿಂಡಿಕೂಳ ಕುಂಭ ಒಡೆದು
/ನೆರೆದ ಬಂಧುಗಳೆದುರು ಬೆತ್ತಲು ಗೊಳಿಸಿದ್ದು// ಕಟು ಸತ್ಯ.
ಮತ್ತೆ ನಿನ್ನ ಮುಕ್ತಿ ಹರಸಿ ಬಂದ ಬಂಧುಗಳು /ಮಸಣದತ್ತ ಕಾಗೆಯ ಕೂಗಿ ಕರೆದರು//
———————————————————————————————————
ಅಜ್ಜೇರಿ ತಿಪ್ಪೇಸ್ವಾಮಿ.ಮೊಳಕಾಲ್ಮೂರು.
