ಡಾ.ಸುಜಾತಾ ಸಿ ಅವರಿಂದ ಎಳ್ಳಮವಾಸ್ಯೆಗೆ ವಿಶೇಷ ಲೇಖನ “ಹುಲ್ಲಹುಲ್ಲಿಗೂ ಚೆಳ್ಳ ಚೆಳ್ಳಂಬರಿಗೂ ಚರಗ ಹಬ್ಬ”

ಉತ್ತರ ಕರ್ನಾಟಕದ .ಬಹಳ ದೊಡ್ಡ ಹಬ್ಬ ಎಳ್ಳಾಮಾಸ್ಯೆ ಹಬ್ಬ . ವಿಜಯಪೂರ, ಬಾಗಲಕೋಟ, ಗುಲಬರ್ಗಾ ಈ ಭಾಗದಲ್ಲಿ ಈ ಹಬ್ಬವನ್ನು ಆಚರಿಸದೇ ಇರುವ ಮನೆಗಳೇ ಇಲ್ಲವೆಂದರೂ ತಪ್ಪಾಗಲಾರದು. ಶ್ರೀಮಂತರಾಗಲಿ ಎಂತಹ ಬಡಕುಟುಂಬವೇ ಇರಲಿ ಭೂಮಿತಾಯಿಗೆ ಪೂಜಿಸುವುದು ಇಲ್ಲಿನ ಜನಪದರ ಸಂಪ್ರದಾಯವಾಗಿದೆ. ಎಲ್ಲ ಸಂಭಂಧಿಕರು,ಅಕ್ಕ ಪಕ್ಕದವರು ಹಾಗೇ ಗೊತ್ತಿಲ್ಲದವರು ಕೂಡಾ ಒಂದಾಗಿ  ನಕ್ಕು ನಲಿದು ಹಬ್ಬ ಆಚರಿಸೊ ಸಂಪ್ರದಾಯ ನಮ್ಮೇಲ್ಲರದ್ದೂ. ಎಳ್ಳಮಾಸ್ಯೆ ಎಂದರೆ ಸಂತಸ ಸಡಗರ. ಹಬ್ಬದ ಮುಂಚೆ ಎರಡ ಮೂರ ದಿನಗಳ ಹಿಂದೆ ಎಳ್ಳಹಚ್ಚಿದ ಸಜ್ಜಿ ರೊಟ್ಟಿ ಮಾಡೊದ ಒಂದ ಸಡಗರ ನೋಡ್ರಿ. ಎಲ್ಲ ಗೆಳತಿರು ಸೇರಿ ನಾ ಒಂದ ಸೇರ ನೀ ಒಂದ ಸೇರ ಅಂತಾ ಬಿಳಿಜ್ವಾಳದ ರೊಟ್ಟಿ, ಸಜ್ಜಿರೊಟ್ಟಿ ಮಾಡತಾರ. ಕಟ್ಟಿಗೆ ವಾಸನಿ ಅದರ ಜೊತೆ ಘಂ ಎನ್ನುವ ರೊಟ್ಟಿಯ ವಾಸನಿ ಅಂತೂ ಊರಿನ ಮನೆಗಳ ತುಂಬೆಲ್ಲಾ ಹರಡಿ ಊರಿನ ವಾತಾವರಣವನ್ನೇ ಬದಲಿಸಿ ಬಿಡತದ ನೊಡ್ರಿ.
ಅಷ್ಟರಲ್ಲಿ ಕೆಂಪಂಗ ಹುರಿದ ಸೇಂಗಾ ಕಾಳು ಅದರ ವಾಸನಿವೊಳಗ ಸೇರಿ ಇನ್ನಷ್ಟು ಮುದಕೊಡತದ. ಆ ಸೆಂಗಾ ತಿಕ್ಕಿ ಪುಡಿಮಾಡಿ ಬೆಲ್ಲ ಹಾಕಿ ಸೇಂಗಾ ಹೊಳಿಗೆನು ತಯಾರ ಮಾಡತಾರ. ಇಷ್ಟ ಇಷ್ಟ ಅಂತ ಇಲ್ಲ ಇದಕ್ಕೆಲ್ಲ ಲೆಕ್ಕ ಇರಾಂಗಿಲ್ಲ ಯಾಕ ಅಂದ್ರ ಲೆಕ್ಕ ಇರಲಾದಷ್ಟು ಮಂದಿ ಈ ಹಬ್ಬದಾಗ ಇರತಾರ ನೋಡ್ರಿ. ನಸಿಕೀಲೇ ಎದ್ದು ಕಡಲಿಬೇಳೆ ಒಲಿಮ್ಯಾಲ ಹಾಕಿ ಹೂರಣದ ಹೊಳಿಗೆ,ಹಂಗ ಕಡಬು ಮಾಡಿ ಉಳಿದ ಕಟ್ಟಿನ್ಯಾಗ ಎಲ್ಲಾ ಮಸಾಲಿಹಾಕಿ ಕಟ್ಟಿನಸಾರ ಮಾಡಿರತಾರ. ಹೊಳಿಗೆ ಜೊತೆಗೆ ಅಂತಾ ತರಾವರಿಯ ಹಪ್ಪಳ ಶಂಡಗಿ ಪುಟ್ಟಿ ಗಟ್ಟಲೇ ಹುರುದ ಇಡತಾರ ಹಾಂ ಹಂಗ ಮಸರಗಾಯಿ ಮೆಣಸಿನ ಕಾಯಿನೂ ಹುರಿತಾರ ಹೊಳಿಗಿಗೆ ಇದು ಬಹಳ ಚಲೊ ಅನಸ್ತದ ಅದಕ್ಕ ಇದನ್ನ ಮರ್ಯಾಂಗಿಲ್ಲ. ಎಲ್ಲ ಹಸರ ತೊಪ್ಪಲ ಪಲ್ಯೆಗಳನ್ನ  ಅಂದರ ಮೆಂತ್ಯೆ ಪಲ್ಯ, ಕಿರಸಾಲಿ ಪಲ್ಯ, ಸಬ್ಬಸಗಿ ಪಲ್ಯ, ಪುಂಡಿಪಲ್ಯ, ಕುಸಬಿಪಲ್ಯ,ಕಡಲಿಪಲ್ಯ,ರಾಜಗೀರಿ ಪಲ್ಯ ಎಲ್ಲ ಸೇರಿಸಿ ಹಸಿಮೆಣಸಿನಕಾಯಿ ಹಂಗ ಹೆಸರಕಾಳ ಕುದಿಸಿ ಹಾಕಿ  ಗರಗಟ್ಟಾ ಮಾಡತಾರ.  ನಂತರ ಎಣ್ಣಿಗಾಯಿ ಬದನಿಕಾಯಿ ಪಲ್ಯ ಮ್ಯಾಲ ಬಟ್ಟಗಟ್ಟಲೇ ಎಣ್ಣಿ ತೇಲುವಂಗ ಮಾಡಿ ಇಡತಾರ. ಈ ಎಣ್ಣಿಗಾಯಿ ಅಂತೂ  ” ನಾ ಇಲ್ದ ಎಳ್ಳಮಾಸೆನ ನಡಿಯಾಂಗಿಲ್ಲ ಅಂತ ತನ್ನ ಜಂಬ ತೊರಸ್ತಿರತೈತ್ತಿ ನೋಡ್ರೀ. ನಾ  ಏನ ಕಡಿಮೆ ಅಂತಾ ಕಡಲಿಹಿಟ್ಟಿನ ಜೂನಕದ ವಡಿ ಮದುಮಗಳಂಗ ಹಳದಿ ಸೀರಿ ಉಟ್ಟ ಮ್ಯಾಲ ಒಂದಿಷ್ಟು ದೃಷ್ಟಿ ಆಗಬಾರದ ಅಂತಾ ಕರಿಎಳ್ಳ ಮೈತುಂಬ ಸವರಕೊಂಡು ಪರಾತದಾಗ ಅಂಗಾತ ಮಕ್ಕೊಂದ ಬಿಟ್ಟರತೈತಿ ನೊಡ್ರಿ.ಹಂಗ ಹೆಸರ ಕಾಳಿನ ಉದರ ಬ್ಯಾಳಿ, ತೊಗರಿಬ್ಯಾಳಿ, ಮುಕಣಿಕಾಳಿನ ಪಲ್ಯ ಎಲ್ಲ ಮಾಡಿರತಾರ.  ರೊಟ್ಟಿಗೆ ಚಟ್ನಿ ಪುಡಿಗೊಳು ಬೇಕ ಬೇಕು ರೊಟ್ಟಿಗೆ ಶೆಂಗಾಚಟ್ನಿ.ಇಲ್ಲ ಗುರೆಳ್ಳು, ಅಗಸಿಹಿಂಡಿ, ಪುಟಾಣಿ ಹಿಂಡಿ ಅದರ ಜೊತೆ ಗಟ್ಟೇನ ಮೊಸರು  ಇಷ್ಟ ಉಂಡರ ಪರಮಾನಂದ ನೊಡ್ರಿ. ಇಡೀ ರಾತ್ರಿ  ಅಕ್ಕಿಯನ್ನು ಮಜ್ಜಿಗ್ಯಾಗ ನೆನಸಿಟ್ಟು ಹುಳಿಬಾನಾ ಮಾಡತಾರ ಅದು ನೈವೇದ್ಯಕ್ಕ ಬೇಕ ಬೇಕು.‌ ಹಂಗ ಮಿರ್ಚಿಭಜಿ.ಗುಂಡ ಉಳ್ಳಾಗಡ್ಡಿ ಭಜಿ ಪುಟ್ಟಿಗಟ್ಟಲೇ ಮಾಡೊದ ಮಾಡೊದು ಈ ಕಡೆ ಸಣ್ಣ ಹುಡುಗರು ಕೈಯ್ಯಾಗ ಹಿಡಕೊಂಡು ಹೊರಗ ಹೊಗಿ ತಿನ್ನೊದು. ಅದು ನೊಡೊಕೆ ಬಲು ಸುಂದರ ನೊಟ.


          ಅಕ್ಕ ಪಕ್ಕದವರನ್ನೆಲ್ಲ ಕರೆದುಕೊಂಡು ಎತ್ತಿನ ಬಂಡಿ ಕಟ್ಟಿ  ನಿಂತರ ನೊಡ್ರಿ ನಮ್ಮ ಹೆಣ್ಣಮಕ್ಕಳು ತಮ್ಮ ತಮ್ಮ ಮಕ್ಕಳೊಂದಿಗೆ ಬರೊದು ನೊಡಾಕ ಆ ಸಡಗರ ಬಲು ಚೆಂದ ನೋಡ್ರಿ. ಇಲಕಲ್ಲ ಸೀರಿ, ಹಸಿರ ಗುಳೆದಗುಡ್ಡದ ಕುಪ್ಪಸ, ಕೈಯ್ಯಾಗ ಹಸರ ಕೆಂಪ ಚಿಕ್ಕಿ ಬಳಿ ಮೂಗಿಗೆ ಮೂತ್ತಿನ ನತ್ತು ಹಾಕಿಕೊಂಡು ಬಂದ್ರ ಎಲ್ಲರ ಕಣ್ಣೊಟವನ್ನು ಸೆಳೆಯುವ ಮಾಂತ್ರಿಕಶಕ್ತಿ ಅವರಲ್ಲಿ ಇರದೇ ಇರೊಕೆ ಸಾಧ್ಯನೆ ಇಲ್ಲವೆಂಬಂತೆ ಭಾಸವಾಗುತ್ತದೆ.ಚಿಕ್ಕ ಮಕ್ಕಳು ಲಂಗಾದಾವಣಿ ಹಾಕಿಕೊಂಡು ಸೋದರ ಮಾವರ ನೆಕಲಿ ಮಾತುಗಳಿಗೆ ವೈಯ್ಯಾರ ಮಾಡುತ್ತ ಕಿಲಕಿಲ ನಗುತ್ತ ಖುಷಿಯಾಗಿರುತ್ತಾರೆ. ಎತ್ತಿನ ಬಂಡಿ ಹಿಂದೆ ಮನೆಯ ಯಜಮಾನ ಬೆಳ್ಳನ ದೊತರ ಬಿಳಿ ನೆಹರು ಅಂಗಿ ಹಾಕಿಕೊಂಡು ಎತ್ತಿನ ಕೊರಳಿಗೆ ಹಾಕಿದ ಹಗ್ಗವನ್ನು ಜಗ್ಗುತ್ತ ಅವುಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಹೆಗಲಿಗೆ ಬಾರಕೋಲ ಹಾಕಿಕೊಂಡು ರಾಜ ಠೀವಿಯಿಂದ ಮಗ್ಗುಲಲ್ಲಿ ನಡೆದುಕೊಂಡು‌ ಬರುತ್ತಾನೆ. ಹಾಗೇ ಹರೆಯದ ಹುಡುಗರು ಬಂಡಿ ಹಿಂದೆ ನಿಂತುಕೊಳ್ಳುವವರು ಒಂದಿಷ್ಟು ಜನ. ಹಾಗೆ ಹಿಂದೆ ಕಾಲನಡಿಗೆಯಲ್ಲಿ ಬರುವವರು ಒಂದಿಷ್ಟು ಜನ ಇರುತ್ತಾರೆ. ಹೊಲಕ್ಕೆ ಹೊಗಿ ಎತ್ತಿನ ಕೊಳ್ಳ ಹರಿದು ತಂದಿದ್ದ ಎಲ್ಲ ಪದಾರ್ಥಗಳನ್ನು ಒಂದು ದೊಡ್ಡ ತಾಡಪತ್ರಿಯಲ್ಲಿ ಇರಿಸಿ, ತಂದ ಅಡುಗೆಯನ್ನು ಒಂದು ತಾಟಿನಲ್ಲಿ ಹೊಳಿಗೆ, ರೊಟ್ಟಿ, ಕಡಬು ಮೊಸರಿನ ಬಾನಾ, ಹಾಗೂ ಕಾಯಿಪಲ್ಯ ಹಾಕಿ ಇಡುತ್ತಾರೆ. ಹಾಗೇ ಒಂದು ಚರಗಿ ನೀರು ,ಒಂದು ತೆಂಗಿನ ಕಾಯಿ ಕುಂಕುಮ ಅರಿಶಿಣ ತಗೆದುಕೊಂಡು ಜಾಲಿ ಮರಕ್ಕೆ ಇಟ್ಟ ಸಣ್ಣ ಸಣ್ಣ ಕಲ್ಲಿನ ದೇವರುಗಳಿಗೆ ಹಸಿರು ಕುಪ್ಪಸ ಹಸಿರು ಬಳೆಗಳನ್ನು ತೊಡಿಸಿ  ನೀರು ಹಾಕಿ ಪೂಜಿಸಿ ಮುಂದೆ ಬೆಳೆಗಳ ಕಡೆಗೆ ಹೊರಡುತ್ತಾ ,” ಹುಲ್ಲ ಹುಲ್ಲಿಗೂ ಚೆಳ್ಳಂಬರಿಗೂ ” ಎಂದು ಕೂಗೂತ್ತಾ ಕೈಯಲ್ಲಿನ ನೀರನ್ನು ಚುಮುಕಿಸುತ್ತಾ ಹೊಗುತ್ತಾರೆ. ಹೀಗೆ ಹುಲ್ಲು ಹುಲ್ಲಿಗೂ ಚಲ್ಲ ಚಲ್ಲವಾಗಿ ಅಂದರೆ ಸಂಮೃದ್ದವಾಗಿ ಬೆಳೆ ಬರಲಿ ಎಂದು ಭೂಮಿತಾಯಿಯನ್ನು ಬೇಡಿಕೊಳ್ಳುತ್ತಾರೆ.

ಇಂತಹ ಖುಷಿಯನ್ನು ಜನಪದರು ವ್ಯಕ್ತಪಡಿಸುತ್ತಾರೆ. ಇಂತಹ ಹಬ್ಬಗಳು ವೈಜ್ಞಾನಿಕ ಹಬ್ಬ ಕೂಡಾ ಹೌದು. ಯಾಕೆಂದರೆ ಮಳೆಗಾಲದಿಂದ ಚಳಿಗಾಲಕ್ಕೆ ಕಾಲಿಡುವ ಈ ಸಂಧರ್ಭದಲ್ಲಿ ಎಲ್ಲರಿಗೂ ಅವರ ದೇಹಕ್ಕೆ ಬೇಕಾದ ಪಡಿಪದಾರ್ಥಗಳ ಸೇವನೆಯನ್ನು ಹೇಳುವ ಉದ್ದೇಶ ,ವಿಶೇಷವೂ  ಕೂಡಾ ಹೌದು.  ಎಲ್ಲ ಪೂಜೆ ಮುಗಿದ ನಂತರ ಹಾಸಿದ ತಾಡಪತ್ರಿಯಲ್ಲಿ ಎಲ್ಲರೂ ಕುಳಿತುಕೊಂಡು ತಂದ ಮೃಷ್ಟಾನ್ನವನ್ನು ಒಂದೊಂದಾಗಿ ಸವಿಯುತ್ತ ಅಡುಗೆ ಮಾಡಿದವರನ್ನ ಹೊಗಳುತ್ತಾ ಎಲ್ಲರೂ ಸೇರಿ ಊಟ ಮಾಡುತ್ತಾರೆ.  ಜನಪದರ ಆಟಗಳಾದ ಕಣ್ಣುಮಚ್ಚಾಲೆ, ಕುಂಟೆಬಿಲ್ಲೆ, ಆಲೆಕಲ್ಲು, ಚಕ್ಕಾ, ಒಡಪುಹಾಕಿ ಗಂಡನ ಹೆಸರು ಹೇಳುವ ಆಟಕ್ಕೆ ಎಲ್ಲರೂ ಅಣಿಯಾಗಿ ಖುಷಿಯಿಂದ ನಕ್ಕು ನಲಿಯುತ್ತಾರೆ. ಹೊತ್ತು ಸರಿದಂತೆ ಹಾಲಿನಿಂದ ತುಂಬಿದ ಎಳೆಯ ಹಾಲ್ದೆನೆಯ ಬೆಳಸಿ ಹಾಗೂ ಕಡಲೆಕಾಯಿಯ ಸುಲಗಾಯಿ ಅಲ್ಲೆ ಹೊಲದಲ್ಲಿ ಸುಟ್ಟುತಿನ್ನೊದೊಂದು ಸಡಗರದ ಸಂಭ್ರಮವೇ ಸರಿ.ಹಾಗೇ ಬಸಿರಿನಿಂದ ಕಂಗೊಳಿಸುವ ಭೂಮಿತಾಯಿಯ ಬಸಿರಿನ ಬಯಕೆಯನ್ಙು ತೀರಿಸುವ ಹಬ್ಬವೂ ಹೌದು ‌. ಆ ಕಾರಣಕ್ಕೆ ಇದೊಂದು ಹೆಣ್ಣಿಗೆ ಕೊಡುವ ಗೌರದದ ಹಬ್ಬವೂ ಎಂತಲೂ ಕರೆಯಬಹುದು. ಹುಲ್ಲು ಹುಲ್ಲಿಗೂ ಚಳ್ಳಚಳ್ಳಂಬ್ರಿಗೂ ಎನ್ನುವ ಈ ಮಾತು ಒಂದು ಚಿಗುರಿನ ಕುಡಿಯಿಂದ ಇನ್ನೊಂದು ಪ್ರೀತಿಯ ಚಿಗುರಿನ ಕುಡಿಯಾಗಲಿ ಎನ್ನುವ ಚರಗ ಹಬ್ಬವಾಗಿ ಮೂಡಿಬಂದಿದೆ. . ಸ್ನೇಹ.ಪ್ರೀತಿಯಿಂದ ಇದ್ದರೆ ಜಗತ್ತೇಲ್ಲಾ ಸುಖಮಯ.ಹೀಗೆ  ಒಟ್ಟಾಗಿ ಭೋಜನ ಮಾಡುವದರಿಂದ “ಮೈತ್ರಿಭಾವ” ಹೆಚ್ಚು ಹೆಚ್ಚು ಬೆಳೆಯುವಂತಾಗಲಿ ಎನ್ನುವ ಭಾವವೂ ಕೂಡಾ ಇದಾಗಿದೆ.


Leave a Reply

Back To Top