ವಿಶೇಷ ಸಂಗಾತಿ
ʼಎಳ್ಳ ಅಮವಾಸ್ಯೆಯೂ…ಬಾಂಧವ್ಯವೂ..ʼ ವಿಶೇಷ ಲೇಖನ
ಗಂಗಾ ಚಕ್ರಸಾಲಿ ಅವರಿಂದ
ಎಳ್ಳ ಅಮವಾಸ್ಯೆಯೂ…ಬಾಂಧವ್ಯವೂ..
ಎಳ್ಳ ಅಮವಾಸ್ಯೆ ಎಂದರೆ ಅದೊಂದು ಬಾಂಧವ್ಯಗಳ ಸಂಕೇತವಾಗಿದೆ.ಭೂಮಿ ಪ್ರಕೃತಿಯೊಂದಿಗಿನ ಮನುಜನ ಬಾಂಧವ್ಯ ಮಾತ್ರವಲ್ಲದೇ ಮನುಜ ಸಂಬಂಧಗಳ ನಡುವಿನ ಪ್ರೀತಿ,ಸ್ನೇಹಗಳ ಪ್ರತೀಕವೂ ಆಗಿದೆ.ಮೊದಲಿದ್ದಂತ ಸಂಭ್ರಮ ಈಗ ಕೊಂಚ ಕಡಿಮೆಯಾಗಿದ್ದರೂ ಗ್ರಾಮೀಣ ಭಾಗಗಳಲ್ಲಿ ಆ ಸೊಗಸು ಈಗಲೂ ಇದ್ದೇ ಇದೆ.ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಆಚರಿಸಲ್ಪಡುವ ಈ ಹಬ್ಬವು ಮನಸ್ಸಿಗೂ,ದೇಹಕ್ಕೂ ಚೈತನ್ಯ ತುಂಬುವಂತಹದ್ದಾಗಿದೆ.
ಸಂಕ್ರಮಣಕ್ಕಿಂತ ಮೊದಲು ಬರುವ ಈ ಹಬ್ಬವನ್ನು ಭೂ ತಾಯಿ ಪೂಜೆಗೆ ಅರ್ಪಿಸಲಾಗಿದೆ.ಈ ಸಮಯದಲ್ಲಿ ಉತ್ತರ ಕರ್ನಾಟಕದ ಹೊಲಗಳಲ್ಲಿ ಜೋಳ,ಕಡಲೆ,ಕುಸುಬೆ ಇತ್ಯಾದಿ ಹಿಂಗಾರಿ ಬೆಳೆಗಳನ್ನು ಹಾಕಲಾಗಿರುತ್ತದೆ.ಭೂಮಿಯೆಲ್ಲ ಹಸಿರಿನಿಂದ ನಳನಳಿಸುತ್ತಿರುತ್ತದೆ.ಈ ಹಬ್ಬದ ನಾಲ್ಕೈದು ದಿನ ಮೊದಲೇ ಹಬ್ಬದ ತಯಾರಿ ಮನೆಯಲ್ಲಿ ನಡೆದಿರುತ್ತದೆ.ಎಳ್ಳು ಹಚ್ಚಿದ ಸಜ್ಜೆ ಮತ್ತು ಬಿಳಿಜೋಳದ ರೊಟ್ಟಿ,.ಶೇಂಗಾ ಹೋಳಿಗೆ,ಎಳ್ಳಿನ ಹೋಳಿಗೆ,ಕಾರೆಳ್ಳು,ಅಗಸಿ,ಶೇಂಗಾ ಚಟ್ನಿ ಇವೆಲ್ಲವನ್ನೂ ಮೊದಲೇ ಮಾಡಿ ಇಟ್ಟಿರುತ್ತಾರೆ.ಅಮವಾಸ್ಯೆಯ ದಿನ ಹೂರಣದ ಕಡಬು,ಮೊಸರನ್ನ,ಒಗ್ಗರಣೆ ಅನ್ನ,ಮೊಳಕೆಕಾಳು ಮತ್ತು ಬದನೆಕಾಯಿ ಪಲ್ಯ,ಮೊಸರು ಇತ್ಯಾದಿಗಳನ್ನು ಬಿದಿರಿನ ಬುಟ್ಟಿಯೊಳಗೆ ಇಟ್ಟುಕೊಂಡು,ತಲೆಯ ಮೇಲೆ ಹೊತ್ತುಕೊಂಡು ಮನೆಯ ಒಡತಿ ಮುಂದೆ ನಡೆಯುತ್ತಿದ್ದರೆ ಮಕ್ಕಳೆಲ್ಲಾ ತಮ್ಮ ವಯಸ್ಸಿಗೆ ತಕ್ಕಂತ ಭಾರವನ್ನು ಹೊತ್ತು ಹಿಂದೆ ಹಿಂದೆ ನಡೆಯುತ್ತಾರೆ.ಸಾಮಾನ್ಯವಾಗಿ ಎಲ್ಲರ ಹೊಲಗಳಲ್ಲಿಯೂ ಈ ದಿನ ಭೂ ತಾಯಿಗೆ ಪೂಜೆ ಮಾಡಿ ಚೆರಗ ಚಲ್ಲುತ್ತಾರೆ.ಆದರೆ ಆತ್ಮೀಯರ ಹೊಲಗಳಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುತ್ತಾರೆ.ಇದರಲ್ಲಿ ಅಕ್ಕಪಕ್ಕದ ನಾಲ್ಕೈದು ಹೊಲದ ಮಂದಿಯೂ ಸೇರಿಕೊಳ್ಳುತ್ತಾರೆ.ಪೂಜೆ ಎಲ್ಲರ ಹೊಲಗಳಲ್ಲಿ ಸಂದರೂ ,ಒಂದು ಹೊಲದಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುತ್ತಾರೆ.ಅದಲ್ಲದೇ ಹೊಲಗಳಿಲ್ಲದವರನ್ನು ವಿಶೇಷವಾಗಿ ಆಹ್ವಾನ ಮಾಡಿರುತ್ತಾರೆ.ಅವರು ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.ಅದರಲ್ಲೂ ಪಟ್ಟಣಗಳಲ್ಲಿ ಕಲಿಯುವ ಹುಡುಗರು ತಮ್ಮ ಪಟ್ಟಣದ ಸ್ನೇಹಿತರನ್ನು ಆ ದಿನ ತಮ್ಮ ಹಳ್ಳಿಗಳಿಗೆ ಕರೆತಂದು ಉಪಚರಿಸುತ್ತಾರೆ.ಈ ಹಬ್ಬದ ಹಿನ್ನೆಲೆ ಹಲವು ರೀತಿಯೊಳಗಿದ್ದರೂ ಕೂಡಾ ಇದು ಮನುಷ್ಯನ ಸಂಬಂಧಗಳನ್ನು ಗಟ್ಟಿಮಾಡುವ ಹಬ್ಬವಾಗಿದೆ.
ಭೂ ತಾಯಿಯ ಸೀಮಂತವೆಂದೇ ಹೇಳಲಾಗುವ ಈ ಹಬ್ಬವೂ ಪ್ರಕೃತಿಯೊಂದಿಗಿನ ಬಾಂಧವ್ಯವನ್ನು ಬೆಸೆಯುವ ಹಬ್ಬವಾಗಿದೆ.ಹೊಲದಲ್ಲಿ ಬನ್ನಿ ಗಿಡದ ಕೆಳಗೆ ,ಆ ಗಿಡ ಇಲ್ಲದಿದ್ದರೆ ಬೆಳೆಯಿರುವ ಕಡೆ ಐದು ಕಲ್ಲುಗಳನ್ನು ಇಡುತ್ತಾರೆ.ಪಾಂಡವರ ಸ್ವರೂಪವೆಂದು ಕೆಲವರು ಹೇಳಿದರೆ,ಲಕ್ಷ್ಮೀ,ಭೂತಾಯಿ,ಸರಸ್ವತಿ,ಪಾರ್ವತಿ,ಭವಾನಿ ಸಂಕೇತವೆಂದು ಕೆಲವರು ಹೇಳುತ್ತಾರೆ.ಮನೆಯಿಂದ ತಂದ ಅಡುಗೆಯನ್ನು ನೈವೇದ್ಯಮಾಡಿ ಕಡುಬು,ಅನ್ನ ಇನ್ನಿತರೆ ಪದಾರ್ಥಗಳನ್ನು ಹೊಲದ ತುಂಬೆಲ್ಲಾ ಅಡ್ಡಾಡಿ ಚೆಲ್ಲುತ್ತಾರೆ.ಈ ಸಮಯದಲ್ಲಿ,”ಓಲಗ್ಯಾ..ಓಲಗ್ಯಾ..ಚಲ್ಲಂ ಪೋಲಗ್ಯಾ”ಕೆಲವೆಡೆ “ಹುಲಿಗೋ..ಹುಲಿಗೋ..ಚಳ್ಲಂಬರಿಗೋ”ಅಂತ ಹೇಳಿ ಹೇಳಿ ತುಣುಕುಗಳನ್ನು ಎಸೆಯುತ್ತಾರೆ.ಬೆಳೆದಿರುವ ಕಡಲೆಗೆ ಕಾಯಿಕೊರಕ ಸಮಸ್ಯೆ ಇರುವದರಿಂದ ಹಕ್ಕಿಗಳು ಇವರು ಎಸದ ಆಹಾರ ತಿನ್ನಲು ಬಂದು ಆ ಹುಳುಗಳನ್ನು ತಿನ್ನುತ್ತವೆ ಎಂಬ ವೈಜ್ಞಾನಿಕ ಅಂಶವೂ ಈ ಚರಗ ಚೆಲ್ಲುವುದರೆ ಹಿಂದೆ ಇದೆ.ಅನಂತರ ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡಿ ಖುಷಿಯ ಮಾತುಗಳಲ್ಲಿ ಮುಳುಗೇಳುತ್ತಾರೆ.ವಯಸ್ಸಾದವರು ಬೇವಿನ ಮರದ ಕೆಳಗೆ ಒಂದು ಜೋರಾದ ನಿದ್ದೆ ತೆಗೆದರೆ ಮಕ್ಕಳಾದವರು ಹೊಲದ ಸುತ್ತಮುತ್ತಲಿರುವ ಬಾರಿ ಹಣ್ಣಿನ ಗಿಡಗಳನ್ನು ಹುಡುಕುತ್ತಾರೆ.ಕೆಲವರು ಮರಕ್ಕೆ ಹಗ್ಗ ಕಟ್ಟಿ ಜೋಕಾಲಿ ಜೀಕಿದರೆ ಮತ್ತೆ ಕೆಲವರು ಗಾಳಿ ಪಟ ಹಾರಿಸುತ್ತಾರೆ.ಹೆಣ್ಮಕ್ಕಳು ತಮ್ಮ ಕಷ್ಟಸುಖಗಳನ್ನು ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾರೆ.ಹೀಗೆ ಎಳ್ಳ ಅಮವಾಸ್ಯೆ ಮನೆ ಮಂದಿಗೆಲ್ಲಾ ಒಂದು ದಿನದ ಪಿಕ್ನಿಕ್ ಎಂದೇ ಹೇಳಬಹುದು.ನಾಲಿಗೆ ರುಚಿಯನ್ನು ತಣಿಸುವದರೊಂದಿಗೆ ಬಾಂದವ್ಯಗಳನ್ನು ಬೆಳೆಸುವ ಹಬ್ಬವೇ
ಗಂಗಾ ಚಕ್ರಸಾಲಿ