ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಕನ್ನಡ ನೆಲ ಒಂದು ಅಸ್ಮಿತೆಯ ನೋಟ
[“ಕನ್ನಡ ಎಂದರೆ ನಮ್ಮ ಹೃದಯ ಭಾಷೆ. ತಾಯಿ ಭಾಷೆ. ಕನ್ನಡವಿಲ್ಲದೆ ಅನ್ಯಭಾಷೆಗೆ ಜಾಗವಿಲ್ಲ. ಕನ್ನಡವೇ ಪ್ರಧಾನ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಮಾತೃಭಾಷೆ. ನಮ್ಮ ಅನ್ನದ ಭಾಷೆ….”
ಹೀಗೆ ಪುಂಕಾನುಪುಂಕವಾಗಿ ನವೆಂಬರ್ ಬಂದಿದೆ ಎಂದರೆ ಕನ್ನಡವನ್ನು ಕುರಿತು, ಕರ್ನಾಟಕದ ನೆಲವನ್ನು ಕುರಿತು, ರಾಜಾರೋಷವಾಗಿ ಮಾತನಾಡುವ ನಾವು ಕನ್ನಡದ ಅಸ್ಮಿತೆ ಮತ್ತು ಕರ್ನಾಟಕ ನೆಲದ ವಿಷಯ ಬಂದಾಗ ಕೆಲವು ಸಲ ಜಾಣ ಕಿವುಡರಾಗುತ್ತೇವೆ.
ಹೌದು ಅದು ನಿಜ..!
ಕರ್ನಾಟಕಕ್ಕೆ ತನ್ನದೇ ಆದ ಒಂದು ಇತಿಹಾಸವಿದೆ. ಅದು ನಮ್ಮ ಜನ ಭಾಷೆಯೂ ಹೌದು. ಜನಸಂಕುಲದ ಜನಪದದ ಆಡು ಭಾಷೆಯಾಗಿದೆ. ಕನ್ನಡದ ಹಿರಿಮೆಯನ್ನು ಕನ್ನಡ ನೆಲದಲ್ಲಿ ಹುಡುಕುವ ಅನೇಕ ಅಸ್ಮಿತೆಗಳು ನಮಗೆ ಕಾಣುತ್ತವೆ. ಆದರೆ ಅವುಗಳನ್ನು ಪ್ರೋತ್ಸಾಹಿಸುವ ಮನಸ್ಸುಗಳು ಕಡಿಮೆಯಾಗಿವೆ ಎನ್ನಬಹುದು.
ಕರ್ನಾಟಕ ಪ್ರಾದೇಶಿಕ ಭೌಗೋಳಿಕ ದೃಷ್ಟಿಯಿಂದ ಕಪ್ಪು ನೆಲವು ಹೆಚ್ಚಿರುವುದರಿಂದಲೋ, ಈ ನಾಡನ್ನು ಕಮ್ಮಿತ್ತನಾಡು, ಕರ್ಣಾಟ ಮುಂದೆ ಇದೇ ಕರ್ನಾಟಕ ಎಂಬ ಹೆಸರಿನಿಂದ ನಾಮಕರಣ ಮಾಡಲಾಯಿತು. ಈ ಮೊದಲು ಈ ರಾಜ್ಯವನ್ನು ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ಮಾಡಿದ ಬಳಿಕ ‘ಮೈಸೂರು ರಾಜ್ಯ’ ಎಂದು ಕರೆದರೂ, 1973 ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ್ ಅರಸು ಅವರು ‘ಕರ್ನಾಟಕ’ ಎಂಬ ನಾಮಕರಣದೊಂದಿಗೆ ಹೊಸ ಇತಿಹಾಸಕ್ಕೆ ಸಾಕ್ಷಿಯಾದರು. ಇಂತಹ ಬೆಳವಲನಾಡು ‘ಸುವರ್ಣ ಕರ್ನಾಟಕ’ ಎಂಬ ನಾಮಕರಣದಿಂದ ಪ್ರಜ್ವಲಗೊಳ್ಳುತ್ತಿದೆ. ಇಂತಹ ಅಮೂಲ್ಯವಾದ ನಾಡಿನಲ್ಲಿ ಅನೇಕ ಅಸ್ಮಿತೆಗಳು ನಮ್ಮ ಕಣ್ಣೆದುರು ಕಾಣುತ್ತವೆ.
ಜೈ ಭಾರತ ಜನನಿಯ ತನುಜಾತೆ ಜಯಯೇ ಕರ್ನಾಟಕ ಮಾತೇ…
ಕುವೆಂಪು ಅವರ ನಾಡಗೀತೆಯ ಉಸಿರಿನೊಂದಿಗೆ, ನಮ್ಮ ರಾಜ್ಯವು, ಕರ್ನಾಟಕದಲ್ಲಿ ‘ಕನ್ನಡ’ ಎನ್ನುವ ಜನ ಭಾಷೆಯ ಸಮೂಹದ ಚಹರೆಯ ಅನೇಕ ಸ್ಥಳಗಳನ್ನು, ಅಕರಗಳನ್ನು, ಘಟನೆಗಳನ್ನು, ಸಿದ್ಧಾಂತಗಳನ್ನು ಹುಡುಕಿ, ಗುರುತಿಸಿ, ಅವುಗಳನ್ನು ಒಗ್ಗೂಡಿಸಿ ಭಾಷಾವಾರು ಪ್ರಾಂತ್ಯ ನಿರ್ಮಾಣವಾಗಲು ಅನೇಕ ಮಹನೀಯರ ಕೊಡುಗೆಯೂ ಕಾರಣವಾಗಿದೆ. ಕನ್ನಡ ಭಾಷೆಯನ್ನು ಮಾತನಾಡುವ ಕನ್ನಡಿಗರ ಸಂಸ್ಕಾರ, ಭಾಷೆ, ಸಂಪ್ರದಾಯ, ಬದುಕಿನ ರೀತಿ ನೀತಿಗಳು ಮತ್ತು ಕನ್ನಡ ನೆಲಮೂಲದ ಅನೇಕ ಸಂಗತಿಗಳನ್ನು ಪರಿಗಣಿಸಿ, “ಇದು ಕನ್ನಡ ನೆಲವೆಂದು” ಗುರುತಿಸಲು ಅನೇಕ ವರ್ಷಗಳೇ ಹಿಡಿಯಿತು.
ಆದರೂ..ಅದು ಪರಿಪೂರ್ಣವಾದ ಕನ್ನಡದ ನೆಲಗಳು ಇನ್ನೂ ಕರ್ನಾಟಕಕ್ಕೆ ದಕ್ಕದಿರುವುದು ವಿಷಾದದ ಸಂಗತಿ. ಮಹಾರಾಷ್ಟ್ರದ ಗಡಿಭಾಗದಲ್ಲಿ ಬೆಳಗಾವಿಯ ಬಳಿಯಿರುವ ತೆಕ್ಕಲಕೋಟೆ, ಅಕ್ಕಲಕೋಟೆ… ಮುಂತಾದವುಗಳು ಇನ್ನು ಅಲ್ಲಿಯೇ ಉಳಿದಿವೆ. ಕನ್ನಡ ಭಾಷೆಯ ಪರಂಪರೆಗೆ ಆಗಾಗ ಸಹೋದರ ಭಾಷೆಯ ಮರಾಠಿಗರು ನಮ್ಮೊಡನೆ ತಕರಾರು ತೆಗೆಯುತ್ತಲೇ ಇದ್ದಾರೆ. ದಕ್ಷಿಣ ಕರ್ನಾಟಕದಾಚೆಗೆ ಹೋದರೆ ಕಾಸರಗೋಡು ಕೂಡ ಕನ್ನಡದ ನೆಲ. ಅದು ಕೇರಳಕ್ಕೆ ಸೇರಿ ಅನೇಕ ವರ್ಷಗಳೇ ಗತಿಸಿದವು. ಹಾಗೆ ಇನ್ನಿತರ ಅನೇಕ ಕನ್ನಡ ಮಾತನಾಡುವ ಊರುಗಳು ನಮ್ಮಿಂದ ಕೈಬಿಟ್ಟು ಹೋಗಿರುವುದರ ಕುರಿತು, ನಾವು ಯಾವುದಕ್ಕೂ ತಲೆಕೆಡಿಸಿಕೊಂಡವರಲ್ಲ. ಇದು ಕನ್ನಡದ ಗಡಿಭಾಗದ ಕಥೆಯಾದರೆ,
ಕರ್ನಾಟಕದ ನೆಲದೊಳಗೆ ಅನೇಕ ತಲ್ಲಣಗಳನ್ನು ಅನುಭವಿಸಿದ್ದೇವೆ. ಅನುಭವಿಸುತ್ತಿದ್ದೇವೆ. ಭಾಷಾ ವಿಷಯವಾಗಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಲ್ಲಿ ನಮ್ಮವರು, ನಾವು ಪರಕೀಯರಾಗಿದ್ದೇವೆ. ಬೇರೆ ಭಾಷೆಯವರು ಈ ನೆಲದ ಸವಲತ್ತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಕನ್ನಡ ನೆಲದ ಅನೇಕ ಸಾಂಸ್ಕೃತಿಕ ಪರಂಪರೆಯ ಮೇಲೆ ಸದಾ ಒಂದಿಲ್ಲ ಒಂದು ತಕರಾರುಗಳು ತೆಗೆಯುತ್ತಲೇ ಇದ್ದಾರೆ. ತೆಲುಗು ಭಾಷಿಗರು, ಮರಾಠಿ ಭಾಷಿಕರು, ಮಲೆಯಾಳಿಗಳು, ಅಸಾಮಿಗಳು, ರಾಜಸ್ಥಾನಿಗಳು, ಗುಜರಾತಿಗಳು… ಇಲ್ಲಿ ವಾಸಮಾಡುತ್ತಿದ್ದು, ಕನ್ನಡ ನೆಲ, ಜಲ ಬಳಸಿಕೊಂಡು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಇಲ್ಲಿಯ ಭಾಷಾ ವಿಷಯಕ್ಕೆ ಅವರು ಇನ್ನೂ ಒಗ್ಗಿಕೊಳ್ಳಬೇಕಾದ ಅಗತ್ಯವಿದೆ. ಕನ್ನಡ ಭಾಷೆಯ ಬಳಕೆಯ ಅಗತ್ಯವನ್ನು ಅವರಿಗೆ ಮನದಟ್ಟು ಮಾಡಬೇಕಾಗಿದೆ.
ಇವೆಲ್ಲದರ ನಡುವೆ ನಮ್ಮ ಕನ್ನಡ ಜಾಯಮಾನಕ್ಕೆ ಯಾವುದೇ ಕುಂದುಕೊರತೆಯಾಗಿಲ್ಲ. ಪ್ರತಿ ವರ್ಷವೂ ಅನೇಕ ಕೃತಿಗಳು ಹೊರಬರುತ್ತವೆ. ಭಾಷಾ ವಿಷಯವಾಗಿ ಅನೇಕ ಕಾರ್ಯಕ್ರಮಗಳು ಜರುಗುತ್ತವೆ. ಕನ್ನಡ ಭಾಷೆ, ನೆಲ, ಜಲದ ವಿಷಯವಾಗಿ ಅನೇಕ ಹೋರಾಟಗಾರರ ತ್ಯಾಗದ ಕಥೆಗಳಿವೆ. ಚಳುವಳಿಗಳಿಗೆ ಕೊರತೆಯಿಲ್ಲ. ಕನ್ನಡದ ಅಭಿವೃದ್ಧಿಗಾಗಿ ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ ಅನೇಕ ಯೋಜನೆಗಳನ್ನು ಹಾಕಿಕೊಂಡರೂ ಅಂದುಕೊಂಡಷ್ಟು ಗುರಿಯನ್ನು ಸಾಧಿಸಲು ಸಾಧ್ಯವಾಗಿಲ್ಲವೆನ್ನಬಹುದು. ಏಕೆಂದರೆ, ಕನ್ನಡವೆನ್ನುವುದು ಅದೊಂದು ಅತ್ಯಂತ ಅನರ್ಘ್ಯ ರತ್ನ. ಅದನ್ನು ಉಳಿಸುವ ಪರಂಪರೆ ನಮ್ಮದಾಗಿದೆ. ಕರ್ನಾಟಕ ನೆಲದಲ್ಲಿ ಕನ್ನಡ ಭಾಷೆಯ ಅನೇಕ ಅಸ್ಮಿತೆಗಳನ್ನು ಈಗ ನಾವು ಅರಿಯೋಣ.
ಕನ್ನಡದ ಮೊಟ್ಟ ಮೊದಲ ಶಾಸನ ಹಲ್ಮಿಡಿ ಶಾಸನ, ಗದ್ಯಕೃತಿ ವಡ್ಡರರಾಧನೆ, ಕಾವ್ಯಕೃತಿ ಕವಿರಾಜಮಾರ್ಗ, ಅಶೋಕನ ಶಿಲಾಶಾಸನಗಳು, ಶ್ರೀರಾಮಾಯಣಂ ದರ್ಶನಂ ಎನ್ನುವಂತಹ ಮಹಾನ್ ಕಾವ್ಯದ ಕತೃ ಕುವೆಂಪು ಕನ್ನಡ ನೆಲದವರು, ಭಾರತದಲ್ಲಿಯೇ ವಿಶೇಷವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಾಂತೀಯ ಭಾಷೆ ಎಂದರೆ ಅದು ಕನ್ನಡ ಭಾಷೆ. ಅದು ನಮ್ಮ ಹಿರಿಮೆ. ಇಲ್ಲಿ ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರುಗಳಿಗೆ ಕೊರತೆಯಿಲ್ಲ. ನಮ್ಮ ಕನ್ನಡದ ಅನೇಕ ಮೂಲನೆಲೆಗಳು ಕರ್ನಾಟಕದ ನೆಲೆಗಳಾಗಿ ಅಷ್ಟೇ ಅಲ್ಲ ಕರ್ನಾಟಕದಾಚೆಯೂ ತನ್ನ ಕವಲುಗಳನ್ನು ಚಾಚಿಕೊಂಡಿವೆ.
ಗಡಿಗಳೂದ್ದಕ್ಕೂ ಚಾಚಿಕೊಂಡಿರುವ ಹಿಂದೂ ಮಹಾಸಾಗರ, ಅರಬ್ಬಿಸಮುದ್ರ, ಬಂಗಾಳಕೊಲ್ಲಿ ಇವು ನಮ್ಮ ಕನ್ನಡ ನೆಲದ ಮೂರು ಭಾಗಗಳಲ್ಲಿ ಹಾದುಹೋಗಿವೆ. ಇದರ ಸುತ್ತಲೂ ಇರುವ ಕರಾವಳಿ ಪ್ರದೇಶ ಅತ್ಯಂತ ರಮಣೀಯವಾಗಿದ್ದು, ಪ್ರವಾಸಿ ತಾಣಕ್ಕೆ ಹೇಳಿಮಾಡಿಸಿದ ಸ್ಥಳವಾಗಿದೆ. ಇಲ್ಲಿ ಮೀನುಗಾರರು, ಸಮುದ್ರ ತೀರದ ಅನೇಕ ಜನಗಳಿಗೆ ಬದುಕನ್ನು ಕಟ್ಟಿಕೊಟ್ಟಿದೆ. ಇದು ಕನ್ನಡ ನೆಲವಲ್ಲದೆ ಬೇರೆ ಯಾವ ರಾಜ್ಯದಲ್ಲಿದೆ..? ಕಾವೇರಿ, ಕೃಷ್ಣ, ತುಂಗೆ, ತುಂಗಭದ್ರಾ, ವರದಾ, ಭೀಮಾ, ಘಟಪ್ರಭಾ, ಮಲಪ್ರಭಾ, ಭೀಮಾನದಿ, ಕಾಳಿ, ಅಘನಾಸಿನಿ, ಮುಂತಾದ ನದಿಗಳು ಜೀವಜಲವನ್ನು ಕಾಪಾಡುವಲ್ಲಿ, ಕನ್ನಡ ನೆಲದ ಸಿರಿಮೆಯನ್ನು ಹೆಚ್ಚಿಸಿದೆ. ಇಲ್ಲಿ ತೆಂಗು, ಬಾಳೆ, ನೆಲಗಡಲೆ, ಬತ್ತ, ರಾಗಿ, ಜೋಳ, ಕಬ್ಬು, ಹತ್ತಿ, ತಂಬಾಕು, ರಬ್ಬರ್.. ಮುಂತಾದ ಬೆಳೆಗಳು ಕನ್ನಡದ ಶ್ರೀಮಂತಿಕೆಗೆ ಸಾಕ್ಷಿಯಾಗಿವೆ. ಶ್ರೀಗಂಧ, ಬೀಟೆ, ತೇಗು, ಮಾವು, ಹಲಸು, ಬೇವು ಮುಂತಾದ ಸಸ್ಯ ಶ್ಯಾಮಲೆಯರು ಕೈಬೀಸಿ ಕರೆಯುತ್ತವೆ. ಸಹ್ಯಾದ್ರಿ ಪರ್ವತಗಳು ತಮ್ಮ ಹಿರಿಮೆಯನ್ನು ಹೆಚ್ಚಿಸಿದರೆ, ಉತ್ತರ ಕರ್ನಾಟಕದ ಬಯಲು ಸೀಮೆ ತನ್ನದೇ ಆದ ಶ್ರೀಮಂತಿಕೆಯನ್ನು ಹೊಂದಿ ಜನಜೀವನಕ್ಕೆ ಸಾಕ್ಷಿಯಾಗಿದೆ.
ಮರೆಯಲಾಗದ ಮಹಾ ಸಾಮ್ರಾಜ್ಯ ವಿಜಯನಗರ ವೈಭವವಿಲ್ಲಿ ಮೈದಳೆದಿದೆ. ಮೈಸೂರಿನ ಒಡೆಯರ ಆಡಳಿತವು ಪ್ರಸಿದ್ಧಿಯ ಪರಂಪರೆಯು ಹಿರಿಮೆಯನ್ನು ಹೆಚ್ಚಿಸಿದೆ. ಹೊಯ್ಸಳರು, ಕನ್ನಡ ಕುಲದ ನೆಲಮೂಲದ ಕದಂಬರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಸುಲ್ತಾನರು ಅದಿಲ್ ಶಾಹಿಗಳು ಗುಂಬಜ್ ಮಿನಾರ್ ಗಳಿಗೆ ಸಾಕ್ಷಿಯಾಗಿದ್ದಾರೆ. ನಮ್ಮ ಕನ್ನಡದ ಬೇಲೂರು, ಹಳೇಬೀಡು, ಶ್ರವಣಬೆಳಗೊಳ, ವಿಜಾಪುರದ ಗೋಲ್ ಗುಂಬಜ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಬದಾಮಿ, ಐಹೊಳೆ, ಪಟ್ಟದಕಲ್ಲು, ಬೀದರಿನ ಕೋಟೆಗಳು, ಗುಲ್ಬರ್ಗ ಕೋಟೆಗಳು, ಬಳ್ಳಾರಿಯ ಕೋಟೆಗಳು, ವಿಜಯನಗರ ಜಿಲ್ಲೆಯ ವಿಶ್ವ ಪ್ರಸಿದ್ಧ ಹಂಪಿ, ಕನಕಗಿರಿಯ ಕನಕಾಚಲ ದೇವಸ್ಥಾನ, ಕೊಪ್ಪಳದ ಕೋಟೆ, ಗವಿಮಠ, ಪಾಲ್ಕಿಗುಂಡು, ಕೋಟಿಲಿಂಗ ಸೋಮನಾಥ, ಗದಗಿನ ವೀರನಾರಾಯಣ, ಉತ್ತರ ಕನ್ನಡ ಜಿಲ್ಲೆಯ ಮಾರಿಕಾಂಬಾ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ, ಕಳಸ, ಹೊರನಾಡ ಅನ್ನಪೂರ್ಣೇಶ್ವರಿ, ಶ್ರೀ ಕೃಷ್ಣ ಮಂದಿರ… ತುಮಕೂರಿನ ಸಿದ್ಧಗಂಗಾ…ಒಂದೇ ಎರಡೇ…ನಮ್ಮ ನೆಲದ ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಸಾರುವ ದೇವಸ್ಥಾನಗಳು, ಅಲ್ಲದೇ ಇಲ್ಲಿ ಅನೇಕ ಚರ್ಚಗಳು, ಮಸೀದಿಗಳು, ಮಂದಿರಗಳು, ಗುರುದ್ವಾರಗಳು, ಬಸದಿಗಳು ಇವು ಯಾವುದಕ್ಕೂ ಕಡಿಮೆಯಿಲ್ಲದಂತೆ ತಮ್ಮ ಸೇವೆಯನ್ನು ಒದಗಿಸುತ್ತವೆ.
ಕರ್ನಾಟಕ ನೆಲ ಜಲವನ್ನು ಬಳಸಿಕೊಂಡು, ಅನೇಕ ಕೈಗಾರಿಕೆಗಳು ಮೈದಳೆದಿವೆ. ಉದ್ಯಮಿಗಳಾದ ಇನ್ಫೋಸಿಸ್ ನಾರಾಯಣ್ ಮೂರ್ತಿ, ಸುಧಾಮೂರ್ತಿ, ಅಜೀಮ್ ಪ್ರೇಮ್ ಜಿ, ಮುಂತಾದವರು ಕರ್ನಾಟಕದ ಕೀರ್ತಿಯನ್ನು ಬೆಳಗಿದ್ದಾರೆ.
ಕರ್ನಾಟಕವನ್ನು ಅಭಿವೃದ್ಧಿಪಡಿಸಿದ ಅನೇಕ ಅಭಿವೃದ್ಧಿಪರ ರಾಜಕಾರಣಿಗಳಲ್ಲಿ ಕೆಂಗಲ್ ಹನುಮಂತರಾಯ, ರಾಮಕೃಷ್ಣ ಹೆಗಡೆ, ದೇವರಾಜ್ ಅರಸು, ನಿಜಲಿಂಗಪ್ಪ , ಮತ್ತು ಎಚ್. ಡಿ ದೇವೇಗೌಡ ಅವರು ಭಾರತದ ಪ್ರಧಾನ ಮಂತ್ರಿಗಳಾಗಿದ್ದು ನಮ್ಮ ಹೆಮ್ಮೆಯ ವಿಷಯವಾಗಿದೆ. ಹೀಗೆ ಕರ್ನಾಟಕದ ಅಭಿವೃದ್ಧಿಪಥವನ್ನು ಕೊಂಡೊಯ್ಯುವಲ್ಲಿ ರಾಜಕೀಯ ಮುಖಂಡರು ತಮ್ಮದೇ ಆದ ಸಾಧನೆಗಳ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ.
ಇಲ್ಲಿ ಅನೇಕ ಕ್ರೀಡೆಗಳಿಗೆ ಮಹತ್ವ ನೀಡಿ ಕ್ರೀಡಾಮನೋಭಾವವನ್ನು ಮೆರೆದಿರುವ ನಾಡು ಎನಿಸಿಕೊಂಡಿದೆ. ಕಬ್ಬಡಿ, ಖೋ ಖೋ, ವಾಲಿಬಾಲ್, ಹಾಕಿ, ಕ್ರಿಕೆಟ್ ಮುಂತಾದವುಗಳು ನಮ್ಮ ನಾಡಿನ ಕೀರ್ತಿಗೆ ಕಳಸವಿಟ್ಟಂತಿವೆ.
ಇಲ್ಲಿ ಅನೇಕ ವೈಜ್ಞಾನಿಕ ಸಂಶೋಧನೆಗಳಾಗಿವೆ. ಆಯುರ್ವೇದದ ತವರು ಭೂಮಿಯಾಗಿ ಅನೇಕ ರೋಗಗಳನ್ನು ವಾಸಿ ಮಾಡುವಲ್ಲಿ ದಾಪುಗಾಲಿಟ್ಟಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಹಿರಿಮೆಯನ್ನು ಹೊಂದಿ, ಶಾಲಾ, ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಜಿಲ್ಲೆಗೆ ಒಂದರಂತೆ ವಿಶ್ವವಿದ್ಯಾಲಯಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ಕನ್ನಡ ಭಾಷೆಯ ಉಳಿವಿಗಾಗಿ ಅನೇಕ ಸಂಶೋಧನಾ ಕಾರ್ಯಗಳನ್ನು ನಿರ್ವಹಿಸಲು ಹಂಪಿ ಬಳಿ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆ ಮಾಡಲಾಗಿದೆ.
ಒಂದೊಂದು ಜಿಲ್ಲೆಯು ಒಂದೊಂದು ಅಸ್ಮಿತೆಯ ತವರೂರ ನೆಲವಾಗಿದೆ. ಬೆಳಗಾವಿಯ ಕುಂದಾ, ನಂಜನಗೂಡಿನ ರಸಬಾಳೆ, ಚನ್ನಪಟ್ಟಣದ ಗೊಂಬೆ, ಕಿನ್ನಾಳ ಗೊಂಬೆಗಳು, ಗುಲ್ಬರ್ಗ ತೊಗರಿ, ಗಂಗಾವತಿ, ಕಾರಟಗಿಯ ಬತ್ತ, ಬಳ್ಳಾರಿಯ ಕೋಟೆ ಮತ್ತು ಜೈಲು, ಶಿವಮೊಗ್ಗ ಜೋಗ ಜಲಪಾತ, ದಕ್ಷಿಣ ಕನ್ನಡ ಜಿಲ್ಲೆಯು ಕರಾವಳಿ ಪ್ರದೇಶ, ಯಾದಗಿರಿ ಕೋಟೆ ….ಇವು ಕನ್ನಡ ನೆಲದ ಹಿರಿಮೆಯನ್ನು ಹೆಚ್ಚಿಸಿವೆ.
ಶ್ರೀ ರಾಮಾಯಣ ದರ್ಶನಂ, ಚೋಮನದೂಡಿ, ಮೂಕಜ್ಜಿಯ ಕನಸುಗಳು, ನಾಕುತಂತಿ, ಭಾರತ ಸಿಂಧೂರು ರಶ್ಮಿ ,ಮೈಸೂರು ಮಲ್ಲಿಗೆ, ಬೆನ್ನ ಹಿಂದಿನ ಬೆಳಕು, ನಮ್ಮ ಜನಗಳು, ಇವುಗಳಲ್ಲದೆ ಅನೇಕ ಮಹತ್ತರ ಕೃತಿಗಳು ಈ ನಾಡಿನಲ್ಲಿ ಪ್ರಕಟವಾಗಿ, ಜನರ ಜ್ಞಾನದ ದಾಹವನ್ನು ಹೆಚ್ಚಿಸಿವೆ. ಇಲ್ಲಿ ಕಾದಂಬರಿ, ಕವನ ಸಂಕಲನ, ಚುಟುಕು ಸಂಕಲನ, ಪ್ರವಾಸ ಕಥನ, ಜೀವನ ಚರಿತ್ರೆ, ಆತ್ಮಚರಿತ್ರೆ.. ಇಂತಹ ಅನೇಕ ಪ್ರಕಾರದ ಕೃತಿಗಳು ಕನ್ನಡ ನೆಲದ ಅಸ್ಮಿತೆಯನ್ನು ಸಾರುತ್ತವೆ.
ಇವುಗಳಲ್ಲದೆ, ಅನೇಕ ಜಾನಪದ ಕಲೆಗಳು, ನಾಟಕ, ಯಕ್ಷಗಾನ, ಬಯಲಾಟ, ಸಿನೆಮಾ, ಕರಕುಶಲ ಕೌಶಲ್ಯಹೊಂದಿದ ಕಲೆಗಳು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿಹಿಡಿದಿವೆ. ಇಂತಹ ಶ್ರೀಮಂತ ನಾಡಿನ ಕನ್ನಡಿಗರೆಂದು ಹೇಳುವುದೇ ಹೆಮ್ಮೆಯ ವಿಷಯವಾಗಿದೆ. ಬನ್ನಿ ‘ಸುವರ್ಣ ಕರ್ನಾಟಕ’ ಆಚರಿಸುವ ಈ ಸಮಯದಲ್ಲಿ ಕನ್ನಡದ ಅಸ್ಮಿತೆಗಳನ್ನು ಕಾಪಾಡೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ