ವಿಕೃತ ಬಯಕೆ
ಕಿರಣ ಗಣಾಚಾರಿ. ಮುತ್ತಿನಪೆಟಗ
[ನಡೆಯದೆ ಅಡಿಗಡಿಗೆ
ಬೆವರುತ್ತಿದೆ ಭಾಷೆ
ಗಡಿಗಳಲಿ
ಪ್ರತಿಷ್ಠಾಪನೆಯಾಗಲಿ ಕನ್ನಡ
ಓಡದೆ ಅಡಿಗಡಿಗೆ
ಬಸವಳಿಯುತ್ತಿದೆ ಭಾಷೆ
ನಡುನಾಡುಗಳಲಿ
ಪ್ರತಿಷ್ಠೆಯಾಗಲಿ ಕನ್ನಡ
ಒಳಗೊಳಗೆ ಮಾತೃಭಾಷೆಯ ಹೊಸಕಿ
ಬಂದ ಅತಿಥಿಗಳ ಓಲೈಸಲು
ನಗುಮುಖವಾಡದ ಅವರವರ ಭಾಷೆಯ ಬಳಕೆ
ಕನ್ನಡವ ಶೂಲಕ್ಕೇರಿಸಿ
ಅನ್ಯಭಾಷೆಗಳ ಅಪ್ಪಿಕೊಳ್ಳುವ ವಿಕೃತ ಬಯಕೆ
ಅನ್ನ ನೀರೆರೆದವರೇ ಪರಕೀಯರಾಗಿಹರು
ಅಸ್ತಿತ್ವ ಕಾಪಾಡಿಕೊಳ್ಳೋ ನಿತ್ಯ ಯುದ್ಧ
ಯಾರು ನಮ್ಮವರು ಯಾರು ಪರರು
ತಿಳಿಯದೇ ಸೊರಗಿಹುದು ಕನ್ನಡ ಅರ್ಧಂಬರ್ಧ
ಇದೇ ಸಕಾಲ ನಾಡು ಗಡಿಗಳ ಗಟ್ಟಿಗೊಳಿಸಲು
ಕನ್ನಡದ ಬೇರು ಬಾಹುಳ್ಯ ಬೆಳೆಸಲು
ಉದಾಸೀನತೆಯು ಇನ್ನೆಷ್ಟು ಕಾಲ
ಕನ್ನಡದ ಉಳಿವಿಗೆ ಇಲ್ಲ ಬಹುಕಾಲ
ತೋರಿದರೆ ಪ್ರೀತಿ
ಕನ್ನಡ ಇದ್ದೀತು ಅನುಗಾಲ
ಕಿರಣ ಗಣಾಚಾರಿಮುತ್ತಿನಪೆಟಗಿ