ಪ್ರವಾಸ ಸಂಗಾತಿ
ಚಂದ್ರು ಪಿ ಹಾಸನ
ದಸರಾ ರಜೆಯ ಮಜದ ಸಮೃಧ್ಧಿ ಪ್ರವಾಸ-
ಮಕ್ಕಳಿಗೆ ರಜೆ ಅಂದ್ರೆ ತುಂಬಾ ಖುಷಿ. ಯಾವ ಮಕ್ಕಳನ್ನು ಕೇಳಿದರೂ ರಜೆ ಬಂದ್ರೆ ಮಜಾ ಮಾಡಬಹುದು, ಎಂಜಾಯ್ ಮಾಡಬಹುದು ಅನ್ನುವ ಉತ್ತರ ಆಗಾಗ ನನ್ನ ಕಿವಿಗೆ ಬೀಳುತ್ತಿತ್ತು. ಆದರೆ ಅವರ ದೃಷ್ಠಿಯಲ್ಲಿ ಮಜಾ ಅನ್ನೋದು ಅಂದ್ರೆ ಏನು ಎಂಬ ಪ್ರಶ್ನೆ ನನಗೆ ಆಗಾಗ ಕಾಡುತ್ತಿತ್ತು. ತಿಳಿದುಕೊಳ್ಳಬೇಕೆಂಬ ಕುತೂಹಲದಲ್ಲಿದ್ದಾಗ ದಾರಿಯಲ್ಲಿ ಒಂದೆರಡು ಮಕ್ಕಳು ಹೋಗುತ್ತಿರುವುದನ್ನು ಕಂಡೆ. ಹಾಗೆ ಅವರನ್ನು ಮಾತನಾಡಿಸುತ್ತಾ ಮತ್ತು ಅವರ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸುತ್ತಾ ತಮ್ಮ ರಜಾ ಅವಧಿಯ ಬಗ್ಗೆ ವಿಚಾರಿಸಿದೆ. ಆಗ ಅವರು ಹೇಳ್ತಾರೆ, ನಮಗೆ ರಜೆ ಸಿಕ್ಕರೆ ಫ್ರೀಯಾಗಿ ಹಾಗೂ ಆರಾಮವಾಗಿ ಕಾಲ ಕಳೆಯಬಹುದು, ಯಾವ ಎಕ್ಸಾಮ್ ನೋಟ್ಸ್ ನ ಟೆನ್ಶನ್ ಇರುವುದಿಲ್ಲ, ಮೊಬೈಲ್ ಗೇಮ್ ಮಾಡಬಹುದು, ರೀಲ್ಸ್ ಕ್ರಿಯೇಟ್ ಮಾಡಬಹುದು, ನಮಿಗ್ ಬೇಕಾದ ರೀಲ್ಸ್ ಗಳನ್ನು ನೋಡಬಹುದು, ಫೇಸ್ಬುಕ್ ವಾಟ್ಸಾಪ್ ಮತ್ತು ಇನ್ಸ್ಟಾಗ್ರಾಂ ನೋಡಬಹುದು ಅಂತ ಹೇಳಿದರು. ಆದರೆ ನಾವು ಓದುವ ಸಂದರ್ಭದಲ್ಲಿ ರಜಾ ಬಂದ್ರೆ ಸಾಕು ಎಲ್ಲ ಮಕ್ಕಳು ಸೇರಿಕೊಂಡು ಫೀಲ್ಡ್ ನಲ್ಲಿ ಕ್ರಿಕೆಟ್ ಆಡ್ತಿದ್ವಿ, ಮರಕೋತಿ ಆಟ ಆಡ್ತಿದ್ವಿ ಲಗೋರಿ ಆಟ ಆಡ್ತಿದ್ವಿ, ಕೋಲು ಮತ್ತು ಕಲ್ಲಿನ ಆಟ ಅಯ್ಯೋ, ಒಂದಾ ಎರಡಾ ಅದೊಂತರಹ ತುಂಬಾ ಚೆನ್ನಾಗಿರ್ತಿತ್ತು. ಅವೆಲ್ಲ ದೈಹಿಕ ಶಕ್ತಿ ಹೆಚ್ಚಿಸುವ ಆಟಗಳೇ ಆಗಿರ್ತಿತ್ತು. ಆದರೆ ಈಗಿನ ಮಕ್ಕಳು ಯಾವಾಗ ಮನೆಗೆ ಹೋದ್ರೂನು ಕೈಯಲ್ಲಿ ಮೊಬೈಲ್. ಮೊಬೈಲ್ ಹಿಡ್ಕೊಂಡೇ ಊಟ ಮಾಡೋದು ಮತ್ತು ಗೇಮ್ಸ್, ರಿಲ್ಸ್, ಫೇಸ್ಬುಕ್, ವಾಟ್ಸಾಪ್ , ಇನ್ಸ್ಟಾಗ್ರಾಮ್, ಟ್ವಿಟ್ಟರ್ ಇವ್ರೊಳಗೇನೆ ಮುಳುಗಿರ್ತಾರೆ. ನನಗೂ ನೋಡಿ ನೋಡಿ ಸಾಕಾಗಿ ನಾವೆಲ್ಲ ಯಾಕೆ ಈ ರಜೆಯಲ್ಲಿ ಬೇರೆ ತರ ಮಜಾ ಮಾಡಬಾರದು ಅಂತ ಯೋಚಿಸ್ತಾ ಇರುವಾಗ, ನನ್ನ ಅಮ್ಮ ಮಣಿ ಹಾಗೂ ಶ್ರೀಮತಿ ದಿವ್ಯ ಈ ದಸರಾದಲ್ಲಿ ಪ್ರವಾಸ ಉತ್ತಮ ಎಂಬ ಐಡಿಯಾ ಕೊಟ್ಟರು.
ನನಗೂ ಸಹ ಇದೇ ಸರಿ ಅನಿಸಿತು. ಏಕೆಂದರೆ ನನ್ನ ಮಗ ಜೀವಧ್ಯಾನ್ ಸಹ ವಯಸ್ಸು 3 ಆದರೂ ಸಹ ಯಾವಾಗಲೂ ಮೊಬೈಲ್ ನೋಡ್ತಾ ಊಟ ಆಟ ಮಾಡ್ತಿದ್ದ .ಅದಕ್ಕೆ ನನ್ನ ಸ್ನೇಹಿತ ಅನಿಸ್ ಜೊತೆ ಸೇರಿ ಒಂದಷ್ಟು ಮಕ್ಕಳನ್ನ ಸೇರಿಸಿ ಮೂರು ನಾಲ್ಕು ಗಾಡಿಗಳನ್ನು ತೆಗೆದುಕೊಂಡು ಏಕದಿನ ಪ್ರವಾಸಕ್ಕೆ ಹೊರಟೆವು. ಸುಮಾರು ಬೆಳಗ್ಗಿನ ಜಾವ 7:30ಕ್ಕೆ ಎಲ್ಲರನ್ನೂ ಒಂದಡೆ ಸೇರಿಸಿ, ಅಲ್ಪ ಸ್ವಲ್ಪ ಹಣ ಸೇರಿಸಿ ಪೆಟ್ರೋಲ್ ಹಾಕಿಸಿಕೊಂಡು ಮೊದಲಿಗೆ ಸಕಲೇಶಪುರ ತಾಲೂಕಿನಲ್ಲಿರುವ ಮಂಜರಾಬಾದ್ ಕೋಟೆಗೆ ನೋಡಲು ಹೊರಟೆವು. ದಾರಿಯಲ್ಲಿ ಯಾವ ಹೂವು ಇರುವ ಮರವನ್ನು ಕಂಡರೂ ಫೋಟೋವನ್ನು ಕ್ಲಿಕ್ಕಿಸಿ, ವಾಟ್ಸಾಪ್ ಸ್ಟೇಟಸ್ ಗೆ ಹಾಕಿಕೊಳ್ಳುತ್ತಾ 10 ಗಂಟೆಗೆ ತಲುಪಿದೆವು. ಒಟ್ಟು 235 ಮೆಟ್ಟಿಲುಗಳನ್ನು ಹತ್ತಿದ್ದೇ ಗೊತ್ತಾಗಲಿಲ್ಲ. ಮಕ್ಕಳು ಜೊತೆ ಸೇರಿ ನನ್ನ ಮಗನು ಮೊಬೈಲ್ ಕೇಳುವುದನ್ನು ಬಿಟ್ಟೇ ಬಿಟ್ಟ. ಅಲ್ಲಿ ಸೇರಿದ ಎಲ್ಲ ಮಕ್ಕಳಿಗೂ ಸಂತಸವೇ ಸಂತಸ. ಕುಣಿದು ಕುಪ್ಪಳಿಸುತ್ತಾ ಎಲ್ಲೆಂದರಲ್ಲಿ ಫೋಟೋ ಕ್ಲಿಕ್ಕಿಸುತ್ತಾ ಇರುವಾಗ ನಾನು ಮತ್ತು ಅನಿಸ್ ಮಂಜರಾಬಾದ್ ಕೋಟೆಯ ಅಲ್ಪಸ್ವಲ್ಪ ಇತಿಹಾಸವನ್ನು ಮಕ್ಕಳಿಗೆ ತಿಳಿಸಲಾರಂಭಿಸಿದೆವು. ಅಂದಿನ ಕಾಲದಲ್ಲಿ ಗಣಿತದ ಆಕಾರಗಳ ಅರಿವು ಮತ್ತು ನಕ್ಷತ್ರ ಆಕಾರದಂತೆ ಕೋಟೆ ನಿರ್ಮಾಣ ನಿಜಕ್ಕೂ ಥ್ರಿಲ್ ಎನಿಸುತ್ತಿದೆ ಎಂದು ಮಕ್ಕಳು ಅಭಿಪ್ರಾಯವನ್ನು ಹಂಚಿಕೊಂಡರು. ಆದರೆ ಎರಡು ಗಂಟೆ ಹೇಗೆ ಕಳೆಯಿತು ಅಂತ ಯಾರಿಗೂ ಗೊತ್ತಾಗಲಿಲ್ಲ. ಮತ್ತೆ ಅಲ್ಲಿಂದ ಮಂಗಳೂರು ದಾರಿಯಲ್ಲಿ 5 ಕಿ.ಮೀ ದೂರದಲ್ಲಿ ಒಂದು ಚಿಕ್ಕ ಜಲಪಾತವನ್ನು ತಲುಪಿ ನಮ್ಮ ಆಯಾಸವನ್ನು ಅಲ್ಲಿ ಆಟವಾಡುತ್ತ ಕಳೆದುಕೊಂಡು, ಉದುರು ಮಳೆ ಬರುತ್ತಿದ್ದರು ಸಹ ನೀರನ್ನು ಒಬ್ಬರ ಮೇಲೊಬ್ಬರು ಎರಚಿಕೊಂಡು ಮಕ್ಕಳು ತುಂಬಾ ಸಂತೋಷ ಪಡುತ್ತಿದ್ದರು. ನಂತರ ಅಲ್ಲಿಂದ ಸಕಲೇಶಪುರವನ್ನು ತಲುಪಿ, ಕುಡಿಯಲು ಜ್ಯೂಸ್ ಮತ್ತು ಸೌತೆಕಾಯಿಯನ್ನು ಖರೀದಿಸಿದವು. ಮತ್ತೆ ಸಕಲೇಶಪುರದಿಂದ ಆರೇಳು ಕಿ.ಮೀ ದೂರದಲ್ಲಿ ಬೇಲೂರು ರಸ್ತೆಯಲ್ಲಿ ಸಿಗುವ ಬೈಕೆರೆಗೆ ತಲುಪಿದೆವು
ಅಲ್ಲಿ 1750 ನೇ ಇಸವಿಯಲ್ಲಿ ನಿರ್ಮಾಣವಾಗಿ ಮತ್ತು 2004 ರಲ್ಲಿ ಪುನಶ್ಚೇತನಗೊಂಡಿದ್ದ ಗುಡ್ಡೆ ಬಸವಣ್ಣ ದೇವಸ್ಥಾನವನ್ನು ನೋಡಿ ಮನಸ್ಸು ಪ್ರಶಾಂತವಾಯಿತು. ಅಲ್ಲಿನ ಆ ಸುಂದರ ವಾತಾವರಣ ನಮ್ಮ ಮನಸ್ಸನ್ನು ಪ್ರಫುಲ್ಲ ಗೊಳಿಸಿತು. ಬಣ್ಣ ಬಣ್ಣದ ಹೂವಿನ ಗಿಡಗಳು ತಮ್ಮತ್ತ ನಮ್ಮನ್ನು ಆಕರ್ಷಿಸುತ್ತಿದ್ದವು. ಅದನ್ನು ನೋಡು ನೋಡುತ್ತಾ ಹೊಟ್ಟೆ ಹಸಿದಿದ್ದೇ ಗೊತ್ತಾಗಲಿಲ್ಲ. ಎಲ್ಲವನ್ನು ಮರೆತು ಆ ಸುಂದರ ವಾತಾವರಣದೊಳಗೆ ಸೇರಿಕೊಂಡಿದ್ದೆವು. ಅಲ್ಲಿಗೆ ತೆಗೆದುಕೊಂಡು ಹೋಗಿದ್ದ ಪಲಾವ್ ಮತ್ತು ಮೊಸರು ಗೊಜ್ಜನ್ನು ಮುಗಿಸಿ ದೇವಸ್ಥಾನದ ಪ್ರಾಂಗಣದಲ್ಲಿ ಒಂದೆರಡು ತಾಸು ಡ್ಯಾನ್ಸ್, ಕಬಡ್ಡಿ, ಜೊತೆಗೆ ವಿಶ್ರಮಿಸುತ್ತ ಮಾತುಕತೆಗಳಾನ್ನಾಡುತ್ತ ಕಾಲ ಕಳೆದೆವು. ಮಕ್ಕಳು ಮೊಬೈಲ್ ಬಿಟ್ಟು ಆಟವಾಡಿ ಸಂತೋಷ ಪಟ್ಟಿದ್ದನ್ನು ನೋಡಿ ನಮಗೆಲ್ಲ ಖುಷಿಯಾಯಿತು. ಅಲ್ಲಿಂದ ಪುನಃ ಹೊರಟು ನಮ್ಮೂರ ಬಳಿ ಅಂದರೆ ಆಲೂರು ತಾಲೂಕಿನ ಮಗ್ಗೆಯ ಬಳಿ ಇರುವ ಇತಿಹಾಸವನ್ನು ಹೊಂದಿರುವ ಪಾರ್ವತಮ್ಮ ಬೆಟ್ಟಕ್ಕೆ ಸಂಜೆಯ ವೇಳೆಗೆ ತಲುಪಿದೆವು. ಆ ಸುಮಧುರ ಸಂಜೆಯಲ್ಲಿ ಅಷ್ಟು ಎತ್ತರ ಬೆಟ್ಟ ಹತ್ತಿದ್ದು ಯಾರಾರಿಗೂ ದಣಿವಾಗಲಿಲ್ಲ. ಪಾರ್ವತಮ್ಮ ಮತ್ತು ಶಿವಪ್ಪನನ್ನು ದರ್ಶನ ಮಾಡಿ ನಾವು ತಂದಿದ್ದ ಸ್ನ್ಯಾಕ್ಸ್ ಎಲ್ಲ ಖಾಲಿ ಮಾಡಿದವು. ನಂತರದಲ್ಲಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಖುಷಿ ಪಟ್ಟೆವು. ಬೆಟ್ಟದ ಮೇಲಿಂದ ಕೂಗಿದರೆ ಪ್ರತಿಧ್ವನಿ ಬರುತ್ತದೆ ಎಂದು ತಿಳಿದ ಮಕ್ಕಳು ತಮ್ಮ ತಮ್ಮ ಹೆಸರುಗಳನ್ನು ಕೂಗಿ ಕೂಗಿ ಕುಣಿದಾಡಿದರು. ಮಂದಿರದ ಸ್ವಲ್ಪ ಮುಂದಿದ್ದ ಬಸವಣ್ಣನ ಗುಡಿಯ ಮುಂದೆ ಎಲ್ಲರನ್ನೂ ಸಾಲಾಗಿ ಕುಳ್ಳಿರಿಸಿ ವಿವಿಧ ಶೈಲಿಯ ಫೋಟೋಗಳನ್ನು ತೆಗೆದೆವು.
ಇನ್ನೊಂದು ವಿಶೇಷವೆಂದರೆ ಲೇಖಕನಾದ ನಾನು ನನಗೆ ಬೇಸರವಾದಾಗ ಅಥವಾ ತುಂಬಾ ಖುಷಿಯಾದಾಗ ನನ್ನ ತುಸು ಕಾಲವನ್ನು ಆ ಬೆಟ್ಟದಲ್ಲಿ ಅಂದರೆ ಪಾರ್ವತಮ್ಮ ಬೆಟ್ಟದಲ್ಲಿ ಒಂದು ಮರದ ಕೆಳಗೆ ಇದ್ದ ಚಿಕ್ಕ ಬಂಡೆಯ ಮೇಲೆ ಕುಳಿತು ಕೆಲಕಾಲ ಮೀಸಲಿಟ್ಟು ಕಳೆಯುತ್ತಿದ್ದೆ. ಅಲ್ಲಿ ಕುಳಿತು ಎಷ್ಟೋ ಕವನ ಕವಿತೆ ಮತ್ತು ಲೇಖನಗಳನ್ನು ಬರೆಯುತ್ತಿದ್ದೇನೆ. ಆ ಸ್ಥಳವನ್ನು ಕರೆದುಕೊಂಡು ಹೋಗಿದ್ದ ಮಕ್ಕಳಿಗೆ ತೋರಿಸಿದೆ. ಅವರೆಲ್ಲರೂ ಖುಷಿಪಟ್ಟರು ಆ ಸ್ಥಳವನ್ನು ಮಕ್ಕಳು ನನ್ನ ಮಗ ಜೀವಧ್ಯಾನ್ ನ ಹೆಸರು ಸೇರಿಸಿ ಜೀವಶೈಲ ಎಂದು ಹೆಸರಿಟ್ಟರು. ಆ ಸಿರಿಯಲ್ಲಿ ಸಮಯ ಕಳೆದಿದ್ದು ಗೊತ್ತಾಗಲಿಲ್ಲ.ರವಿ ಕೆಳಗೆ ಜಾರುತ್ತಿದ್ದ, ಕತ್ತಲು ಆವರಿಸುತ್ತಿತ್ತು . ಅಲ್ಲಿ ಚಿರತೆಗಳು ಬರಬಹುದೆಂಬ ಭಯದಿಂದ 6 ಗಂಟೆ ಅಷ್ಟರಲ್ಲಿ ಹೊರಟೆವು. ಅಲ್ಲಿ ಹಾಡಿದ್ದು, ಆಟವಾಡಿದ್ದು, ಕುಣಿದದ್ದು, ಸುತ್ತಿದ್ದು ನಿಜವಾಗಿಯೂ ನಮ್ಮ ಎಲ್ಲಾ ಟೆನ್ಶನ್ ಗಳನ್ನು ದೂರವಿಟ್ಟಿದ್ದರಿಂದ ಆಯಸ್ಸು ಕೆಲ ಕ್ಷಣಕಾಲ ಜಾಸ್ತಿ ಆಯ್ತೆಂದು ಭಾಸವಾಯಿತು. ಬೆಳಿಗ್ಗೆಯಿಂದ ಮಕ್ಕಳ ಜೊತೆ ಕಳೆದ ಕ್ಷಣ ಎಂದು ಮರೆಯದ ಸವಿ ನೆನಪಾಗಿ ಉಳಿಯಿತು ದಸರೇಯಲ್ಲಿ ಕಳೆದ ಆ ಮಜ ಇನ್ನು ಸಮೃದ್ಧಿಯಾಯಿತು 2024ರ ದಸರಾ ರಜವು ತಂದಂತಹ ಮಜಾ ಚೈತನ್ಯದ ಆರೋಗ್ಯ ಸಮೃದ್ಧಿ ಆಯಿತೆಂದರೆ ತಪ್ಪಾಗಲಾರದು.
2024 ರ ದಸರೆಯ ರಜಾ
ತಂದಿತು ನಮಗೆಲ್ಲ ಮಜಾ
ಸುತ್ತಿಸುತ್ತಿ ಕುಣಿದು ಎದ್ದಿಬಿದ್ದಿ
ಭಾಸವಾಯ್ತೆನಗೆ ಆರೋಗ್ಯ ಸಮೃದ್ಧಿ
ಚಂದ್ರು ಪಿ ಹಾಸನ್
Nice and keep growing like this
Tq so much
Super sir
Tq u so much
ನಿಮ್ಮ ಪ್ರವಾಸ ಕಥನ ಓದಿ ಖುಷಿ ಆಯಿತು ಇಂದಿನ ಮಕ್ಕಳನ್ನು ಹೊರ ಪ್ರಪಂಚದ ಜೊತೆ ತೇರದುಕೊಳುವಂತೆ ಮಾಡಿ ಮೊಬೈಲ್ ಗೀಳಿನಿಂದ ಹೊರಬರಲು ಇದು ಉತ್ತಮವಾದ ಮಾರ್ಗ… ಇಂತಹ ಪ್ರವಾಸ ಮಕ್ಕಳಿಗೆ ಸ್ಥಳದ ಪರಿಚಯ ಹಾಗೂ ಇತಿಹಾಸ ಎಲ್ಲವನ್ನು ತಿಳಿಸಿಕೊಡುತ್ತವೆ. ಆದರೆ ನಿಮ್ಮ ಒಂದು ಫೋಟೋ ನೋಡಿ ಭಯ ಆಯಿತು. ಜಲಪಾತದಲ್ಲಿ ಹರಿಯುವ ನೀರಲ್ಲಿ ನಿಂತು ಫೋಟೋ ತೆಗೆಯುವ ದುಸ್ಸ್ ಸಾಹಸ ಬೇಡ.. ಕ್ಷಣ ಮಾತ್ರದ ಆಚಾತುರ್ಯದಿಂದ ಎಷ್ಟೊ ದುರಂತಗಳನ್ನು ಹತ್ತಿರದಿಂದ ನೋಡಿದ್ದೀನಿ…. ಆಂತ ಕುಟುಂಬದವರ ರೋಧನವನ್ನು ಕೇಳಿದ್ದೀನಿ… (ಸಾಮಾಜಿಕ ಜಾಲತಾಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಎಲ್ಲರೂ ನೋಡಿರುತ್ತಾರೆ) ಖುಷಿಗಾಗಿ ಮಾಡಿದ ಪ್ರವಾಸ ಯಾವತ್ತೂ ದುಃಖವನ್ನು ಕೊಡುವುದು ಬೇಡ… ಈ ಬಗ್ಗೆ ಜಾಗೃತೆ ಇರಲಿ…. ಇದು ನನ್ನ ಕೋರಿಕೆ
️ಬಾಲಕೃಷ್ಣ ದೇವನಮನೆ, ಬೆಳಂಬಾರ
ಮೊಬೈಲ್ ನಂ. 9743060100
ಧನ್ಯವಾದಗಳು ತಮಗೆ
ಆದರೆ ಅದು ಚಿಕ್ಕ ಜಲಪಾತ
ಪ್ರವಾಸ ಎಂದರೆ ಮನಸ್ಸಿಗೆ ಮುದ ನೀಡುವಂಥದ್ದು. ಅಂದು ಪ್ರವಾಸ ಎಂದಾಕ್ಷಣ ತಿಂಗಳಾನುಗಟ್ಲೆ ಖುಷಿಯಿಂದ ಊರಿಗೆಲ್ಲಾ ಹೇಳಿಕೊಂಡು ಬರುವುದು ವಾಡಿಕೆಯಂತೆ ನಡೆಯುತ್ತಿತ್ತು. ಇಂದು ಮಕ್ಕಳಿಗೆ ಅಂತಹ ಸಂತಸ ಬಹಳ ಕಡಿಮೆ ಎಂದೇ ಹೇಳಬಹುದು. ನಿಮ್ಮ ಬರಹ ಹಲವು ಪೋಷಕರಿಗೆ ಹಾಗೂ ಮಕ್ಕಳಿಗೆ ಮಾರ್ಗದರ್ಶನ ಕೂಡ ಹೌದು.
ಹೌದು ನಿಮ್ಮ ಮಾತು ನಿಜ.
ನಮ್ಮ ಬಾಲ್ಯದ ನೆನಪೂಪುಗಳಲ್ಲೂ ವಿಶೇಷತೆ ಇದೆ. ಆಗಿನ ಎಂಜಾಯ್ಮೆಂಟ್ ಗೂ ಈಗಿಗೂ ಬಹಳ ವ್ಯತ್ಯಾಸವಿದೆ. ಈಗಿನ ಮಕ್ಕಳಿಗೆ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಿಸುವ ಚಟುವಟಿಕೆಗಳು ಬೇಕೇ ಬೇಕು.
ಧನ್ಯವಾದಗಳು ತಮಗೆ.