ಐದನೇ ವಾರ್ಷಿಕೋತ್ಸವದ ವಿಶೇಷ

ತೊಲೆಯ ಕುಣಿಕೆಯಲ್ಲಿದೆ
ನನ್ನಮ್ಮನ ಜೋಗುಳದ ದನಿ :
ಕಂಬಗಳಲ್ಲಡಗಿದೆ ನನ್ನಪ್ಪನ
ಬಿರುನುಡಿಯ ಬಾಣಗಳು :
ಬಾಗಿಲಿನಲ್ಲಿದೆ ಚಿರಪರಿಚಿತ
ಮುಖಗಳ ಪ್ರತಿಬಿಂಬಗಳು :
ಸೀಗೆ , ಹೊಗೆಗಳ ನಡುವೆ,
ಅಮ್ಮ ಹೇಳುತ್ತಿದ್ದ
“ಅಳಿಯ ಅತ್ತೆಯ ಮನೆಗೆ ಹೋದ”
ಕಥೆ ಕಿವಿಯಲ್ಲಿ ಗುಣುಗುಣಿಸುತ್ತಿದೆ.
ಹೆರವರ ಪಾಲಾಗಲಿರುವ ಈ
ನಮ್ಮ ಮನೆ, ತನ್ನೆಲ್ಲ ನೆನಪುಗಳ
ಗೋರಿ ಕಟ್ಟುವ ಮುನ್ನ, ಒಮ್ಮೆ
ಕಣ್ತುಂಬಿಕೊಳ್ಳುವಾಸೆ ಅದನು.
ಗೋಡೆಗಳ ತಬ್ಬುವಾಸೆ,
ಕಂಬಗಳ ಸುತ್ತುವಾಸೆ ,
ನೆಲದಲ್ಲಿ ಮುಖವಿಟ್ಟು,
ಅಗಲಿದ ನನ್ನಮ್ಮನ
ಮಡಿಲ ಸುಖವ ನೆನೆದು
ಬಿಕ್ಕಿ ಬಿಕ್ಕಿ ಅಳುವಾಸೆ …..

“ನಮ್ಮ ಮನೆ” ಸುಮಾರು ೨೦೦೧ ನೆಯ ಇಸವಿಯಲ್ಲಿ ನಾನು ಬರೆದ ಮೊದಲ ಕವನ. ನಾನು ಹುಟ್ಟಿ ಬೆಳೆದ ಮನೆಯನ್ನು ಮಾರಾಟಮಾಡುತ್ತಿರುವುದಾಗಿ ನನಗೆ ತಿಳಿದಾಗ ನನ್ನ ಮನಸ್ಸಿಗೆ ಬಂದ ಪದಗಳು ಕವಿತೆಯಾದವು. ಆ ಮನೆಯಲ್ಲಿ ಹುಟ್ಟಿ ಇಪ್ಪತ್ತೊಂದು ವರ್ಷಗಳನ್ನು ಕಳೆದು ಬಂದವಳು ನಾನು. ಹಾಗಾಗಿ ಆ ಮನೆಯ ಅಗುಳಿ, ಚಿಲಕ, ಬಾಗಿಲು, ಜಗುಲಿ, ಅಟ್ಟ , ನಡುಮನೆ, ದೇವರ ಮನೆ, ಅಡುಗೆ ಮನೆ, ಕಂಬಗಳಿದ್ದ ಹಜಾರ, ಒಂದು ಕಾಲದಲ್ಲಿ ಕಣಜದ ಮನೆಯಾಗಿದ್ದ ಈಗಿನ ಪುಟ್ಟ ಕೊಠಡಿ. ತೊಟ್ಟಿ , ಅಕ್ಕ ಪಕ್ಕದಲ್ಲಿದ್ದ ಕೊಠಡಿಗಳು ಹಿತ್ತಲು ಅಲ್ಲಿದ ಬಾವಿ, ನೀರಿನ ತೊಟ್ಟಿ, ಮಲ್ಲಿಗೆ ಬಳ್ಳಿ, ಸೀಬೆಮರ, ದಾಳಿಂಬೆ ಮರ, ಹಿಪ್ಪು ನೇರಳೆ ಮರಗಳು ಹೀಗೆ ನೆನೆಪುಗಳು ನುಗ್ಗಿ ಬರುತ್ತಿತ್ತು. ಅದರ ನೆನಪಿನಲ್ಲಿ ಈ ಕವನವನ್ನು ಬರೆದು “ಸಂಕ್ರಮಣ” ಪತ್ರಿಕೆಯ ವಿಶೇಷ ಸಂಚಿಕೆಗೆ ಕಳುಹಿಸಿದ್ದೆ. ಅದು ಪ್ರಕಟವಾಗಿ ನನಗೆ ಪುಸ್ತಕಗಳು ಬಹುಮಾನವಾಗಿ ಬಂದಿತ್ತು. ಆದರೆ ಕವನದಲ್ಲಿ ನಾನು ಆಸೆಪಟ್ಟ ಹಾಗೆ ಕೊನೆಯ ಬಾರಿಗೆ ಒಮ್ಮೆ ಆ ಮನೆಗೆ ಹೋಗಿ ಕಣ್ತುಂಬಿಕೊಂಡು ಬರಲು ಆಗಲೇ ಇಲ್ಲ. ಆ ಮನೆಯನ್ನು ಕೊಂಡವರು ಮನೆಯನ್ನು ಒಡೆದುಹಾಕಿ ಬೇರೆ ಮನೆಯನ್ನು ಕಟ್ಟಿದ್ದಾರೆ. ಆದರೆ ನನ್ನ ನೆನಪಿನಲ್ಲಿ ಆ ಮನೆ ಭದ್ರವಾಗಿದೆ.


Leave a Reply

Back To Top