ಪ್ರಕೃತಿ ರಕ್ಷತಿ ರಕ್ಷಿತಾಃ

ಪ್ರಕೃತಿ ರಕ್ಷತಿ ರಕ್ಷಿತಾಃ

HD Image And Wallpaper Of The World Environment Day

ಜ್ಯೋತಿ ನಾಯ್ಕ

ಜೂನ್ ಐದು ಅಂದಾಕ್ಷಣ ವಿಶ್ವ ಪರಿಸರ ದಿನಾಚರಣೆ ಸ್ಮರಿಸೋದು ಸಾಮಾನ್ಯ ಏಕೆಂದರೆ ಪರಿಸರವು ಹಲವು ಜೈವಿಕ & ಭೌತಿಕ ಘಟಕಗಳ ಆಗರ, ಇವುಗಳ ನಡುವೆಯೇ ಬೇಕು-ಬೇಡಗಳ ಸಂಘರ್ಷ. ೧೯೭೨-೧೯೭೩ರಿಂದ ವಿಶ್ವ ಸಂಸ್ಥೆಯ ನೇತೃತ್ವದಲ್ಲಿ ಪರಿಸರದ ಜಾಗೃತಿಗೊಳಿಸುತ್ತಲೇ ಬಂದಿದ್ದೇವೆ ಆದರೂ ಮತ್ತೆ ಮತ್ತೇ ನಮ್ಮ ಪರಿಸರದ ಬಗ್ಗೆ ತಿಳಿಯುವ ಹಾಗೂ ಅದರ ಮಹತ್ವ ಅರಿಯುವ ಜೊತೆಗೆ ನಮ್ಮಿಂದ ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ಅವಲೋಕಿಸಿ ಸಂರಕ್ಷಿಸಲು ಪಣತೊಡುವ ಮಹತ್ವದ ದಿನ.

ಈ ಪರಿಸರ ಅನ್ನೋ ಮೌನ ದೃಶ್ಯ ದೇವತೆ ಆರಾಧನೆ ಪ್ರಾಚೀನ ಕಾಲದಿಂದಲೂ ಸಾಗಿ ಬಂದಿದೆಯಾದರು ಇಂದಿನ ಪ್ರಕೃತಿ ಆರಾಧಕರೆ ಭಿನ್ನ. ಮಾತನಾಡುವಂತಹ ವಿವೇಚನೆ ಮನುಷ್ಯನಂತೆ ಪ್ರಕೃತಿಗೂ ಇದ್ದಿದ್ದರೆ ಬಹುಶಃ ಸೇಟೆದು ನಿಂತು ಪ್ರತಿರೋಧವೊಡ್ಡಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿತ್ತೇನೋ.! ದುಡಿಮೆಯ ಅರ್ಧದಷ್ಟು ಆರೋಗ್ಯಕ್ಕೆ, ಆಸ್ಪತ್ರೆಗೆ ಹಾಕುವ ನಮಗೆ ಪ್ಲಾಸ್ಟಿಕ್ನ ಹಸಿರು ವರ್ಣದ ನೀರು ಸೇವಿಸದ, ಆಮ್ಲಜನಕ ಬಿಡುಗಡೆ ಮಾಡದ, ಇತರೆ ಗೊಬ್ಬರ ಬಯಸದೆ ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಕಾರ್ಖಾನೆಗಳ ಮೂಲಕ ಹೆರಿಗೆಯಾದ ಸಾವಿಲ್ಲದ ವಸ್ತುಗಳ ಮೇಲೆಯೇ ಹೆಚ್ಜಿನ ಮೋಹವೆಂದರೆ ಅತಿಶಯೋಕ್ತಿಯೇನಲ್ಲ.

ನಗರವಾಸಿಗಳ & ಹಳ್ಳಿಗರ ನಿತ್ಯ ಬದುಕು ಪ್ರಕೃತಿಯ ಮಧ್ಯೆಯೇ. ಮಾನವನು ಪ್ರಕೃತಿಯ ಶಿಶುವಾಗಿದ್ದು ಪ್ರಕೃತಿಯ ಉಳಿವಿಲ್ಲದೆ ಮನುಷ್ಯ & ಪ್ರಾಣಿ ಸಂಕುಲದ ಆಸ್ತಿತ್ವಕ್ಕೆ ಧಕ್ಕೆಯಾಗುವುದರಲ್ಲಿ ನಿಸ್ಸಂದೇಹ. ಪ್ರಸ್ತುತ ಆಧುನೀಕರಣದ ಭರಾಟೆಯಲ್ಲಿ ಕೈಗಾರಿಕರಣ, ನಗರೀಕರಣ, ವಿಜ್ಞಾನ & ತಂತ್ರಜ್ಞಾದ ಅಭಿವೃದ್ಧಿ ನೆಪದಲ್ಲಿ ಪ್ರಕೃತಿಯ ಸಂರಕ್ಷಣೆಯನ್ನು ಮರೆತು ಆಧುನಿಕ ಜಗತ್ತು ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ, ಮಣ್ಣಿನ ಮಾಲಿನ್ಯ, ಕಾಡಿನ ನಾಶಕ್ಕೆ ಕಾರಣರಾಗುತ್ತಲೇ ಬಂದಿದ್ದು, ಹೃದ್ರೋಗ, ಉಸಿರಾಟ, ಕ್ಷಯ, ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಜನ್ಮ ತಾಳಿ ಮಾನವ ಸಂತತಿಗೆ ಕಾಡುತ್ತಲೇ ಬಂದಿವೆ ಎಂಬುವುದನ್ನು ಮರೆಯಬಾರದು.

ಬಹು ಮಹಡಿಯ ಕಟ್ಟಡಗಳು ತಲೆ ಎತ್ತುತ್ತಲೇ ಇವೆ, ಆದರೆ ಪ್ರಕೃತಿಯ ಸೊಬಗು ಮಾತ್ರ ಕಾಸು ಖರ್ಚು ಮಾಡಿ ಸವಿಯುವ ದುಃಸ್ಥಿತಿಗೆ ತಲುಪಿದ್ದೇವೆ. ಇವಕ್ಕೆಲ್ಲ ಕಾರಣ ನಮ್ಮೊಳಗೆ ಅಂತರ್ಗತವಾಗಿ ಅಡಗಿ ಕುಳಿತ ಬಯಕೆಯೆಂಬ ಧೂರ್ತ, ಪ್ರಕೃತಿವೆಂಬ ಸಂಜೀವಿನಿಯು ಮಾನವನ ಹಸಿವಿಗೆ ಕಸುವು ನೀಡಿದರೆ ಪ್ರಕೃತಿಯ ಹಸಿವಿಗೆ ಕಸುವು ಮನುಷ್ಯನೇ ಆಗಬೇಕಾದ ದುಃಸ್ಥಿತಿ ಬರಬಹುದು, ಆದ್ದರಿಂದ ಪ್ರಕೃತಿ ರಕ್ಷತಿ ರಕ್ಷಿತಾಃ ಅನ್ನೋ ಮಾತು ಮರೆಯದೆ ಪ್ರಕೃತಿಯ ಸೊಬಗನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಪ್ರಕೃತಿ ಸೌಂದರ್ಯದ ಸೊಬಗನ್ನು ಸವಿಯುವ ಧಾವಂತದಲ್ಲಿ ಎಲ್ಲಿ, ಯಾವ ರೀತಿ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತಿದ್ದೇವೆಂದು ಅರಿಯದೆ ಸಾಗುತ್ತಲೇ ಇದ್ದೇವೆ. ಸೇವಿಸಲು ಶುದ್ಧ ಗಾಳಿ,ನೀರಿಲ್ಲದೆ ಬಾಟಲ್ ನೀರು ಸೇವಿಸುವ ನಾವು ಮುಂದೊಂದು ದಿನ ಆಮ್ಲಜನಕದ ಟ್ಯಾಂಕ್ ಟೊಂಕಕ್ಕೆ ಕಟ್ಟಿಕೊಂಡು ಜೀವ ಉಳಿಸಿಕೊಳ್ಳುವ ಸಲುವಾಗಿಯೇ ದುಡಿದು  ಹೆಣವಾಗಬೇಕಾದ ಸಮಯ ಬಂದೊದಗಬಹುದು. ಈಗಾಗಲೇ ಪ್ರಾಣಿ ಸಂಗ್ರಹಾಲಯ, ಗಾರ್ಡನ್ಗಳೆಂದು ನಿರ್ಮಿಸಿಕೊಂಡು ಹಣ ಪೀಕಿ ಕೊಳ್ಳುವ ವ್ಯವಸ್ಥೆ ಆರಂಭವಾಗಿದ್ದು ಅದೆಲ್ಲ ಕ್ಷಣ ಮಾತ್ರದ ಆನಂದ. ಬದುಕು, ಬದುಕಲು ಬಿಡು ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಳ್ಳುತ  ಇತರೆ ಪ್ರಾಣಿಗಳನ್ನು, ಪಕ್ಷಿಗಳನ್ನು ಸ್ವಾತಂತ್ರವಾಗಿ, ಸ್ವಚೆಂದವಾಗಿ ಬಿಡಬೇಕು ಆಗ ನಿಜವಾದ ಪ್ರಕೃತಿ ಸೌಂದರ್ಯ ಶಾಶ್ವತವಾಗಿ ನೆಲೆಯೂರುವಂತಹ ವ್ಯವಸ್ಥೆ ಆಗಬಹುದು. ಕಲ್ಪನೆಗೂ ನಿಲುಕದ ನಿಸರ್ಗದ ತಾಣಗಳನ್ನು ಅಳಿವಿನಂಚಿನಲ್ಲಿ ದೂಡಿರುವ ಕಾರಣ ನಾಳೆ ನಮ್ಮಗಳ ಅಳಿವಿನ ದಿನಗಳು ಹತ್ತಿರ ಬಂದಿವೆ ಎಂಬುವುದನ್ನು  ಈಗಾಗಲೇ ಕೊರೊನಾ ಮಾರಿಯು ಸೂಚನೆ ಕೊಟ್ಟು ಎಚ್ಚರಿಸಿದೆ. ನಮ್ಮ ಹೆಣಗಳು ನಮ್ಮವರೇ ಮುಟ್ಟದಂತಹ ದುಃಸ್ಥಿತಿಗೆ ಬಂದಿದ್ದೇವೆಂದರೆ ಮೌನ ಪ್ರಕೃತಿಯು ಹೆಣಗಳನ್ನು ಹುಳಲು ತೆರಿಗೆ ಕೇಳುತ್ತಿರುವಂತೆ ಭಾಷವಾಗುತ್ತಿದೆ ಹಾಗೂ ಧರೆಯು ತನ್ನ ಒಡಲೊಳಗೆ ಸ್ವೀಕರಿಸಿ ತೃಪ್ತಿ ಪಡಲು ಸಹ ಸಂಕೋಚ ಪಡುತ್ತಿದೆ ಅನ್ನಿಸುತ್ತೆ.! ಸೋಜಿಗವಲ್ಲವೇ..!?

ಮರಗಿಡಗಳಲ್ಲಿ ಇದ್ದಿದ್ದರೆ ನೆತ್ತರ ಕೆಂಪು ಧರೆಯೆಲ್ಲ ಆಗಿರುತ್ತಿತ್ತು ಇಷ್ಟೊತ್ತಿಗೆ ಕೆಂಪು!. ಇಷ್ಟೊಂದು ಪ್ರಕೃತಿದತ್ತ ನೈಸರ್ಗಿಕ ಸಂಪನ್ಮೂಲಗಳ ನಾಶಕ್ಕೆ ಮಾನವ ಸಂಕುಲದ ಸ್ವಾರ್ಥವೇ ಪ್ರಧಾನವೆಂದರೆ ತಪ್ಪಾಗದು.

ಭಾರತೀಯ ನೆಲದಲ್ಲಿ ವನಸಿರಿಯ ಸೊಬಗು ವರ್ಣಿಸಲಸದಳ ಏಕೆಂದರೆ ಇಲ್ಲಿನ ಪ್ರತಿ ಸಸ್ಯವು ಸಂಜೀವಿನಿಗಳಂತೆ..! ವೈದ್ಯ ಲೋಕ ಕಣ್ಬಿಡುವ ಮುನ್ನವೇ ನಮ್ಮ ಪೂರ್ವಜರು ಬಳಕೆ ಮಾಡಿ ಆರೋಗ್ಯ ಕಾಪಾಡಿಕೊಂಡು ಈ ಪ್ರಕೃತಿ ವಿಸ್ಮಯದ ಮಹತ್ವವನ್ನು ನಮ್ಮ ಪೀಳಿಗೆಗೆ ವರ್ಗಾಯಿಸಿದ್ದು ಇಡೀ ವಿಶ್ವವೇ ನಮ್ಮೆಡೆ ಗಮನ ಕೇಂದ್ರೀಕರಿಸಿ ನೋಡುವಂತೆ ಮಾಡಿದೆ.

ಹೀಗೆ ನಮ್ಮಉಪಯೋಗಕ್ಕೆ ಕಾಡುಗಳನ್ನು ಸಂಪೂರ್ಣ ನಾಶಗೊಳಿಸುತ್ತ ಸಾಗಬೇಕೆ!? ಅಥವಾ ಉಳಿಸುವೆಡೆಗೆ ಗಮನ ಹರಿಸಬೇಕೆ!? ಎಂಬುದನ್ನು ಅರಿತು ಏರುತ್ತಿರುವ ಜಾಗತಿಕ ತಾಪಮಾನ & ಜನ ಸಂಖ್ಯೆಯ ನಿಯಂತ್ರಣ ಮಾಡುತ್ತ ಇಂದಿನ ಶಾಲಾ,ಕಾಲೇಜಿನ ಮಕ್ಕಳಿಗೆ ವಿಜ್ಞಾನ,ತಂತ್ರಜ್ಞಾನದ ಜೊತೆಗೆ ಪರಿಸರ ಮಹತ್ವವನ್ನು ತಿಳಿಸಿಕೊಡುವ ಅತ್ಯಗತ್ಯವಿದೆ. ಭಾರತ ಸರ್ಕಾರ ಜೂನ್ ಮಾಸ ಸಂಪೂರ್ಣ ವನಮಹೋತ್ಸವ ಆಚರಣೆ ಮಾಡುವ ಕೆಲಸ ಮಾಡುತ್ತಿದ್ದು ಅದರಲ್ಲಿ ಪೂರ್ಣ ಪ್ರಮಾಣದ ತೊಡಗಿಸಿಕೊಳ್ಳುವಿಕೆ ಆಗಬೇಕಿದೆ. ಶುದ್ಧಗಾಳಿ & ನೀರು, ಉತ್ತಮ ಆಹಾರ, ಅಂತರ್ಜಲ ಏರಿಕೆ ಹಾಗೂ ತಾಪಮಾನದ ಇಳಿಕೆಗೆ ಸರ್ಕಾರ & ಕೈ ಜೋಡಿಸುತ್ತಿರುವ ಸಂಸ್ಥೆಗಳಿಗೆ ನಾವು ಸಹಕರಿಸುತ್ತ ಪ್ರತಿ ಕುಟುಂಬದಲ್ಲಿ ಎಷ್ಟು ಜನರಿದ್ದೆವೋ ಅಷ್ಟು ಮರಗಳನ್ನು ನೆಡುವ ಪ್ರಯತ್ನ ಮಾಡುವ ಅವಶ್ಯವಿದೆ. ಹಾಗೂ ಕೃಷಿಯಲ್ಲಿ ತೊಡಸಿಗಿಸಿಕೊಂಡಿರುವ ರೈತವರ್ಗಕ್ಕೆ ಬೆಲೆಬಾಳುವ ಮರಗಳನ್ನು ಬೆಳೆಸಲು ಸಂಸ್ಥೆಗಳು ಸಾಲ ಕೊಡಲು ಸಹ ಮುಂದಾಗಿದ್ದು ಸರ್ಕಾರವು ಮುಂದಾಗಿದೆ. ಜೊತೆಗೆ ಕೆರೆಗಳ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು. ಕಾಡಂಚಿನ ಗ್ರಾಮಗಳ ಜನತೆಗೆ ವನ್ಯ ಜೀವಿಗಳಿಂದ ತೊಂದರೆ ಆಗದಂತೆ ನೋಡಿಕೊಳ್ಳುವುದು. ಹಾಗೂ ವನ್ಯ ಜೀವಿಗಳ ಜೀವಕ್ಕೆ ಅಪಾಯವಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾ ಅರಣ್ಯ ಕೃಷಿ ಯೋಜನೆ, ಬದು ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಇಳಿಜಾರಿಗೆ ಇಂಗು ಗುಂಡಿಗಳ ನಿರ್ಮಾಣ ಮಾಡುತ್ತ ಕೃಷಿಕರಿಗೂ ಸರ್ಕಾರ ಸಹಕಾರ ನೀಡುತ್ತಾ ಪ್ರಕೃತಿಯ ಉಳಿವಿಗೆ ಎಲ್ಲಾರು ಶ್ರಮಿಸುವ ಅಗತ್ಯವಿದೆ ಎಂಬ ಇಂಗಿತ ನನ್ನದು. ಧನ್ಯವಾದ.

***********

One thought on “ಪ್ರಕೃತಿ ರಕ್ಷತಿ ರಕ್ಷಿತಾಃ

Leave a Reply

Back To Top