ಗರಿ ಹುಟ್ಟುವ ಗಳಿಗೆ
ಫಾಲ್ಗುಣ ಗೌಡ ಅಚವೆ
ರಾತ್ರಿಯಿಡೀ ಹೊಯ್ದ ಮಳೆಗೆ
ಹದಗೊಂಡ ಹರೆಯದ ಬೆದೆಗೆ
ಮುದನೀಡಿದ ನರಳುವಿಕೆಯಲ್ಲಿ
ಇನ್ನೂ ಎದ್ದಿಲ್ಲ ಇಳೆ
ಬೇಸಿಗೆಗೆ ಧಿಕ್ಕಾರ ಕೂಗಿದ
ಮರಜಿರಲೆಗಳ ಅನಿರ್ದಿಷ್ಟಾವಧಿಯ
ನಿರಸನ ಅಂತ್ಯವಾಗಿದೆ
ಹಣ್ಣಿನರಸ ನೀಡಲು ಮೋಡಗಳು
ಧರೆಗಿಳಿದಿವೆ.
ಮತ್ತೆ ಮತ್ತೆ ಬೀಳುವ ಮಳೆ
ಅವಳ ನೆನಪುಗಳ ಚಿಗುರಿಸಿ
ಬದುಕುವ ಆಸೆ ಮೂಡಿಸಿದೆ
ಹುಲ್ಲು ಕಡ್ಡಿಗೆ ಜೀವ ಬಂದಂತೆ!
ಹೊಯ್ಯುವ ಜುಮುರು ಮಳೆಗೆ
ಅದುರುವ ಮರದ ಎಲೆಗಳು
ಮೋಡಗಳಿಗೆ ಸಂತಸದ ಸಂದೇಶ
ರವಾನಿಸಿವೆ.
ಧರೆಗಿಳಿದ ಮಳೆಗೆ ಬೆರಗಾದ ಕಪ್ಪೆಗಳು
ಕೂಗಿ ಕೂಗಿ ಕೂಗಿ
ಖುಷಿಗೊಂಡು ಬೆದೆಗೊಂಡಿವೆ.
ಹೊಳೆ ಹಳ್ಳಗಳಲ್ಲಿಯ ಮರಿಗಪ್ಪೆಗಳು
ಬಾಲ ಕಳಚಿ ಮೂಡಿ ಬಂದ
ರೆಕ್ಕೆಗಳ ಕಂಡು
ಛಂಗನೆ ಕುಣಿದು ಕುಪ್ಪಳಿಸಿವೆ.
ಭೂರಮೆಯ ಉಬ್ಬು ತಗ್ಗಿನ ಮೇಲೆ
ಹೊದೆದ ಮಂಜು ಮುಸುಕನು ಸರಿಸಿ
ತುಂಟ ಮೋಡ ಪುಳಕಗೊಂಡಿದ್ದಾನೆ ಮುಸುಕಿ.
ಹದ ಹಸಿರ ಮೈಯಿಂದ
ಹೊರಟ ಗಾಳಿ ಗಂಧ
ನಿನ್ನ ಮೈಯಗಂಧ ನೆನಪಿಸಿತು.
ಹೊಸ ಹರೆಯದ ಇಳೆಗೆ
ಈಗ ಗರಿ ಹುಟ್ಟುವ ಗಳಿಗೆ!!
********
ತುಂಟ ಮೋಡ , ಹರೆಯದ ಇಳೆ ಬೆರೆತರೆ ಕಾವ್ಯ