ಜನಪದ ಸಂಗಾತಿ
ಗೊರೂರು ಅನಂತರಾಜು
ಜನಪದ ಗಾಯಕ
ಉಮೇಶ್ ನಾಯಕ್
ವ್ಯಕ್ತಿ ಪರಿಚಯ-
ಜನಪದ ಕಲೆಗೆ ಅದರದೇ ಆದ ಗ್ರಾಮೀಣ ಬದುಕು ಬವಣೆ ಸುಖ ದುಃಖ ದುಮ್ಮಾನಗಳ ನೈಜ ಇತಿಹಾಸವಿದೆ. ಈ ಕಲೆಯನ್ನು ಉಳಿಸಿ, ಬೆಳೆಸುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಅದರ ರಕ್ಷಣೆಗೆ ನಿಂತವರು ಕೆಲವೇ ಕೆಲವರು. ಆಧುನಿಕ ಸಂಗೀತ, ಮನರಂಜನೆಯ ವಿವಿಧ ಆಯಾಮಗಳು ಪರಿಚಯ ಆದ ಮೇಲೆ ಜನಪದ ಕಲೆ ಮೂಲೆ ಗುಂಪಾಗಲು ಆರಂಭವಾಯಿತು. ಹಾಗೆಂದು ಸಂಪೂರ್ಣ ಅವನತಿ ಆಗಿಲ್ಲ ಎಂಬುದು ಸಂತಸದ ಸಂಗತಿ. ಹಾಗೆ ಅವನತಿ ಆಗದಂತೆ ತಡೆಯುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ಕೊಟ್ಟವರು ಜನಪದ ಕಲಾವಿದರು.
ಮೊದಲೆಲ್ಲಾ ಜನಪದ ಕಲಾವಿದರಿಗೆ ಗೌರವ ಇತ್ತು. ಆದರೆ, ಇಂದು ಜನಪದ ಕಲಾವಿದರು ಜೀವನ ಸಾಗಿಸುವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ಆದರೂ ಧೃತಿಗೆಡದೆ ಜನಪದ ಕಲೆ ಉಳಿಸಲು ಮುಂದಾಗಿರುವ ಕಲಾವಿದರಲ್ಲಿ ದಾವಣಗೆರೆ ತಾಲ್ಲೂಕು ಚಿನ್ನಸಮುದ್ರದ ಉಮೇಶ ನಾಯ್ಕ ಗಮನ ಸೆಳೆದಿರುವರು.
ಸಣ್ಣ ವಯಸ್ಸಿನಲ್ಲಿ ಜನಪದ ಗಾಯನ ಆರಂಭಿಸಿ ಕಂಚಿನ ಕಂಠ ಸಿರಿಯಲ್ಲಿ ಇಂದು ರಾಜ್ಯದ ಮೂಲೆ ಮೂಲೆಯಲ್ಲಿಯೂ ತಮ್ಮ ಜನಪದ ಗಾಯನದ ಮೂಲಕ ಹೆಸರು ಮಾಡಿದ್ದಾರೆ. ಕಲೆ ಉಳಿಸಿ ಬೆಳೆಸುವ ಇವರ ಸಾರ್ಥಕ ಕೆಲಸವನ್ನು ಕೆಲವರು ಮೆಚ್ಚಿ ಪ್ರೋತ್ಸಾಹಿಸಿದ್ದಾರೆ.
ಉಮೇಶ್ ಹುಟ್ಟಿದ್ದು ಜೂನ್ 12, 1982ರಂದು. 10ನೇ ತರಗತಿ ತನಕ ಮಾತ್ರ ಓದಿರುವ ಉಮೇಶ್ ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುವ ಜೊತೆಗೆ ಜನಪದ ಗಾಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅಲ್ಲಿ ಸಂತೃಪ್ತಿ ಕಂಡುಕೊಂಡಿರುವರು.
ಇವರ ಜನಪದ ಗಾಯನಕ್ಕೆ ತಲೆದೂಗಿದ ಕಲಾಭಿಮಾನಿಗಳು ಇವರನ್ನು ಗಾನ ಗಾರುಡಿಗ ಎಂಬ ಬಿರುದು ನೀಡಿ ಅಭಿನಂದಿಸಿದ್ದಾರೆ. ಇವರಿಗೆ ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿ ಪ್ರಶಸ್ತಿ ಬಿರುದುಗಳನ್ನು ನೀಡಿವೆ. ಇವರ ಕಲಾ ಸೇವೆಯನ್ನು ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಗುರುತಿಸಿ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿವೆ. ವೃತ್ತಿಪರ ಗಾಯಕರಾಗಿ ಕಳೆದ 25 ವರ್ಷಗಳಿಂದ ಕಲಾಸೇವೆಯಲ್ಲಿ ಕ್ರಿಯಾಶೀಲರು. ಬಂಜಾರ ಭಾಷಾ ಅಕಾಡೆಮಿಯ ಮಾಜಿ ಸದಸ್ಯರು. ಊರಿನಲ್ಲಿ ಯಾವುದೇ ಕಾಯ೯ಕ್ರಮ ಅದು ಶಾಲೆಯ ಕಾಯ೯ಕ್ರಮ ಇರಲಿ, ಗಣೇಶೋತ್ಸವ, ಸೇವಾ ಲಾಲ ಜಯಂತಿ ಮೊದಲಾಗಿ ಕಾಯ೯ಕ್ರಮ ಗಳು ನಡೆದರೆ ಇವರಿಗೆ ಕರೆ ಬರುವುದು ಪಕ್ಕ. ಅಕ್ಕ ಪಕ್ಕದ ಊರುಗಳು ಅಷ್ಟೇ ಅಲ್ಲಾ ದಾವಣಗೆರೆ ಜಿಲ್ಲೆಯ ಮಠಗಳು, ಕನ್ನಡ ಪರ ಸಂಘಟನೆಗಳು ಇವರಿಗೆ ವೇದಿಕೆಯಲ್ಲಿ ಹಾಡುಗಾರಿಕೆಗೆ ಅವಕಾಶ ನೀಡುತ್ತಾ ಬಂದಿರುವುದನ್ನು ನೆನೆಸಿಕೊಂಡರು. ಇತ್ತೀಚೆಗೆ ಕನಾ೯ಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ ಸಮಾರಂಭದಲ್ಲಿ ಇವರ ಹಾಡುಗಾರಿಕೆ ಆಲಿಸಿದೆ. ಆ ಶಿವ ಉಮೇಶರಿಗೆ ತಕ್ಕ ಮಟ್ಟಿಗೆ ಉತ್ತಮ ಕಂಠಸಿರಿ ಕೊಟ್ಟಿದ್ದಾನೆ. ಸಾರ್, ನಮಗೆ ಬಡತನ ಕೊಟ್ಟ ದೇವರು ಉತ್ತಮ ಕಂಠದಾನ ಮಾಡಿದ್ದಾನೆ. ಶಿವನಿಗೆ ಸಪ್ರೇಮ ಪ್ರಣಾಮಗಳು. ಕೆಲವು ರಾಜಕೀಯ ನಾಯಕರು ನನ್ನ ಹಾಡುಗಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರಿಗೂ ಅನಂತ ಕೋಟಿ ನಮನಗಳು. ನನಗೆ ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿಲ್ಲ. ಈ ದಿಶೆಯಲ್ಲಿ ನಿಮ್ಮ ಬರಹ ನನಗೆ ಸಹಕಾರಿಯಾಗಬೇಕೆಂದು ಒಂದಿಷ್ಟು ಮಾಹಿತಿ ಹಂಚಿಕೊಂಡರು. ಹಾಂ ಸಾರ್, ಒಂದು ನಿಮಿಷ 2024ನೇ ಸಾಲಿನ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಯನ್ನು ಶ್ರೀ ಕನಕ ಆರೋಗ್ಯ ಇಲಾಖೆ ನೌಕರರ ಸಂಘವು ಕೊಡಮಾಡಿದೆ ಎಂದು ಪೇಪರ್ ವರದಿ ಕಳುಹಿಸಿದರು. ಜೊತೆಗೆ ಇವರ ಜನಪದ ಸೇವೆಗೆ ಶ್ರೀ ವಾಲ್ಮೀಕಿ ಸಮಾಜ, ದಾವಣಗೆರೆ ವತಿಯಿಂದ 2024-25ನೇ ಸಾಲಿನ ರಾಜ್ಯ ಮಟ್ಟದ ವಾಲ್ಮೀಕಿ ಶ್ರೀ ಪ್ರಶಸ್ತಿಯೂ ಹುಡುಕಿ ಬಂದಿದೆ. ಸನ್ಮಾನ ಪತ್ರ ಕೂಡ ಶೇರ್ ಮಾಡಿದರು. ಅಭಿನಂದನೆಗಳು ಉಮೇಶ್ ನಿಮ್ಮ ಜಾನಪದ ಗಾಯನ ಮುಂದುವರಿಯಲಿ. ಕಲೆ ಉಳಿದು ಬೆಳೆಯಲಿ.
———————————————-
ಗೊರೂರು ಆನಂತರಾಜು