‘ಬದುಕು ಕಟ್ಟಿಕೊಂಡ ರೈಲ್ವೆ ವ್ಯಾಪಾರಿಗಳು’ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಬದುಕು ಕಟ್ಟಿಕೊಂಡ ರೈಲ್ವೆ ವ್ಯಾಪಾರಿಗಳು…

ಚಾ ಚಾ…ಗರಮ್ ಗರಮ್ ಚಾ ಚಾ.. ಕಾಫಿ.. ಕಾಫಿ…

  ಇಡ್ಲಿ ವಡಾ ಇಡ್ಲಿ ವಡಾ… ಬಿಸಿ ಬಿಸಿ ಪಲಾವ್ ..ಅಂಡಾ ಬಿರಿಯಾನಿ.. ಖಾವೋ ಅಂಡಾ
 ವಾಟರ್…ವಾಟರ್…

ಹೀಗೆ… ರೈಲ್ವೆ ಪ್ರಯಾಣದಲ್ಲಿ ಅನೇಕ ಇಂತಹ ಘೋಷಣೆಗಳನ್ನು ಕೇಳುತ್ತೇವೆ. ಇವು ಘೋಷಣೆಗಳಲ್ಲ..!  ಬದುಕು ಕಟ್ಟಿಕೊಳ್ಳುವುದಕ್ಕಾಗಿ ಕಂಡುಕೊಂಡ ದಾರಿಗಳು..!!

 ಹೌದು,

ನಾವುಗಳು ಕುಟುಂಬದ ಮಡದಿ, ಮಕ್ಕಳು, ಸಂಬಂಧಿಕರನ್ನು  ಸಲಹುವ ಸಲುವಾಗಿ ಹತ್ತು ಹಲವಾರು ಉದ್ಯೋಗವನ್ನು ಅರಸಿ ಹೋಗುತ್ತೇವೆ.  ಕೆಲವರು ಚೆನ್ನಾಗಿ ಓದಿ ನೌಕರಿ ಪಡೆದರೆ ಇನ್ನೂ ಕೆಲವರು ಕೃಷಿಕರಾಗಿಯೋ, ಕೃಷಿ ಕಾರ್ಮಿಕರಾಗಿಯೂ, ಕೂಲಿ ಆಳಾಗಿಯೋ  ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳುತ್ತಾರೆ.

ಇಂತಹ ಬದುಕಿನ ದಾರಿ ಕಂಡುಕೊಂಡವರಲ್ಲಿ  ವಿಶೇಷವಾಗಿ ರೈಲ್ವೆ ಪಯಣದಲ್ಲಿ ಬದುಕನ್ನು ಕಟ್ಟಿಕೊಳ್ಳುವುದಕ್ಕಾಗಿ ಇಂಥ ಅನೇಕ ದುಡಿಯುವ, ಶ್ರಮಿಕ ವರ್ಗವನ್ನು ನಾವು ಕಾಣುತ್ತೇವೆ.  ಹಸಿದವರ ಹೊಟ್ಟೆಯನ್ನು ತುಂಬಿಸಲು, ದಾಹಗೊಂಡ ಮನಸ್ಸನ್ನು ತಣಿಸಲು ಶುದ್ಧ ಕುಡಿಯುವ ನೀರನ್ನು ಮಾರಲು, ಪಯಣ ಹಾಗೆಯೇ ಮುಂದುವರಿಯುತ್ತಾ, ಸಮಯ ಕಳೆಯಲು ತಿನಿಸನ್ನು ಪಯಣಿಕರು ಕೊಂಡುಕೊಂಡು ತಿನ್ನುವಾಗ ಇವರ ಹೊಟ್ಟೆಯೂ ತುಂಬುತ್ತದೆ.

ಮೊನ್ನೆ ರೈಲ್ವೆ ಪ್ರವಾಸದಲ್ಲಿರುವಾಗ ಇಂತಹ ಅನೇಕ ವ್ಯಕ್ತಿಗಳನ್ನು ಕಂಡೆನು. ಒಂದು ರೈಲು ಇಷ್ಟೆಲ್ಲಾ ವ್ಯಕ್ತಿಗಳಿಗೆ ಅನ್ನ ಹಾಕುತ್ತದೆ ಎನ್ನುವುದು ನೆನೆಸಿಕೊಂಡಾಗ,  ನನಗಾಗ ‘ರೈಲು ಒಂದು ಚಿಕ್ಕ ಜಗತ್ತಿನಂತೆ’ ಕಂಡಿತು.

ಕೆಲವರು ಟಿಕೆಟ್ ಇಲ್ಲದೆ ಪಯಣಿಸುವ ಅಸಾಹಯಕರು ಇರುತ್ತಾರೆ. ಎಷ್ಟೋ ಸಲ ನಾವು ಕೂಡ ಬಾಲ್ಯದಲ್ಲಿದ್ದಾಗ ಹುಲಿಗಿ – ಮುನಿರಾಬಾದ್ ಕೆಲಸಕ್ಕಾಗಿ ಟಿಕೆಟ್ ಇಲ್ಲದೆ ಪಯಣವನ್ನು ಮಾಡಿದ್ದು ಇನ್ನೂ ನೆನಪು ಹಾಗೇ ಉಳಿದಿದೆ.  ಅಷ್ಟೇ ಅಲ್ಲದೆ ಪ್ರಯಾಣಿಕರಿಗೆ ಕಾಡುವ ಭಿಕ್ಷಕರು, ತೃತೀಯ ಲಿಂಗಿಗಳು, ಇವರ ನಡುವೆ ತಿನಿಸುಗಳನ್ನು ಮಾರುವ, ಊಟವನ್ನು ಮಾರುವ, ನೀರನ್ನು ಮಾರುವ…ಹಲವು ವ್ಯಕ್ತಿಗಳ ಆಗಮನವಾಗುತ್ತದೆ.

ಬೋಗಿ (ಡಬ್ಬಿ) ಯ ಅಕ್ಕಪಕ್ಕ ಕುಳಿತ ಪ್ರಯಾಣಿಕರು ಒಬ್ಬರು ಏನನ್ನಾದರೂ ಕೊಂಡರೆ ಇನ್ನೊಬ್ಬರು ಕೊಂಡುಕೊಳ್ಳಬೇಕೆನ್ನುವ ಮನಸ್ಸು ಮಾಡುತ್ತಾರೆ. ಹೀಗೆ ಒಬ್ಬರಿಗೊಬ್ಬರು ಕಣ್ಣು ಸನ್ನೆಯಿಂದಲೋ, ಮನಸ್ಸಿನ ಮಾತಿನಿಂದಲೋ  ಅಂತೂ ವಸ್ತುಗಳನ್ನು ಕೊಳ್ಳುತ್ತಾರೆ. ಮನಸ್ಸೋ ಇಚ್ಛೆ ಅವುಗಳನ್ನು ಸ್ವೀಕರಿಸುತ್ತಾರೆ.  ಹಸಿದ ಹೊಟ್ಟೆ ತುಂಬಿಕೊಳ್ಳಲು ಇವರು ವಸ್ತುಗಳನ್ನು ಖರೀದಿಸಿದರೆ,  ಮಾರಲು ತಂದ ತಿಂಡಿ ತಿನಿಸುಗಳನ್ನು ಇವರಿಗೆ ನೀಡಿ, ವ್ಯಾಪಾರ ಮಾಡಿ, ಅವರು ತಮ್ಮ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಲುತ್ತಾರೆ..!

  ಈ  ದಾರಿಯಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ…”ಇಲ್ಲಾ ಸ್ವಾಮಿ ಮನೆಯಲ್ಲಿ ಖಾಲಿ ಕುಂದ್ರಕ್ಕಾಗಂಗಿಲ್ಲ.  ಹೋಲಕ ಹೋಗಿ ದುಡಿಯುವಷ್ಟು ಶಕ್ತಿಯು ಇಲ್ಲ. ಹಂಗಾಗಿ ಇಲ್ಲೇ ಶೇಂಗಾ ಖರೀದಿ ಮಾಡಿ ಅವನ್ನು ಉರ್ಕೊಂಡು ಮಾರ್ತೀನಿ…” ಎಂದು ಲಂಬಾಣಿ ಜನಾಂಗದ ಸೀತಮ್ಮ ತನ್ನ ನೋವನ್ನು ತೋಡಿಕೊಳ್ಳುತ್ತಾಳೆ.
ಅಂಡಾ ಬಿರಿಯಾನಿ ಎಂದು ಮಾರುತಿದ್ದ ರಾಜೇಶ್, “ನನಗೆ ಉದ್ಯೋಗವೇ ಇದು ಸರ್. ಎಸ್ ಎಸ್ ಎಲ್ ಸಿ ಫೇಲ್ ಆಗಿ ಮತ್ತೇನ್ ಕೆಲಸ ಮಾಡೋಣ ಹೇಳಿ…” ಎನ್ನುತ್ತಾನೆ.  ಹೀಗೆ ಪ್ರತಿಯೊಬ್ಬರದು ಒಂದೊಂದು ಕಥೆ. ಆ ಕಥೆಯ ಹಿಂದೆ ಅವರ ಬದುಕಿನ ಜೊತೆ  ನೋವಿದೆ. ಸಂಕಟಗಳಿವೆ. ಕಣ್ಣೀರಿನ ತಾಪವಿದೆ. ಬದುಕು ಕಟ್ಟಿಕೊಳ್ಳಬೇಕು ಇದೇ ಅವರ ಭವಿಷ್ಯ.

ಒಂದು ಸ್ಟೇಷನ್ ನಲ್ಲಿ ಒಂದು ಬೋಗಿ(ಡಬ್ಬಿ) ಯಲ್ಲಿ ಹತ್ತಿಕೊಂಡು ಎಲ್ಲರಿಗೂ ತನ್ನ ವಸ್ತುಗಳನ್ನು ಮಾರಿದರೆ, ಇನ್ನೊಂದು ಸ್ಟೇಷನ್ ಬರುವುದರೊಳಗೆ ಆ ಬೋಗಿ(ಡಬ್ಬಿ) ಯ ವ್ಯಾಪಾರ ಮುಗಿಸಿ, ಮತ್ತೊಂದು ಬೋಗಿ(ಡಬ್ಬಿ) ಗೆ ಹೋಗಲೇಬೇಕು. ಅಲ್ಲಿಯೂ ವ್ಯಾಪಾರ ಮಾಡಬೇಕು ನಂತರ ಕ್ರಾಸಿಂಗ್ ಆಗುವ ಇನ್ನೊಂದು ರೈಲ್ವೈಗೆ ಮತ್ತೆ ವ್ಯಾಪಾರ ಮಾಡುತ್ತಾ ಮಾಡುತ್ತಾ..ತನ್ನ ಮೂಲ ಸ್ಥಳವನ್ನು ಸೇರಬೇಕು.  

 “ಈ ರೀತಿ ವ್ಯಾಪಾರ ಮಾಡುವಾಗ ಬಹುದೊಡ್ಡ ಲಾಭವೇನು ಆಗುವುದಿಲ್ಲ. ನಮಗೆ  ಆಃಅರ ಸಿದ್ದಮಾಡಿಕೊಂಡು ಬಂದ ಮಾಲೀಕರಿಗೆ ಇಂತಿಷ್ಟು ಹಣವನ್ನು ನೀಡಬೇಕು. ಸ್ಟೇಷನ್ ಒಳಗಿನ  ಕೆಲವು ವ್ಯಕ್ತಿಗಳಿಗೆ ಕೈಬೆಚ್ಚಗೆ ಮಾಡಬೇಕು. ರೈಲ್ವೆ ಇಲಾಖೆಯಿಂದ (ಸರ್ಕಾರದಿಂದ) ನಿಗದಿತ ವಾಗಿ ಅನುಮತಿಯನ್ನು ಪಡೆಯಬೇಕು. ಇವೆಲ್ಲವೂ ಆದ ಮೇಲೆ ಸರಿಯಾಗಿ ವ್ಯಾಪಾರವಾದರೆ ನಮ್ಮ ಅದೃಷ್ಟ ಇಲ್ಲವಾದರೆ ದುರಾದೃಷ್ಟ ಹಾಗೂ ಹೀಗೂ ನಮ್ಮ ಬದುಕನ್ನು ರೈಲ್ವೆಯಲ್ಲಿ ಕಳೆದಿದ್ದೇವೆ..” ಎಂದು
 ಹದಿನೈದು ವರ್ಷಗಳಿಂದ ವ್ಯಾಪಾರ ಮಾಡುವ ರಫೀ ಎನ್ನುತ್ತಾರೆ.

 ಅದೇನೇ ಇರಲಿ,
ಬದುಕು ಒಬ್ಬಬ್ಬರಿಗೊಂದು ರೀತಿ. ಆ ರೀತಿಯಲ್ಲಿಯೇ ನಾವು ಯಾರಿಗೂ ನೋವಾಗದಂತೆ ಬದುಕಬೇಕು. ಇನ್ನೊಬ್ಬರ ಬದುಕಿನ ಸಂಕಟಕ್ಕೆ ನಮ್ಮ ಬದುಕು ಕಾರಣವಾಗಬಾರದು. ಮನುಷ್ಯತ್ವ ನಮ್ಮೆಲ್ಲರ ಹೆಜ್ಜೆ ಗುರುತಾಗಲಿ…ಮುಂದಿನ ಸ್ಟೇಷನ್ ಬಂತು…
ಒಂದು ಪಯಣ ಹಲವು ಅನುಭವ ನೀಡಿತು. ಯಾಕೋ ಮತ್ತೆ ರೈಲ್ವೆ ವ್ಯಾಪಾರಿಗಳು ಸದಾ ನೆನಪಾಗುತ್ತಾರೆ.


2 thoughts on “‘ಬದುಕು ಕಟ್ಟಿಕೊಂಡ ರೈಲ್ವೆ ವ್ಯಾಪಾರಿಗಳು’ರಮೇಶ ಸಿ ಬನ್ನಿಕೊಪ್ಪ ಹಲಗೇರಿ

  1. ಬದುಕಿಗೆ ಹತ್ತಿರವೆನಿಸುವ ಬರಹ ಗುರುವೇ…..ಅದ್ಭುತವಾಗಿದೆ ನಿಮ್ಮ ವಾಸ್ತವಿಕ ಜೋಡಣೆ……

Leave a Reply

Back To Top