‘ತಿರುವನಂತಪುರ ಒಂದು ಟಿಪ್ಪಣಿ’ಒಂದು ನವಿರು ಅನುಭವ ಎಚ್.ಗೋಪಾಲಕೃಷ್ಣ ಅವರಿಂದ

‘ತಿರುವನಂತಪುರ ಒಂದು ಟಿಪ್ಪಣಿ’ಒಂದು ನವಿರು ಅನುಭವ ಎಚ್.ಗೋಪಾಲಕೃಷ್ಣ ಅವರಿಂದ

ಜೂನ್ ಒಂಬತ್ತ ರಂದು ಕೋಚುವೇಳಿ ರೈಲ್ವೇ ಸ್ಟೇಷನ್ ಗೆ ಬಂದು ಇಳಿದೆವು.ಈ ಕೋಚುವೇಳಿ ತಿರುವನಂತಪುರದ ಉತ್ತರದ ಸ್ಟೇಶನ್. ಈಗ ಅದನ್ನು ಉನ್ನ ತೀಕರಿಸುವ ಕಾರ್ಯ ಆರಂಭ ಆಗಿದೆ. ಮುಂದೆ ಈ ರೈಲ್ವೆ ಸ್ಟೇಶನ್ ತಿರುವನಂತಪುರ ನಾರ್ತ್ ಎಂದು ಬದಲಾಗಲಿದೆ. ಇದೂ ಸಹ ತಿರುವನಂತಪುರದ ಸರಹದ್ದಿನಲ್ಲಿ ಇದೆ ಎಂದು ಖಚಿತ ಪಡಿಸಿಕೊಳ್ಳಲು ಕೊಂಚ ಹೆಣಗಾಡಿದೆವು. ಕಾರಣ ಇದು ನಗರದ ಒಂದು ಭಾಗ, ನಗರದ ಮಧ್ಯದಿಂದ ಹತ್ತೇ ಕೀ ಮೀ ದೂರ ಇದೆ ಎಂದು ಎಲ್ಲೂ ಹೇಳಿಲ್ಲದಿರುವುದು. ಇದು ರೈಲಿನವರು ನಮ್ಮ ಮೇಲೆ ಮಾಡುವ ಪ್ರಾಕ್ಟಿಕಲ್ ಜೋಕು.ಯಶವಂತಪುರ, ಕೃಷ್ಣರಾಜಪುರ, ಬೈಯಪ್ಪನ ಹಳ್ಳಿ, ಯಲಹಂಕ ಮುಂತಾದ ರೈಲ್ವೆ ಸ್ಟೇಶನ್ ಗಳು ಬೆಂಗಳೂರಿಗೆ ಸೇರಿದವು ಎಂದು ಯಾವ ರೈಲ್ವೆ ಬುಕಿಂಗ್ ಆಪ್ ಗಳೂ ತಿಳಿಸದು. ಮೊದಲ ಬಾರಿಗೆ ನಗರಕ್ಕೆ ರೈಲಿನ ಮೂಲಕ ಬರುವವರು ಪೆಚ್ಚು ಹೊಡೆದಿರುತ್ತಾರೆ, ಈ ಕಾರಣಕ್ಕೆ. ಯಲಹಂಕ, ಕೆ ಆರ್ ಪುರ, ಬೈಯಪ್ಪಹಳ್ಳಿ ನಿಲ್ದಾಣ ಅಂದರೆ ಯಾರಿಗೆ ಗೊತ್ತಾಗುತ್ತದೆ? ರೈಲ್ವೆ ಬೋರ್ಡ್ ನವರೂ ಈಬಗ್ಗೆ ಚಿಂತಿಸಿ ನಗರಕ್ಕೆ ಹತ್ತಿರದ ಸ್ಟೇಶನ್ ಗಳಿಗೆ ಇವು ನಗರ ಸಮೀಪ ಎಂದೋ ಬೆಂಗಳೂರಿನ ಭಾಗ ಎಂದೋ ಸೇರಿಸಬೇಕು. ನಾನು ಕೆಲ ತಿಂಗಳ ಹಿಂದೆ ಅರಸೀಕೆರೆ ಇಂದ ಬೆಂಗಳೂರಿಗೆ ಬರುವಾಗ ಬೆಂಗಳೂರಿಗೆ ಟಿಕೆಟ್ ಅಂದೆ. ಕೌಂಟರ್ ನಲ್ಲಿ ಇದ್ದವರು ಕೊಟ್ಟ ಟಿಕೆಟ್ ಬೆಲೆ ಬೆಳಿಗ್ಗೆ ಬಂದಾಗ ಇದ್ದದ್ದಕಿಂತಲೂ ಐದು ರೂ ಜಾಸ್ತಿ ಇತ್ತು. ಬೆಳಿಗ್ಗೆ ಬಂದಾಗ ಇಷ್ಟು ಕೊಟ್ಟಿದ್ದೆ, ಮಧ್ಯಾಹ್ನ ರೇಟ್ ಏರಿಸ್ತಾ ಗರ್ಮೆಂ ಟು ಅಂದೆ. ಅಲ್ಲಿ ಕನ್ನಡ ಬರೋರು ಕೂತಿದ್ದರು.ಬೆಳಿಗ್ಗೆ ನೀವು ಯಶವಂತ ಪುರ ಎಂದ ಬಂದಿರಬೇಕು ಅಂದರು ಕೌಂಟರಿನವರು. ಅವತ್ತಿಂದ ಯಶವಂತಪುರ ಟಿಕೆಟ್ ಕೊಡಿ.. ಅಂತ ಕೇಳಬೇಕು ಅಂತ ಅಂದುಕೊಂಡೆ. ಇದು ಒಂದು ರೀತಿ ಅಮಾಯಕರ ದಡ್ಡತನ ದ exploitation!


ಕೋಚುವೇಳಿ ತಿರುವನಂತಪುರದ ಒಂದು ಭಾಗ ಅಂತ ಗೊತ್ತಾಯಿತು ತಾನೇ. ನಾವು ವಾಸಕ್ಕೆ ಎಂದು ಇಳಿದುಕೊಂಡಿದ್ದು ಖಾಜಾಕುತ್ತಮ್ ಎನ್ನುವ ಸ್ಥಳ, ಇದನ್ನು ಮುಂದೆ ನಮ್ಮ ಮನೆ ಎಂದೇ ಕರೆಯುವೆ.ಇದನ್ನು ಇಂಗ್ಲಿಷಿನಲ್ಲಿ Kazhakoottam ಎಂದು ಬರೆದು ಮಲಯಾಳದಲ್ಲಿ  ಹೇಳಬೇಕಾದರೆ ಅದು ಕಲ್ಜ ಕುತ್ತಮ್ ಎಂದೇನೋ ಆಗುತ್ತೆ. ನಾವು ಹೇಗೆ ಹೇಳಿದರೂ ಇಲ್ಲಿನ ಆಟೋ ಡ್ರೈವರ್ ಗಳಿಗೆ ಅರ್ಥ ಆಗುದಿಲ್ಲ ಅಂತ ಮೊದಲನೇ ಸಾರಿಗೆ ಅರ್ಥ ಆಯಿತಾ. ಅವತ್ತಿಂದ ಈ ಹೆಸರನ್ನ capital ಅಕ್ಷರದಲ್ಲಿ ದಪ್ಪಗೆ ಬರೆದು ಅದನ್ನ ನಮ್ಮ ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದೆವು.ನಮ್ಮ ಮನೆಯಿಂದ KIMS ಆಸ್ಪತ್ರಗೆ ಹತ್ತು ಕಿಮೀ. ಕ್ಯಾಬ್, ಆಟೋ ಇವುಗಳ ಮೂಲಕವೇ ನಮ್ಮ ಸಂಚಾರ, ಕಾರಣ ಅಲ್ಲಿನ ಬಿಎಂಟಿಸಿ ಸರ್ವಿಸ್ ನಮಗೆ ಗೊತ್ತಿಲ್ಲದಿದ್ದದ್ದು ಮತ್ತು ಮನೆಯಿಂದ ಮುಖ್ಯ ರಸ್ತೆಗೆ ಇದ್ದ ಎರಡೂವರೆ ಕಿಮೀ ದೂರ.KIMS ಅಂದರೆ ಕೇರಳ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂತ.ಬೆಂಗಳೂರಲ್ಲೂ ಒಂದು KIMS ಇದ್ದು ಅದು ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್. ಅದೇರೀತಿ ಕಾಸರಗೋಡಿನಲ್ಲಿ ಸಹ ಒಂದು KIMS ಇದ್ದು ಅದು ಕಾಸರ ಗೋಡ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂತೆ.KMC ಈಗ KIMS ಆಗಿದೆಯಂತೆ. ಬರೀ ಕಂಫ್ಯೂಸಿಂಗ್ ಅಲ್ಲವಾ, ನಮಗೂ ಹಾಗೇ ಆಗಿದ್ದು.
KIMS ಗೆ ಯಾಕೆ ಬಂದೆವು ಅಂದರೆ ಅದು ಒಂದು ಕತೆ.


ನನ್ನ ಭಾವಮೈದ ಮತ್ತು ಅವರ ಸಂಸಾರ ಕಾರಿನಲ್ಲಿ ಬರುತ್ತಿರುವಾಗ ಒನ್ ವೆ ಯಲ್ಲಿ ರಸ್ತೆ ಮಧ್ಯದ ಡಿವೈಡರ್ ದಾಟಿ ಹಾರಿ ಬಂದ ಒಂದು ಕಾರು ಇವರ ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಅಂದರೆ ಮೂರೂ ಜನ ತೀವ್ರ ಅಪಘಾತಕ್ಕೆ ಈಡಾಗಿ KIMS ಆಸ್ಪತ್ರೆಗೆ ಸೇರಿದ್ದು. ಸುದ್ದಿ ತಿಳಿದ ಕೂಡಲೇ ನಾವು ರೈಲು ಹಿಡಿದು ಅಲ್ಲಿಗೆ ಹೋಗಿದ್ದು. ಅಲ್ಲಿನ ವಾಸ್ತವ್ಯದ ಪುಟ್ಟ ಅನುಭವವೇ ಈ ಟಿಪ್ಪಣಿ.
ಆಸ್ಪತ್ರೆಗೆ ಹೋಗಲು ಮೊದಲ ದಿನ ಉಬರ್ ಬುಕ್ ಮಾಡಿದೆ. ಕೋರಿಕೆ ಸಲ್ಲಿಸಿದ ಕೂಡಲೇ ಬುಕ್ ಆದರೂ ವಾಹನ ಮೂರು ಕಿಮೀ ದೂರ ಇತ್ತು. ಕ್ಯಾನ್ಸಲ್ ಮಾಡ್ತಾನೆ ಬರೋಲ್ಲ ಅಂದುಕೊಂಡರೆ ಕ್ಯಾನ್ಸಲ್ ಆಗಲಿಲ್ಲ. ಮನೆ ಹುಡುಕಿ ಬಂದ. ಇನ್ನೂರ ನಲವತ್ತೆರಡು ರೂಪಾಯಿ ಮೀಟರ್ ತೋರಿಸಿತು. ಇನ್ನೂರ ಐವತ್ತು ಕೊಟ್ಟೆ. ಜೇಬಿಂದ ಮಿಕ್ಕ ಚಿಲ್ಲರೆ ಕೊಟ್ಟ! ಕೂಡಲೇ ನಮ್ಮ ಬೆಂಗಳೂರು ನೆನಪಿಗೆ ಬಂತು. ಉಬರ್ ಬುಕಿಂಗ್ ಕ್ಯಾನ್ಸಲ್ ಆಗೋದು ಕಾಮನ್ ಅನುಭವ ಹಾಗೂ ಚಿಲ್ರೆ ಇಲ್ಲ ಅಂತ ಕೈ ಆಡಿಸಿ ಗಾಡಿ ಓಡಿಸೋದೂ ನೆಪ್ಪಿಗೆ ಬಂತು. ಓಹ್ ತಿರುವನಂತಪುರ ಎಷ್ಟು ಚೆನ್ನ ಅಂದುಕೊಂಡೆ. ಮೂರು ನಾಲ್ಕು ದಿವಸ ಇದೇ ರೀತಿ ಮುಂದುವರಿ ಯಿತು. ಒಂದುಸಲ ಮೋಟಾರ್ ಸೈಕಲ್ ಹಿಂದೆ ಕೂತು ಆಸ್ಪತ್ರೆಗೆ ಹೋದೆ. ಎಷ್ಟು ದೂರ ಅಂತ ನೋಡಿದರೆ ಒಂಬತ್ತೂವರೆ ಕಿಮೀ. ಅಷ್ಟು ದೂರಕ್ಕೆ ಇನ್ನುರನಲವತ್ತು ಅಂದರೆ ಕಿಮೀಗೆ ಇಪ್ಪತ್ತೈದು…! ಭಲೇ ಸರ್ಕಾರವೇ,ಸರ್ವೇಜನಾ ಸುಖೀ ನಾ ಅನಿಸಿತು. ಕ್ಯಾಬ್ ನಲ್ಲಿ ಹೋದಾಗ ಮುನ್ನುರರವತ್ತು ರಿಂದ ಮುನ್ನುರೆಂಬತ್ತರವರೆಗೆ ಆಗ್ತಾ ಇತ್ತು. ರಶ್ ಇದೆ ಅಂತ ಸರ್ಜ್ ರೇಟು ಇಲ್ಲ, ಪೀಕ್ ಅವರ್ ಅಂತ ರೇಟು ಹೆಚ್ಚಿಲ್ಲ. ಉಬರ್ ನನ್ಮಕ್ಳು ಬೆಂಗಳೂರಿಗೆ ಮೋಸ ಮಾಡ್ತಿದ್ದಾರೆ ಅನ್ನಿಸ್ತು.
ಆರನೇ ದಿವಸ ಆಸ್ಪತ್ರೆಯಿಂದ ಆಚೆ ಬಂದೆ. ಇಷ್ಟು ಹೊತ್ತಿಗೆ ಕಝಕುತ್ತಮ್ ಅನ್ನು ಮಲಯಾಲದಲ್ಲಿ ಹೇಳಲು ಕಲಿತಿದ್ದೆ. ಮನೆಗೆ ದಾರಿ ಸಹ ಅರಿವಿತ್ತು. ಅರಿಯೋ ಅಂದರೆ ಅರ್ಥ ಆಯ್ತಾ ಅಂತ ಮಲ ಯಾಳ ದಲ್ಲಿ. ಈ ರೀತಿ ಎರಡು ಮೂರು ಪದ ಕಲಿತಿದ್ದೆ. ಇದು ನನ್ನ ಬಂಧುಗಳ ಅನುಭವ…
“ಆಚೆ ಬಂದನಾ ಆಸ್ಪತ್ರೆಯಿಂದ.. ಉಬರ್ ಬುಕ್ ಮಾಡಲು ಮೊಬೈಲ್ ಆಚೆ ತೆಗೆಯುವ ಮೊದಲೇ ಒಂದು ಖಾಲಿ ಆಟೋ ಎದುರು ಬಂತು ಯಾರನ್ನೋ ಆಸ್ಪತ್ರೆಗೆ ಬಿಟ್ಟು ಹೋಗ್ತಾ ಇದ್ದ. ಅದಕ್ಕೆ ಖಾಲಿ. ನಿಲ್ಲಿಸಿದೆ,ಕಝಕುತ್ತಮ್ ಬರ್ತೀರಾ ಅಂದೆ. ಅಲ್ಪಸಲ್ಪ ಇಂಗ್ಲಿಷ್ ಗೊತ್ತಿದ್ದೊನು. ಕುತ್ಕಲಿ ಅಂದ ಅವರ ಭಾಷೇಲಿ. ಕುತ್ಕಂಡೆ, ಮೀಟರ್ ಅಂದೆ, ಮೀಟರ್ ಹಾಕು ಅನ್ನುವ ಹಾಗೇ. ನಿಮ್ಮ ಏರೆಯ ತೊಂಬ ದೊರ ಅಲ್ಲಿಂದ ಗಿರಾಕಿ ಸಿಗಲ್ಲ ಅಂತ ರಾಗ ಎಳೆದ. ಸರಿ ಎಷ್ಟು ಕೊಡಲಿ ಅಂದೆ. ಇನ್ನುರಾ ಐವತ್ತು ಅಂದ. ಉಬರ್ ಗಿಂತ ಹತ್ತು ಜಾಸ್ತಿ,ಸರಿ ಅಂತಂದು ಈಗ ಮೀಟರ್ ಹಾಕು, ದುಡ್ಡು ಅಷ್ಟೇ ಕೊಡ್ತೀನಿ ಅಂದೆ. ಮೀಟರು ಹಾಕಿದ, ಮನೆ ಮುಂದೆ ಬಂದು ಇಳಿದು ಮೀಟರ್ ನೋಡಿದರೆ ನೂರಾ ಅರವತ್ಮುರು ರೂಪಾಯಿ ತೋರಿಸತಾ ಇದೆ!”
ಉಬರ್ ನನ್ಮಗ ನಮಗೆ ಹೇಗೆ ಬೋಳಿಸುತ್ತಾ ಇದ್ದಾನೆ ಅಂತ ಸಂಕಟ ಆಗಬೇಕೇ..
ಕೋಚುವೆಲಿ ಸ್ಟೇಶನ್ ಗೆ ನಂಟರನ್ನ ಬಿಡಬೇಕಿತ್ತು. ಆಟೋ ಮಾಡಿಕೊಂಡು ಹೋದೇವಾ ಬಿಟ್ಟೂ ಆಯ್ತಾ. ಅಲ್ಲಿಂದ ವರ್ಲ್ಡ್ ಮಾರ್ಕೆಟ್ ಗೆ ಬರಬೇಕು ಮುಕ್ಕಾಲು ಕಿಮೀ ದೂರ. ಈ ವೇಳೆಗೆ ನಾನು ಏರಿಯಾ ಸುತ್ತಿ ಅದೆಲ್ಲಿ ಇದೆಲ್ಲಿ ಅಂತ ತಿಳಿದಿದ್ದೆ. ವರ್ಲ್ಡ್ ಮಾರ್ಕೆಟ್ ಅಂದರೆ ಇಪ್ಪತ್ತು ಇಪ್ಪತ್ತೈದು ಅಥವಾ ಹೆಚ್ಚೆಂದರೆ ಐವತ್ತು ಅಂಗಡಿ ಇರೋ ಒಂದು ಸ್ಥಳ. ಅದರಲ್ಲಿ ತರಕಾರಿ ಅಂಗಡಿ. ಪ್ರಾವಿಷನ್ ಅಂಗಡಿಗಳು ಹೆಚ್ಚು. ಇದನ್ನು ಯಾಕಪ್ಪಾ ವರ್ಲ್ಡ್ ಮಾರ್ಕೆಟ್ ಅಂತ ಕರೀತಾರೆ ಅಂತ ಸೋಜಿಗ. ಮೂರು ಟೀಮ್ ಸೇರಿ ವರ್ಲ್ಡ್ ಕಪ್ ಕ್ರಿಕೆಟ್ ಆಡ್ತಾವಲ್ಲಾ ಅದು ನೆನಪಿಗೆ ಬಂತು.
ವರ್ಲ್ಡ್ ಮಾರ್ಕೆಟ್ ಅಂದೆ ಅಲ್ಲಿದ್ದ ಆಟೋ ದವನಿ ಗೆ. ಮೊಬೈಲ್ ನಲ್ಲಿ ಅವನು ಹೂತು ಹೋಗಿದ್ದ. ಇರು ಅಂತ ಸನ್ನೆ ಮಾಡಿ ಯಾರನ್ನೋ ಕೂಗಿದ. ಇವರನ್ನ ವರ್ಲ್ಡ್ ಮಾರ್ಕೆಟ್ ಬಿಡು ಅಂದ. ಹತ್ತಿ ಕೂತೆ ವ.. ಮೀಟರ್ ಅಂದೆ. ನೋ ಮೀಟರ್ ಫಿಫ್ಟಿ ಅಂದ ಮುಕ್ಕಾಲು ಕಿಮೀಗೆ ಐವತ್ತು! ಭೇಷ್ ಅನಿಸಿತು. ನಮ್ಮ ಬೆಂಗಳೂರು ಆಟೋ ಇರಲಿ,ತಿರುವನಂತಪುರ ಆಟೋ ಇರಲಿ ಎಲ್ಲರೂ ಒಂದೇ! ಈ ಪ್ರಸಂಗಕ್ಕೆ ಕಿರೀಟದ ಹಾಗೆ ಮತ್ತೊಂದು ಪ್ರಸಂಗ. ಕೇರಳದಲ್ಲಿ ಈ ಸಲ ಮಾನ್ ಸೂನು ತಡವಾಗಿ ಶುರು ಆಯ್ತಾ. ಬಂಧುಗಳ ಮಗಳು ಅಮೇರಿಕೆಯಿಂದ ಅಮ್ಮನನ್ನು ನೋಡಲು ಬಂದಿದ್ದಳು.”ಆಸ್ಪತ್ರೆಗೆ ಹೋಗಲು ಒಂದು ಕ್ಯಾಬ್ ಬುಕ್ ಮಾಡಿದೆ ಉಬರ್ ಮೂಲಕ. ಮುನ್ನೂರ ಅರವತತೈದು ತೋರಿಸಿತು. ಕ್ಯಾಬ್ ಬಂದ. ಒಳಗೆ ಕುತವಾ.. ಮಳೆ ಬರ್ತಿದೆ, ಓಡಿ ಸೋ ಟೈಮ್ ಹೆಚ್ಚಾಗುತ್ತೆ. ನಾನು ಅಲ್ಲಿವರೆಗೂ ಬರಬೇಕು, ವಾಪಸ್ ಗಿರಾಕಿ ಸಿಗಲ್ಲ ಅಂತ ಗೊಳಾಡಿ ಕೊಂಡು ಕಾಲು ದೂರ ಬಂದ. ಮಳೆ ಇನ್ನೂ ಹೆಚ್ಚಾಗಿತ್ತು. ಐನೂರು ಕೊಟ್ಟರೆ ಬರ್ತೀನಿ……”ಅಂದ. ಆಗಲಿ ಅಂತ ಒಪ್ಪಿದೆ…”ಅಂತ ವಿವರ ಹೇಳಿದಳು.
ಹೆಣ್ಣುಮಗು, ಕತೆ ಹೇಳಿ ಹೃದಯ ಕರಗಿಸಿದ ಅನ್ನಿಸ್ತು.
ಇಡೀ ಪ್ರಪಂಚದಲ್ಲಿ ನಮ್ಮ ಡ್ರೈವರ್ ಗಳು ತಮ್ಮ ವಿಶಿಷ್ಟತೆ ಅಂದರೆ ಐಡೆಂಟಿಟಿ ಕಾಪಾಡಿಕೊಂಡು ಬಂದಿದ್ದಾರೆ ಅಂತ ಹೆಮ್ಮೆ ಪಟ್ಟೆ!
ವರ್ಲ್ಡ್ ಮಾರ್ಕೆಟ್ ಅಂದೆನಲ್ಲ ಅಲ್ಲಿ ತರಕಾರಿ ಅಂಗಡಿ ಹೊಕ್ಕೆವು. ಬೆಂಗಳೂರಿಗಿಂತ ಮೂರು ನಾಲ್ಕು ಪಟ್ಟು ತರಕಾರಿ ರೇಟು! ಕಾಲು ಕಾಲು ಕೇಜಿ ತಗಂಡು ಬಿಲ್ ಮಾಡಿಸಬೇಕಾದರೆ ಅಲ್ಲೇ ಒಂದು ಪುಟ್ಟ ಬುಟ್ಟಿಯಲ್ಲಿ ಹೆಚ್ಚಿದ ಬೂದು ಕುಂಬಳಕಾಯಿ ಒಂದು ಪುಟ್ಟ ಹೊಳು, ಸೀ ಕುಂಬಳ ಒಂದು ಚಿಕ್ಕ ತುಂಡು,ಒಂದೂವರೆ ಕ್ಯಾರಟ್, ಒಂದು ಗೆಣಸು,ಸುವರ್ಣಗೆಡ್ಡೆ ಒಂದು ಪೀಸ್, ಪಡವಲ ಕಾಯಿ ಒಂದು ಹೋಳು… ಹೀಗೆ ತರಕಾರಿ ತುಂಬಿದ್ದರು. ಇದೇನು ಅಂದೆ. ಓಜಿಟಿಬಲ್ಸ್ ಅಂದಳು ಅಲ್ಲಿದ್ದ ಹೆಂಗಸು.ಓಜಿಟಿಬಲ್ಸ್ ಅಂದರೆ ವೆಜಿಟಬಲ್ಸ ಅಂತ .ಮಲಯಾಳಿಗಳು ಅ ಕಾರ   ಒ ಕಾರ ಮಾಡುತ್ತಾರೆ.ಕಾಫಿ ಕೊಫೀ, ಕಾಲೇಜು ಕೊಲೇಜು  , ಬಾಯ್ ಬೊಯ್, ಜಾಯ್ ಜೋಯ್, ಜಾರ್ ಜೋರ್…ಹೀಗೆ.ಒಂದು ಜೋಕು ಇದೆ ಇದರ ಬಗ್ಗೆ.ಪೋಲಿ ಜೋಕ್ ಬೇಡ ಪೋಲಿ ಅಲ್ಲದೇ ಇರೋ ಜೋಕು ಕೇಳಿ…. ಒಂದು ಮಲಯಾಳಿ ಹೆಂಗಸು ತಮಿಳು ಹೆಂಗಸಿನ ಜತೆ ಮಾತು ಆಡುತ್ತಿತ್ತು. ತಮಿಳು ಹೆಂಗಸು ಅದರ ಗಂಡ  ಮ್ಯಾನೇಜರ್ ಅಂತ ಹೇಳಿತು. ನಿಮ್ಮ ಗಂಡ ಏನು ಮಾಡುತ್ತಾರೆ ಅಂತ ಕೇಳಿತು.ಮಲಯಾಳಿ ಹೆಂಗಸು ಅದರ ಗಂಡ ಓಡಿಟ್ಟರ್ ಅಂದಳು. ಇದು ಆಡಿಟರ್ ಪದ,ಓಡಿಟ್ಟರ್ ಆಗಿತ್ತು. ತಮಿಳು ಹೆಂಗಸು ಅಯ್ಯೋ ಪಾಪಮೆ, ಸಾರಿ ಫಾರ್ ಯು ಅಂದಳು!
ಅಂಗಡಿಯ ಓಜಿಟಿಬಲ್ಸ್ ಹೆಂಗಸಿಗೆ
ಆಶ್ಚರ್ಯ ಹೀಗೆ ಎದ್ದು ಕಾಣೋ ಹಾಗೆ ಇಟ್ಟಿದ್ದಿವಿ ಯಾಕೆ ಕೇಳ್ತಾನೆ ಅಂತ. ಅದನ್ನ ಯಾರು ಕೊಂಡ್ಕೋತಾರೆ. ಅಂದೆ. ನಿಮ್ಮ ಹಾಗೆ ಕಸ್ಟಮರ್ಸ್ ತಗೋತಾರೆ ಅಂದಳು.ಪ್ರಶ್ನೆ ಬದಲಾಯಿಸಿದೆ… ಏನು ಮಾಡ್ತಾರೆ ಇದರಲ್ಲಿ…? ಆವಿಯಲ್, ಸಾಂಬಾರ್ ಅಂತ ಉತ್ತರ ಬಂತು. ಯಾವ ತರಕಾರಿ ಹಾಕಿ ಏನು ಮಾಡಬೇಕು ಅಂತ ಅವರೇ ಡಿಸೈಡ್ ಮಾಡ್ತಾರೆ ಅನಿಸಿತು. ಸದ್ಯ ನಮ್ಮೂರಲ್ಲಿ ಹೆಂಗಸರಿಗೆ ಚಾಯ್ಸ್ ಇದೆ…!
ತೆಂಗಿನ ಕಾಯಿ ನೋಡಿದೆ. ಪೂರ್ತಿ ಜುಟ್ಟು ಕಿತ್ತು ಬೋಳು ಬೋಳು ಆಗಿತ್ತು. ಅದರತ್ತ ಕೈ ತೋರಿಸಿ ಹೇಗೆ ಅಂದೆ. ಓನ್ ಪೀಸ್ ಟೂ ಪೀಸ್ ಅಂದ.ಓನ್ ಅಂದೆ. ಒಂದರ ಬೆಲೆ ಹೇಳಬಹುದು ಅಂತ. ಅದನ್ನ ಕೈಗೆ ತಗೊಂಡು ತಕ್ಕಡಿ ಮೇಲಿಟ್ಟ. ಕೇಜಿ ಫಾರ್ಟಿ ಫೈವ್. ತಿಸ್ ಫಿಫ್ಟಿ ಫೈವ್ ಅಂದ.ತೆಂಗಿನಕಾಯಿ ತೂಗಿ ಕೊಡೋದು ಮೊದಲ ಬಾರಿಗೆ ನೋಡಿದ್ದೆ. ನಮ್ಮ ಬೆಂಗಳೂರಲ್ಲಿ ಅದೇ ತೆಂಗಿನಕಾಯಿ ನೂರು ರೂಪಾಯಿಗೆ ಆರು ಇರೋದು ನೆನಪಾಗಬೇಕೇ..
ಇನ್ನೊಂದು ಅನುಭವ
ಇನ್ನು ಒಣ ಕೊಬ್ಬರಿ ಬೇಕು ಅಂದಿದ್ದರು ಅಂತ ಒಂದು ಅಂಗಡೀಲಿ ಕೇಳಿದೆ ಕೊಪ್ರಾ ಕಾಪ್ರಾ.. ಅವಳಿ ಗೆ ಅರ್ಥ ಆಗಲಿಲ್ಲ. ದ್ರಯ್ ಕೊಕೊನಟ್ ಅಂತ  ತೆಂಗಿನಕಾಯಿ ಚಿಪ್ಪು ತೆಗೆದು ಒಣ ಕೊಬ್ಬರಿ ಹೊರ ತೆಗೆಯುವ, ತುರಿಯುವ  ಅಭಿನಯ ಮಾಡಿದೆ . ಮಾರನೇ ದಿವಸ ನೋಡು ನೀ ಹೇಳಿದ್ದು ಬಂದಿದೆ ಅಂತ ಒಂದು ರಟ್ಟಿನ ಡಬ್ಬ ತೋರಿಸಿದಳು. ಅದರ ತುಂಬಾ ನುಣ್ಣಗೆ ಗುಂಜು ತೆಗೆದ ತೆಂಗಿನ ಕಾಯಿ…! ಅಂದ ಹಾಗೆ ಇಲ್ಲಿ ಒಣ ಕೊಬ್ರಿ ಸಿಗಲ್ಲ.greted coconut ಅಂತ ಕೊಬ್ರಿ ಪುಡಿ ಮಾರಾಟ ಮಾಡ್ತಾರೆ. ಇದು mnc ಗಳು ತಲೆ ತೂರಿಸಿರುವ ವಹಿವಾಟು.
ಒಂದು ಸಂಜೆ ಮನೆ ಸುತ್ತ ವಾಕಿಂಗ್ ಹೊರಟೆ ಒಂದೆರೆಡು ಕಿಮೀ ನಡೆದಿರಬಹುದು. ಎದುರು ಬರುತ್ತಿದ್ದ ಒಬ್ಬರನ್ನು ನಿಲ್ಲಿಸಿದೆ. ಟೀ ಸಿಗುತ್ತಾ ಇಲ್ಲೆಲ್ಲಾ ದರೂ ಅಂತ ಅಭಿನಯಿಸಿದೆ. ಈ ವೇಳೆಗೆ ಅಭಿನಯ ಶಾರದಾ ಆಗಿದ್ದೆ (ಶಾರದೆ ಸ್ತ್ರೀ ಲಿಂಗ, ಶಾರದಾ ಪುಲ್ಲಿಂಗ). ಕಳ್ಳು ಸಿಗುತ್ತೆ ಟೀ ಸಿಗಲ್ಲ ಅಂತ ಆತ ನಕ್ಕ. ಅವನ ಸೆನ್ಸ್ ಆಫ್ ಹ್ಯೂಮರ್ ಗೆ ಭೇಷ್ ಅಂದೆ.
ರಸ್ತೆ ಬದಿಯಲ್ಲಿ ಜಿಂಕ್ ಶೀಟ್ ಹೊದಿಸಿದ ಟೀ ಶಾಪ್ ಗಳು ಇಲ್ಲಿ ಮುಖ್ಯ ರಸ್ತೆಗಳಲ್ಲಿ ಸರ್ವೇ ಸಾಮಾನ್ಯ. ಟೀ ಕಡೆ ಅಂತ ಅವುಗಳನ್ನು ಮಲಯಾಳಿಗಳು ಕೂಗುತ್ತಾರೆ.ಟೀ ತಯಾರಿ ಒಬ್ಬ ಮಾಡ್ತಾ ಇರ್ತಾನೆ. ಅವನ ಪಕ್ಕ ಇನ್ನೊಬ್ಬ ದೊಡ್ಡ ಬಾಣಲೆಯಲ್ಲಿ ನ ಬಿಸಿ ಕುದಿಯುವ ಎಣ್ಣೆಗೆ ಉದ್ದಿನ ವಡೆ ಹಾಕ್ತಾ ಇರ್ತಾನೆ. ಇದರ ನಂತರ ಮುಷ್ಟಿ ಗಾತ್ರದ ಈರುಳ್ಳಿ ಪಕೋಡ, ಅದಾದಮೇಲೆ ಪಾಲ್ ಬನ್ನು ಎನ್ನುವ ಸ್ವೀಟ್, ನೇಂದ್ರ ಬಾಳೆ ಉದ್ದಕ್ಕೆ ಹೆಚ್ಚಿ ಅದರ ಬಜ್ಜಿ, ಬೆಲ್ಲ ಹಿಟ್ಟು ಕಲಸಿ ಕರಿಬಣ್ಣದ ಒಂದು ಸಿಹಿ, ಆಲೂಗೆಡ್ಡೆ ಬೋಂಡಾ ಇದೂ ಸಹ ಮುಷ್ಟಿ ಗಾತ್ರದ್ದು , ಮಸಾಲೆ ವಡೆ ಹೀಗೆ ಮಾಡಿ ಮಾಡಿ ಶೋ ಕೇಸಿನ ತುಂಬಾ ತುಂಬಿರುತ್ತಾರೆ. ಇವರ ಗಿರಾಕಿಗಳ ಲ್ಲಿ ಎಲ್ಲಾ ಸ್ಥರದವರೂ ಉಂಟು. ಒಂದು ಟೀ ಆರ್ಡರ್ ಮಾಡಿ ಒಂದು ಬೊಂಡ ವನ್ನೋ ವಡೆಯನ್ನೋ ಕೇಳುತ್ತಾನೆ.ಅಂಗಡಿಯವನು ಒಂದು ಡಬ್ಬದಲ್ಲಿ ಪೇಪರ್ ಅನ್ನು ಬೋಂಡಾ ಅಥವಾ ವಡೆಯನ್ನು ಎರಡು ಬೆರಳಿನಿಂದ ಹಿಡಿಯುವಷ್ಟು ಕತ್ತರಿಸಿ ಇಟ್ಟಿರುತ್ತಾರೆ. ಒಂದು ಪೇಪರ್ ತಗೋ, ಬೋಂಡಾ ವನ್ನು ಎರಡು ಬೆರಳಿನಿಂದ ಪೇಪರು ಮೂಲಕ ತೆಗೆದು ಪೇಪರ್ ಸಮೇತ ಗಿರಾಕಿಗೆ ಕೊಡುತ್ತಾನೆ. ಯಾವುದೇ ತಗೊಳ್ಳಿ ಬೋಂಡಾ, ವಡೆ, ಮಸಾಲೆ ವಡೆ, ಪಾಲ್ ಬನ್ನು …..ಬರೀ ಹತ್ತು ರೂಪಾಯಿ.ಗಿರಾಕಿಯೂ ಪೇಪರ್ ನಲ್ಲಿಯೇ ಬೋಂಡಾ ಹಿಡಿದು ಅದನ್ನು ಬಲ ಗೈಯಲ್ಲಿ ಕಚ್ಚಿ ಕಚ್ಚಿ ತಿನ್ನುತ್ತಾ ಎಡಗೈಯಲ್ಲಿ ಟೀ ಕುಡಿಯುತ್ತಾನೆ. ಇದು ಒಂದು ಕಾಮನ್ ದೃಶ್ಯ. ಅಂದ ಹಾಗೆ ಇಲ್ಲಿ ಟೀ ಕೊಡುವುದೇ ಉದ್ದನೆ ಗಾಜಿನ ಲೋಟದಲ್ಲಿ, ನಮ್ಮ ಹಾಗೆ ಪುಟ್ಟ ಲೋಟ ಇಲ್ಲಿಲ್ಲ. ಟೀ ಅಥವಾ ಕಾಫಿ ಹತ್ತು ಹದಿನೈದು ರೂಪಾಯಿ. ಇದು ಕಾಲೇಜು ಹುಡುಗರು, ಹುಡುಗಿಯರು, ಡಾಕ್ಟರು, ನರ್ಸು ಎಲ್ಲರೂ ವರ್ಗ ಬೇಧವಿಲ್ಲದೆ ಸೇರುವ ಒಂದು ಸ್ಥಳ!
ಹಿಂದೊಮ್ಮೆ ಸುಮಾರು ವರ್ಷಗಳ ಹಿಂದೆ ಇಲ್ಲಿ ಎಳ ನೀರಿಗೆ ಪಟ್ಟ ಪಾಡು ಹೇಳಿದ್ದೆ. ಈಗ ಅಲ್ಲಲ್ಲಿ ಎಳ್ ನೀರು ಗುಪ್ಪೆ ಹಾಕಿರುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಇಡೀ ಲಾರಿ ಲೋಡ್ ಒಂದೇ ಕಡೆ ಇಳಿಸುತ್ತಾರೆ, ಇಲ್ಲಿ ಒಂದು ಲಾರಿ ಲೋಡ್ ಇಪ್ಪತ್ತು ಮೂವತ್ತು ಕಡೆ ಹಂಚಿ ಹೋಗುತ್ತೆ.ಎಳನೀರನ್ನು ನಮ್ಮ ಊರಿನ ಹಾಗೆ ಒಂದು ಕಡೆ ಕೊಚ್ಚಿ ಕೊಡಲ್ಲ ಇಲ್ಲಿ.ಅದನ್ನ ಚುಪಾಗೆ ಚೂ ಪಗೆ ಹೇರೆಯುತ್ತಾರೆ.ಎರಡೂ ಕಡೆ ಹೆರೆದು ಮೇಲಿನ ಹಸಿರು ಬಾಗ ತೆಗೆದು ಒಂದು ಕಡೆ ಓಪನ್ ಮಾಡುತ್ತಾರೆ! ಒಂದು ತಳ್ಳೋ ಗಾಡಿ ಅಂಗಡಿಯಲ್ಲಿ ಮಾವಿನ ಹಣ್ಣಿನ ಸಂಗಡ ಒಂದು ನಮ್ಮ ಕರೀ ದ್ರಾಕ್ಷಿ ಬಣ್ಣದ ಆಕಾರದಲ್ಲಿ ಮುಷ್ಟಿ ಗಾತ್ರದ ಹಣ್ಣು ನೋಡಿದೆ. ಇದೇನು ಅಂತ ಕೇಳಿದೆ. ಅವನು ಒಂದು ರೀತಿ ತಾತ್ಸಾರದ ದನಿಯಲ್ಲಿ ಮ್ಯಾಂಗೋ ಅಂದ. ಇವನ್ಯಾವನು ನನ್ನ ಕೇಳೋದು ಅಂತ ಅವನ ಮುಖ ಹೇಳುತ್ತಿದೆ ಅನಿಸಿತು.ಅವನಿಗೆ ಹೇಳಲು ಇಷ್ಟ ಇಲ್ಲ ಅಂತ ತಿಳಿ ಯಿತು. ಕೊಂಚ ಮುಂದೆ ಬಂದರೆ ಅಲ್ಲಿ ಯಾಹೂ ಬಜಾರ್ ಅಂತ ಒಂದು ಡಿಪಾರ್ಟ್ಮೆಂಟ್ ಸ್ಟೋರ್. ಒಳಗೆ ಹೊಕ್ಕರೆ ಅಲ್ಲಿ ಈ ಹಣ್ಣು ಕಾಣಿಸಿತು. ಅದರ ಹೆಸರು ಮಾಂಗೋಸ್ತಿನ್ ಅಂತ ತಿಳಿಯಿತು. ಬೆಂಗಳೂರಿನ ಮಾರುಕಟ್ಟೆಯಲ್ಲಿ ಇದನ್ನ ಕಂಡಿಲ್ಲ ಅಂತ ವಾಟ್ಸಾಪ್ ನಲ್ಲಿ ಒಂದು ಪೋಟೋ ಹಾಕಿದೆ. ನನ್ನ ಸಹೋದ್ಯೋಗಿ ಸುಂದರಿ ಅದು ಕಂಟ್ರಮೆಂತ್ ಅಂಗಡಿಯಲ್ಲಿ ಸಿಗುತ್ತೆ ಅಂತ ತಿಳಿಸಿದರು.
ಅವಲಕ್ಕಿ ಅಂತ ಕೇಳಿದರೆ ಇಲ್ಲಿ ಅರ್ಥ ಆಗಲಿಲ್ಲ. ಆವಲ್ ಅನ್ನುತ್ತಾರೆ ಅಂತ ತಿಳಿದು ಕೇಳಿದೆ. ಜೋಳದ ಫ್ಲೇಕ್ಸ್ ಅದೂ ಕೆಂಪು ಬಣ್ಣದ್ದು ತೋರಿಸಿದ! ಗಟ್ಟಿ ಬಿಳೀ ಅವಲಕ್ಕಿ ಎಲ್ಲಾ ಕಡೆ ಸಿಗದು.
ಒಂದು ಐದಾರು ಅಂಗಡಿಯಲ್ಲಿ ಹುರಿಗಡಲೆ ಕೇಳಿದೆ. ತಲೆ ಅಲ್ಲಾಡಿಸಿದರು ತಿಳಿಯದು ಅಂತ. ಜೇಬಿ ನಿಂದ ಮೊಬೈಲ್ ಆಚೆ ತೆಗೆದು ಗೂಗಲ್ ಹುಡುಕಿ ಹುರಿಗಡಲೆ ಚಿತ್ರ ತೋರಿಸಿದೆ. ಎರಡು ದೊಡ್ಡ ಅಂಗಡಿಯಲ್ಲಿ ಅದು ಇರಲಿಲ್ಲ. ಒಂದು ಮಾಲ್ ಗೆ ಬಂದೆ. ಅಲ್ಲಿ ಹುರಿಗಡಲೆ ಚಿತ್ರ ತೋರಿಸಿದೆ. ಹೋ ಗಡ್ಲೆ ಗಡ್ಲೇ ಅಂತ ಒಂದು ರಾಕ್ ತೋರಿಸಿದ. ಅಲ್ಲಿ ನೋಡಿದರೆ ನೂರು ಗ್ರಾಂ ಪಾಕೆಟ್ ಇದೆ, ಅದು ಬಿಟ್ಟರೆ ಕಾಲು ಕೇಜಿ ಪಾಕೆಟ್. ನೂರು ಗ್ರಾಂ ಕಡಲೆ ಪಾಕೆಟ್ ನಮ್ಮೂರಲ್ಲಿ ಅಪರೂಪ ತಾನೇ ಅಪರೂಪ ಏನು ಇಲ್ಲವೇ ಇಲ್ಲ. ಆಶ್ಚರ್ಯ ಪಡುತ್ತಾ ಕಾಲು ಕೇಜಿ ಪಾಕೆಟ್ ಕೊಂಡೆ, ಬೆಲೆ ಐವತ್ತೆರಡು ರೂಪಾಯಿ. ಅಯ್ಯೋ ನಮ್ಮೂರಲ್ಲಿ ಇದು ನೂರಾ ಹದಿನೈದು ಕೇಜಿ ಅಂತ ನಂಟ್ರಿಗೆ ಹೇಳಿದೆ. ಅವರು ನಕ್ಕರು. ಇಲ್ಲಿ ಅವೆಲ್ಲಾ ಹೊರಗಡೆಯಿಂದ ಬರೋದು, ಅದಕ್ಕೇ ರೇಟು ಹೆಚ್ಚು. ಇದೇ ಮಾತು ತರಕಾರಿಗೂ ಹೇಳಿದ್ದರು. ಹಾಗಿದ್ದರೆ ಮೀನು ಇಲ್ಲಿ ದಂಡಿಯಾಗಿ ಸಿಗುತ್ತಲ್ಲಾ ಅದರ ಬೆಲೆ ಕಮ್ಮಿನಾ ಅಂದೆ. ಪಾಪ ಅವರಿಗೂ ತಿಳಿಯದು…! ಹಾಗಿದ್ದರೆ ಬೀಡಿ ಸಿಗರೇಟು ಬೆಲೆ ಹೆಚ್ಚಾ…? ಅದೂ ಗೊತ್ತಿಲ್ಲ ಅವರಿಗೂ ಅಭ್ಯಾಸ ಇಲ್ಲ ಪಾಪ.
ತಿರುವನಂತಪುರಕ್ಕೆ ಬಂದು ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ನೋಡದೆ ಇರೋದೇ. ಅದಕ್ಕೂ ಒಂದು ಸಂಜೆ ಹೋಗೆ ಬಿಡೋಣ ಅಂತ ಡಿಸೈಡ್ ಮಾಡಿದೆವು. ಆಸ್ಪತ್ರೆ ಓಡಾಟದ ಮಧ್ಯೆ  ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ದರ್ಶನ ಆಯಿತು.ದೇವಸ್ಥಾನದ ಮುಂದೇನೆ ಒಬ್ಬ ನಿಂತು ಪ್ಯಾಂಟು , ಶರ್ಟು, ಬ್ಯಾಗು ಇಲ್ಲಿಡಿ ಅಂತ ಮಲ ಯಾಳದಲ್ಲಿ ಕೂಗುತ್ತಿದ್ದ.ಪ್ಯಾಂಟು ಶರ್ಟು ಹಾಕಿದ್ದರೆ ಒಳಗೆ ಬಿಡಲ್ಲ. ಒಂದು ಹಳೇ ನೆನಪು ಈಗಲೇ ನುಗ್ಗಬೇಕೇ….ಉಡುಪಿಗೆ ಶ್ರೀ ಶಿವಕುಮಾರ, ಅಪರಂಜಿ ಸಂಪಾದಕರು, ಶ್ರೀ ಆನಂದ, ಡೆಕ್ಕನ್ ಹೆರಾಲ್ಡ್ ಗುಂಪು ಮತ್ತು ನಾನು ಹೋಗಿದ್ದೆವು.ನಾವು ಇಳಿದುಕೊಂಡಿದ್ದ ರೂಮು ಮತ್ತು ದೇವಸ್ಥಾನ ತುಂಬಾ ಹತ್ತಿರ.ಬೆಳಿಗ್ಗೆ ಸ್ನಾನ ಮುಗಿಸಿದೆವು.ದೇವಸ್ಥಾನ ನೋಡೋಣ ಅಂತ ಹೊರಟೆವು.ದೇವಸ್ಥಾನದ ಬಾಗಿಲಲ್ಲಿ ಒಬ್ಬ ಖಾಕಿ ಬಟ್ಟೆ ಹಾಕಿ ನಿಂತಿದ್ದ.ಶರಟು ತೆಗೆದು ಒಳಗೆ ಹೋಗಬೇಕು ಅಂದ.ಶರಟು ತೆಗೆಯೋದೇ ಬೇಡ ಅಂತ ನಾನು ಆನಂದ ಆಚೆ ನಿಂತೆವು.ಶಿವಕುಮಾರ್ ನಾನು ಹೋಗ್ತೀನಪ್ಪಾ ಅಂತ ಶರಟು ತೆಗೆದು ಕೈಯಲ್ಲಿ ಹಿಡಿದು ಕ್ಯೂ ಸೇರಿದರು. ಈ ಸಂಗತಿ ನಡೆದು ಆಗಲೇ ಸುಮಾರು ವರ್ಷ ಕಳೆದಿದೆ. ಆದರೂ ಅವತ್ತು ಶರಟು ತೆಗೆದು ಒಳಗೆ ಹೋಗಿದ್ದರೆ ಚೆನ್ನಿತ್ತು ಅಂತೇಶ್ಟೋ ಸಲ ಅನಿಸಿದೆ. ಆಮೇಲೆ ಸುಮಾರು ಸಲ ಉಡುಪಿಗೆ ಹೋಗಿದ್ದೀನಿ,ದೇವಸ್ಥಾನದ ಒಳಗೂ ಹೋಗಿದ್ದೀನಿ, ಆದರೆ ಈ ಪ್ರಸಂಗ ಇನ್ನೂ ತಲೆಯಲ್ಲಿ ಕೂತಿದೆ. ನಾನು ಹೋಗದೆ ಇದ್ದದ್ದರಿಂದ ಯಾರಿಗೂ ದೇವರೂ ಸೇರಿದಂತೆ ಏನೂ ಲುಕ್ಸಾನು ಆಗಲಿಲ್ಲ, ನನಗೆ ಈ ಕೊರಗು ಹಾಗೇ ಉಳಿದು ಬಿಟ್ಟಿತು. ಇದೇ ಸಮಯದಲ್ಲಿ ನಮ್ಮ ಕರಾವಳಿ ದೇವಸ್ಥಾನದಲ್ಲಿ ನ ಈ ಚಿ ನ ಒಂದು ಪ್ರಸಂಗ ತಲೆಯಲ್ಲಿ ಸುಳಿಯಿತು. ಶರಟು ಧರಿಸಿ ದೇವಸ್ಥಾನ ಪ್ರವೇಶ ಕೂಡದು ಅಂತ ದೇವಸ್ಥಾನ ಆಡಳಿತ ಮಂಡಳಿ ಆದೇಶ ಹೊರಡಿಸಿತು. ಅದನ್ನು ಪ್ರಶ್ನಿಸಿ ಕೆಲವರು ಫಿರ್ಯಾದಿ ಮಾಡಿದರು. ಅಂತಹವರು ಇಲ್ಲೂ ಯಾಕೆ ಕೆತೆ ತೆಗೆಯಲ್ಲ ಅನಿಸಿತು. ಕೇಳುವ ಜನ ಇದ್ದರೆ ಹೇಳುವವರೂ ಸಹ ಇದ್ದೇ ಇರುತ್ತಾರೆ….!
ಅಲ್ಲಿ ನಿಂತು ಕೂಗುತ್ತಾ ಇದ್ದವನು ಚೂಡಿದಾರ್ ಸಹ ಬಿಡಲ್ಲ , ಅದರ ಮೇಲೆ ಧೋತಿ ಉಟ್ಟು ಕೊಳ್ಳಿ ಅಂತ ಕೂಗ್ತಾ ಇದ್ದ. ಅಲ್ಲೇ ಧೋತಿ ಅರವತ್ತು ಅಂತ ಅಂಗಡಿಗಳ ಮುಂದೆ ಬೋರ್ಡು. ಕೋವಿದ್ ಗೆ ಮೊದಲು ಧೋತಿ ಮೇಲುವಸ್ತ್ರ ಬಾಡಿಗೆಗೆ ಸಿಗ್ತಾ ಇತ್ತಂತೆ. ಈಗ ಬಾಡಿಗೆ ಇಲ್ಲ, ಕೊಂಡ್ಕೊ ಬೇಕು.ಮನೆಯಿಂದಾನೆ ಉಡಲು ಒಂದು ಹೊದೆ ಯಲು ಮತ್ತೊಂದು ಹೀಗೆ ನಾವು ಇಬ್ಬರು ಗಂಡಸರು,( ನನ್ನ ನಾದಿನಿಯ ಮಗ ಸಮೀರ ನಮಗೆ ಎಸ್ಕಾರ್ಟ್ಸ್)ಅರೇಂಜ್ ಮಾಡಿದ್ದೆವು. ಬಟ್ಟೆ ಬದಲಾಯಿಸಲು ಅಲ್ಲೇ ಕಬ್ಬಿಣದ ಪುಟ್ಟ ಪುಟ್ಟ ರೂಮು ಇವೆ. ಒಳಹೊಕ್ಕು ಪಂಚೆ ಅಂದರೆ ದಟ್ಟೀ ಉಟ್ಟು ಮೇಲೆ ಇನ್ನೊಂದು ಹೊದ್ದು ಪ್ಯಾಂಟು ಶರ್ಟು ಬನೀನು, ದುಡ್ಡು ಮೊಬೈಲ್…. ಇವನ್ನ ಒಂದು ಬ್ಯಾಗಲ್ಲಿ ತುಂಬಿದೆವು.ಅದನ್ನು ಒಂದು ರೂಮಲ್ಲಿ ಇರಿಸ್ಕೋತಾರೆ. ಅದಕ್ಕೆ ಫೀಸು ಕೊಡಬೇಕು. ಚೂಡಿದಾರ್ ಧರಿಸಿ ಬಂದಿದ್ದ ಓಲ್ಡ್ ಹೆಂಗಸರು, ಹುಡುಗೀರು ಪಂಚೆ ಕೊಂಡು ಅದನ್ನು ಚೂಡಿದಾರ್ ಮೇಲೆ ದಟ್ಟೀ ಹಾಗೆ ಸುತ್ತಿಕೊಂಡು ದೇವಸ್ಥಾನದ ಒಳಗೆ ನಮ್ಮ ಸಂಗಡ ಬಂದರು. ಶ್ರೀ ಸಿ ಆರ್ ಸತ್ಯ ಅವರು ಈ ದೇವಸ್ಥಾನ ಕುರಿತು ಬರೆದಿದ್ದ ಕೆಲವು ಸಂಗತಿ ತಲೆಯಲ್ಲಿತ್ತು. ಮೂರು ಮೀಟರ್ ದಪ್ಪ, ಆರು ಮೀಟರ್ ಉದ್ದದ ಚಪ್ಪಡಿ ಇಲ್ಲಿ ಇದೆ ಎಂದು ಓದಿದ ನೆನಪು. ದೇವಸ್ಥಾನ ಹುಡುಕಿದರೆ ಅದು ಎಲ್ಲೂ ಕಾಣಿಸಲಿಲ್ಲ. ಅಲ್ಲಿದ್ದ ಒಬ್ಬರು ಇಂಗ್ಲಿಷ್ ಗೊತ್ತಿರುವ ಸಿಬ್ಬಂದಿ ಯನ್ನು ಕೇಳಿದೆ, ಆತನಿಗೂ ಗೊತ್ತಿಲ್ಲ. ನಮ್ಮ ಆಫೀಸರ್ ಗೆ ಗೊತ್ತಿರಬಹುದು ಅಂದ.ಅವರೆಲ್ಲಿರ್ತಾರೆ ಅಂದೆ. ಮಧ್ಯಾಹ್ನವೇ ಮನೆಗೆ ಹೋದರು, ನಾಳೆ ಬರ್ತಾರೆ ಅಂದ!
ದೇವರನ್ನು ನೋಡಲು ಸುತ್ತು ಹಾಕಿಕೊಂಡು ಬರಬೇಕು. ಐನೂರು ರೂಪಾಯಿ ಟಿಕೆಟ್ ಇಟ್ಟು ಅದು ಬೇರೆ ಕ್ಯೂ. ನಾವು ಒಳಗಡೆ ಹೋದರೆ ಈ ಟಿಕೆಟ್ ನವರು ಒಂದು ಕಡೆ ಗುಂಪು ನಿಂತಿದ್ದಾರೆ, ಮುಂದಕ್ಕೆ ಚಲಿಸದೆ. ಸರಿ ಅಂತ ಪಕ್ಕಕ್ಕೆ ಬಂದೆ. ಅಲ್ಲಿ ಕ್ಯೂ ಕಂಟ್ರೋಲ್ ಮಾಡುತ್ತಿದ್ದ ಹೆಂಗಸು ದೇವರನ್ನ ನೋಡಿದೆಯಾ ಅಂದಳು. ಇಲ್ಲ ಅಂದೆ. ಅಲ್ಲಿ ಫರ್ಸ್ಟ್ ನೋಡು, ಆಮೇಲೆ ಇಲ್ಲಿ. ಕೊನೆಗೆ ಅಲ್ಲಿ ಅಂತ ಗೈಡ್ ಮಾಡಿದಳು. ದೇವರು ಇಲ್ಲಿ ಮಲಗಿದೆ.ಅದರ ಅಂದರೆ ಪ್ರತಿಮೆ ಮುಂದೆ ಗೋಡೆ ಇದೆ, ಗೋಡೆಗೆ ಮೂರುಕ ಡೆ ಜಾಗ ಬಿಟ್ಟಿದ್ದಾರೆ.ಮೊದಲನೇ ಚೌಕದ ಹತ್ತಿರ ನುಗ್ಗಿ ಅಲ್ಲಿ ನೋಡಿದರೆ ದೊಡ್ಡ ಕೈ ಮಾತ್ರ ಕಾಣಿಸಿತು. ಅಷ್ಟೇ ಇರಬಹುದು ಅಂತ ಪಕ್ಕ ಬಂದೆ. ದೇವರ ಮುಖ ನೋಡಿದ್ರಾ ಅಂತ ಹೆಂಡತಿ ಕೇಳಿದಳು. ಬರೀ ದಪ್ಪನೆ ಕರೀ ಕೈ ಕಾಣಿಸ್ತು ಅಷ್ಟೇ ಅಂದೆ. ಸರಿಯಾಗಿ ನೋಡಿ ಅಂತ ಆರ್ಡರ್ ಆಯ್ತು. ಸರಿ ಮತ್ತೆ ನುಗ್ಗಿದೆ. ಗರ್ಭ ಗುಡಿ ಪೂರ್ತಿ ಕತ್ತಲೆ ಅಂದರೆ ಕತ್ತಲೆ. ದೇವರ ದೀಪ ಒಂದು ಕಡೆ ಉರಿತಿರುತ್ತೆ. ಅದರ ಬೆಳಕಲ್ಲಿ ದೇವರನ್ನು ಕಾಣ ಬೇಕು. ಲಂಕೇಶ್ ಹಾಮಾ ನಾಯಕರನ್ನು ಒಮ್ಮೆ ನೋಡಲು ಹೋಗಿದ್ದರಂತೆ. ನಾಯಕರಿಗೆ ಪ್ರಾಸ್ಟೇಟ್ ಗ್ರಂಥಿ ಆಪರೇಶನ್ ಆಗಿತ್ತಂತೆ.ಅಲ್ಲಿ ನಾಯಕರು  ಅನಂತ ಪದ್ಮನಾಭ ಸ್ವಾಮಿ ದೇವರ ಹಾಗೆ ಪವಡಿಸಿದ್ದರು ಅಂತ ಬರೀತಾರೆ. ದೇವರು ಮಗ್ಗುಲು ಮಲಗಿದೆಯಾ ಅಂತ ನೋಡಿದೆ. ಅಂಗಾತವಾಗಿ ಕೈ ಚಾಚಿ ಮಲಗಿದ್ದಾನೆ ಪರಮಾತ್ಮ. ನಮಗೆ ಒಂದು ಪಾರ್ಶ್ವ ಮಾತ್ರ ಕಾಣಿಸೋದು. ಎರಡನೇ ಓಪನಿಂಗ್ ನಲ್ಲಿ ಕುತ್ತಿಗೆಯಿಂದ ಸೊಂಟದ ವರೆಗೆ ದೇವರು ಕಾಣಿ ಸ್ತಾನೆ. ಮೂರನೇ ಓಪನಿಂಗ್ ನಲ್ಲಿ ದೇವರ ಕಾಲು… ಹೀಗೆ. ಮೂರು ಓಪನಿಂಗ್ ಗಳಿಂದ ನೋಡಬೇಕಾದ ದೇವರು ಇದು ಒಂದೇ ಅಂತೆ.ಅಲ್ಲ ಒಂದು ಸರ್ಚ್ ಲೈಟ್ ಹಾಕಿ ದೇವರ ದರ್ಶನದ ವ್ಯವಸ್ಥೆ ಮಾಡಬಾರದೇ ಅನ್ನಿಸಿತು. ಹಾಗೆ ಮಾಡೋ ಹಾಗಿಲ್ಲ ಅಂತ ನಮ್ಮ ಬಾಸಿಂದ ಉತ್ತರ ಬಂತು!
ದೇವಸ್ಥಾನ ಪೂರ್ತಿ ಸುತ್ತು ಹಾಕಿದೆ. ಇಂತಹ ದೊಡ್ಡ ದೇವಸ್ಥಾನ, ಇಡೀ ಪ್ರಪಂಚ ಕೊಳ್ಳುವಷ್ಟು ಧನಕನಕ ವಜ್ರ ವೈಢೂರ್ಯ ಹೊಂದಿರುವ ಜಗತ್ತಿನ ಅತಿ ಶ್ರೀಮಂತ ದೇವರು. ಎಲ್ಲಾದರೂ ಮೂಲೆಯಲ್ಲಿ ಒಳ್ಳೆ ಪ್ರಸಾದ ಕೊಡುತ್ತಾ ಇರುತ್ತಾರೆ ಎನ್ನುವ ನಿರೀಕ್ಷೆ ನನ್ನದು. ಎಲ್ಲೂ ಪ್ರಸಾದದ ಸೂಚನೆ ಇರಲಿಲ್ಲ. ಬದಲಿಗೆ ಒಂದುಕಡೆ ಒಬ್ಬ ಕೌಂಟರ್ ಹಿಂದೆ ಕೂತಿದ್ದ. ಅವನ ಹತ್ತಿರ ಪ್ರಸಾದ ಅಂದೆ. ಸುಗರ್ ಕ್ಯಾಂಡಿ ಟೆನ್ ರೂಪಿಸ, ಟಿನ್ ಹಂಡ್ರೆಡ್ ಅಂದ. ಡೈಮಂಡ್ ಸಕ್ಕರೆ ಒಂದು ಕವರ್ ನಲ್ಲಿಟ್ಟು ಮಾರ್ತಾ ಇದ್ದರು, ಅದು ಹತ್ತು ರೂಪಾಯಿ.ಸೀಲ್ ಆಗಿರೋ ಡಬ್ಬದ ಪ್ರಸಾದ ನೂರು!
ನಮ್ಮ ಊರಿನಲ್ಲಿ ಎಂತಹ ಪುಟ್ಟ ಬಡವಾ ತಿ ಬಡವರ ದೇವಸ್ಥಾನ ಅಂದರೂ ಪ್ರಸಾದ ಕೊಡದೇ ಕಳಿಸಲ್ಲ, ಇದು ನೋಡಿದರೆ ಪ್ರಪಂಚವನ್ನೇ ಕೊಳ್ಳುವಷ್ಟು ಕಾಸಿರುವ ಶ್ರೀಮಂತ ದೇವಸ್ಥಾನ, ಕೈ ತುಂಬಾ ಪ್ರಸಾದ ಕೊಡೋಕ್ಕೆ ಅದೇನು ಬರ ಬಂದಿದೆ ಇವರಿ ಗೆ ಅಂತ ಅನಿಸಿ ಬಿಟ್ಟಿತು. ಅದನ್ನ ಗಟ್ಟಿಯಾಗಿ ಅಂದೂ ಬಿಟ್ಟೆ. ಶ್ ಅಂದರು ಮನೆಯವರು, ಮಿಕ್ಕವರು ಹಾಗೇ ನೋಡಿಕೊಂಡು ಹೋದರು, ಭಾಷೆ ಗೊತ್ತಿಲ್ಲವಲ್ಲ!
ಊರಿಗೆ ಬಂದ ಮೇಲೆ ಆಲ್ಲಿ ಚಿಕ್ಕ ದೊನ್ನೆ ಯಲ್ಲಿ ಸಹ ಪ್ರಸಾದ ಕೊಡಲ್ಲ ಅಂತ ಹೇಳಿದೆ. ನೀವು ಸಂಜೆ ಹೋಗಿದ್ರಾ ಅಂದರು. ಹೌದು ಅಂದೆ. ಮಧ್ಯಾಹ್ನ ಹೋಗಬೇಕಿತ್ತು, ಆಲ್ಲಿ ಫಸ್ಟ್ ಕ್ಲಾಸ್ ಊಟ ಹಾಕ್ತಾರೆ ಅಂದರು. ಹೊಟ್ಟೆ ಉರಿದು ಹೋಯಿತು, ಮಧ್ಯಾಹ್ನ ಹೋಗಲಿಲ್ಲವೇ ಅಂತ.
ಅಲ್ಲಿ ಪೋಟೋ, ಪುಸ್ತಕ ಮಾರುತ್ತಿದ್ದರು ಅಂತ ಅಲ್ಲಿ ನಡೆದೆ. ಸತ್ಯ ಅವರ ಪುಸ್ತಕ ಸಿಕ್ಕರೆ ಕೊಳ್ಳುವ ಆಸೆ ಹುಟ್ಟಿತ್ತು. ಮಲಗಿರುವ ದೇವರ ಪೆನ್ಸಿಲ್ ನಲ್ಲಿ ಬರೆದ ಚಿತ್ರ ಇತ್ತು. ಸಾವಿರದ ಐದುನೂರು ಅಂತ ಬೋರ್ಡ್ ಇತ್ತು. ಸತ್ಯ ಅವರ ಪುಸ್ತಕ ಕಾಣಿಸಲಿಲ್ಲ.
ಅಂದ ಹಾಗೆ ಈ ಊರಿನಲ್ಲಿ ನಮ್ಮಲ್ಲಿ ಸಿಗುವ ಹಾಗೆ ಅರಿವೆ, ಚಕ್ಕೋತ, ಮೆಂತ್ಯ, ಸಬ್ ಸಿಗೆ ಮೊದಲಾದ ಸೊಪ್ಪುಗಳು ಸಿಗಲ್ಲ. ಇಲ್ಲಿ ಸಿಗೋ ಸೊಪ್ಪು ಅಂದರೆ ಕರಿಬೇವು, ಕೊತ್ತಂಬರಿ ಹಾಗೂ ಕೆಂಪು ದಂಟು. ಹಸಿರು ದಂಟು ದೇವಸ್ಥಾನದ ಹತ್ತಿರ ಸಿಗುತ್ತೆ ಅಂದಿದ್ದರು, ಅಲ್ಲೆಲ್ಲೂ ಕಾಣಿಸಲಿಲ್ಲ. ಸೊಪ್ಪು ಅಂದಕೂಡಲೇ ನನಗೆ ಒಬ್ಬ ನನ್ನ ಕಲಿಗು ರಾಜಶೇಖರನ್ ಎನ್ನುವ ಕೇರಳ ದ ಆಳು ನೆನಪಿಗೆ ಬಂದ. ದಿವಸ ಬಂದು ನನ್ನ ಬಳಿ ಅವನ ಕಷ್ಟ ಸುಖ ಹೇಳಿಕೊಳ್ಳೋನು. ಒಂದು ಸಲ ತುಂಬಾ ಕೋಪದಲ್ಲಿದ್ದ. ಮನೆ ಪಕ್ಕದವನ ಹತ್ತಿರ ಜಗಳ ಆಗಿದೆ. ಅದನ್ನು ವಿವರಿಸಿ ಅವನು ಹೇಳಿದ್ದು.. ನಾನು ಅವನ ಹಾಗೆ ಐದು ರೂಪಾಯಿ ಸೊಪ್ಪು ತಂದು ಸಾರು ಮಾಡಲ್ಲ, ಐವತ್ತು ರೂಪಾಯಿ ಕೇಜಿ ತರಕಾರಿ ತರ್ತಿನಿ…..! ಅವರ ಊರಿನಲ್ಲಿ ಸೊಪ್ಪು ಸಿಗುತ್ತಾ ಇರಲಿಲ್ಲ  ಅಂತ ಆಗ ಗೊತ್ತಿರಲಿಲ್ಲ!
ಆಸ್ಪತ್ರೆ ಕತೆ ಬಿಟ್ಟು ಮಿಕ್ಕಿದ್ದು ಬುರುಡೆ ಬಿಡ್ತಾ ಇದಾನೆ ಅಂತ ನೀವು ಅಂದುಕೊತಿರಿ ಅಂತ ನನಗೆ ಗೊತ್ತು.ಆಸ್ಪತ್ರೆ ಪುರಾಣ ಮುಂದೆ ಹೇಳ್ತಿನಿ, ನೀವು ಒಪ್ಪಿದರೆ…

ಸರಿ ತಾನೇ..


Leave a Reply

Back To Top