ಓದಿನ ಸಂಗಾತಿ
ಪರವಿನ ಬಾನು ಯಲಿಗಾರ ಅವರಿಂದ
“ನೆನಪು ಮರುಕಳಿಸುತ್ತವೆ”
ಓದಿನ ಬಗ್ಗೆ ಒಂದುಲೇಖನ,

“ ನೆನಪು ಮರುಕಳಿಸುತ್ತವೆ “
ಓದುವ ಹವ್ಯಾಸ , ಓದುವ ಅಭ್ಯಾಸ , ಓದುವ ಚಟವಾಗಿ ಪರಿಣಮಿಸಿದ ಕಾಲ ಒಂದಿತ್ತು , ಆ ಸಮಯ ನಮ್ಮದಾಗಿತ್ತು ಎನ್ನುವುದು ನಮಗೆ ಖುಷಿ .
ಕಾಲೇಜು ದಿನಗಳಲ್ಲಿ ಪಠ್ಯ ಪುಸ್ತಕ ಓದುವುದಕ್ಕಿಂತಲೂ ಹೆಚ್ಚು ಗ್ರಂಥಾಲಯದ ಪುಸ್ತಕ ಓದುತ್ತಿದ್ದ ಕಾಲವದು . ಒಳ್ಳೆಯ ಲೇಖಕ , ಕವಿ , ಸಾಹಿತಿಗಳು ಬರೆದ ಪುಸ್ತಕ ಒಬ್ಬರ ಕೈ ಸೇರಿದರೆ ಸ್ನೇಹಿತರೆಲ್ಲರೂ ಅದನ್ನು ಹಂಚಿಕೊಂಡು ಓದಿ , ಅದರಲ್ಲಿಯ ನಾಯಕ, ನಾಯಕಿ , ಖಳನಾಯಕನ ಬಗ್ಗೆ ಅಭಿಪ್ರಾಯ , ಅನಿಸಿಕೆಗಳ ವಿನಿಮಯವಾಗುತ್ತಿತ್ತು . ಒಂದು ಪುಸ್ತಕ , ಬರೀ ಓದುವ ಉದ್ದೇಶಕ್ಕೆ ಮಾತ್ರಾ ಸೀಮಿತವಾಗಿರದೆ ಎಷ್ಟೋ ಪ್ರೇಮಿಗಳ ನಡುವಿನ ಸೇತುವೆಯಾಗಿತ್ತು . ನೇರವಾಗಿ ಹೇಳಲು ಆಗದ ವಿಷಯಗಳನ್ನು ಚೀಟಿಯಲ್ಲಿ ಬರೆದು ಪುಸ್ತಕದ ಮೂಲಕ ತಲುಪಿಸುವ ಕೆಲಸ , ಎಷ್ಟೂ ಚಂದ ಅಲ್ಲವಾ…. ಆ ದಿನಗಳು ? ಪುಸ್ತಕಗಳು ಅದೆಷ್ಟೋ ಯುವಕರ ದಾರಿದೀಪವಾದವು , ಮಾರ್ಗದರ್ಶನ ಮಾಡಿದವು , ದುಃಖಿಸುವ ಮನಕೆ ಸಾಂತ್ವಾನ ನೀಡಿದವು , ಒಂಟಿತನಕೆ ಜೊತೆಯಾದವು , ಪುಸ್ತಕ ಬರೀ ಹಾಳೆಗಳ ಕಂತೆಯಾಗದೆ , ಅಕ್ಷರಗಳ ಗುಡ್ಡೆಯಾಗದೆ , ಪದಗಳ ಪುಂಜವಾಗದೆ ….. ಬರಹಗಾರನ ಅನುಭವ , ಅಭಿಪ್ರಾಯ , ಅನಿಸಿಕೆ , ನೋವು , ನಲಿವು , ಯಾತನೆ , ಸಂಕಟ , ಜ್ಞಾನ , ಪಾಂಡಿತ್ಯ, ಎಲ್ಲವನ್ನೂ ಎರಕ ಹೊಯ್ದು ಹೊರಬಂದು ಓದುಗನ ಕೈ ಸೇರಿರುತ್ತದೆ.
ಓದಿದ ಪುಸ್ತಕದ ಬಗ್ಗೆ ಬರಹಗಾರರಿಗೆ ಮೆಚ್ಚುಗೆ ಪತ್ರ ಬರೆಯುವುದು ಒಂದು ರೂಢಿ ಆಗ . ಉತ್ತರಕ್ಕೆ ಕಾಯುವುದು , ಮತ್ತೊಂದು ಪರಿಪಾಠ . ಹೀಗೆ , ಆಗೆಲ್ಲ ಪುಸ್ತಕ ಓದುವ , ಬರೆಯುವ ಜಮಾನ ಒಂದಿತ್ತು . ನಮ್ಮಿಷ್ಟದ ಲೇಖಕರ ಹೊಸ ಪುಸ್ತಕ ಮಾರುಕಟ್ಟೆಗೆ ಬಂದರೆ , ಅದು ಬರೆದವರಿಗಿಂತ ಓದುಗರಿಗೆ ಊರ ಹಬ್ಬದ ಸಂಭ್ರಮದ ಸಂಗತಿ . ದುಡ್ಡು ಕೊಟ್ಟು ಖರೀದಿಸುವ ಶಕ್ತಿ ಇಲ್ಲದಿದ್ದರೆ ಗ್ರಂಥಾಲಯಾದ ಮೊರೆ ಹೋಗುವುದು . ಪುಸ್ತಕ ಓದಿದ್ದು ಕುತೂಹಲಕ್ಕಾದರೂ , ಅದರಿಂದ ಕಲಿತ ಜ್ಞಾನ , ಪದಗಳ ಸಂಗ್ರಹ , ವಿಷಯ ಗ್ರಹಿಕೆ ಇವೆಲ್ಲವುಗಳು ಮಾತ್ರ ಇಂದಿಗೂ ನಮ್ಮ ಜೊತೆ ಜೀವಂತವಾಗಿವೆ .

ದಿನ ಪತ್ರಿಕೆ , ವಾರ ಪತ್ರಿಕೆ , ಮಾಸಿಕ , ತ್ತ್ರೆ ಮಾಸಿಕ , ದೀಪಾವಳಿ ವಿಶೇಷಾಂಕ, ಯುಗಾದಿ ವಿಶೇಷಾಂಕ , ನಿಯತಕಾಲಿಕೆಗಳು , ಅಬ್ಬಬ್ಬಾ ! ಎಂಥಾ ಸಂಭ್ರಮ ಆಗ , ಓದುವ ಜನ ಹೆಚ್ಚು , ಕೊಂಡು ಓದುವ ಜನ ಕಡಿಮೆ , ಸುದ್ದಿಗಳ ಜೊತೆ ಹೊತ್ತು ತರುವ ವಿವಿಧ ಕೌಶಲ್ಯಗಳ ಕಲಿಕೆ , ಅಡುಗೆ , ಪದಬಂಧ , ರಂಗೋಲಿ , ಚಿತ್ರಕಲೆ , ನಟ , ನಟಿಯರ ಸಂದರ್ಶನ , ರೈತರಿಗೆ ಮಾಹಿತಿ , ಆರೋಗ್ಯ ಮಾಹಿತಿ , ಸೌಂದರ್ಯದ ಕಾಳಜಿ , ರಾಜಕೀಯ , ಆಡಳಿತ , ಆರ್ಥಿಕತೆ , ಮಾರುಕಟ್ಟೆ ಸ್ಥಿತಿ , ಹೀಗೆ ಹತ್ತು ಹಲವು ವಿಷಯಗಳನ್ನು ಪತ್ರಿಕೆಗಳು ಹೊತ್ತು ಮನೆ ಮನವ ತಣಿಸಿದ್ದ ಕಾಲವದು . ಒಬ್ಬರಿಗೊಬ್ಬರು ಹಂಚಿಕೊಂಡು ಓದಿದ ದಿನಗಳು , ಎಷ್ಟೂ ಸುಂದರ ಅನುಭವ ಅದು , ಪರೀಕ್ಷೆಯ ಫಲಿತಾಂಶ , ದೂರ ದೇಶದ ಸಮಾಚಾರ , ಎಲ್ಲೋ ನಡೆದ ಅಪಘಾತ , ಅವಘಡ ತಿಳಿಸುವ ಏಕಮಾತ್ರ ವಾಹಿನಿ ಪತ್ರಿಕೆಯಾಗಿತ್ತು . ಓದು ತಿಳಿಯದ ಜನಕ್ಕೆ , ಬಲ್ಲವರು ಓದಿ ಸುದ್ದಿ ಹೇಳುವ ವ್ಯವಧಾನ ನಮ್ಮ ಜನಕ್ಕೆ ಆಗ ಇತ್ತು .
ಓದಲು ಬಾರದ ವರ್ಗಕ್ಕೆ ರೇಡಿಯೋ ಜೀವಾಳ …. ರೇಡಿಯೋ ಒಂದು ಕಾಲದಲ್ಲಿ ದೊಡ್ಡ ಮಟ್ಟದ ಸಂಚಲನವನ್ನೇ ಸೃಷ್ಟಿಸಿತ್ತು . ಜನಸಾಮಾನ್ಯರ ಮನೆಯ ಸದಸ್ಯನ ಜಾಗ ಪಡೆದಿತ್ತು . ಕಾರ್ಯಕ್ರಮದ ಆಧಾರದ ಮೇಲೆಯೇ ಸಮಯ ತಿಳಿಯುವಷ್ಟು ಜನ , ರೆಡಿಯೋಗೆ ಅಂಟಿಕೊಂಡರು . ಅಲ್ಲೂ ಒಂದು ಕೇಳುಗ ವರ್ಗ , ಬಗೆಬಗೆ ಕಾರ್ಯಕ್ರಮದ ಅಭಿಮಾನಿಗಳಿದ್ದರು . ಧ್ವನಿ ಆಧಾರದಿಂದನೆ ಹೆಸರು ಕಂಡುಹಿಡಿಯುವ ಮಟ್ಟಿಗೆ ಕೇಳುಗರು ತಲ್ಲೀನತೆ ಬೆಳೆಸಿಕೊಂಡಿದ್ದರು . ಯಾವ ಕಾರ್ಯಕ್ರಮ ಎಷ್ಟು ಗಂಟೆಗೆ ಎಂಬುದನ್ನು ನಿಖರವಾಗಿ , ಓದಲಾರದವರೂ ಹೇಳುವಷ್ಟು ರೆಡಿಯೋ ಜನರಿಗೆ ಹತ್ತಿರದ ಮಾಧ್ಯಮವಾಗಿತ್ತು . ಅದರಲ್ಲೂ , ಗ್ರಾಮೀಣ ಜನರ ಜೀವನಾಡಿಯೇ ರೇಡಿಯೋ . ಬೆಳಗಿನ ಸುಪ್ರಭಾತದಿಂದ ಶುರುವಾದ ದಿನಚರಿ , ಶುಭ ರಾತ್ರಿ ಎನ್ನುವವರೆಗೂ ಅದು ಉಲೀಯುತ್ತಿತ್ತು .
ತಾವು ಕೆಲಸ ಮಾಡುವ ಸ್ಥಳಗಳಿಗೂ ರೇಡಿಯೋ ಗೆ ಪರವಾನಿಗೆ ಇತ್ತು . ಮದುವೆಯ ವರನಿಗೆ ರೇಡಿಯೋ ಉಡುಗೊರೆ ಕೊಟ್ಟ ಕಾಲವದು. ಪ್ರೇಮಿ ಪ್ರೇಯಸಿಗೆ ಬೇಸರ ಕಳೆಯಲು , ಹೆಂಡತಿಯ ಒಂಟಿತನ ಹೋಗಲಾಡಿಸಲು ಗಂಡನ ಆಯ್ಕೆ ರೇಡಿಯೋ , ವೃದ್ಧರ ಸಮಯ ಸಾಗಲು ಒಳ್ಳೆಯ ಜೊತೆಗಾರ ಇದು . ರೇಡಿಯೋ ಉಲೀಯುವ ಸಂಗೀತದಷ್ಟು ಮಧುರ ಎಲ್ಲೂ ಇಲ್ಲ . ಆ ಧ್ವನಿ ಮಾಧುರ್ಯ, ಸ್ಪಷ್ಟ ಉಚ್ಚಾರಣೆ , ದ್ವನಿಯಲ್ಲೇ ಭಾವಗಳ ಏರಿಳಿತ ,ಸನ್ನಿವೇಶವನ್ನು ಕಣ್ಣಿಗೆ ಕಟ್ಟುವ ಹಾಗೆ ಬಿತ್ತರಿಸುವ ಕಾರ್ಯಕ್ರಮದ ವೈಖರಿ , ಬೇರೆ ಎಲ್ಲೂ ಸಿಗಲು ಸಾದ್ಯವಿಲ್ಲ

ಕಾಲ ಬದಲಾಯಿತು , ಮನಸ್ಥಿತಿ , ವಸ್ತುಸ್ಥಿತಿ , ಬದಲಾದವು , ಪುಸ್ತಕ , ಪತ್ರಿಕೆ , ರೇಡಿಯೋ , ಮರೆಯಾದವು , ಅಲ್ಲಲ್ಲಿ ಉಸಿರಾಡಿದರು ತುರ್ತು ನಿಗಾ ಘಟಕದಲ್ಲಿ ಇವೆ, ಯಾವಾಗ ಬೇಕಾದರೂ ಕೊನೆಯುಸಿರು ಎಳೆಯಬಹುದು .
ಓದುವ , ಕೇಳುವ , ಹವ್ಯಾಸ ಮರೆಮಾಚಿ ಇಂದು ಬರೀ ( ಮೊಬೈಲ್ ) ನೋಡುವ ಅನಾರೋಗ್ಯಕರ ಪದ್ಧತಿ ಹೆಚ್ಚಾಗಿದೆ . ನೈತಿಕತೆ , ಸಂಸ್ಕಾರ , ಸಂಬಂಧಗಳು , ಸದಾಚಾರ , ಆದರ್ಶಗಳು , ಮಾನವೀಯತೆ ಈ ಎಲ್ಲ ಮೌಲ್ಯಗಳನ್ನೂ ನಾವು ಕಳೆದುಕೊಳ್ಳುವುದನ್ನು ನೋಡುತ್ತಿದ್ದೇವೆ . ಯಾವುದರಲ್ಲಿಯೂ ಕುತೂಹಲವಿಲ್ಲ , ಆಸಕ್ತಿ ಇಲ್ಲ ,
ಕೂಡಿ ಬಾಳುವ , ಬೆಳೆಯುವ , ಬೆರೆಯುವ ಮನೋಭಾವ ನಮಗಿಲ್ಲ , ಯಾರನ್ನು , ಏನನ್ನೂ ಕೇಳುವ , ಹೇಳುವ ಪುರಸತ್ತು ನಮಗಿಲ್ಲ . ಮನುಷ್ಯ ಕಾಲ ಕಳೆದಂತೆ ಒಂಟಿಯಾಗುತ್ತಿದ್ದಾನೆ , ಯಾವ ಸಂಬಂಧವೂ ಬೇಕಿಲ್ಲಾ, ಬರೀ ಅನಿವಾರ್ಯತೆಗೆ ಒಂದೆಡೆ ಬದುಕಬೇಕಿದೆ . ಸತ್ವಹೀನ ಸಮಾಜ ನಿರ್ಮಾಣವಾಗುತ್ತಿದೆ .
ಪರವಿನ ಬಾನು ಯಲಿಗಾರ

ನಾವೆಲ್ಲರೂ ಬಾಲ್ಯದಲ್ಲಿ ಓದಿನ ಗೀಳಿನಿಂದ ಪುಸ್ತಕ ಅಂಗಡಿಗೆ ಹೋಗಿ ಕುಳಿತುಕೊಳ್ಳುವ ಕಾಲವಿತ್ತು ಜೊತೆಗೆ ಗ್ರಂಥಾಲಯ ವೇ ನಮ್ಮ ಸರ್ವಸ್ವ ಆಗಿತ್ತು ಮೇಡಂ ಲೇಖನ ಚೆನ್ನಾಗಿದೆ
ಎ ಎಸ್ ಮಕಾನದಾರ ಗದಗ
ತುಂಬಾ ಚೆನ್ನಾಗಿದೆ ಮೇಡಂ
ಮೊಬೈಲ್ ಬಂದಮೇಲೆ ಪತ್ರಿಕೆಗಳು, ರೇಡಿಯೋ, ಓದುವವರ, ಕೇಳುವವರ ಸಂಖ್ಯೆಯಲ್ಲಿ ವ್ಯತ್ಯಾಸ ಆಗಿರಬಹುದು. ಆದರೆ ರೇಡಿಯೋ ತುರ್ತು ನಿಗಾ ಘಟಕದಲ್ಲಿದೆ ಅನ್ನುವ ಮಾತು ಸರಿಯಲ್ಲ. ಈಗ ಮೊಬೈಲ್ ನಲ್ಲೇ ಆಪ್ ಇದೆ ನ್ಯೂಸ್ ಆನ್ ಏರ್ ಅಂತ ಅದರಿಂದ ಕೇಳುವವರ ಸಂಖ್ಯೆ ಹೆಚ್ಚಾಗಿದೆ