ಅಂಕಣ ಸಂಗಾತಿ
ಪೋಷಕರಿಗೊಂದು ಪತ್ರ
ಇಂದಿರಾ ಪ್ರಕಾಶ್
ಪತ್ರ-05
ಮತ್ತೊಂದು ವಿಷಯದ ಬಗ್ಗೆ ಪ್ರಸ್ತಾಪ ಮಾಡಬೇಕೆಂದರೆ, ಮಕ್ಕಳು ಓದುವ ಬಗ್ಗೆ ಪೋಷಕರ ಧೋರಣೆಗಳು ಹೇಗಿರುತ್ತವೆಂದರೆ ಅಯ್ಯೋ ನನ್ನ ಮಗ/ಮಗಳು ಪುಸ್ತಕವನ್ನೇ ಮುಟ್ಟುವುದಿಲ್ಲ, ಬರೀ ಮೊಬೈಲಲ್ಲೇ ಕಳೆದು ಹೋಗಿರುತ್ತಾರೆಂದೋ, ಅಥವಾ ನನ್ನ ಮಗನಿಗೆ ಅಥವಾ ಮಗಳಿಗೆ ಗಣಿತ ಎಂದರೆ ಆಗದು, ಕನ್ನಡ ಎಂದರೆ ಆಗದು ಇನ್ನೆಲ್ಲ ಪರ್ವಾಗಿಲ್ಲ ಓದುತ್ತಾನೆ ಅಥವಾ ಓದುತ್ತಾಳೆ ಎಂದು ಹೇಳುವುದು. ಇಲ್ಲವಾದರೆ ಶಾಲೆಗೆ ಶಿಕ್ಷಕರನ್ನುನೋಡಲು ಹೋದಾಗ ನನ್ನ ಮಗು ತುಂಬಾ ದಡ್ಡ ಏನು ಮಾಡೋದು ಏನಾದ್ರೂ ಮಾಡಿ ಸರಿ ಮಾಡಿ ಮೇಡಂ ಎಂದು ಹೇಳುವುದನ್ನು ಕೇಳಿ ಕೇಳಿ ಇವರಿಗೆ ಹೇಗೆ ಅರ್ಥ ಮಾಡಿಸುವುದು ಎನಿಸುತ್ತಿದೆ.
ಸದಾ ನಮ್ಮ ಮಕ್ಕಳ ಬಗ್ಗೆ ನಾವೇ ನಕಾರಾತ್ಮಕವಾಗಿ ಮಾತನಾಡುತ್ತಿದ್ದರೆ ಅದು ಆತ,/ಆಕೆ ಕೇಳಿಸಿಕೊಂಡು ಅದನ್ನೇ ಯೋಚಿಸುತ್ತಾರೆ ತಾನೇ .ಮತ್ತು ಹಾಗೆ ಆಗುತ್ತಾರೆ ಸಹ. ಬಿಡು ನನಗೆ ಇಂತಹ ವಿಷಯ ಎಷ್ಟು ಓದಿದರೂ ಬರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಖಂಡಿತ ಇಂತಹ ತಪ್ಪನ್ನು ದಯಮಾಡಿ ಮಾಡಬೇಡಿ ಪೋಷಕರೇ. ಯಾವುದನ್ನು ನಾವು ಪದೇಪದೇ ಹೇಳುತ್ತೇವೋ ಅಥವಾ ಮಾಡುತ್ತೇವೋ ಅದೇ ನಾವು ಸಹ ಆಗುತ್ತೇವೆ ಅಲ್ಲವೇ?
ಇದನ್ನು ಕೇಳಿಸಿಕೊಂಡ ಮನೆಯ ಹಿರಿಯರು ಮನೆಗೆ ಬಂದವರ ಬಳಿ ಅಥವಾ ದೇವಸ್ಥಾನಗಳಲ್ಲಿ, ದಾರಿಯಲ್ಲಿ ಕಂಡ ಕಂಡ ಸ್ನೇಹಿತರಿಗೆಲ್ಲ ನಮ್ಮ ಮಗು ಓದುವುದಿಲ್ಲ ಎಂದು ಹೇಳುತ್ತಾ ಬಂದರೆ, ಪುನಹ ಪುನರಾವರ್ತಿತವಾದ ತರಂಗಗಳು ನಿಮ್ಮ ಮಗುವಿನ ಸುಪ್ತಮನಸ್ಸಿನಲ್ಲಿ ಬೇರೂರು ಬಿಡುತ್ತವೆ. ಅದು ಬದಲಾವಣೆಯಾಗಲು ಅಸಾಧ್ಯ. ಆದ್ದರಿಂದ ನಿಮ್ಮ ಮಕ್ಕಳನ್ನು ಹೊಗಳುತ್ತಾ ಇರಿ. ಆಗ ನೋಡಿ ಮಗುವಿನ ವರ್ತನೆಯಲ್ಲಿ ಎಷ್ಟು ಬದಲಾವಣೆಯಾಗುತ್ತದೆ ಎಂದು.
ಧನಾತ್ಮಕ ಚಿಂತನೆಯನ್ನು ಹೀಗೂ ಮಾಡಬಹುದೇ?ಎಂಬ ಒಂದು ಚಿಂತನೆ ಮಾಡ್ತಾ ಸಣ್ಣ ಕಥೆಯೊಂದು ನೆನಪಿಗೆ ಬರ್ತಾ ಇದೆ. ಒಬ್ಬ ಹಿರಿಯ ತಾಯಿ ತನ್ನ ಹೊಟ್ಟೆಪಾಡಿಗಾಗಿ ಪ್ರತಿದಿನ ಹಬ್ಬದೂಟವನ್ನ ಬಾಳೆ ಎಲೆಯಲ್ಲಿ ಬಡಿಸುವ ವ್ಯವಸ್ಥೆ ಮಾಡಿಕೊಂಡಿದ್ದರು. ಇದು ರಾತ್ರಿ ವೇಳೆ ಮಾತ್ರ. ಏಳು ಗಂಟೆಗೆ ಪ್ರತಿದಿನ ಊಟ ಪ್ರಾರಂಭ ಆಗ್ತಾ ಇತ್ತು. ತುಂಬಾ ರುಚಿಯಾಗಿ ಶುಚಿಯಾಗಿ ಅಮ್ಮ ಪ್ರೀತಿಯಿಂದ ಅಡುಗೆ ಮಾಡಿ ಬಡಿಸ್ತಾ ಇದ್ರು .
ಅವರ ಅಡುಗೆಯ ರುಚಿ ನೋಡಲು ತುಂಬಾ ಜನ ಬೇರೆ ಊರುಗಳಿಂದ ಸಹ ಬರ್ತಾ ಇದ್ರು. ಅಮ್ಮನಿಗೆ ಇದರಿಂದ ತುಂಬಾ ಖುಷಿ. ನನ್ನ ಕಷ್ಟಕ್ಕೆ ಪ್ರತಿಫಲ ದೊರಿತ ಇದೆ ಅಂತ. ಹೀಗೆ ಇರಬೇಕಾದಾಗ ಅಮ್ಮನ ಬಳಿ ಒಬ್ಬಾತ ಬಂದು ಹೇಳ್ತಾನೆ. ಅಮ್ಮ ನೀವು ನಿಮ್ಮ ಕಷ್ಟ ನಿವಾರಿಸಿಕೊಳ್ಳೋಕೋಸ್ಕರ ಇಷ್ಟು ಇಳಿವಯಸ್ಸುಆದ್ರೂ ಅಡುಗೆ ಮಾಡಿ ಬಡಿಸುವ ವೃತ್ತಿಯನ್ನು ಮಾಡ್ಕೊಂಡಿದ್ದೀರಾ. ಆದರೆ ನೀವು ಗಮನಿಸಿಲ್ಲ ಅನ್ಸುತ್ತೆ. ಒಬ್ಬಾತ ಪ್ರತಿದಿನ ಜನಜಂಗುಲಿ ಇರುವಾಗ ಹಣ ಕೊಡದೆ ಊಟ ಮಾಡಿಕೊಂಡು ಹೋಗ್ತಾ ಇದ್ದಾನೆ. ಇದರಿಂದ ನಿಮಗೆ ಎಷ್ಟು ನಷ್ಟವಾಗ್ತಿದೆ. ನಾನು ಆತನನ್ನ ಸುಮಾರು ದಿವಸಗಳಿಂದ ಗಮನಿಸ್ತಾ ಇದ್ದೀನಿ. ಅಗೋ ಅಲ್ಲಿ ಕುಳಿತಿರುವ ಅವನೇ ಎಂದು ತೋರಿಸಿದಾಗ
ಅಮ್ಮ ಏನು ಹೇಳಬಹುದು ಎಂದು ಯೋಚಿಸುತ್ತಿರುವಿರಾ?
ಹೌದು ನಾನು ಪ್ರತಿದಿನ ನೋಡ್ತಾ ಇದ್ದೇನೆ ಆತ ಊಟ ಮಾಡಿ ಹಣ ಕೊಡದೆ ಹೋಗೋದನ್ನು. ಹಾಗಾದ್ರೆ ನೀವೇಕೆ ಸುಮ್ಮನಿರುವಿರಿ, ಅವನಿಗೆ ಹಣ ಕೊಡುವವರೆಗೂ ಬರಬೇಡ ಎಂದು ಹೇಳಿ ಇಲ್ಲಾಂದ್ರೆ ಪೊಲೀಸ್ ಕಂಪ್ಲೇಂಟ್ ಕೊಡಿ ಎಂದು ಹೇಳಿದನು.
ಆಗ ಆ ಮಾತೆ ವಿಸ್ತಾರವಾಗಿ ಹೇಳುತ್ತಾರೆ ಏನೆಂದರೆಅವನು ಪ್ರತಿದಿನ ದೇವರಲ್ಲಿ ಪ್ರಾರ್ಥಿಸುತ್ತಾ ಇರುತ್ತಾನೆ ಇವರ್ ಮನೆಗೆ ತುಂಬಾ ಜನ ಬರ್ಲಿ ತುಂಬಾ ಹಣ ಸಿಗಲಿ. ನಾನು ಸಹ ಜನರೊಂದಿಗೆ ಊಟ ಮಾಡಬಹುದು ಎಂದು. ಇಷ್ಟೊಂದು ಜನ ಅವನ ಪ್ರಾರ್ಥನೆ ಗೊಲಿದು ಬರುವಾಗ ನಾನೇಕೆ ಆತನಿಗೆ ಬರಬೇಡವೆನ್ನಲಿ.
ನನಗೆ ಆತನಿಂದ ಅನುಕೂಲವೇ ಹೊರತು ನಷ್ಟವಲ್ಲವೆಂದು ಹೇಳಿದರು. ಕೇಳಿದ್ರಾ ಪೋಷಕರೇ ಎಂತಹ ಧನಾತ್ಮಕ ಚಿಂತನೆ ಅಮ್ಮನದು. ಹೀಗೆ ಪ್ರತಿಯೊಂದು ವಿಷಯದಲ್ಲಿ ನಕಾರಾತ್ಮಕ ಕ್ಕೆ ವಿರುದ್ಧವಾಗಿ ಯೋಚಿಸಿದರೆ ಧನಾತ್ಮಕವಾಗಿ ಬಿಡುತ್ತದೆ.
ಅದು ಬಿಟ್ಟು ಬೇಡದ ಆಲೋಚನೆಗಳಿಗೆ ಸುಪ್ತ ಮನಸ್ಸನ್ನು ಬಲಿ ಕೊಡದಿರಿ. ಎಲ್ಲಾ ನಿಮ್ಮಲ್ಲೇ ಇದೆ
ಬೇಕಾದ್ದು ಬಳಸಿಕೊಳ್ಳಬಹುದು. ಆದರೆ ನಿಮ್ಮ ಆಲೋಚನೆ ಬೇಕಾದದ್ದೋ ಅಥವಾ ಬೇಡವಾದದ್ದೋ ಯೋಚಿಸಿ.
ಮುಂದಿನ ಭಾಗದಲ್ಲಿ ಮತ್ತೆ ಬರುವೆ
ನಮಸ್ಕಾರಗಳು
——————————————
ಇಂದಿರಾ ಪ್ರಕಾಶ್.
ಇಂದಿರಾ ಪ್ರಕಾಶ್
ಲೇಖಕರು ಡೆಕ್ಕನ್ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥೆಯ ಪಾಲುದಾರರಾಗಿ, ಪ್ರಾಂಶುಪಾಲರಾಗಿ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯವನ್ನು ನಿರ್ವಹಿಸಿದ್ದಾರೆ
ಹವ್ಯಾಸ ಕಥೆ ಕವನ ಲೇಖನಗಳನ್ನು ಬರೆಯುವುದು. ಪುಸ್ತಕಪ್ರೇಮಿಮೇಶ್ ಹೊಳಲ್ಕೆರೆ