ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೇ ಶಿವಲೋಕ
ಹೆಣ್ಣು ಹೊನ್ನು ಮಣ್ಣು ಮೂರನೂ ಕಣ್ಣಿನಲಿ ನೋಡಿ
ಕಿವಿಯಲಿ ಕೇಳಿ ಕೈಯಲ್ಲಿ ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತ್ತು
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನಾ
12ನೇ ಶತಮಾನದಲ್ಲಿ ಆಗಿ ಹೋದ ಶರಣರು ಭಕ್ತಿ ಪ್ರಿಯರು.ಅವತ್ತಿನ ಆ ಕಾಲದಲ್ಲಿ ಡಾಂಭಿಕತೆಯನ್ನು ಮೆರೆವ ಗುಂಪೊಂದನ್ನು ನೋಡಿ ಅಕ್ಕಮಹಾದೇವಿಯು ಈ ಒಂದು ವಚನದಲ್ಲಿ ಹೇಳಿರುವುದು ಕಂಡು ಬಂದಿದೆ .
ಅಂದಿನ ಕಾಲದ ಶರಣ ಶರಣೆಯರು ತಮ್ಮಲ್ಲಿರುವ ಸಣ್ಣತನವನ್ನು, ಡಾಂಭಿಕತೆಯನ್ನು,ದೋಷವನ್ನು ,ನ್ಯೂನತೆಯನ್ನು ,ತಮ್ಮ ತಪ್ಪಿನ ಅರಿವನ್ನು ತಮ್ಮಲ್ಲಿಯೇ ಆತ್ಮ ವಿಮರ್ಶಾತ್ಮಕ ಅವಲೋಕನ ಮಾಡಿಕೊಂಡು ಪರಿಪೂರ್ಣತ್ವವನ್ನು ಹೊಂದಿ ,ತಮ್ಮನ್ನು ತಾವು ತಿದ್ದಿಕೊಂಡು ನುಡಿದಂತೆ ನಡೆದರು .ನಡೆದಂತೆ ನುಡಿದು ತೋರಿ ಹೋದವರು ಶರಣರು .
ಇಂಥಹ ಶರಣರ ನಡೆವ ಹಾದಿಗೆ ಕೆಡುಕಿನ ಉದ್ದೇಶದಿಂದ ಮುಂದಾಗಿ ತಮ್ಮ ಅವನತಿಗೆ ತಾವೇ ಕಾರಣರಾದ ಅನೇಕ ಉದಾಹರಣೆಗಳನ್ನು ನಾವು ನೀವುಗಳೆಲ್ಲ ಕೇಳಿ ತಿಳಿದಿದ್ದೇವೆ.
ಇದನ್ನೇ ಅಕ್ಕಮಹಾದೇವಿಯು
ಒಳ್ಳೆಯ ಶರಣರ ಸಂಸರ್ಗದಲ್ಲಿ ಇದ್ದುಕೊಂಡು ತನ್ನಲ್ಲಿರುವ ನ್ಯೂನತೆಗಳನ್ನು ಕಳೆದು ಅಂಥವರಿಂದ ದಾನವನ್ನು ಸ್ವೀಕರಿಸಿ ,ಪರಿಪೂರ್ಣಳಾಗಿ ಶಿವನ ಒಲುಮೆಗೆ ಪಾತ್ರಳಾಗುವ ಬಗೆಯನ್ನು ಅಕ್ಕನ ಈ ಒಂದು ವಚನದಲ್ಲಿ ನಾನು ಕಂಡುಕೊಂಡಿರುವೆ .
ಅನ್ನವ ನೀಡುವವರಿಂಗೆ ಧಾನ್ಯವೇ ಶಿವಲೋಕ
*ಅರ್ಥವ ಕೊಡುವವರಿಂಗೆ ಪಾಷಾಣವೇ ಶಿವಲೋಕ

ಯಾವುದೇ ದಾನವನ್ನು ಮಾಡಬೇಕಾದರೆ ನಿಸ್ವಾರ್ಥ ಸೇವೆಯಿಂದ ಮಾಡಬೇಕು .
ನಾವು ಮಾಡುವ ಅನ್ನದಾನ ಹಾಗೂ ಅರ್ಥದಾನದಲ್ಲಿ ಯಾವುದೇ ಫಲಾಪೇಕ್ಷೆಯನ್ನು ಅಪೇಕ್ಷಿಸಬಾರದು.
ಇಲ್ಲಿ ಅನ್ನವನ್ನು ದಾನ ಮಾಡುವುದಕ್ಕೆ ಧಾನ್ಯವೇ ಮೂಲ ದ್ರವ್ಯವಾಗಿದೆ. ಧಾನ್ಯವೇ ಇಲ್ಲದಿದ್ದರೆ ಅನ್ನದಾಸೋಹವನ್ನು ಹೇಗೆ ಮಾಡಲು ಸಾಧ್ಯ?ಹೀಗಾಗಿ
ಅನ್ನ ದಾಸೋಹಿಗಳು ,ಧಾನ್ಯವನ್ನೇ ಶಿವಲೋಕಕ್ಕೆ ಸಮಾನ ಎಂದು ಭಾವಿಸುತ್ತಾರೆ .
ಹಾಗೇಯೇ ಹಣವನ್ನು ದಾಸೋಹ ಅಂದರೆ ದಾನ ಮಾಡುವವರು ಹರಳು ವನ್ನೇ ಶಿವಲೋಕ ಸಮಾನವೆಂದು ಭಾವಿಸುತ್ತಾರೆ .
ಹೆಣ್ಣು ಹೊನ್ನು ಮಣ್ಣು ಮೂರನೂ ಕಣ್ಣಿನಲಿ ನೋಡಿ ಕಿವಿಯಲಿ ಕೇಳಿ ಕೈಯಲ್ಲಿ ಮುಟ್ಟಿ ಮಾಡುವ ಭಕ್ತಿ ಸಣ್ಣವರ ಸಮಾರಾಧನೆಯಾಯಿತ್ತು

ಅಕ್ಕ ಮಹಾದೇವಿಯು ಡಾಂಭಿಕ ಭಕ್ತಿಯನ್ನು ಬಹಳಷ್ಟು ವಿಡಂಬನಾತ್ಮಕವಾಗಿ ಹೇಳಿರುವುದು ಕಂಡು ಬಂದಿದೆ .
ಭಕ್ತರಾದವರು ಸ್ವಾರ್ಥ ಲೋಲುಪತೆಯನ್ನು ವಂಚನೆಗಳನ್ನು ತ್ಯಜಿಸಿದವರಾಗಿರಬೇಕು .
ಸ್ವಾರ್ಥ ಸಾಧನೆಯಿಂದ ಮಾಡುವ ದಾನವನ್ನು ಅಕ್ಕಮಹಾದೇವಿಯವರು ಖಂಡಿಸುತ್ತಾರೆ .
ಮನುಷ್ಯನಲ್ಲಿರುವ ಸ್ವಾರ್ಥಕ್ಕೆ ಮುಖ್ಯ ಕಾರಣವೇ ಈ ಹೆಣ್ಣು ,ಹೊನ್ನು ಹಾಗೂ ಮಣ್ಣು ಇವುಗಳೆಲ್ಲವನ್ನು ಕಣ್ಣು ತುಂಬಿ ನೋಡಿ ಕಿವಿ ತುಂಬ ಕೇಳಿ ಕೈಯಲ್ಲಿ ಮುಟ್ಟುತ್ತ ಮೈಮರೆತು ಆನಂದಿಸುತ್ತ ಮಾಡುವ ಭಕ್ತಿಯು ಸಣ್ಣವರ ಅಂದರೆ ಹೀನಮನವನ್ನು ಹೊಂದಿದ ಭಕ್ತಿ ಎನ್ನುತ್ತಾಳೆ ಅಕ್ಕ .
ಈ ಭಕ್ತಿಯು ಕ್ಷುಲ್ಲಕ ಭಕ್ತಿ ಡಾಂಭಿಕ ಭಕ್ತಿಯಾಗಿದೆ.
ಈ ನೋಡುವಿಕೆ,ಕೇಳುವಿಕೆ ,ಹಾಗೂ ಮುಟ್ಟುವಿಕೆ ಇವುಗಳಿಂದ ಸಿಗುವ ಸ್ಪರ್ಶ ಸುಖ, ಶ್ರಾವ್ಯ ಸುಖ,ಹಾಗೂ ದರ್ಶನ ಸುಖ ಇವು ವಿರಕ್ತ ಭಾವವಲ್ಲ .ಇಲ್ಲಿ ಭಾವ ಹಾಗೂ ಸಂಬಂಧಿತ ಕ್ರಿಯೆಗಳೊಳಗೆ ಯಾವುದೇ ಅವಿನಾಭಾವ ಸಂಬಂಧವಿಲ್ಲ ಇದು ಕಾರ್ಯ ಹರಣ ಅಷ್ಟೇ ಎಂದು ಅಕ್ಕ ಹೇಳುತ್ತಾಳೆ .
ತನ್ನನಿತ್ತು ತುಷ್ಟಿ ವಡೆವರನೆನಗೆ ತೋರಾ ಶ್ರೀ ಗಿರಿ ಚೆನ್ನಮಲ್ಲಿಕಾರ್ಜುನಾ

ಅಕ್ಕಮಹಾದೇವಿಯು ಹೇ ಚೆನ್ನಮಲ್ಲಿಕಾರ್ಜುನಾ ಸ್ವಾರ್ಥ ಸಾಧನೆಯ ಭಕ್ತಿಯನ್ನು ತ್ಯಜಿಸಿ ನಿಸ್ವಾರ್ಥ ಸಾಧನೆಯಿಂದ ದುಡಿವ ,ಸಮರ್ಪನಾಭಾವದಿಂದ ಲಿಂಗವೇ ತಾನಾಗಿ ಅಂಗವೇ ಲಿಂಗವಾಗಿ ತೃಪ್ತಿಯ ಮನೋಭಾವ ವನ್ನು ಹೊಂದಿದ, ಶಿವಾನುಗ್ರಹಕ್ಕೆ ಪಾತ್ರರಾದ ಭಕ್ತರನ್ನು ನನಗೆ ತೋರಿಸು .ಅಂಥಹ ಶಿವಾನುಗ್ರಹಕ್ಕೆ ಪಾತ್ರರಾದವರಿಂದ ನಾನು ದಾನವನ್ನು ಸ್ವೀಕರಿಸಿ ನನ್ನಲ್ಲಿರುವ ದೋಷ ಕಳೆದುಕೊಂಡು ಪರಿಪೂರ್ಣವಾಗುವ ಪಥವನ್ನು ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ ಎಂದು ಅಕ್ಕಳು ದೀನಳಾಗಿ ಮೊರೆಯನ್ನು ಇಡುತ್ತಾಳೆ.


Leave a Reply

Back To Top