ಲೋಕಕಾರಕ ಬಾಪೂ _ಕವಿಗಳ ಕಣ್ಣಿನಲ್ಲಿ-ಸುಜಾತಾ ರವೀಶ್

ಭಾರತೀಯರ ಬಂದ ವಿಮೋಚಕ ರಾಷ್ಟ್ರಪಿತ ಮಹಾತ್ಮಗಾಂಧಿ ಲೋಕ ನಾಯಕರುಗಳ ಶ್ರೇಣಿಯಲ್ಲಿ ಅಗ್ರ ಪಂಥೀಯರು . ಇವರ ಬಗೆಗಿನ ಕವನಗಳಂತೂ ಅಸಂಖ್ಯಾತ.  ಮುಖ್ಯವಾಗಿ ನನ್ನ ಮನ ಸೆಳೆದ ಈ ಪದ್ಯದ ಬಗ್ಗೆ ಇಂದು ತಿಳಿದುಕೊಳ್ಳೋಣ . ಈ ಆಂಗ್ಲ ಕವಿತೆಯನ್ನು ಬರೆದವರು ಕನ್ನಡದ ಸುಪ್ರಸಿದ್ಧ ಲೇಖಕ ಮತ್ತು ತಮ್ಮ ನಾಟಕಗಳಿಂದ ಕನ್ನಡನಾಡಿನಲ್ಲಿ ಹೆಸರಾಗಿರುವ ಶ್ರೀ ಟಿ ಪಿ ಕೈಲಾಸಂ ಅವರು.  ಇದನ್ನು ಕನ್ನಡಕ್ಕೆ ಅನುವಾದಿಸಿದವರು ಮತ್ತೊಬ್ಬ ಹೆಸರಾಂತ ಕನ್ನಡದ ಕವಿ ಹೆಂಡ್ಕುಡ್ಕ ರತ್ನನ ಪದ ಬರೆದ ಹಾಗೂ ಕೈಲಾಸಂ ಅವರಿಗೆ ಆಪ್ತರು ಆತ್ಮೀಯರು ಆಗಿದ್ದ ಶ್ರೀ ಜಿ ಪಿ ರಾಜರತ್ನಂರವರು.  ಈ ಇಬ್ಬರು ದಿಗ್ಗಜಗಳ ಕಣ್ಣಲ್ಲಿನ ಗಾಂಧೀಜಿಯ ಪ್ರತಿಮೆ ಒಂದು ಪಾಕ ತಯಾರಿಕಾ ರೂಪದಲ್ಲಿ ಹೊರ ಬಂದಿರುವುದು ಮತ್ತೊಂದು ವೈಶಿಷ್ಟ್ಯ.  ಹಾಗಾಗಿ ಇದನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ.  

೧೯೩೬ ರ ಜೂನ್ ತಿಂಗಳಿನಲ್ಲಿ ಗಾಂಧೀಜಿ ಬೆಂಗಳೂರಿನ ಭೇಟಿಯಲ್ಲಿದ್ದಾಗ “ಕುಮಾರಕೃಪಾ”ದಲ್ಲಿ ಈ ಪದ್ಯವನ್ನು ಅವರ ಮುಂದೆ ವಾಚಿಸಲಾಯಿತು.  ಬಾಪೂರವರ ಕಡೆಯ ಬೆಂಗಳೂರಿನ ಭೇಟಿ ಇದೆಂದು ತಿಳಿಯಲಾಗಿದೆ.

ಮೂಲ “ದಿ ರೆಸಿಪಿ” ಕವಿತೆಗೆ ಕನ್ನಡದಲ್ಲಿ ನಮ್ಮ ಬಾಪೂ ಎಂಬ ನಾಮಕರಣ. ರುಚಿಯಾದ ಖಾದ್ಯಗಳ ತಯಾರಿಕಾ ವಿಧಾನ ಎಂದು ಮೊದಲೇ ಹೇಳಿದ್ದೆನಲ್ಲ  ಹಾಗಾಗಿ ಮೊದಲಿಗೆ ಬೇಕಾದ ಸಾಮಾನುಗಳನ್ನು ಜೋಡಿಸಿಕೊಳ್ಳಬೇಕು ಅಲ್ಲವೇ?  ಈ ಪಕ್ವಕ್ಕೆ ಬೇಕಾದದ್ದು ಒಂದು ಹಿಡಿಮೂಳೆ ಚಕ್ಕಳ ಅದಕ್ಕೆ 3 / 4 ಚಮಚ ರಕ್ತಮಾಂಸ ಅಂತೆ . ಅದನ್ನು ಹೀಗೆ ಹೇಳಿದ್ದಾರೆ ನೋಡಿ .

ಒಂದೆ ಹಿಡಿಮೂಳೆ ಚಕ್ಕಳ ಅಷ್ಟೆ; ಅದಕ್ಕೆ ಸುರಿ
ಮೂರೋ ನಾಲ್ಕೋ ಚಮಚ ರಕ್ತ ಮಾಂಸ; ಜೊತೆಗಿರಿಸು

ಕೃಶಕಾಯದ ಗಾಂಧೀಜಿಯವರ ರೂಪ ಕಣ್ಣ ಮುಂದೆ ಬಂತು ತಾನೆ? ಈ ದೇಹದಲ್ಲಿರುವ ಕಡಲಿನಷ್ಟು ಆಳದ ಮನಸ್ಸಿನ ಹೋಲಿಕೆ;  ಅದೂ ಎಂತಹ ಪುನೀತ ಮನಸು  ಅಂತೀರಿ? ಸಮುದ್ರದ ವಿಸ್ತಾರದ ಮನದ ತುಂಬಾ ನೆರೆ ಬಂದು ಭೋರ್ಗರೆಯುವ ಅಲೆಗಳಂತೆ ಪ್ರೇಮ ತುಂಬಿದೆ.  ಮೊದಲೇ ವಿಸ್ತಾರ ಕಡಲಿನಾಳ.  ಅದಕ್ಕೂ ಪ್ರವಾಹ ಬಂದರೆ ಆ ಪ್ರೀತಿಯ ಹರಹು ಊಹಿಸಲಸದಳ. ಈ ಸಾಲಿನಲ್ಲಿ ಹೀಗೆ ಬಿಂಬಿತ

ಪಾಪಮಂ ನೆರೆತೊರೆದ ಕಡಲಿನಾಳದ ಮನಸ
ನೆರೆಬಂದ ಕಡಲಿನೊಲ್ ಪ್ರೇಮವಂ ತುಂಬಿದೆದೆಯ

ಇಷ್ಟಾದ ದೇಹಕ್ಕೆ ಅಗಲದೆರಡು ಕಿವಿ, 2 ಪುಟ್ಟ ಕಣ್ಣುಗಳನ್ನು ಸೇರಿಸಿದರೆ ಪೂರ್ಣರೂಪ ಪ್ರಾಪ್ತಿ.  ಇಲ್ಲಿ ಕಿವಿಯನ್ನು ಮೊರಕ್ಕೆ ಹೋಲಿಸಿರುವುದರ ಔಚಿತ್ಯ ಮಹತ್ವ ಗಮನಿಸಬೇಕು . ಆನೆಗೆ ಹಾಗೆಯೇ ಮೊರದಗಲದ ಕಿವಿ.  ಆ ಗಜಮುಖನಾದ ನಮ್ಮ ಗಣಪನಿಗೂ  ಸಹ.
ಅಗಲ ಕಿವಿ ಬುದ್ದಿವಂತಿಕೆಗೆ ಸೂಕ್ಷ್ಮಮತಿಗೆ ಪ್ರತಿಮೆ.  ಅದಕ್ಕೆ ಅನ್ವಯವಾಗಿರುವ ಗಾಂಧೀಜಿಯವರಿಗೂ ಹಾಗೆ ಅಗಲ ಕಿವಿ . ಕಣ್ಣುಗಳು ಆನೆಯಂತೆಯೇ ಸಣ್ಣವಾದರೂ ದೃಷ್ಟಿ ಮಾತ್ರ ತೀಕ್ಷ್ಣ.  ಅಂತಹ ವದನಕ್ಕೆ ಹಾಲು ಹಸುಳೆಯ ಮಂದಹಾಸವನ್ನು ಲೇಪಿಸಿದರೆ?  ಮಗುವಿನ ನಿಷ್ಕಲ್ಮಶ ನಗೆಯೇ ಮೋಹಕ . ಎಂತಹ ಪಾಪಿಯ ಹೃದಯದಲ್ಲೂ ಮಾರ್ದವತೆಯ ಆಹ್ಲಾದಕರ ಭಾವವನ್ನು ಉಕ್ಕಿಸುವ ಶಕ್ತಿಯುಳ್ಳದ್ದು.  ಗಾಂಧೀಜಿಯವರ ನಗೆಯೂ ಹಾಗೆ.  ನಿಷ್ಕಪಟ ಮನದ ಸಸ್ನೇಹ ಮೃದುಲ ಭಾವದೊರತೆ ಮೂಡಿಸುವಂತಹುದು.

ಹಚ್ಚು ಮೊರಕಿವಿಯೆರಡ 2ಪಿಳಿಪಿಳಿ ಕಣ್ಣ
ಹಾಲು ಹಸುಳೆಯ ಮಂದಹಾಸವನು ಲೇಪಿಸದಕೆ

ಇದಿಷ್ಟು ಬಾಹ್ಯ ರೂಪವಾದರೆ ಇನ್ನು ಅಂತರಾತ್ಮ ಹಾಗೂ ನುಡಿಗಳು ಹೇಗಿರುತ್ತದೆಂದು ಹೀಗೆ ಬಣ್ಣಿಸುತ್ತಾರೆ ಕೇಳಿ

ಒಳಗಿರಿಸು ಜೇನು ನಗುವೊಲಿನಿಯ ನಾಲಿಗೆಯ
ಮೇಣ್ ಹಿಮಗಿರಿಯ ಮೀರಿಸಿ ನಿಮಿರ್ದ ಹಿರಿಯಾತ್ಮವ

ಜೇನಿಗಿಂತಲೂ ಸಿಹಿಯಾದುದು ಬೇರೆ ಉಂಟೆ ಈ ಜಗದಲ್ಲಿ ? ಅಂತಹ ಜೇನಿನಂತಹ ಮಧುರ ಮಾತನಾಡುವ ನಾಲಿಗೆಯದು ಮಹಾತ್ಮರದು.  ಹಾಗಾಗಿ ಮಧುಸವಿ ನುಡಿಯುವ ನಾಲಿಗೆಯನ್ನೇ ಇರಿಸೋಣ ಎನ್ನುತ್ತಾರೆ.  ಆತ್ಮದ ಔನ್ನತ್ಯವನ್ನು ಹಿಮಗಿರಿಯ ಎತ್ತರಕ್ಕೆ ಹೋಲಿಸಿ ಹೇಳುತ್ತಾರೆ.  ಎಂತಹ ಸುಂದರ ರೂಪಕ..

ಈ ವಿಶೇಷ ತಿನಿಸಿನೊಳಗೆ ಹೂರಣ ತುಂಬುವುದು ಬಾಕಿ . ಹೂರಣವು ಎಂತಹುದು? ಸೋಯಾಬೀನ್ಸ್ ಖರ್ಜೂರ ಮತ್ತು ಮೇಕೆ ಹಾಲುಗಳ ಮಿಶ್ರಣ . ಗಾಂಧೀಜಿಯವರ ದೈನಂದಿನ ಮತ್ತು ಪ್ರೀತಿಯ ಆಹಾರ . ಇವೆಲ್ಲವೂ ಬೆಂದು ಪಕ್ವವಾಗಲು ನೀರು ಬೇಕಷ್ಟೆ? ನೊಂದವರ ಬೆಂದವರ ಸಂಕಟದ ಕಣ್ಣೀರು ಮೇಲಿನಂಚಿನವರೆಗು ತುಂಬಿ ತುಳುಕುವುದಂತೆ . ಗಾಂಧೀಜಿ ದೀನದಲಿತರ ಬಂಧು ಎನ್ನುವುದಕ್ಕೆ ಇದು ತುಂಬಾ ಸಮಂಜಸ ಅಲಂಕಾರವಾಗಿ ಹೊರಹೊಮ್ಮಿದೆ .

ಇಷ್ಟೆಲ್ಲ ತಯಾರಿ ಮಾಡಿದ ಮೇಲೆ ಅದನ್ನು ಬೇಯಿಸುವ ಹಂತ . ಆ ಕೆಲಸ ಸೆರೆಮನೆಯಲ್ಲಿ ಕಳೆದ ಬಾಪುವಿನ ಅನುಭವಗಳ ತಪನ ಮಾಡಿ ಮುಗಿಸುತ್ತದೆ .

ಇಲ್ಲಿ ನನಗೆ ಡಿವಿಜಿಯವರ ಕಗ್ಗದ ಸಾಲುಗಳು ನೆನಪಿಗೆ ಬರುತ್ತದೆ ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ ಕಾಯಿಸುತಕರಿಸುತ್ತ ಹುರಿಯುತ್ತ ಸುಡುತ ಈಯವನಿಯೊಳೆಮ್ಮಯ ಬಾಳನಟ್ಟು ವಿಧಿ ಬಾಯ ಚಪ್ಪರಿಸುವನು ಮಂಕುತಿಮ್ಮ ಬದುಕೆಂಬ ಒಲೆಯ ಉರಿಯಲ್ಲಿ ನಮ್ಮ ಬಾಳು ತೊಯ್ದು ವೆಂದು ಚೂರಾಗಿ ಕಾದು ಕರೆಯಲ್ಪಟ್ಟು ಮುರಿಯಲ್ಪಟ್ಟು ಸುತ್ತಲ್ಪಟ್ಟು ಅನುಭವಗಳಿಂದ ಮಾಗಿ ಪಕ್ವವಾಗುತ್ತದೆ ಹೀಗೆ ವಿಧಿಯು ನಮ್ಮನ್ನು ಅಷ್ಟು ತಿಂದು ಬಾಯಿ ಚಪ್ಪರಿಸುತ್ತಾನೆ ಎನ್ನುತ್ತಾರೆ ತಿಮ್ಮಕವಿ ಹೀಗೆ ಸಿದ್ಧವಾದ ಅಡಿಗೆಗೆ ಸಂಗಾತ ದಲ್ಲಿರುವ ಬಂಧುಮಿತ್ರರೇ ಗಮ ಗಮ ಪರಿಮಳ ಎನ್ನುವ ಈ ಸಾಲುಗಳು ಕಗ್ಗದ ಸಾಲುಗಳನ್ನು ಪ್ರತಿನಿಧಿಸುತ್ತದೆ ಪಕ್ವ ಮಾಡೀ ಇದನು ಸೆರೆಮನೆಯೊಳಿಂದಿನಿತು ವರುಷ ಹೊರಗೆ
ಪರಯ ಪರಿವಾರದಿಂ ಗಮಗಮಿಸಗೊಳಿಸಿ ತಯಾರಾದ ಮನುಷ್ಯ ಜೀವವನ್ನು ಪಂಚಯ್ಯ ತುಂಡಿನಿಂದ ಮುಚ್ಚಿ ಕೈಗೊಂದು ಕೋಲು ಕೊಟ್ಟು ಇವನೇ ಲೋಕತಾರಕ ಬಾಪೂ ಎಂದು ಪರಿಚಯಿಸುತ್ತಾ ಲೋಕಕ್ಕೆ ಉಣಬಡಿಸು ಎನ್ನುತ್ತವೆ ಈ ಸಾಲುಗಳು ಚಿಂದಿಯಂ ಸುತ್ತಿ ಸೆಳೆಬೊಂಬಿನಾಲಂಬವನ್ನಿತ್ತು ಬಡಿಸುತ್ತಾ ಅವನೇ ಖಾನ್ ಲೋಕತಾರಕ ಬಾಪೂ

ವಿಭಿನ್ನ ರೀತಿಯ ಪರಿಕಲ್ಪನೆ ನಿರೂಪಣೆಯನ್ನೊಳಗೊಂಡ ಈ ಕವನ ಗಾಂಧಿಜಯಂತಿಯ ಈ ಸುಸಂದರ್ಭದಲ್ಲಿ ಮತ್ತಷ್ಟು ಪ್ರಸ್ತುತ ಎನಿಸುತ್ತಿದೆ. ಪ್ರಖ್ಯಾತ ಕಲಾವಿದೆ ಮಾನಸಿ ಸುಧೀಂದ್ರ ಅವರು ಈ ಪದ್ಯವನ್ನು ಅಭಿನಯಿಸಿರುವ ದೃಶ್ಯ ತುಣುಕೊಂದನ್ನು ಯೂಟ್ಯೂಬಿನಲ್ಲಿ ನೋಡಿದೆ ತಮ್ಮ ವೀಕ್ಷಣೆಗಾಗಿ ಅದರ ಲಿಂಕ್ ಈ ಕೆಳಗೆ

ಇಂಗ್ಲಿಷಿನ ಮೂಲಕವನ ಫೋಟೋ ರೂಪದಲ್ಲಿ ಕವಿಶ್ರೇಷ್ಠರ ಕಾವ್ಯದಡಿಗೆ ಮನೆಯ ಈ “ನಮ್ಮ ಬಾಪು” ಖಾದ್ಯವನ್ನು ನಿಮ್ಮ ಊಟದ ಮೇಜಿಗೆ ತಂದಿಟ್ಟಿದ್ದೇನೆ .ಆಸ್ವಾದಿಸಿ ಹೇಗಿತ್ತು ಹೇಳಿ. ಹೆದರಬೇಡಿ ! ಹಿಂದೆಯೇ ಬಿಲ್ ಖಂಡಿತ ಬರಲ್ಲ .


Leave a Reply

Back To Top