ಬಡಿಗೇರ ಮೌನೇಶ್ ಅವರ ಕವಿತೆ-ಪ್ರಿಯಗಾಂಧಿ

ಕಾವ್ಯಸಂಗಾತಿ

ನೀನು ಹುಟ್ಟಿದ ದಿನ ಮಾತ್ರ
ನೆನೆಯುತ್ತೇವೆ ಮಹಾತ್ಮ
ನಿನ್ನ ಭಾವಚಿತ್ರಕೆ ಹಾರ ತುರಾಯಿಗಳ ಹಾಕಿ
ಪೂಜಿಸಿ ಪುನೀತರಾಗುತ್ತೇವೆ

ಪರಕೀಯರ ಸಂಕೋಲೆ ಕಳಚಿ
ಸ್ವಚ್ಛಂದ ಬದುಕು ಕೊಟ್ಟೆಯೆಂಬ
ಕಾರಣಕ್ಕೆ ಅಂದು ಮಾತ್ರ
ನೆನೆಯುತ್ತೇವೆ ನಿನ್ನ

ಮಂದಮತಿಗಳಾದ ನಮಗೆ
ನಿನ್ನ ಬದುಕಿನಾದರ್ಶ
ತತ್ವಾದರ್ಶನಗಳ ಅರಿವಿಲ್ಲ
ನಾವಿಂದು ನಿನ್ನ ವಿಚಾರಗಳ
ವಿರುದ್ಧ ಪಥದಲ್ಲಿದ್ದೇವೆ

ಒಂದೆರಡಲ್ಲ ನೀನುಸುರಿದ
ದೇಶದ ಪ್ರಗತಿಪಥದ ವಿಚಾರಗಳು
ಸತ್ಯ,ಅಹಿಂಸೆ,ಸತ್ಯಾಗ್ರಹಗಳು
ಕೇವಲ ಪುಸ್ತಕದೊಳಗಿನ ಪದಗಳು
ನಿನ್ನ ನೆನೆವ ದಿನದ ಘೋಷಣೆಗಳು

ಅಂತ್ಯಜರ ಉದಯಕೆ
ಗ್ರಾಮದೇಳ್ಗೆಯೆ ದೇಶದೇಳ್ಗೆ
ಎಂಬ ಘೋಷಕೆ
ದಮನಿತರ ನೋವಿಗೆ
ದನಿಯಾಗಬಯಸಿದ ನಿನ್ನ ಕರೆಗೆ
ನಾವು ಓಗೊಡಲಿಲ್ಲ
ಕನಿಷ್ಟ ಕಿವಿಯೂ ಕೊಡಲಿಲ್ಲ

ಪ್ರಿಯಗಾಂಧಿ!
ನೀನು ಹುಟ್ಟಿದ ದಿನ ಮಾತ್ರ
ನೆನೆಯುತ್ತೇವೆ ನಿನ್ನ
ತತ್ವಸಾರವನು
ಪತ್ರಿಕೆಯ ಲೇಖನಗಳಲಿ
ವೇದಿಕೆಯ ಭಾಷಣಗಳಲಿ
ರೂಪಕ, ನಾಟಕಗಳಲಿ…

ಬಡಿಗೇರ ಮೌನೇಶ್

3 thoughts on “ಬಡಿಗೇರ ಮೌನೇಶ್ ಅವರ ಕವಿತೆ-ಪ್ರಿಯಗಾಂಧಿ

    1. ಕಾವ್ಯದ ಮೂಲಕ ಹೊರಹೊಮ್ಮಿದ ತಮ್ಮ ಈ ಅದ್ಭುತ ಚಿಂತನೆಗೆ ಶರಣು ಶರಣು

  1. ಗಾಂಧೀಜಿ ಮತ್ತು ವಾಸ್ತವತೆ….
    ತುಂಬಾ ಚಿಂತನಾರ್ಹ ಕವಿತೆ ಬ್ರದರ್

Leave a Reply

Back To Top