ವಾಣಿ ಯಡಹಳ್ಳಿಮಠ ಅವರ ಗಜಲ್

ಕೆಲ ಕವಿತೆಗಳು ಬರೆಯಲಾಗದೆ ಉಳಿದವು
ಎಷ್ಟು ಕೊರೆದರೂ ಪೂರ್ಣವಾಗದೆ ಉಳಿದವು

ನೋವುಗಳಿಗೆ ತಮ್ಮ ನೋವು ಹೇಳಲಾಗಲಿಲ್ಲವೇನೋ ?
ಶಬ್ದಗಳದೆಷ್ಟು ಶ್ರಮಿಸಿದರೂ ಬಣ್ಣಿಸಲಾಗದೆ ಉಳಿದವು

ಕಣ್ಣಲ್ಲಿನ ಕಡಲು ಕಾಗದಕ್ಕಿಳಿಯಲು ಕಳವಳಿಸುತ ಕಾಯುತಿತ್ತು
ಪದಗಳದೆಷ್ಟು ಪ್ರಯತ್ನಿಸಿದರೂ ಪ್ರಾಸವಾಗದೆ ಉಳಿದವು

ಕೆಲ ಕ್ಷಣಗಳು ಅದೇಕೋ ಸತ್ತು ಗೋರಿ ಸೇರಲಿಲ್ಲ
ನೆನಪುಗಳನೆಷ್ಟು ರಮಿಸಿದರೂ ನೇವರೆಸಲಾಗದೆ ಉಳಿದವು

‘ವಾಣಿ’ಯ ಕವನ ಸಂಕಲನವದು ಹೊರಬರಲೇ ಇಲ್ಲ
ಭಾವನೆಗಳನೆಷ್ಟು ಬಸಿದರೂ ಬಯಲಾಗದೆ ಉಳಿದವು


Leave a Reply

Back To Top