500ಕ್ಕೂ ಹೆಚ್ಚು ಮೆಡಲುಗಳನ್ನು ಮತ್ತು ಟ್ರೋಫಿಗಳನ್ನು ತನ್ನ 80ರ ಹರೆಯದಲ್ಲಿ ಗಳಿಸಿರುವ ಸೂರತ್ ನ ಬಕುಳ ಬೆನ್ ಪಟೇಲ್ ಎಂಬ ವಯೋವೃದ್ದ  ಹೆಣ್ಣು ಮಗಳು ಕಲಿಕೆಗೆ ಮತ್ತು ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭರತನಾಟ್ಯದಲ್ಲಿ ಎಂಎ ಪದವಿಯನ್ನು ಪಡೆದಿರುವ ಆಕೆ ಲಿಮ್ಕಾ ಬುಕ್ ರೆಕಾರ್ಡ್ ನಲ್ಲಿ ಅತಿಹೆಚ್ಚಿನ ವಯಸ್ಸಿನ ಸಾಧಕಿ ಎಂದು ತಮ್ಮ ಹೆಸರನ್ನು ದಾಖಲಿಸಿದ್ದಾರೆ ತನ್ನ 58 ರ ಹರೆಯದವರೆಗೂ ಸಾಮಾನ್ಯ ಗೃಹಿಣಿಯಾಗಿ ಜೀವನವನ್ನು ಸಾಗಿಸಿರುವ ಬಕುಳ ಬೆನ್ ಅಸಾಮಾನ್ಯ ಸಾಧನೆಯನ್ನು ಮಾಡಿ ಕೋಟ್ಯಂತರ ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ.

 ಗುಜರಾತ್ ರಾಜ್ಯದ ಸೂರತ್ ನಗರದಲ್ಲಿ ವಾಸಿಸುತ್ತಿರುವ ಬಕುಳ ಬೆನ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಪಾಲಕರನ್ನು ಕಳೆದುಕೊಂಡ ಕಾರಣ ಆಕೆಯ ವಿದ್ಯಾಭ್ಯಾಸ ಮೊಟಕುಗೊಂಡಿತು. ಸಂಬಂಧಿಕರ ಆಶ್ರಯದಲ್ಲಿ ಬೆಳೆದ ಬಕುಳ ಬೆನ್  ಕನಸುಗಳು ನನಸಾಗುವುದು ಸಾಧ್ಯವೇ ಇರಲಿಲ್ಲ. ಚಿಕ್ಕಂದಿನಿಂದಲೂ ಆಟೋಟಗಳಲ್ಲಿ ಆಸಕ್ತಿಯನ್ನು ಹೊಂದಿದ್ದ  ಬಕುಳ ಅವರ ವಿವಾಹ ಆಕೆ 9ನೇ ತರಗತಿಯಲ್ಲಿ ಇದ್ದಾಗಲೇ ನೆರವೇರಿತು. 50 ರ ಹರೆ ಯದವರೆಗೆ ಆಕೆ ಓರ್ವ ಸಾಮಾನ್ಯ ಗುಜರಾತಿ ಗೃಹಿಣಿಯಂತೆ ಗಂಡ, ಮನೆ, ಮಕ್ಕಳು, ಸಂಸಾರ ಮತ್ತು ಅಡುಗೆ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜೀವನ ಸಾಗಿಸಿದಳು.

 ಪತಿಯ ಮರಣ ನಂತರ ಒಂಟಿಯಾದ ಆಕೆ ತನ್ನ 59ರ ಹರೆಯದಲ್ಲಿ ಈಜು ಕ್ರೀಡೆಯೆಡೆ ಆಸಕ್ತಿ ತೋರಿದಳು.ಬಕುಳ ಬೆನ್ ಗೆ ಈ ವಯಸ್ಸಿನಲ್ಲಿ ಈಜುವುದು ಸಾಮಾನ್ಯ ಸಾಧನೆ ಆಗಿರಲಿಲ್ಲ. ಆದರೆ ಆಕೆ ಈಜು ಕಲಿಯಲು ಹೋಗುತ್ತಿದ್ದ ಅಕಾಡೆಮಿಯಲ್ಲಿ ವಯಸ್ಸಿನ ಪರಿಮಿತಿ ಇರಲಿಲ್ಲವಾಗಿ ಬಕುಳ ಬೆನ್ ಈಜನ್ನು ನಿರಾಯಾಸವಾಗಿ  ಕಲಿತರು.

 ಮುಂದೆ ನಡೆದದ್ದು ಯಶಸ್ಸಿನ ನಾಗಾಲೋಟದ ಪಯಣ. 80ರ ಹರೆಯಕ್ಕೆ 16 ದೇಶಗಳ ಸುಮಾರು 500ಕ್ಕೂ ಹೆಚ್ಚು ಮೆಡಲುಗಳನ್ನು ಮತ್ತು ಟ್ರೋಫಿಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಗಳಲ್ಲಿ ಪಡೆದಿರುವ ಬಕುಳ ಬೆನ್ ಅಟ್ಲಾಂಟಿಕ್ ಸಾಗರ, ಪೆಸಿಫಿಕ್ ಸಾಗರ ಮತ್ತು ಬಂಗಾಳಕೊಲ್ಲಿಗಳಲ್ಲಿ ಕೂಡ ಈಜಿದ್ದಾರೆ. ಬಂಗಾಳಕೊಲ್ಲಿಯ ಸಮುದ್ರದಲ್ಲಿ 19 km ದೂರದವರೆಗೆ ಈಜಿ ದಾಖಲೆ ಸ್ಥಾಪಿಸಿದ್ದಾರೆ.

 ಶಾಸ್ತ್ರೀಯ ನೃತ್ಯ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಬಕುಳ ಬೆನ್ ತಮ್ಮ ಎಪ್ಪತೈದನೇ ವಯಸ್ಸಿನಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ವೇದಿಕೆಯ ಮೇಲೆ ಮೇಲೆ ನೃತ್ಯ ಮಾಡಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಸ್ಥಾಪಿಸಿದ್ದಾರೆ.

 ತನ್ನ ಆರೋಗ್ಯವನ್ನು ಕಾಯ್ದುಕೊಳ್ಳಲು ನಸುಕಿನ ನಾಲ್ಕು ಗಂಟೆಗೆ ಏಳುವ ಬಕುಳ  ಬೆನ್ 5 ಕಿ.ಮೀ ವಾಕಿಂಗ್ ಮಾಡುತ್ತಾರೆ. ಯೋಗ ಮತ್ತು ಸೈಕ್ಲಿಂಗ್ ನಲ್ಲಿಯೂ ಆಕೆ ಸಿದ್ದಹಸ್ತಳು, ಪ್ರತಿದಿನ ಈಜುವ ಆಕೆ ಮ್ಯಾರಥಾನ್ಗಳಲ್ಲಿ ಕೂಡ ಪಾಲ್ಗೊಂಡಿದ್ದಾರೆ.

 ಇಂದಿಗೂ ಕೂಡ ತನ್ನ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳುವ ಆಕೆ ತನ್ನ ದಿನಚರಿಗಳಲ್ಲಿ ವ್ಯಸ್ತಳಾಗಿದ್ದು ಒಂಟಿತನ ಆಕೆಯನ್ನು ಬಾಧಿಸುವುದಿಲ್ಲ. ಇದೀಗ ಈಜು ತರಬೇತುದಾರಳಾಗಿಯೂ ಕಾರ್ಯನಿರ್ವಹಿಸುತ್ತಿರುವ ಆಕೆ ಎಲ್ಲರಿಗೂ ಸ್ಪೂರ್ತಿಯಾಗಿದ್ದಾಳೆ.

 ಮದುವೆಯಾಗಿ ಎರಡು ಮಕ್ಕಳಾದ ಕೂಡಲೇ ಜೀವನವೇ ಮುಗಿದು ಹೋಯಿತು ಎಂದು ಭಾವಿಸುವ ಸಾಕಷ್ಟು ಮಹಿಳೆಯರು ನಮ್ಮ ನಡುವೆ ಇದ್ದು ಅವರು ಬಕುಳ ಬೆನ್ ಅವರ ಜೀವನದಿಂದ ಸಾಕಷ್ಟು ಕಲಿಯಬಹುದು.
 ಬದುಕಿನ ಮುಕ್ಕಾಲು ಭಾಗವನ್ನು ಕಳೆದ ಬಕುಳ ಬೆನ್ ಪತಿಯ ಮರಣದ ನಂತರ ಕ್ರೀಡೆಯಲ್ಲಿ ಆಸಕ್ತಿಯನ್ನು ವಹಿಸಿ ತನ್ನ ಜೀವನಕ್ಕೆ ಒಂದು  ಉದ್ದೇಶ ಮತ್ತು ಗುರಿಯನ್ನು ಹೊಂದಿದ್ದು ಈಗಿನ ಯುವ ಜನಾಂಗಕ್ಕೆ ಮತ್ತು ಮಹಿಳಾ ಸಂಕುಲಕ್ಕೆ ಮಾದರಿಯಾಗಿದ್ದಾಳೆ.

 ತ್ರೆತಾಯುಗದಲ್ಲಿ ಪ್ರಭು ಶ್ರೀ ರಾಮನನ್ನು ಕಾಣಬೇಕೆಂಬ ಏಕೈಕ ಉದ್ದೇಶದಿಂದ, ಆತ ಬಂದೇ ಬರುವನೆಂಬ ನಂಬಿಕೆಯಿಂದ  ವರ್ಷಾನುಗಟ್ಟಲೆ ಕಾಯ್ದ ಶಬರಿಯ ಭಕ್ತಿ ಮತ್ತು ಶ್ರದ್ಧೆಯ ಕಥೆ ನಾವೆಲ್ಲ ಕೇಳಿದ್ದೀವಷ್ಟೇ. ಆಕೆಯ ಭಕ್ತಿಯನ್ನು ಪುರಾಣ ಕಾವ್ಯಗಳಲ್ಲಿ ವರ್ಣಿಸಿರುವ ಕವಿಗಳು ಅದೆಷ್ಟೋ. ಸಾಕ್ಷಾತ್ ಪ್ರಭು ಶ್ರೀರಾಮಚಂದ್ರನು ಆಕೆ ವಾಸಿಸುತ್ತಿದ್ದ ಬೆಟ್ಟವನ್ನು ಶಬರಿಮಲೆ ಎಂದು ಕರೆದು ಆಕೆಯನ್ನು ಗೌರವಿಸಿದನಲ್ಲವೇ?

 ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…. ಮನಸೊಂದಿದ್ದರೆ ಮಾರ್ಗವು ಉಂಟು
 ಎಂದು ಕನ್ನಡದ ಕಣ್ಮಣಿ, ಕನ್ನಡಿಗರ ಪಾಲಿನ ಅಭಿಮಾನದ ದೇವರು ವರನಟ ಡಾಕ್ಟರ್ ರಾಜ್ ತಮ್ಮ ಚಲನಚಿತ್ರ ಬಂಗಾರದ ಮನುಷ್ಯ ಚಿತ್ರದಲ್ಲಿ ಹಾಡಿದಾಗ ಅದರಿಂದ ಸ್ಪೂರ್ತಿಗೊಂಡ ಸಾಕಷ್ಟು ಜನ ಒಕ್ಕಲುತನದತ್ತ ಮುಖ ಮಾಡಿದ್ದು ಐತಿಹಾಸಿಕ ಸಾಧನೆಯಾಗಿ ಕನ್ನಡಿಗರ ಮನದಲ್ಲಿ ಉಳಿದು ಹೋಗಿದೆ.

 ಐದು ವರ್ಷದ ಪುಟ್ಟ ಬಾಲಕ ದ್ರುವ ತನ್ನ ಅಚಲ ಶ್ರದ್ಧೆ ಮತ್ತು ಭಕ್ತಿಯಿಂದ ಮಹಾವಿಷ್ಣುವನ್ನು ಉಳಿಸಿಕೊಂಡರೆ, ಸೂರ್ಯವಂಶದ ರಾಜ ಪ್ರಭು ಶ್ರೀರಾಮಚಂದ್ರನ ಪಿತಾಮಹರಾದ ಭಗೀರಥ ಮಹಾರಾಜನು ತನ್ನ ಪಿತೃಗಳ ಆತ್ಮ ಶಾಂತಿಗಾಗಿ ಕಠಿಣ ತಪಗೈದು ದೇವಲೋಕದಿಂದ ಗಂಗೆಯನ್ನು  ಭೂಮಿಗೆ ಹರಿಯುವಂತೆ ಮಾಡಿ ಶ್ರದ್ಧೆ, ನಿಷ್ಠೆ ಮತ್ತು ಬದ್ಧತೆಯುಳ್ಳ ಪ್ರಯತ್ನಕ್ಕೆ ಮತ್ತೊಂದು ಹೆಸರೇ ‘ಭಗೀರಥ ಪ್ರಯತ್ನ’ ಎಂಬಂತೆ ಇಂದಿಗೂ ನಮ್ಮ ಜನರ ಆಡು ಮಾತಿನಲ್ಲಿ ಸಾವಿರಾರು ವರ್ಷಗಳು ಸಂದರೂ ಅಜರಾಮರನಾಗಿದ್ದಾನೆ.

 ಮತ್ತೆ ಕೆ ತಡ ಸ್ನೇಹಿತರೆ? ಸಾಧನೆಗೆ ವಯಸ್ಸಿನ ಹಂಗಿಲ್ಲ. ಏನನ್ನಾದರೂ ಸಾಧಿಸುವ ಮನಸಿದ್ದರೆ ಇಂದೇ ಈಗಲೇ ನಿಮ್ಮ ಮನಸ್ಸನ್ನು ಸಾಧನೆಯ ಶಿಖರವನ್ನೇರಲು ಸಜ್ಜುಗೊಳಿಸಿ… ನಿರಂತರ ಪ್ರಯತ್ನ ಯಾವತ್ತೂ ಕೈ ಬಿಡುವುದಿಲ್ಲ. ಎಂಬುದನ್ನು ಸಾಧಿಸಿ ತೋರಿಸಿ.


One thought on “

Leave a Reply

Back To Top