ಭಾಷಾ ಸಂಗಾತಿ
‘ರಮೇಶ ಸಿ ಬನ್ನಿಕೊಪ್ಪ ಹಲಗೇರಿ
‘ಭಾಷೆಯ ವಿಸ್ತಾರತೆಗೆ
ಸಂಯೋಜಿತ ಪದಗಳ ಹಂಗು…’
ಭಾಷೆ ಭಾವನೆಗಳ ಪ್ರತಿಬಿಂಬ. ಮನುಷ್ಯ ಭಾಷೆ ಕಲಿಯುವುದಕ್ಕೆ ಮುಂಚೆ ಸಂಜ್ಞೆಗಳನ್ನು ಮೂಲಕ ವ್ಯವಹರಿಸುತ್ತಿದ್ದನು. ತನ್ನ ಬಯಕೆ, ಬೇಡಿಕೆ, ಕೋಪ-ತಾಪವನ್ನು ಸಂಜ್ಞೆಗಳನ್ನು ಬಳಸುವುದರ ಮೂಲಕ ಸಂವಾದಿಸುತ್ತಿದ್ದನು. ನಾಗರಿಕತೆ ಬೆಳೆದಂತೆ ಭಾಷೆಯ ಬೆಳವಣಿಗೆಯ ಹೊಂದಿತು. ಮನುಷ್ಯ ಭಾಷೆಯನ್ನು ಕಂಡುಹಿಡಿದ ನಂತರ ತನ್ನ ಸುತ್ತಮುತ್ತಲಿನ ಪ್ರದೇಶದ ಸ್ಥಳೀಯ ಭಾಷೆಯನ್ನು ಬಳಕೆಗೆ ತರುವಲ್ಲಿ ಪರಿಶ್ರಮಿಸಿದನು.
ಹೀಗೆ ಭಾಷಾ ಪರಂಪರೆಯಲ್ಲಿ ಅನೇಕ ಭಾಷೆಗಳು ಪ್ರಪಂಚಾದ್ಯಂತ ಉದಯವಾದವು. ಅದರಲ್ಲೂ ಭಾರತೀಯ ಭಾಷೆಗಳಲ್ಲಿ ಕನ್ನಡ ಅತ್ಯಂತ ಶ್ರೀಮಂತವಾದ ಭಾಷೆ. ಈ ಭಾಷೆಯ ಮೂಲಕ ವ್ಯವಹರಿಸುವ ಪ್ರತಿಯೊಬ್ಬ ಕನ್ನಡಿಗರು ಅನೇಕ ಭಾಷಾ ವೈಶಿಷ್ಟ್ಯತೆಗಳನ್ನು ಮೆರೆಯುತ್ತಾರೆ.
“ಕನ್ನಡ ಭಾಷೆಯನ್ನು ಮಾತನಾಡುವದೆಂದರೆ ಸುಲಿದ ಬಾಳೆಹಣ್ಣಿನಂತೆ…” ಅದು ಪ್ರತಿಯೊಬ್ಬರಿಗೂ ತಮ್ಮ ತಮ್ಮ ಮಾತೃ ಭಾಷೆಯಲ್ಲಿ ಮಾತನಾಡುವ ಹಾಗೆಯೇ ನಮ್ಮ ಮಾತೃಭಾಷೆ ಕನ್ನಡವನ್ನು ವೈಶಿಷ್ಟವಾಗಿ ಬಳಸುತ್ತೇವೆ. ಬರಹ ಒಂದು ರೂಪವಾದರೆ ; ಭಾವನೆಗಳನ್ನು ವ್ಯಕ್ತಪಡಿಸುವ ರೂಪ ಭಾಷಣ ಕಲೆ..!! ಭಾಷಣ ಮಾಡುವ ಪ್ರತಿಯೊಬ್ಬರು ಭಾಷೆಯ ಶ್ರೀಮಂತಿಕೆಯನ್ನು ತಿಳಿದುಕೊಂಡಿರಬೇಕಾಗುತ್ತದೆ. ಅಂದರೆ ಗಾದೆ ಮಾತುಗಳು, ದೃಷ್ಟಾಂತಗಳು, ಪಡೆನುಡಿಗಳು, ಆಶಯದ ಮಾತುಗಳು, ಬೆಡಗು ಬಿನ್ನಾಣದ ಪದಗಳು, ವಿಶಿಷ್ಠವಾದ ಪದ ವಿನ್ಯಾಸಗಳು… ಇವುಗಳನ್ನು ಬಳಸಿಕೊಂಡು ಕನ್ನಡ ಭಾಷೆಯಲ್ಲಿ ಮಾತನಾಡಿದರೆ, ಮಾತಿನ ತೂಕ ಹೆಚ್ಚಾಗುತ್ತದೆ.
ಹಾಗೇ ಮಾತನಾಡುವ ಅಥವಾ ಭಾಷಣ ಮಾಡುವ ಸಂದರ್ಭದಲ್ಲಿ ಸಭಿಕರೆದುರು ಹಾವಭಾವದೊಂದಿಗೆ ಅವರನ್ನು ಗಮನಿಸುವುದರ ಮೂಲಕ ಮಾತನಾಡುವ ಕೌಶಲ್ಯ ಕೆಲವರಿಗೆ ಕರಗತವಾಗಿರುತ್ತದೆ. ಧ್ವನಿಯ ಏರಿಳಿತ, ಸಂಜ್ಞೆಗಳ ಬಳಕೆ, ಆದಾಗ್ಯೂ ಭಾಷಣ ಮಾಡುವ ಸಂದರ್ಭದಲ್ಲಿ ನಿರರ್ಗಳವಾಗಿ ಭಾಷೆಯನ್ನು ಬಳಸುವಾಗ ಕೆಲವರಿಗೆ ಕೆಲವು ಪದಗಳು ಪದೇ ಪದೇ ಬಂದು ಪುನಃ ಪುನ: ಬಳಸುವ ಚಾಳಿಯಿರುತ್ತದೆ.
ಅದು ಒಂದು ವಾಕ್ಯದಿಂದ ಇನ್ನೊಂದು ವಾಕ್ಯವನ್ನು ಕೂಡಿಸಲು, ಸಂಯೋಜಿಸಲು ಬಳಸುವ ಸಾಂದರ್ಭಿಕ ಪದಗಳ ಸೃಷ್ಟಿ ಅಷ್ಟೇ..!!
ಅದೇನೋ ಗೊತ್ತಿಲ್ಲ…!! ಭಾಷಣ ಮಾಡುವಾಗ ನಿರರ್ಗಳವಾಗಿ ಮಾತನಾಡುತ್ತಾ, ಏನನ್ನೋ ವಿಷಯವನ್ನು ಸಭಿಕರಿಗೆ ತಿಳಿಸಬೇಕೆನ್ನುವಾಗ ಒಮ್ಮಿಂದೊಮ್ಮೆಲೆ ಮಾತು ನಿಂತು ಹೋಗುತ್ತದೆ..! ತಕ್ಷಣ ಕೆಲವು ಸಂಯೋಜಿತ ಪದಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಮತ್ತೆ ಮಾತು ಮುಂದುವರಿಯುತ್ತದೆ.
ರಾಜಕೀಯ ಹಿರಿಯ ಮುತ್ಸದ್ದಿಗಳಿರಬಹುದು, ಸ್ವಾಮಿಗಳಿರಬಹುದು, ಮಕ್ಕಳಿಗೆ ಪಾಠ ಮಾಡುವ ಗುರುಗಳಿರಬಹುದು, ಸಭಿಕರೆದುರು ಮಾತನಾಡುವ ಭಾಷಣಕಾರನಿರಬಹುದು, ಅವರು ತಮ್ಮ ಅಭಿಪ್ರಾಯಗಳನ್ನು ಹೇಳುವಾಗ ಪದೇ ಪದೇ ತಮಗೆ ಗೊತ್ತಿಲ್ಲದಂತೆ ಕನ್ನಡದ ಕೆಲವು ಸಂಯೋಜಿತ ಪದಗಳನ್ನು ಬಳಸುವುದನ್ನು ರೂಢಿ ಮಾಡಿಕೊಂಡಿರುತ್ತಾರೆ. ಮತ್ತು ಆ ರೀತಿಯ ಪದಗಳನ್ನು ಬಳಸಿದಾಗಲೇ ಅವರ ಮಾತುಗಳು ಮುಂದುವರಿಯುತ್ತವೆ. ಇಲ್ಲವಾದರೆ ಭಾಷಣ ಅಥವಾ ಮಾತುಗಾರಿಕೆ ನಿಂತು ಹೋಗುತ್ತದೆ. ಇಂತಹ ಕೆಲವು ಪದಗಳನ್ನು ನಾವಿಲ್ಲಿ ನೋಡಬಹುದಾಗಿದೆ.
ಏನಪ್ಪಾ, ಅಂದ್ರೆ, ಹಂಗಾಗಿ, ಕಾರಣವೆಂದರೇ, ಇಲ್ಲಂದ್ರ, ಯಾಕಂದ್ರೆ, ಗೊತ್ತಾತಿಲ್ಲ, ಮತ್ತೇನಾಯ್ತು ಅಂದ್ರೆ, ಇದರಿಂದಾಗಿ, ಹೌದೋ ಅಲ್ವೋ, ನಾ ಹೇಳಿದ್ದು ನಿಜ ತಾನೇ…, ಇರಲಿ.., ಅಲ್ಲದೆ.., ಮುಖ್ಯವಾಗಿ,
ಇಂತಹ ಮುಂತಾದ ಪದಗಳನ್ನು ಬಳಸಿದಾಗಲೇ ಅವರ ಭಾಷಣ ಮಾತುಗಾರಿಕೆ ಮುಂದುವರಿಯುತ್ತದೆ. ಈ ರೀತಿಯ ಸಂಯೋಜಿತ ಪದಗಳ ಬಳಕೆ ವಿಶೇಷವಾಗಿ ಕನ್ನಡ ಭಾಷಾ ಪರಂಪರೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ಇತರೇ ಭಾಷೆಗಳಲ್ಲೂ ಇಂತಹ ಸಂಯೋಜನೆಯ ಪದಗಳನ್ನು ಬಳಸಿದರೂ, ಕನ್ನಡ ಭಾಷೆಯಷ್ಟೂ ಶ್ರೀಮಂತವಾಗಿಲ್ಲವೆಂದೇ ಹೇಳಬಹುದು.
ಹಾಗಾಗಿ ಒಬ್ಬ ನಿಜವಾದ ಭಾಷಣಕಾರನಿಗೆ ಸಂಯೋಜಿತ ಪದಗಳ ಹಂಗು ಇದ್ದೇ ಇರುತ್ತದೆ. ಅವುಗಳಿಲ್ಲದೆ ಭಾಷಣ ಮುಂದುವರಿಸಲು ಆಗುವುದಿಲ್ಲ. ಹಾಗೇ ಮಾತನಾಡಿದರೂ ಭಾಷಣ ನೀರಸವಾಗಿ, ಕೇಳುಗರಲ್ಲಿ ನಿರುತ್ಸಾಹ ಉಂಟಾಗುತ್ತದೆ.
ಒಳ್ಳೆಯ ಭಾಷಣಕಾರರಾಗಲು ಅದರಲ್ಲೂ ಕನ್ನಡ ಭಾಷೆಯ ಭಾಷಣಕಾರರಾಗಿ, ಎಲ್ಲರ ಮನಸ್ಸನ್ನು ಸೂರೆಗೊಂಡವರಿದ್ದಾರೆ. ಅಂತಹವರ ಸಾಲಿನಲ್ಲಿ ನಾವು ಯಶಸ್ವಿ ಭಾಷಣಕಾರರಾಗೋಣವೆಂದು ಬಯಸೋಣ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ