akka

 ಅತ್ತೆ ಮಾಯೆ ಮಾವ ಸಂಸಾರಿ ಮೂವರು ಮೈದುನರು ಹುಲಿಯಂತಿಯರು
 ನಾಲ್ವರು ನೆಗೆವೆಣ್ಣು ಕೇಳು ಕೆಳದಿ ಐವರು ಭಾವದಿರನೊಯ್ವ ದೈವವಿಲ್ಲ
 ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ
 ಹೇಳುವಡೆ ಏಳು ಪ್ರಜೆ ತೊತ್ತಿರ ಕಾಹು ಕರ್ಮವೆಂಬ ಗಂಡನ ಬಾಯ ಟೊಣೆದು ಹಾದರವನಾಡುವೆನು ಹರನಕೂಡೆ ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು ಶಿವನೊಡನೆ ಕರಚೆಲುವ ಶ್ರೀಶೈಲ ಚೆನ್ನ ಮಲ್ಲಿಕಾರ್ಜುನ ಎಂಬ ಸಜ್ಜನಗಂಡನ ಮಾಡಿಕೊಂಡೆ

 ಅಕ್ಕ ಮಹಾದೇವಿ

ಅಕ್ಕಮಹಾದೇವಿಯು ಚೆನ್ನಮಲ್ಲಿಕಾರ್ಜುನನೇ ಎನಗೆ ಗಂಡನಾಗಬೇಕೆಂದು ತುಂಬಾ ಸಮಯ ಕಾಲದವರೆಗೆ ತಪಿಸಿತ್ತು  ಈ ಕಾಯ ಎನ್ನುವಳು.
ಅಕ್ಕ ಅತ್ತೆ, ಮಾವ ,ನಾದನಿಯರು, ಹಾಗೂ ಚೆನ್ನಮಲ್ಲಿಕಾರ್ಜುನನೆಂಬ ಅಧ್ಯಾತ್ಮಿಕ ಅರಿವಿನ  ಗಂಡನನ್ನು ಮದುವೆ ಮಾಡಿಕೊಂಡಿರುವೆ.ಇದು ನನ್ನ ಜನ್ಮ ಜನ್ಮಾಂತರದ ಬಯಕೆ.
ಆ ಶಿವನೇ ನನ್ನ ಗಂಡನಾಗಬೇಕೆಂಬುದು .ಅದು ಈ ಜನ್ಮದಲ್ಲಿ ಸಿದ್ದಿಸಿದೆ .
ಗುರು ನನ್ನನ್ನು ಚೆನ್ನಮಲ್ಲಿಕಾರ್ಜುನನೊಂದಿಗೆ ವಿವಾಹ ಮಾಡಿಕೊಟ್ಟಿದ್ದಾನೆ.
ಗುರುವೇ ತೆತ್ತಿಗನಾದ ಲಿಂಗವೇ ಮದುವಣಿಗ ನಾದ ಆನು  ಮದುವಣಿಗಿತ್ತಿಯಾದೆನು .ಈ ಕಾರಣಕ್ಕಾಗಿ ಆ ಹರನ ಜೊತೆಗೆ ಹಾದರನಾಡುವೆ ಎನ್ನುವ ಲೌಕಿಕ ಗಂಡನನ್ನು ಬಿಟ್ಟು .ಅಮೂರ್ತ ವಾದ ಗಂಡನೊಂದಿಗಿನ  ಸಂಬಂಧ ವನ್ನು ಅಕ್ಕಮಹಾದೇವಿಯು ಇಲ್ಲಿ ಹಾದರ ಎನ್ನುವ ಅರ್ಥವನ್ನು ಬಳಸಿರುವುದು ಒಂದು ಅಚ್ಚರಿಯ ಸಂಗತಿ .
ಅಕ್ಕನ ಗಂಡ ಚೆನ್ನಮಲ್ಲಿಕಾರ್ಜುನನೊಂದಿಗೆ  ಅಸಂಖ್ಯಾತ ತಂದೆ ತಾಯಿಗಳು ಮದುವೆ ಮಾಡಿಕೊಟ್ಟಿದ್ದಾರೆ ಎನ್ನುವ ನಿರಾಕಾರ ದೇಹ ಭಾವ ವನ್ನು ತೊರೆದು ಭಗವಂತನೊಂದಿಗೆ ಒಂದಾಗುವ ಅಕ್ಕನ ವಿಚಾರ ನಿಜಕ್ಕೂ ಸೋಜಿಗ.

 ಅಕ್ಕಮಹಾದೇವಿಯ ಗಂಡನ ಮನೆಯೇ ಒಂದು ಪ್ರಕೃತಿ ಅದನ್ನೇ ಅಕ್ಕ ಇಲ್ಲಿ ತನ್ನ ಅತ್ತೆ ಎಂದು ಭಾವಿಸಿಕೊಂಡಿದ್ದಾಳೆ .

ಇಲ್ಲಿ ಅತ್ತೆ -ಎಂದರೆ ಪ್ರಕೃತಿ ಪುರುಷ ಭಗವಂತ .

 ಮೂವರು ಮೈದುನರು -ಅಂದರೆ ಕಾಯ, ಮಾತು, ಮನಸ್ಸು.

ಇಲ್ಲಿ ಕಾಯ ಎನ್ನುವ ಶರೀರ ನಮ್ಮ ಒಳಗಿನ ಮನಸ್ಸಿನಂತೆ ನಮ್ಮ ಮಾತುಗಳು ಬರುತ್ತವೆ .ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು .ಎನ್ನುವ ಹಾಗೆ ಪ್ರತಿ ವ್ಯಕ್ತಿಯ ವ್ಯಕ್ತಿತ್ವವು ಆತನ ಮನಸ್ಸನೊಳಗಿನಿಂದ ಬರುವ ಮಾತಿನಿಂದಲೇ .ಮಾತುಗಳು ಹೊರಹೊಮ್ಮಿದರೇ ಅವೇ ಮಾತುಗಳಿಂದ ನಮಗೆ ಶುಭನೂ ಆಗುತ್ತೆ .ಮತ್ತು ಹಾನಿಯೂ ಆಗುತ್ತೆ ಎನ್ನುವ ಅರಿವು ನಮಗೆ ಆಗಬೇಕು .ತಪ್ಪಾಗಿ ಮಾತನಾಡಿದರೆ ವ್ಯಕ್ತಿ ವ್ಯಕ್ತಿಗಳಲ್ಲಿ ಕಲಹ ಉಂಟಾಗಿ ಅದು ನಮ್ಮ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ  .
ಆ ಮಾತುಗಳೇ  ನಮ್ಮನ್ನು  ಹುಲಿಯಂತೆ ತಿಂದು ಹಾಕಲು ಬಹುದು ಎನ್ನುವ ಪ್ರಜ್ಞೆ, ಪ್ರತಿಯೊಬ್ಬ ಮಾನವರಿಗೂ ಅಕ್ಕಮಹಾದೇವಿಯು ಒಂದು ಉತ್ತಮ ಸಂದೇಶವನ್ನು ನೀಡಿರುವುದು ನಮಗೆ ಕಂಡು ಬಂದಿದೆ .

 *ನಾಲ್ವರು ನೆಗೆಣ್ಣಿಯರು ಕೇಳು ಕೆಳದಿ

ಅಂದರೆ ಓರಗಿತ್ತಿಯರು
 ಮನಸ್ಸು,
 ಬುದ್ಧಿ,
 ಚಿತ್ತ ,ಮತ್ತು

 ಅಹಂಕಾರ ಮನಸ್ಸಿನಂತೆ ಬುದ್ಧಿ ಇರುತ್ತದೆ .ಬುದ್ಧಿಯಂತೆ ನಮ್ಮ ಚಿತ್ತವು ಇರುತ್ತದೆ .
ಇಂತಹ ಮನದಲ್ಲಿ ಒಂದು ಸಣ್ಣ ಅಹಂಕಾರವು ಸೊಂಕಬಾರದು.
ಯಾರಲ್ಲಿ ಅಹಂಕಾರ ಇರುತ್ತದೆಯೋ ಅಲ್ಲಿ ನನ್ನ ಗಂಡ ಚೆನ್ನಮಲ್ಲಿಕಾರ್ಜುನ ಇರಲು ಬಯಸುವುದಿಲ್ಲ.
ಈ ನಾಲ್ವರು ಯಾವುದೇ ಭೇದ ಭಾವ ವಿಲ್ಲದೆ ಸರಿ ಸಮಾನವಾಗಿ ಇರಬೇಕು ಎನ್ನುವ ಅಕ್ಕ ಮಾತಿನಲ್ಲಿ ನೈಜತೆಯ ಅಧ್ಯಾತ್ಮಿಕ ಓರಗಿತ್ತಿಯರು ಕೇಳು ಗೆಳತಿ ಎನ್ನುವಳು.
ಮತ್ತೆ ಮುಂದುವರೆದು ,

 ಪ್ರತಿಯೊಬ್ಬ ವ್ಯಕ್ತಿಯರಲ್ಲಿ
 ಐವರು ಭಾವಂದಿರು ಇರುವರು

 ಅಂದರೆ ಪಂಚೇಂದ್ರಿಯಗಳು
ಕಣ್ಣು,
ಕಿವಿ ,
ಮೂಗು ,
ನಾಲಿಗೆ ಮತ್ತು ಚರ್ಮ.
ದೇಹವನ್ನು ಆಳಲು ಪ್ರಯತ್ನ  ಮಾಡುವ ಪಂಚೇಂದ್ರೀಯಗಳನ್ನು ಹದ್ದುಬಸ್ತಿನಲ್ಲಿಡದಿದ್ದರೆ ಅನಾಹುತಕ್ಕೆ ಆಹ್ವಾನವಿತ್ತಂತೆ .ಎನ್ನುವ ಅರ್ಥವನ್ನು ಅತ್ಯಂತ ಮಾರ್ಮಿಕವಾಗಿ ಅಕ್ಕಮಹಾದೇವಿಯರು ಈ ಒಂದು ವಚನದಲ್ಲಿ ತಿಳಿಯಪಡಿಸಿದ್ದಾರೆ .

 ಆರು ಜನ ಅತ್ತಿಗೆಯರು- ಅಂದರೆ ಅರಿಷಡ್ವರ್ಗಗಳು

 ಕಾಮ :- ಕಂಡಿದ್ದನ್ನು ಪಡೆಯುವುದೇ  ಕಾಮ

 ಕ್ರೋಧ :- ಕಂಡಿದ್ದು ಸಿಗದೇ  ಇದ್ದಾಗ  ಉಂಟಾಗುವುದೇ ಕ್ರೋಧ

, ಲೋಭ  :- ಎಷ್ಟು ಪಡೆದರೂ ಇನ್ನಷ್ಟು  ಪಡೆಯಬೇಕೆಂಬುದೇ ಲೋಭ .

 ಮೋಹ, :- ಇನ್ನಷ್ಟು ಪಡೆದರೂ ಕೈಬಿಟ್ಟು ಹೋಗಬಾರದು ಎಂಬುವುದೇ ಮೋಹ .

 ಮದ :- ಕೈ ಬಿಟ್ಟು ಹೋದರೂ ತನ್ನಲ್ಲಿ ಮಾತ್ರ ಇದೆ ಎನ್ನುವುದೇ ಮದ
 ಮತ್ಸರ :- ತನ್ನಲ್ಲಿರುವುದು ಮತ್ತೊಬ್ಬರಲ್ಲಿ ಇದೆ ಎನ್ನುವುದೇ ಮತ್ಸರ

 ಏಳು ಪ್ರಜೆ ತೊತ್ತಿಗರು- ಅಂದರೆ ಏಳು ಸೇವಕರು .

ಕಾಯುತ್ತಿದ್ದಾರೆ ಅವು ದ್ಯೂತ, ಮಾಂಸ ,ಸೂರೆ ,ವೇಶಾವೃತ್ತಿ, ಸಂತೋಷಕ್ಕಾಗಿ ಬೇಟೆಯಾಡುವುದು. ಚೌರ್ಯ, ಪರಸ್ತ್ರೀ ಮೋಹ.
ಇವೆಲ್ಲ ಕಾಯುತ್ತ ಕುಳಿತ್ತಿದ್ದಾರೆ .

 ಕರ್ಮವೆಂಬ ಗಂಡ( ಕೌಶಿಕ)ನ ಬಾಯಿ ಹೊಲೆದು ಅಂದರೆ ಈ ಗಂಡ ಎನ್ನುವ ಕರ್ಮ ಕೌಶಿಕನನ್ನು ಕಳೆದು ಕರ್ಮದಿಂದ ಪಾರಾಗಿ ನಾನು ನನ್ನ ಹರನ ಕೂಡೆ ಹೋಗುವೆ.

 ಮನವೆಂಬ ಸಖಿಯ ಪ್ರಸಾದದಿಂದ ಅನುಭಾವವ ಕಲಿತೆನು. ಅಂದರೆ ನನ್ನ ಮನವೆಂಬ ವಿರೋಧಿಯನ್ನು ನಿಗ್ರಹಿಸಿ, ಆ ಮನಸ್ಸನ್ನು ನನ್ನ ಗೆಳತಿ ,ನನ್ನ ಸಖಿಯನ್ನಾಗಿ ಮಾಡಿಕೊಂಡೆ ಎನ್ನುತ್ತಾಳೆ ಅಕ್ಕಮಹಾದೇವಿ .

ಮನಸ್ಸನ್ನು ನಿಗ್ರಹ ಮಾಡಿಕೊಂಡು ಅನುಭವವ ಮಾಡಿಕೊಳ್ಳಲು ಸಾಧ್ಯ. ಇಲ್ಲಿ ಎಲ್ಲರೂ ನನ್ನ ವೈರಿಗಳು ಹೀಗಾಗಿ ನಾನು ಸಜ್ಜನ ಅಂದರೆ ಒಳ್ಳೆಯ ಗಂಡನನನ್ನು ಮಾಡಿಕೊಂಡೆ ಎನ್ನುತ್ತಾಳೆ. ಇವರೆಲ್ಲರೂ ನನಗೆ ಅನುಕೂಲ ಮಾಡಿಕೊಡುಲಾರರು. ನಾನೇ ಹುಡುಕಿ ಸಜ್ಜನನ ಗಂಡನನ್ನು ಮಾಡಿಕೊಂಡೆ.ಶ್ರೀಶೈಲದ ಚೆನ್ನಮಲ್ಲಿಕಾರ್ಜುನನೇ ತನ್ನ ಚೆಲುವಿನ ಒಲವ ಪತಿ ಎಂದು ಅಭಿಮಾನದಿಂದ ಹೇಳಿಕೊಂಡ ಅಕ್ಕ ಇಲ್ಲಿ ‘ಚೆನ್ನಮಲ್ಲಿಕಾರ್ಜುನ’ ಜ್ಞಾನೋದಯದ ಸಂಕೇತ.

ಬಸವಣ್ಣ ತಿಳಿಸಿಕೊಟ್ಟ ‘ಅರಿವಿನ ‘ ಪ್ರತೀಕ ಆ ಅರಿವೇ ತನ್ನ ಪತಿ ಎಂದು ಹೇಳುವ ಅಕ್ಕನ ವೈಚಾರಿಕತೆ ನಮ್ಮನ್ನು ಆಳಕ್ಕಿಳಿಸಿ ಬಿಡುತ್ತದೆ .
ಉಡುತಡಿಯಿಂದ ಕಲ್ಯಾಣಕ್ಕೆ ,ಕಲ್ಯಾಣದಿಂದ ಕದಳಿಯ ಪಯಣ ಇದು ಮನುಷ್ಯನ ಹುಟ್ಟಿನಿಂದ ಅರಿವಿನವರೆಗಿನ ಪಯಣ .ಅಂತರಂಗ ಪ್ರವೇಶಿಸುವ  ‘ಕಾಯಪಯಣ’.
ಒಟ್ಟಿನಲ್ಲಿ ಇಡೀ ಜೀವ ಪಯಣದ ಹಾದಿಯಲ್ಲಿ ಉಡುತಡಿ ,ಕಲ್ಯಾಣ, ಕದಳಿ ,ಶ್ರೀಶೈಲ ಮಲ್ಲಿಕಾರ್ಜುನ ಎಲ್ಲವೂ ಭೌತಿಕ ಸಂಗತಿಗಳು .ತನ್ನ ಅರಿವಿನ ಮೂಲಕ  ಜ್ಞಾನವೆಂಬ ಬೆಳಕಿನ ದರ್ಶನ ಪಡೆಯುವುದೇ ಗುರಿಯಾಗಿರುತ್ತದೆ.ಇದನ್ನು ಬಸವಾದಿ ಶರಣರ ಶಿವಯೋಗದ ಲಿಂಗ ಧ್ಯಾನದಲ್ಲಿ ಸಾಧ್ಯವಾಗಿಸಿಕೊಳ್ಳುತ್ತಾಳೆ.


Leave a Reply

Back To Top