ಸಮ ಸಮಾಜದ ನಿರ್ಮಾಣ ಅಪೌಷ್ಠಿಕತೆ ಸಮಸ್ಯೆಗೆ ಪರಿಹಾರ- ವಿಶೇಷ ಲೇಖನ-ಮೇಘ ರಾಮದಾಸ್ ಜಿ

ನಮ್ಮದು ಸಮಾಜವಾದಿ ರಾಷ್ಟ್ರ. ಇದರ ಅನುಸಾರ ಕಾರ್ಮಿಕರೇ ಉತ್ಪಾದನೆ ಮತ್ತು ವಿತರಣೆ ಮಾಡಬೇಕಿದೆ. ಸಮಾಜವಾದದ ಮೂಲ ಉದ್ದೇಶವೇ ಸಮ ಸಮಾಜದ ನಿರ್ಮಾಣ. ಇಲ್ಲಿ ಎಲ್ಲರೂ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮಾನತೆ ಹೊಂದಿರಬೇಕು. ಆದರೆ ಈಗಷ್ಟೇ 78ನೇ ವರ್ಷದ ಸ್ವತಂತ್ರೋತ್ಸವವನ್ನು ಆಚರಿಸಿರುವ ನಾವು ಇನ್ನೂ ಕೂಡ ಇದು ಯಾವುದರಲ್ಲಿ ಸಮಾನತೆ ಕಾಣಲು ಸಾಧ್ಯವಾಗಿಲ್ಲ. ದೇಶದ ಒಟ್ಟು ಸಂಪತ್ತು ಕೇವಲ 1% ಜನರ ಬಳಿ ಇರುವುದು ವಿಪರ್ಯಾಸ. ಇಂದು ಕೂಡ ದಿನಕ್ಕೆ ಕೇವಲ ಒಂದು ಹೊತ್ತು ಮಾತ್ರ ಊಟ ಮಾಡುವ ಜನರು ನಮ್ಮ ನಡುವೆ ಇದ್ದಾರೆ. ಆ ಒಂದು ಹೊತ್ತಿನ ಊಟವು ಸಹ ಪೌಷ್ಟಿಕವಾದದ್ದಲ್ಲ ಎನ್ನುವುದು ದುರಂತ. ಹೌದು ಆಜಾಧಿ ಕಾ ಅಮೃತ್ ಮಹೋತ್ಸವ್ ಆಚರಿಸಿರುವ ಭವ್ಯ ಭಾರತದಲ್ಲಿ ಇಂದಿಗೂ ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ” ಅಪೌಷ್ಠಿಕತೆ “.

ಅಪೌಷ್ಟಿಕತೆ ಎಂದರೇನು?
ಜೀವಿಗಳು ತುಂಬಾ ಕಡಿಮೆ ಅಥವಾ ಹೆಚ್ಚಿನ ಪೋಷಕಾಂಶಗಳನ್ನು ಪಡೆದಾಗ ಅಪೌಷ್ಟಿಕತೆ ಉಂಟಾಗುತ್ತದೆ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳ ಕೊರತೆಯಿಂದ ಮಾತ್ರವಲ್ಲದೆ, ಹೆಚ್ಚಿನ ಪೋಷಕಾಂಶಗಳ ಸೇವನೆಯೂ ಕೂಡ ಪೌಷ್ಟಿಕತೆಯ ಭಾಗವಾಗಿದೆ ಎಂದು ವಿಶ್ವ ಆರೋಗ್ಯ  ಸಂಸ್ಥೆ ತಿಳಿಸುತ್ತದೆ.

ಭಾರತದಲ್ಲಿ ಅಪೌಷ್ಟಿಕತೆ


ತಾಯಿಯ ಗರ್ಭದಲ್ಲಿ ಭ್ರೂಣವಾಗಿದ್ದಾಗಿನಿಂದಲೇ ಈ ಅಪೌಷ್ಟಿಕತೆ ಎಂಬ  ನಂಜು ಮಗುವನ್ನು ಸೋಕುವ ಸಾಧ್ಯತೆ ಇರುತ್ತದೆ. 2013 ರಿಂದ ಭಾರತದ ಜಿಡಿಪಿಯಲ್ಲಿ 50% ಹೆಚ್ಚಳವಾಗಿದ್ದರೂ, ವಿಶ್ವದ ಅಪೌಷ್ಟಿಕ ಮಕ್ಕಳ ಪೈಕಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಮಕ್ಕಳು ಭಾರತದಲ್ಲಿ ವಾಸಿಸುತ್ತಿದ್ದಾರೆ. ಈ ಪೈಕಿ ಮೂರು ವರ್ಷದೊಳಗಿನ ಅರ್ಧದಷ್ಟು ಮಕ್ಕಳು ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿದ್ದಾರೆ. ಭಾರತದಲ್ಲಿ ಅಪೌಷ್ಟಿಕತೆಗೆ ಮುಖ್ಯ ಕಾರಣ ಆರ್ಥಿಕ ಅಸಮಾನತೆಯಾಗಿದೆ. ಆದರೆ ಭಾರತದ ಆರ್ಥಿಕತೆ 2013 ರಿಂದ 2023ರ ವರೆಗೆ 7.6% ರಷ್ಟು ಹೆಚ್ಚಾಗಿದೆ. 2024ರ ವಿಶ್ವ ಜಿಡಿಪಿ ರಾಂಕಿಂಗ್ ನ ಪ್ರಕಾರ ಭಾರತ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ರಾಷ್ಟ್ರವಾಗಿದೆ. ಆದರೆ ಇದು ಒಟ್ಟು  ದೇಶದ ಆರ್ಥಿಕ ಅಭಿವೃದ್ಧಿ ಅಲ್ಲ ಎನ್ನುವುದು ಅಕ್ಷರ ಸಹ ಸತ್ಯ.

 ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಭಾರತವು ವಿಶ್ವದ ಅತ್ಯುನ್ನತ ರಾಂಕ್ ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ. ಭಾರತದಲ್ಲಿ ಕಡಿಮೆ ತೂಕದ ಮಕ್ಕಳ ಪ್ರಮಾಣವೂ ವಿಶ್ವದಲ್ಲಿ ಅತ್ಯಧಿಕವಾಗಿದೆ. 2023ರ ಜಾಗತಿಕ ಹಸಿವಿನ ಸೂಚ್ಯಂಕದ ಅನುಸಾರ 125 ದೇಶಗಳಲ್ಲಿ ಭಾರತ 111ನೇ ಸ್ಥಾನ ಪಡೆದಿದೆ. ಇದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಭಾರತ 28.7 ಅಂಕದೊಂದಿಗೆ ಅತಿ ಗಂಭೀರ ಸ್ಥಿತಿಯಲ್ಲಿದೆ. 2019ರ ಜಾಗತಿಕ ಹಸಿವು ಸೂಚ್ಯಂಕದ ವರದಿಯ ಅನುಸಾರ ಮಕ್ಕಳ ಕ್ಷೀಣತೆಯ ಗಂಭೀರ ಸಮಸ್ಯೆ ಇರುವ 117 ದೇಶಗಳಲ್ಲಿ ಭಾರತ 102ನೇ ಸ್ಥಾನ ಪಡೆದಿದೆ.

ಪ್ರಪಂಚದಲ್ಲಿ ಹಸಿದಿರುವ ಜನರಲ್ಲಿ ಶೇಕಡ 25% ಭಾರತದಲ್ಲಿ ವಾಸಿಸುತ್ತಿದ್ದಾರೆ. ಉತ್ತರ ಕೊರಿಯಾ ಮತ್ತು ಸುಡಾನ್ ನಂತಹ ರಾಷ್ಟ್ರಗಳಿಗಿಂತಲೂ ನಮ್ಮ ದೇಶದ ಪರಿಸ್ಥಿತಿ ಈ ವಿಚಾರದಲ್ಲಿ ಕೆಟ್ಟದಾಗಿದೆ. ದೇಶದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 44% ಮಕ್ಕಳು ಅಗತ್ಯಕಿಂತ ಕಡಿಮೆ ತೂಕ ಹೊಂದಿದ್ದಾರೆ. 72% ಶಿಶುಗಳು ಮತ್ತು 52% ವಿವಾಹಿತ ಮಹಿಳೆಯರು ರಕ್ತಹೀನತೆಯನ್ನು ಹೊಂದಿದ್ದಾರೆ. ವರದಿಯ ಪ್ರಕಾರ ಭಾರತದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ 68% ಸಾವುಗಳು ಅಪೌಷ್ಟಿಕತೆಯಿಂದ ಉಂಟಾಗುತ್ತಿವೆ. ಇವೆಲ್ಲವೂ ಅಪೌಷ್ಟಿಕತೆ ದೊಡ್ಡ ಸಮಸ್ಯೆ ಎನ್ನುವುದಕ್ಕೆ ಹಿಡಿದ ಕನ್ನಡಿಗಳಾಗಿವೆ.

 ಅಪೌಷ್ಟಿಕತೆ ನಿವಾರಣೆಗೆ ಸರ್ಕಾರದ ಕ್ರಮಗಳು


ಭಾರತದಲ್ಲಿ ಅಪೌಷ್ಟಿಕತೆಯ ನಿವಾರಣೆಗೆ ಮೊದಲಿನಿಂದಲೂ ಹಲವು ಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹೋಗೆಯಲು ಸರ್ಕಾರಗಳು ಇನ್ನಿಲ್ಲದೆ ಯೋಜನೆಗಳನ್ನು ತರುತ್ತಿದ್ದಾರೆ. ಮುಖ್ಯವಾಗಿ ಮಕ್ಕಳಲ್ಲಿ ಅಪೌಷ್ಟಿಕತೆಯ ನಿವಾರಣೆಯಾದರೆ, ಈ ಸಮಸ್ಯೆ ಶೀಘ್ರವಾಗಿ ಬಗೆಹರಿಯಬಹುದು ಎನ್ನುವ ಕಾರಣದಿಂದ ತಾಯಿ ಗರ್ಭದಲ್ಲಿನ ಭ್ರೂಣದಿಂದ ಹಿಡಿದು 14ನೇ ವಯಸ್ಸಿನವರೆಗಿನ  ಮಕ್ಕಳಲ್ಲಿ ಅಪೌಷ್ಟಿಕತೆಯ ಕೊರತೆ ನೀಗಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಅಂಗನವಾಡಿ ಮತ್ತು ಶಾಲೆಗಳಲ್ಲಿ ಅನುಷ್ಠಾನಗೊಳ್ಳುವುದರ ಮೂಲಕ ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಲು ಸಹಕಾರಿಯಾಗಿವೆ.



ಅಂಗನವಾಡಿಯಲ್ಲಿನ ಯೋಜನೆಗಳು


ಸರ್ಕಾರವು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಕ್ರಮಗಳನ್ನು ಕೈಗೊಂಡಿದೆ.
ಪೂರಕ ಪೌಷ್ಟಿಕ ಆಹಾರ ಯೋಜನೆ ಅಡಿಯಲ್ಲಿ 6 ತಿಂಗಳಿನಿಂದ 6 ವರ್ಷದ ಮಕ್ಕಳಿಗೆ ನ್ಯೂಟ್ರಿಮಿಕ್ಸ್ ಪುಡಿ, ಗೋಧಿ ರವೆ, ಅಕ್ಕಿ, ಹೆಸರು ಕಾಳು, ರವೆ ಲಾಡು, ಚಿಕ್ಕಿ ಅಂತಹ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ನೀಡಲಾಗುತ್ತಿದೆ.

ಕ್ಷೀರ ಭಾಗ್ಯದ ಅಡಿಯಲ್ಲಿ 6 ತಿಂಗಳಿನಿಂದ 3 ವರ್ಷದ ಮಕ್ಕಳಿಗೆ ಮನೆಗಳಿಗೆ ಹಾಲು ಪುಡಿ ಮತ್ತು ಸಕ್ಕರೆ ನೀಡಲಾಗುತ್ತದೆ ಅದೇ ರೀತಿ 4 ವರ್ಷದಿಂದ 6 ವರ್ಷದ ಮಕ್ಕಳಿಗೆ ಅಂಗನವಾಡಿಯಲ್ಲಿಯೇ ವಾರಕ್ಕೆ 5 ದಿನ 150 ml  ಹಾಲು ಕೊಡಲಾಗುತ್ತಿದೆ.
ಸೃಷ್ಟಿ ಅಡಿಯಲ್ಲಿ ವಾರದ ಎರಡು ದಿನ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತಿದೆ.
ಮಾತೃಪೂರ್ಣ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ತಾಯಿಗೂ ಸಹ ಪೌಷ್ಟಿಕ ಆಹಾರ ಸಿಗುವಂತೆ ನೋಡಿಕೊಳ್ಳಲಾಗಿದೆ. ಗರ್ಭಿಣಿ ಹಾಗೂ ಬಾಣಂತಿಯರಿಗೆ ವಾರದ 5 ದಿನ ಮಧ್ಯಾಹ್ನ ಬಿಸಿ ಊಟ ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.

ಶಾಲೆಯಲ್ಲಿನ ಯೋಜನೆಗಳು


ಅಂಗನವಾಡಿ ಮುಗಿಸಿ ಶಾಲೆಗೆ ಹೆಜ್ಜೆ ಇಟ್ಟ ಮಕ್ಕಳಿಗೂ ಸಹ ಪೌಷ್ಠಿಕತೆಯ ಅಗತ್ಯವಿದೆ. ಇದನ್ನು ಅರಿತ ಸರ್ಕಾರವು ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಿದೆ.
ಮಧ್ಯಾಹ್ನದ ಬಿಸಿ ಊಟ ಯೋಜನೆ ಅಡಿಯಲ್ಲಿ ಒಂದನೇ ತರಗತಿಯಿಂದ 10ನೇ ತರಗತಿಯ ವರೆಗಿನ ಎಲ್ಲಾ ಮಕ್ಕಳಿಗೂ ಮಧ್ಯಾಹ್ನ ಬಿಸಿ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.
ಕ್ಷೀರ ಭಾಗ್ಯ ಯೋಜನೆ ಅಡಿಯಲ್ಲಿ ವಾರದ 5 ದಿನ 1ನೇ ತರಗತಿಯಿಂದ 10ನೇ ತರಗತಿಯ ಮಕ್ಕಳಿಗೆ ಹಾಲು ಒದಗಿಸಲಾಗುತ್ತದೆ.
ಈ ವರ್ಷದಿಂದ ಕರ್ನಾಟಕ ಸರ್ಕಾರವು ಅಜೀಂ ಪ್ರೇಮ್ ಜಿ ಫೌಂಡೇಶನ್ ರವರ ಸಹಯೋಗದೊಂದಿಗೆ ಮಕ್ಕಳಿಗೆ ಮೊಟ್ಟೆ ಕೊಡುವ ಕಾರ್ಯಕ್ರಮವನ್ನು ಸಹ ಆರಂಭಿಸಿದೆ. ಇದರ ಜೊತೆ ಬಾಳೆಹಣ್ಣು ಹಾಗೂ ಚಿಕ್ಕಿಯನ್ನು ಸಹ ಕೊಡುವ ವ್ಯವಸ್ಥೆ ಮಾಡಲಾಗಿದೆ.

 ಈ ಸಮಸ್ಯೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ 1 ರಿಂದ 7ನೇ ತರೀಖಿನವರೆಗು ರಾಷ್ಟ್ರೀಯ ಪೌಷ್ಠಿಕ ವಾರವನ್ನಾಗಿ ಆಚರಿಸಲಾಗುತ್ತದೆ. ಇದರ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಪೌಷ್ಟಿಕತೆಯ ಕುರಿತು ಅರಿವು ಮೂಡಿಸಲಾಗುತ್ತದೆ. ಸರ್ಕಾರದಿಂದ ಇಷ್ಟೆಲ್ಲ ಯೋಚನೆಗಳು ಇದ್ದರೂ ಸಹ ದೇಶದಲ್ಲಿ ಅಪೌಷ್ಟಿಕತೆಯನ್ನು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಇದಕ್ಕೆ ಆರ್ಥಿಕ ಅಸಮಾನತೆಯ ದೊಡ್ಡ ಕಾರಣವಾಗಿದೆ ಎಂಬುದನ್ನು ನಾವು ಈಗಾಗಲೇ ಸ್ಪಷ್ಟವಾಗಿ ತಿಳಿದಿದ್ದೇವೆ. ಸಂವಿಧಾನದ ಅನುಚ್ಛೇದ 47 ರ ಅನುಸಾರ ‘ ಪೌಷ್ಠಿಕತೆ ಮಟ್ಟವನ್ನು ಮತ್ತು ಜೀವನಮಟ್ಟವನ್ನು ಹೆಚ್ಚಿಸುವುದು ಹಾಗೂ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವುದು ರಾಜ್ಯದ ಕರ್ತವ್ಯ ‘ ವಾಗಿದೆ. ಈ ನಿಟ್ಟಿನಲ್ಲಿ ಮೇಲಿನ ಎಲ್ಲಾ ಯೋಚನೆಗಳು ಎಲ್ಲಾ ಮಕ್ಕಳನ್ನು ಯಾವುದೇ ಅಡ್ಡಿಯಿಲ್ಲದೆ ತಲುಪಿದಾಗ ಈ ಅಪೌಷ್ಟಿಕತೆ ಎನ್ನುವ ದೊಡ್ಡ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಇದೆ.


Leave a Reply

Back To Top