‘ಅಪ್ರತಿಮ ‘ಗಜಲ್’ ನಾಯಕಿ‌..’ಪ್ರಭಾವತಿ ಎಸ್ ದೇಸಾಯಿ

ವಿಜಯಪುರ ಕಲೆ,ಸಾಂಸ್ಕೃತಿಕ ಹಿನ್ನಲೆಯನ್ನು ಒಳಗೊಂಡ ಸಾಮ್ರಾಜ್ಯ. ಗೋಲ್ ಗುಮ್ಮಟದಂತಹ ಅಧ್ಬುತ ಏಳು ಪ್ರತಿಧ್ವನಿಯನ್ನು ಪ್ರತಿನಿಧಿಸುವ ಸಾಂಗತ್ಯದ ಬರಹಗಾರ್ತಿ “ಗಜಲ್” ಕವಯತ್ರಿ ಶ್ರೀಮತಿ ಪ್ರಭಾವತಿ ಎಸ್. ದೇಸಾಯಿ ಮೇಡಂ ರವರು ಗಜಲ್ ಲೋಕದ ಅಪ್ರತಿಮ ತಾರೆ! ಬದುಕು ಬವಣೆಗಳ ನಡುವೆ ತನ್ನೆಲ್ಲ ಆಶೋತ್ತರಗಳನ್ನು ಸ್ಪಷ್ಟವಾಗಿ ಗೋಚರಿಸುವಂತೆ ಮತ್ತು ತುಮುಲಗಳ ನಡುವೆ ನವೀಕರಿಸುವ ಕೆಲಸವನ್ನು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.”ಗಜಲ್ “ನ್ನು ಕೆಲವೇ ಕೆಲವು ಕವಿಗಳಿಗೆ ಮಾತ್ರ‌ ಸಿಮೀತವಾಗಿತ್ತು.ಅದರ ರಚನೆಯ ಗೊಂದಲ ಹಾಗೂ ಮಜಲುಗಳ  ಅರಿಯುವ ಗೋಜಿಗೆ ಹೋಗದ ಅನೇಕ ಕವಿಗಳು ಗಜಲ್ ಸುದ್ದಿಯನ್ನು ಬಿಟ್ಟದ್ದ ಕಾಲವದು! ಆದರೆ ‘ ಗಜಲ್’ ಮನೋ ಅಭಿವ್ಯಕ್ತಿಗೆ ಸರಳ ಸಂಪನ್ನ ಶೈಲಿಯ ಕವಿತೆಯ ಭಂಡಾರವಾಗಿ ಪರಿಣಮಿಸಿದ್ದು ಗಜಲ್ ನ ವಿಸ್ತೃತ ಭಾವಕ್ಕೆ ಗರಿಮುಡಿದಂತೆ!

ಶ್ರೀಮತಿ ಪ್ರಭಾವತಿ ಎಸ್. ದೇಸಾಯಿಯವರ ಗಜಲ್ ಕವಿತೆಗಳು

 ಏಕಾಂತದಲ್ಲಿ ಪ್ರೇಯಸಿ/ಪ್ರಿಯತಮನೇ ಬಂದು ಕರ್ಣಗಳಲ್ಲಿ ಪಿಸುಗುಟ್ಟಿದಂತೆ, ರೋಮಾಂಚಕಾರಿ ಪಿಸುಮಾತು!
ಯಾವುದೋ ಖುಷಿಗೆ ಗಾಳಿಯ ಮೈಮರೆತು ತೇಲಾಡಿದಂತೆ. ಒಟ್ಟಿನಲ್ಲಿ ಏನೋ ಒಂಥರಾ ಅಂದ ಚೆಂದದ ಹಾಗೂ ಹೇಳಲಾಗದ ನವಿರು ನವಿರಾದ ಭಾವಲೋಕ! ಅಂತಹ ಐವತ್ತು ವಿಭಿನ್ನ ಕನಸುಗಳು ಮತ್ತು ಪ್ರೇಮ ಸುಮಗಳ ಸುವಾಸನೆಯಿಂದ ಓದುಗನನ್ನು ತನ್ನತ್ತ ಸೆಳೆಯುವ  ಆಕರ್ಷಕ ಭಾವಗಳ ಗುಚ್ಛವನ್ನು ಒಳಗೊಂಡ ಕವಿತೆಗಳ ಸಾರವನ್ನು ಹೊತ್ತ ಅವರ  ಗಜಲ್ ಸಂಕಲನ “ಭಾವಗಂಧಿ” ನನ್ನನ್ನು ತುಂಬಾನೆ ಸೆಳೆದಿದೆ.ಪ್ರಭಾವತಿ ದೇಸಾಯಿ ಮೇಡಂ ರವರು ತಮ್ಮ ಸಾಹಿತ್ಯ ಸಂಚಲನದ ಭಾಗವಾದ ಗಜಲ್ ಗಳಲ್ಲಿ ತುಂಬ ಸುಂದರವಾಗಿ ಬಿತ್ತರಿಸಿದ್ದಾರೆ! ಕೊಳಲ ದನಿಯಿಲ್ಲದೇ ಗಜಲ್ ನಲ್ಲಿ ಅವ್ಯಕ್ತ ಭಾವ ಅಭಿವ್ಯಕ್ತಿಗೊಂಡಿದೆ,ಅರ್ಥೈಸಿಕೊಂಡಷ್ಟು ಮನಸ್ಸು ಭಾರವಾಗುತ್ತದೆ.
ಅಂತಹ ಅನೇಕ ಭಾವನಾತ್ಮಕ ಗಜಲ್ ಗಳಿವೆ.

ಕೊಳಲ ದನಿಯಿಲ್ಲದೆ ಬೃಂದಾವನ ಮೌನವಾಗಿದೆ ನಲ್ಲ
ರಾಸ ಕ್ರೀಡೆಯಿಲ್ಲದೆ ಯಮುನೆ ನೊಂದು ಬಿಕ್ಕುತಿದೆ ನಲ್ಲ

ಕಿಟಕಿಯಲಿ ಇಣಿಕಿದ ಶಶಿಯು ಕಚಗುಳಿಟ್ಟು ಕಾಡುತಿರುವನು
ಜಗವ ಮರೆತು ಕಣ್ಣ ದೃಷ್ಟಿಯು ಬಾಗಿಲಿಗೆ ನೆಟ್ಟಿದೆ ನಲ್ಲ

ತೂಗಿದ ಕಂದೀಲ ಬೆಳಕಿಗೆ ಪತಂಗಗಳು ಮುತ್ತಿಡುತಿವೆ
ಕನಸ ಕಂಬನಿ ಜಾರಿ ತಲೆದಿಂಬು ಒದ್ದೆಯಾಗಿದೆ ನಲ್ಲ

ಮುಂಗಾರು ಮೋಡ ಅರ್ಭಟದಲಿ ಮಿಂಚಿ ಗುಡುಗುತಿದೆ ಬಾನಲಿ
ಸಾವಿರ ಕಣ್ಣಿನ ನವಿಲು ಹೆಜ್ಜೆ ಹಾಕಿ ಕರೆಯುತಿದೆ ನಲ್ಲ

ಜೊತೆ ಇರುವಿಕೆ ಜಡ ಬದುಕಿಗೆ ಉತ್ಸಾಹವ ತುಂಬುತ್ತಿತ್ತು
ಏಕಾಂಗಿ ಬಿಸಿ ಉಸಿರಿಗೆ ಮುಡಿದ ಮೊಗ್ಗು ಕಮರಿದೆ ನಲ್ಲ

ಬಳಲಿದ ದೇಹಕೆ ಒಲವ ಮುತ್ತಲ್ಲದೆ ಮತ್ತೇನು ಬೇಕು
ಅಗಲಿಕೆಯ ಚಿಂತೆ ಚಿತೆಯಾಗಿ”ಪ್ರಭೆ”ಯ ದಹಿಸುತಿದೆ ನಲ್ಲ

ಅಲ್ಲದೇ ಯಾವುದೇ ಒಂದು ವಿಷಯದ ಮೆರುಗನ್ನು ಹೆಚ್ಚಿಸಿ ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಬಲ್ಲ ಕಾವ್ಯಾತ್ಮಕ ಸಂಗತಿಗಳ ಬಳಕೆ ಇಲ್ಲಿ ಅತ್ಯಂತ ಪ್ರಸ್ತುತವಾಗಿದೆ. ಛಂದಸ್ಸು, ರೂಪಕ, ಪ್ರತಿಮೆ, ಅಲಂಕಾರಗಳು ಹೀಗೆ ಮೊದಲಾದ ಕಾವ್ಯಾತ್ಮಕ ಗುಣಗಳನ್ನು ತುಂಬ ಅದ್ಭುತವಾಗಿ ಪ್ರಚುರಪಡಿಸಿದ್ದು ಈ ಗಜಲ್ ಸಂಕಲನದಲ್ಲಿ.
‘ರಧೀಪ್ ‘ ಬಳಕೆಯ ಮುನ್ನ ಕಾಫಿಯಾ ಪದಗಳು ಅತ್ಯಂತ ಅರ್ಥಪೂರ್ಣವಾಗಿ ಮನದಲ್ಲಿ ತಮ್ಮ ಛಾಪನ್ನು ಮೂಡಿಸುವಲ್ಲಿ ಸಫಲವಾಗಿವೆ.ಪ್ರಭಾವತಿ ಮೇಡಂ ರವರು ತಮ್ಮಲ್ಲಿ ಅನುಭಾವಿಸಿಕೊಂಡ ಅಪಾರ ಶಬ್ದ ಭಂಡಾರವನ್ನು ಸಮರ್ಥವಾಗಿ ಬಳಸಿದ ಪರಿಣಾಮ ಅತ್ಯುತ್ತಮವಾದ ಗಜಲ್ ಗಳನ್ನು ಸರಾಗವಾಗಿ ಕಟ್ಟಿಕೊಟ್ಟು,ಓದುಗರನ್ನು ತಮ್ಮತ್ತ ಸೆಳೆದುಕೊಳ್ಳುವ‌ ಆಯಸ್ಕಾಂತೀಯ ಗುಣ ಹೊಂದಿರುವ ಗಜಲ್ ಗಳನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ….

ಇಂತಹ ‘ಅಪ್ರತಿಮ ಗಜಲ್ ರತ್ನ ‘ ಕಲಬುರಗಿಯಲ್ಲಿ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿರುವುದು ಅತ್ಯಂತ ಸಂತಸದ ಸಂಗತಿ.ಹೀಗೆ ಗಜಲ್ ಲೋಕ ಸಾಹಿತ್ಯದ ಹೊಂಗಿರಣವಾಗಿ ಇನ್ನೂ ಹೆಚ್ಚು ಪ್ರತಿಭೆಗಳು ಬೆಳಕಿಗೆ ಬರುವಂತಾಗಲೆಂದು ಶುಭ ಹಾರೈಸುವೆ.


2 thoughts on “‘ಅಪ್ರತಿಮ ‘ಗಜಲ್’ ನಾಯಕಿ‌..’ಪ್ರಭಾವತಿ ಎಸ್ ದೇಸಾಯಿ

  1. ಶಿವಲೀಲಾ ಹುಣಸಿಗಿ ಚನ್ನಾಗಿ ಬರೆದಿದ್ದೀರಿ ಅಭಿನಂದನೆಗಳು

Leave a Reply

Back To Top