ಸ್ವಾತಂತ್ರ್ಯೋತ್ಸವದ ಹೊಸ್ತಿಲಿನಲ್ಲಿ…. ಒಂದು ವಿಶ್ಲೇಷಣೆ-ವೀಣಾ ಹೇಮಂತಗೌಡ ಪಾಟೀಲ್ 

“ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು” ಎಂಬುದು ಖ್ಯಾತ ಕವಿ ಸಿದ್ಧಲಿಂಗಯ್ಯನವರ ಕವನದ ಸಾಲು ಖಂಡಿತವಾಗಿಯೂ ವಾಸ್ತವವನ್ನು ಪ್ರತಿನಿಧಿಸುವ ಕವನ. ಸ್ವಾತಂತ್ರ್ಯ ಹೋರಾಟದ ಅಮೃತ ಮಹೋತ್ಸವ ಪೂರೈಸಿರುವ ನಮಗೆಲ್ಲಾ ಈ ಸ್ವಾತಂತ್ರ್ಯದ ಹಿಂದಿರುವ   ಹೋರಾಟ, ತ್ಯಾಗ, ಬಲಿದಾನಗಳ ಅರಿವು ಖಂಡಿತ ಬೇಕು.

 ಶತಮಾನಗಳ ಹಿಂದೆ ವ್ಯಾಪಾರದ ನೆವದಿಂದ ಭಾರತವನ್ನು ಹೊಕ್ಕು, ಭಾರತವನ್ನೇ ಆಳಿದ ಡಚ್ಚರು, ಪೋರ್ಚುಗೀಸರು,ಫ್ರೆಂಚರು  ಮತ್ತು ಬ್ರಿಟಿಷರು ನಮ್ಮನ್ನು ಕೇವಲ ಆಳಲಿಲ್ಲ,ನಮ್ಮ ಸಂಸ್ಕೃತಿಯ ಆಳದಲ್ಲಿ ಬೇರುಬಿಟ್ಟ ಹಲವಾರು ಸಂಗತಿಗಳ ಮೇಲೆ ರಾಜ್ಯಭಾರ ಮಾಡಿದರು.’ವಸುದೈವ ಕುಟುಂಬಕಂ’ ವ್ಯಾಖ್ಯಾನದ ಮೂಲಕ  ಇಡೀ ಜಗತ್ತನ್ನು ಒಂದೇ ಕುಟುಂಬ ಎಂದು   ಕರೆದ ಭಾರತ  ದೇಶವನ್ನು ಒಡೆದು ಆಳಿದರು. ಹಲವಾರು ಜಾತಿ, ಮತ, ಧರ್ಮಗಳ ತವರೂರಾದ ಭಾರತ ದೇಶದ ಭಾವೈಕ್ಯತೆಯ ಮೂಲ ಬೇರನ್ನು ಅಲುಗಾಡಿಸಿದರು. ಆದರೆ ಭಾರತ ದೇಶ ಅಜೇಯ,ಅಗಮ್ಯ.ನೂರಾರು ಬಾರಿ ಮುರಿಯಲ್ಪಟ್ಟರೂ, ಹಲವಾರು ಬಾರಿ ತುಳಿಯಲ್ಪಟ್ಟರು …ಮತ್ತೆ ಮತ್ತೆ ಮೇಲೇಳುತ್ತಾ ಬೂದಿಯಿಂದ ಹುಟ್ಟಿಬರುವ ಫೀನಿಕ್ಸ್ ಪಕ್ಷಿಯಂತೆ ತನ್ನ ಮೇಲೆ ಮಾಡಿದ ಎಲ್ಲ ಆಕ್ರಮಣಗಳಿಗೂ, ಪೈಶಾಚಿಕ ಅತ್ಯಾಚಾರಗಳಿಗೂ ತನ್ನದೇ ರೀತಿಯ ಹೋರಾಟದ ಹಾದಿಯ ಮೂಲಕ ಈ ಮಣ್ಣಿನ ಮಕ್ಕಳು  ತಾಯಿ ಭಾರತಿಯ ಕೊರಳಿಗೆ ಜಯದ ಮಾಲೆಯನ್ನು  ತೊಡಿಸಿದರು. ತಾವು ರಕ್ತದೋಕುಳಿಯಲ್ಲಿ ಮುಳುಗಿದರೂ  ಭಾರತ ಮಾತೆಯ  ಹಣೆಗೆ ವಿಜಯ ತಿಲಕವನಿಟ್ಟರು. ಹೋರಾಟದ ಹಾದಿಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ, ದೀಪವಾಗಿ ತನ್ನನ್ನೇ ತಾನು ಸುಟ್ಟುಕೊಂಡು ನಮಗೆ ಬೆಳಕನ್ನುಳಿಸಿ ಹೊರಟರು. ಸಹನೆ, ಶಾಂತಿ, ಸಹಬಾಳ್ವೆಯ ಮಂತ್ರಗಳನ್ನು ಜಪಿಸುತ್ತಾ ಶಾಂತವಾದ ಹೋರಾಟವನ್ನು ಕೆಲವರು ಮಾಡಿದರೆ,ಇನ್ನೂ ಹಲವರು ಕ್ರಾಂತಿಯ ಕಿಡಿ ಮೊಳಗಿಸಿದರು.    ಆ ಸ್ವಾತಂತ್ರ್ಯ ಹೋರಾಟಗಾರರು ಪಟ್ಟ ಪರಿಶ್ರಮದ ಫಲವೇ ಇಂದಿನ ಸ್ವಾತಂತ್ರ್ಯಮಹೋತ್ಸವ. ಇದು ಎಂದೆಂದಿಗೂ ಮರೆಯಲಾಗದ ಅಮೃತ ಗಳಿಗೆ.

೧೮೫೭ ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ಮೂವತ್ತು ವರ್ಷಕ್ಕೆ ಮುಂಚೆಯೇ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಸಿಡಿದೆದ್ದು ಯುದ್ಧ ಮಾಡಿದಳು.ಬೆಳವಡಿ ಮಲ್ಲಮ್ಮ,ಕೆಳದಿಯ ಚೆನ್ನಮ್ಮ, ಝಾನ್ಸಿಯ ರಾಣಿ  ಲಕ್ಷ್ಮೀಬಾಯಿ  ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಕೂಡ ಭಾಗವಹಿಸಿ ಭಾರತಮಾತೆಯ ಸೇವೆಗೈದರು. ಅಹಿಂಸೆ,ಸತ್ಯಾಗ್ರಹದ  ಶಾಂತ ಸ್ವರೂಪದ  ಹೋರಾಟದ  ಮೂಲಕ ಗಾಂಧೀಜಿಯವರು ಹೋರಾಡಿದರೆ, “ಸ್ವರಾಜ್ಯವೇ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ ತೀರುತ್ತೇನೆ” ಎಂದು ತಿಲಕರು ಘೋಷಿಸಿದರು. “ನನಗೆ ನಿಮ್ಮ ಒOದು ಹನಿ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯವನ್ನು ತಂದು ಕೊಡುತ್ತೇನೆ” ಎಂದು ಸುಭಾಷ್ ಚಂದ್ರರು ಅಬ್ಬರಿಸಿದರು.ಹೀಗೆ ಸ್ವಾತಂತ್ರ್ಯ ಹೋರಾಟದ ಕಿಚ್ಚಿಗೆ ಹವಿಸ್ಸುಗಳಾದವರು ಹಲವರು. ಅವರ ಹಾದಿಗಳು   ವಿಭಿನ್ನವಾದರೂ ಸೇರುವ ಗುರಿ ಒಂದೇ ಆಗಿತ್ತು. ಅದು ಭಾರತಮಾತೆಯ ಸ್ವಾತಂತ್ರ್ಯ. ತನ್ನ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ನಿಸ್ವಾರ್ಥ ಹೋರಾಟ ಮತ್ತು ಬಲಿದಾನದ ಮೂಲಕ ಪಡೆದ ಮಹೋನ್ನತ ಸ್ವಾತಂತ್ರ್ಯಕ್ಕೆ ಇಂದು ಸಡಗರದ  ಅಮೃತ ಮಹೋತ್ಸವ.
ಲಕ್ಷಾಂತರ ಜನರ ಸ್ವಾಭಿಮಾನದ, ದೇಶಭಕ್ತಿಯ, ಮಾತೃಭೂಮಿ ಈ ಭಾರತ.ಭಾರತ ಎಂಬ ಹೆಸರೇ ಮೈಯಲ್ಲಿ ಪುಳಕವನ್ನುಂಟು ಮಾಡುವಂತಹ ಶಕ್ತಿಯನ್ನು ಹೊಂದಿದೆ. ಯಾಕೆಂದರೆ ನಾವು ನಮ್ಮ ದೇಶದೊಂದಿಗೆ, ದೇಶದ ನೆಲದೊಂದಿಗೆ  ಭಾವನಾತ್ಮಕವಾದ ತಾಯಿ ನೆಲದ  ನಂಟನ್ನು ಹೊಂದಿದ್ದೇವೆ.

ಸ್ವಾತಂತ್ರ್ಯ ದೊರೆತು ಎಪ್ಪತ್ತೇಳು ವರ್ಷಗಳು ಸಂದಿವೆ.ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳಾದ ಆಹಾರ, ಬಟ್ಟೆ, ವಸತಿ ಎಲ್ಲದರಲ್ಲೂ ನಾವು ಸ್ಥಿರತೆಯನ್ನು ಸಾಧಿಸಿದ್ದೇವೆ.ಆರ್ಥಿಕವಾಗಿ ದೇಶ ಪ್ರಗತಿಯನ್ನು ಸಾಧಿಸಿದೆ . ಸಣ್ಣ ಗುಂಡುಸೂಜಿಯನ್ನು ಕೂಡ  ತಯಾರಿಸಲು ಸಾಧ್ಯವಾಗದ ನಾವು  ಇಂದು ಕ್ರಯೋಜನಿಕ್ ರಾಕೆಟ್ ಎಂಜಿನ್ ನನ್ನು ಮಂಗಳನ ಅಂಗಳಕ್ಕೆ ಮೊದಲ ಪ್ರಯತ್ನದಲ್ಲಿಯೇ  ಕಳುಹಿಸಿದ್ದೇವೆ. ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಸಾಕಷ್ಟು ಉತ್ತಮ ಸ್ಥಿತಿಯಲ್ಲಿ ಇದ್ದು ಅಭಿವೃದ್ಧಿಶೀಲ ದೇಶಗಳ ಪಟ್ಟಿಯಲ್ಲಿ ನಾವೂ ಒಬ್ಬರಾಗಿದ್ದೇವೆ. ಜೊತೆಗೆ ಯುದ್ದವನ್ನೇ ಮಾಡದೇ ಸ್ವಾತಂತ್ರ ಪಡೆದ ಜಗತ್ತಿನ ಏಕೈಕ ರಾಷ್ಟ್ರ ಎಂಬ ತುರಾಯಿ ನಮಗಿದೆ. ಸುತ್ತಲಿನ ಹಲವಾರು ರಾಷ್ಟ್ರಗಳ ಜತೆಗೆ ಒಳ್ಳೆಯ ರಾಜತಾಂತ್ರಿಕ ಸಂಬಂಧ, ಸ್ನೇಹ ಮತ್ತು ಬಾಂಧವ್ಯಗಳು  ನಮಗಿದೆ. ಅಷ್ಟಲ್ಲದೆ ಜಗತ್ತಿನ ಅತ್ಯಂತ ಹೆಚ್ಚಿನ ಯುವ ಸಮೂಹ ಜನಸಂಖ್ಯೆ ನಮ್ಮಲ್ಲಿದೆ.ಅತಿ ಹೆಚ್ಚಿನ ಚಿನ್ನದ ಭಾಂಡಾರ ನಮ್ಮ  ದೇಶದ ಮಹಿಳೆಯರಲ್ಲಿದೆ.ಅಂದು ಜ್ಞಾನವನ್ನು ಪಡೆಯಲು ನಮ್ಮಲ್ಲಿಗೆ ಬರುತ್ತಿದ್ದ ಸಾವಿರಾರು ಜನರಿಗೆ ಜ್ಞಾನ ದಾಸೋಹ ನೀಡುತ್ತಿದ್ದ ಭಾರತ ಇ೦ದು ಜಗತ್ತಿಗೆ ಅತಿ ಹೆಚ್ಚಿನ ವೈದ್ಯರನ್ನು ಎಂಜಿನಿಯರ್ಗಳನ್ನು,ವಿಜ್ಞಾನಿಗಳನ್ನು  ತಂತ್ರಜ್ಞರನ್ನು ರಫ್ತು ಮಾಡುತ್ತಿದೆ. ಕಾರ್ಯಕುಶಲತೆ, ದೂರದೃಷ್ಟಿ,ಸಮಯೋಚಿತ ನಿರ್ಧಾರಗಳಿಗೆ ಭಾರತ ಹೆಸರಾದ ದೇಶ.

ಭಾರತ ದೇಶ ಇಡೀ ಜಗತ್ತಿಗೆ ಯೋಗದ, ಧ್ಯಾನದ  ಜ್ಞಾನವನ್ನು ಕೊಟ್ಟಿದೆ.ಇಡೀ ಜಗತ್ತು ನಾಗರಿಕತೆಯ ತೊಟ್ಟಿಲಲ್ಲಿ ತೂಗುತ್ತಿರುವಾಗಲೇ ನಮ್ಮ ದೇಶ ವೇದ, ಉಪನಿಷತ್ತು,ಪುರಾಣಗಳ ಮೂಲಕ  ವಿಶ್ವಗುರು ಸ್ಥಾನವನ್ನು ಪಡೆದಿತ್ತು. ಹಲವು ಶತಮಾನಗಳ ಹಿಂದಿನ  ಕಾಲದಲ್ಲಿಯೇ ಭಾರತದ ವಿಶ್ವವಿದ್ಯಾಲಯಗಳಾದ ನಳಂದ, ತಕ್ಷಶಿಲಾ, ಪಾಟಲಿಪುತ್ರ ಮತ್ತು ಕಂಚಿ ವಿದ್ಯಾಪೀಠಗಳು ಹೆಸರುವಾಸಿಯಾಗಿದ್ದವು.ಉನ್ನತ ಜ್ಞಾನದ ಕೇಂದ್ರಗಳಾಗಿದ್ದವು.ಜಗತ್ತಿನ ವಿವಿಧ ದೇಶಗಳ ಜನರು ಜ್ಞಾನಾರ್ಜನೆಗಾಗಿಯೇ ಭಾರತಕ್ಕೆ ಪ್ರವಾಸಿಗರಾಗಿ ಬರುತ್ತಿದ್ದರು.ಹಾಗೆ ಬಂದ ಹಲವಾರು ಜನರು ಭಾರತದ ಸಂಸ್ಕೃತಿಗೆ ಮಾರುಹೋಗಿ ಇಲ್ಲಿಯೇ ನೆಲೆಸಿದರು ಪರಿಣಾಮ ಭಾರತ ಸರ್ವ ಜನಾಂಗದ ನೆಲೆವೀಡಾಯಿತು.  ಜಗತ್ತಿನಲ್ಲಿಯೇ ಬಹುಶಃ ಭಾರತದಲ್ಲಿರುವಷ್ಟು ಮತಗಳು,ಧರ್ಮಗಳು, ಜಾತಿಗಳು  ಮತ್ತು ಉಪಜಾತಿಗಳು, ಭಾಷೆಗಳು ಜಗತ್ತಿನ ಬೇರಾವುದೇ ದೇಶಕ್ಕೆ ಇಲ್ಲ. ಜತೆಗೆ ಭಾರತದಲ್ಲಿ ಹೆಜ್ಜೆ ಹೆಜ್ಜೆಗೂ ಒಂದೊಂದು ದೇವಸ್ಥಾನಗಳು,ಮಸೀದಿಗಳು ಮಂದಿರಗಳು ಇದ್ದರೂ ಕೂಡ ಅವು ನಮ್ಮನ್ನು ವಿವಿಧತೆಯಲ್ಲಿ ಏಕತೆ ಎಂಬಂತೆ ಭಾವೈಕ್ಯವನ್ನು ಸಾಧಿಸಿದ್ದೇವೆ. ಸಣ್ಣಪುಟ್ಟ ಕೋಮುಗಲಭೆಗಳು, ಮತಾಂತರಗಳು ಇದ್ದರೂ ಕೂಡ  ಅವು ವೈಪರೀತ್ಯಕ್ಕೆಳಸದಂತೆ  ನಮ್ಮ ದೇಶದ ಸಂವಿಧಾನದ 3ಮುಖ್ಯ ಅಂಗಗಳಾದ ಶಾಸಕಾಂಗ , ಕಾರ್ಯಾಂಗ ಮತ್ತು ನ್ಯಾಯಾಂಗಗಳು ಕಾರ್ಯನಿರ್ವಹಿಸುತ್ತಿವೆ.

ಜಗತ್ತಿನ ಅತ್ಯುನ್ನತ ಮಿಲಿಟರಿ ಕಾರ್ಯಪಡೆ ನಮ್ಮಲ್ಲಿದೆ .ಅತ್ಯಾಧುನಿಕ ಯುದ್ಧ ವಿಮಾನಗಳು, ತಾಂತ್ರಿಕ ಕುಶಲತೆ ಮತ್ತು ಶಸ್ತ್ರಾಸ್ತ್ರಗಳನ್ನು  ನಮ್ಮ ಮಿಲಿಟರಿ ಪಡೆ ಹೊಂದಿದೆ.ದೇಶಪ್ರೇಮಿಗಳಲ್ಲ …ದೇಶಭಕ್ತ ಮಿಲಿಟರಿ ಯೋಧರು ನಮ್ಮಲ್ಲಿದ್ದಾರೆ. ಮೈನಸ ಹತ್ತು ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿಯೂ ಕೂಡ ಭಾರತ ದೇಶದ ಹಿಮಾಲಯ ಪರ್ವತ ಪ್ರದೇಶದ ಸುತ್ತಲೂ ,ಪಾಕಿಸ್ತಾನದ ಗಡಿ ಭಾಗವನ್ನು , ಸಿಯಾಚಿನ್ ಗಡಿಭಾಗವನ್ನು,  ಚೀನಾ ಮತ್ತು ಬಾಂಗ್ಲಾ ದೇಶದ ಗಡಿಗಳನ್ನು ಪಶ್ಚಿಮ ಕರಾವಳಿ ತೀರಗಳನ್ನು,ಪಂಜಾಬ್ ನ ಕಚ್ ನ ರಣ ಭೂಮಿಗಳನ್ನು  ಕಣ್ಣಲ್ಲಿ ಕಣ್ಣಿಟ್ಟು ಕಾವಲು ಕಾಯುವ ಭೂಸೇನೆ, ನೌಕಾಸೇನೆ, ವಾಯುಸೇನೆಗಳು ನಮ್ಮಲ್ಲಿವೆ.ಗಡಿ ಭದ್ರತಾ ಪಡೆ ಅಲ್ಲದೆ ಅರೆ ಸೇನೆ ,ಗೃಹರಕ್ಷಕ ದಳ ಮತ್ತು ಆರಕ್ಷಕ ಪಡೆಗಳ ದೊಡ್ಡ  ಸೈನ್ಯವೇ ದೇಶದ ಒಳಭಾಗವನ್ನು ಕಾಯುತ್ತದೆ. ಕ್ಷಿಪ್ರ ಕಾರ್ಯಾಚರಣೆಯ ಪ್ಯಾರಾ ಮಿಲಿಟರಿ ಮತ್ತು ಕಮಾಂಡೋ ಪಡೆಗಳು ಕೂಡ ನಮ್ಮಲ್ಲಿವೆ.

 ಹೆಜ್ಜೆ ಹೆಜ್ಜೆಗೂ  ನದಿಗಳು,ಸಮುದ್ರಗಳು  ತೀರ್ಥಕ್ಷೇತ್ರಗಳು ಇವೆ . ಆಧ್ಯಾತ್ಮ ಹೃದಯದ ಭಾರತ ದೇಶದಲ್ಲಿ ಧಾರ್ಮಿಕ ಭಾರತದಲ್ಲಿಯೂ ಕೂಡ ಮಾನವೀಯತೆ ತನ್ನ ಕೈ ಮೇಲಾಗಿಸಿದೆ.ವೈದ್ಯಕೀಯ ಕ್ಷೇತ್ರದಲ್ಲಿಯೂ ಕೂಡ ನಮ್ಮ ದೇಶ ಬದಲಿ ಹೃದಯ ಕಸಿ ಚಿಕಿತ್ಸೆ,ಸತ್ತ ವ್ಯಕ್ತಿಗಳ ಅಂಗಾಂಗಗಳನ್ನು ಜೀವಂತ ವ್ಯಕ್ತಿಗಳಿಗೆ ಅಳವಡಿಸುವಿಕೆಯ೦ತಹ  ಅತ್ಯಂತ ಉನ್ನತ ತಂತ್ರಜ್ಞಾನದ  ಪ್ರಗತಿ  ಸಾಧಿಸಿದೆ.

 ಒಟ್ಟಿನಲ್ಲಿ ಒಂದು ದೇಶಕ್ಕೆ ಬೇಕಾಗುವ ಸಮಗ್ರವೂ ನಮ್ಮಲ್ಲಿ ತುಸು ಹೆಚ್ಚೇ ಇದೆ. ದೇಶ ಕ್ಷೋಭೆಯಲ್ಲಿದ್ದಾಗ ಹೋರಾಟದ ಮೂಲಕ ಶಾಂತ ಸ್ಥಿತಿಯಲ್ಲಿರುವಾಗ ವೈಜ್ಞಾನಿಕ, ಶೈಕ್ಷಣಿಕ, ಆರ್ಥಿಕ, ವ್ಯಾವಹಾರಿಕ,  ಪಾರಮಾರ್ಥಿಕ ಪ್ರಗತಿಯ ಮೂಲಕ ಭಾರತ ಮೇಲುಗೈ ಸಾಧಿಸುತ್ತಿದೆ. ಎಲ್ಲವೂ ಸರಿಯೇ ?? ಆದರೆ ನಿಜವಾದ ಸ್ವಾತಂತ್ರ್ಯದ ಅರ್ಥ ನಮಗೆ ತಿಳಿದಿದೆಯೇ ?? ಅರಿತಿದ್ದು ಮರೆತಿರುವ, ಮರೆತಂತೆ ಮೈಮರೆವ  ವಿಷಯವಿದು. ಇದನ್ನು ವಿಸ್ಮೃತಿ ಎಂದು ಕರೆಯಬಹುದು,  ಉಪೇಕ್ಷೆ ಎಂದು ಕೂಡ ಹೇಳಬಹುದು.

A spark neglected, burns the house ಎಂಬ ಮಾತಿನಂತೆ ನಾವು ಪ್ರಸ್ತುತವಾಗಿ ನಡೆದುಕೊಳ್ಳುತ್ತಿದ್ದೇವೆ.ಸಣ್ಣದೊಂದು ಬೆಂಕಿಯ  ಕಿಡಿ ಇಡೀ ಮನೆಯನ್ನೇ ಸುಟ್ಟು ಬೂದಿ ಮಾಡಿತಂತೆ!! ಹಾಗಾಗಬಾರದಲ್ಲವೇ ?? ನಮ್ಮ ದೇಶದ ಈಶಾನ್ಯ ಭಾಗದಲ್ಲಿರುವ  ಸಪ್ತ ರಾಜ್ಯಗಳಲ್ಲಿ  ಅಸ್ಸಾಂ, ಸಿಕ್ಕಿಂ, ಮೇಘಾಲಯ, ನಾಗಾಲ್ಯಾಂಡ್  ಮುಂತಾದ ರಾಜ್ಯಗಳು ಗಡಿ ಭೀತಿಯನ್ನು ಎದುರಿಸುತ್ತಿವೆ .ಪಂಜಾಬ್ ಕೂಡ ಇದಕ್ಕೆ ಹೊರತಲ್ಲ.ಕರ್ನಾಟಕ  ತಮಿಳ್ನಾಡುಗಳೂ ನೀರಿಗಾಗಿ  ಹೊಡೆದಾಡುತ್ತಿವೆ. ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗಕ್ಕಾಗಿ ಹೊಡೆದಾಡುತ್ತಿವೆ. ಹಲವಾರು ಪಕ್ಷಗಳು ರಾಜಕೀಯ ಕಾರಣಕ್ಕಾಗಿ ಹೊಡೆದಾಡುತ್ತವೆ. ವಿಷಮತೆಯ ಭೀತಿ ಅವರಿಂದಲೂ ಇದೆ.

 ಸಾಮಾಜಿಕ ಅಸಮಾನತೆ, ಅಜ್ಞಾನ,ಬಡತನ, ಅಂಧಶ್ರದ್ಧೆ,ಅಂಧಾನುಕರಣೆ, ವ್ಯವಸ್ಥೆಯ ಕುರಿತಾದ ಹಗುರ ಭಾವನೆ  ಇವು ಕೇವಲ ಒಂದೆರಡು ಉದಾಹರಣೆಗಳಷ್ಟೆ .ಈ ರೀತಿಯ ಸಣ್ಣ ಪುಟ್ಟ ಕಲಹಗಳು ಮುಂದೆ ದೊಡ್ಡದಾಗಿ ರಾಷ್ಟ್ರವ್ಯಾಪಿ ತೊಂದರೆಗಳಾಗಿ ಪರಿಣಮಿಸುವುದುಂಟು. ಈ ರೀತಿಯ ಕಲಹಗಳಿಂದ ದೇಶದ ಆತ್ಮ ದುರ್ಬಲವಾಗುತ್ತದೆ .ನಮ್ಮ ಶಕ್ತಿ ಕುಂಠಿತವಾಗುತ್ತದೆ ಎಂಬುದನ್ನು ನಾವು ಅರಿಯಬೇಕು.ಭಾಷೆಗಾಗಿ, ನೀರಿಗಾಗಿ, ಭೂಮಿಗಾಗಿ ಜಾತಿ-ಧರ್ಮಗಳ ಶ್ರೇಷ್ಠತೆಯ ಪ್ರತಿಪಾದನೆಗಾಗಿ  ನಮ್ಮ ಹೋರಾಟಗಳು ನಮ್ಮನ್ನು ವಿನಾಕಾರಣದ ಶಂಕೆ ಅನುಮಾನಗಳಿಗೆ ಈಡು ಮಾಡುತ್ತದೆ.ಈ ಅನುಮಾನ ಎನ್ನುವುದು ಬೇರೇ ಇಲ್ಲದ ಹಾವಸೆಯಂತೆ(ಪಾಚಿಯಂತೆ),  ಕೆಳಗಿನ ಪಾರದರ್ಶಕತೆಯು ಕಾಣದಂತೆ ಮುಸುಕಿದ ಹಾಗೆ ಹರಡಿಕೊಳ್ಳುತ್ತದೆ.ಪರಿಣಾಮ ನಾವು ನಮ್ಮತನವನ್ನು ಕಳೆದುಕೊಂಡು ಸಣ್ಣಪುಟ್ಟ ಕಾರಣಗಳಿಗಾಗಿ ಜಗಳ ದೊಂಬಿ ಗಲಾಟೆ ಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುತ್ತೇವೆ  

   ತತ್ಪರಿಣಾಮವಾಗಿ ನಮ್ಮನ್ನು ನಾವೇ ಸಂಕುಚಿತ ಗೊಳಿಸಿ ಕೊಳ್ಳುತ್ತೇವೆ. ಇದು ಸಲ್ಲದು.ಇಡೀ ಜಗತ್ತಿಗೆ ಶಾಂತಿಯ, ಸೌಹಾರ್ದತೆಯ, ಸಾರ್ವಭೌಮತ್ವದ ಏಕತೆಯ ಪಾಠ ಹೇಳಿಕೊಟ್ಟ ಭರತ ಭೂಮಿ ನಮ್ಮದು.ಅದರ ಹಿರಿಮೆ ಗರಿಮೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ಕೂಡ ನಮ್ಮದೇ.

ಯುವಕರ ಗುಂಪನ್ನು ಸ್ವಾತಂತ್ರ್ಯದ ಕುರಿತು ಪ್ರಶ್ನಿಸಿ ನೋಡಿ,ಬಹಳಷ್ಟು ಜನ  ತಮಗೇನೂ ಗೊತ್ತಿಲ್ಲವೆಂದೇ  ಹೇಳುವರು.ಕಾರಣವಿಷ್ಟೆ ಆಧುನಿಕತೆಗೆ ಮಾರುಹೋಗಿ ಪಾಶ್ಚಿಮಾತ್ಯರ ಅಂಧಾನುಕರಣೆ ಮಾಡುತ್ತಿರುವ ನಮ್ಮ ದೇಶದ ಜನರು ಒಂದು ರೀತಿಯ ವಿಸ್ಮೃತಿಯಲ್ಲಿದ್ದಾರೆ.ಅವರ ವೇಷ ಭೂಷಣಗಳನ್ನು ಅವರ ಭಾಷೆಗಳನ್ನು   ತಮ್ಮದಾಗಿಸಿಕೊಳ್ಳುವ ಮೂಲಕ ನಮ್ಮದಲ್ಲದ ಸಂಸ್ಕೃತಿಯ ದಾಸರಾಗುತ್ತಿದ್ದಾರೆ.ಇದನ್ನು ತಪ್ಪಿಸಲು ಸಾಧ್ಯವೇ ??ಖಂಡಿತ ಸಾಧ್ಯವಿದೆ.ಭಾರತ ದೇಶದ ಜನತೆ ಯಾವತ್ತೂ ಜಗತ್ತಿನ ಎಲ್ಲಾ ಒಳ್ಳೆಯದನ್ನು ಸ್ವಾಗತಿಸಿದ್ದಾರೆ ಹಾಗೆಯೇ ಸ್ವಾಗತಿಸೋಣ ಕೂಡ. ಆದರೆ ಪರಕೀಯರನ್ನು ಸ್ವಾಗತಿಸುವ ಭರದಲ್ಲಿ ,ಅವರ ಸಂಸ್ಕೃತಿಯನ್ನು ಗೌರವಿಸುವ ಭರದಲ್ಲಿ ನಮ್ಮ ಮನೆಯನ್ನು, ನಮ್ಮ ಮಾತೆಯರನ್ನು,ನಮ್ಮ ಸಂಸ್ಕೃತಿಯನ್ನು ತಿರಸ್ಕರಿಸುವುದು ಎಷ್ಟರಮಟ್ಟಿಗೆ ಸರಿ ?ಹರಕು ಸೀರೆ ಉಟ್ಟರೂ ಹೆತ್ತ ತಾಯಿ ಹೆತ್ತ ತಾಯಿಯೇ !! ಆಕೆಯ ಹರಕು ಸೆರಗಿನಲ್ಲಿಯೇ ಮಾತೃತ್ವದ ಗಂಧವಿದೆ, ಮಮತೆಯ ಭಂಡಾರವಿದೆ, ಪ್ರೀತಿಯಿದೆ, ವಿಶ್ವಾಸವಿದೆ,ದೇಶಭಕ್ತಿಯ, ಜ್ಞಾನದ ಅಮೂಲ್ಯ ಗಣಿ ಇದೆ
ಸ್ಯಾಮ್ಯುಯೆಲ್ ಜಾನ್ಸನ್ ಹೇಳಿದ ಮಾತೊಂದಿದೆ ದೇಶಭಕ್ತಿ ಎಂಬುದು ‘ಪುಂಡರ ಕೊನೆಯ ಆಶ್ರಯ ತಾಣ’ಇದು ಎಲ್ಲವನ್ನೂ ಹೇಳುತ್ತದೆ ದೇಶ ಎಂದರೆ ಏನು ?ಅದೇನು ನಮ್ಮ ತ್ರಿವರ್ಣ ಧ್ವಜವೇ? ಭಾರತಮಾತೆಯ ಚಿತ್ರವೇ? ಯಾರೂ  ದೇಶ ಅಥವಾ ರಾಷ್ಟ್ರ ಎನ್ನುವ ಅಮೂರ್ತ ಪರಿಕಲ್ಪನೆಯನ್ನು ಪ್ರೀತಿಸುವುದಿಲ್ಲ ವ್ಯಕ್ತಿಗಳನ್ನು ಪ್ರೀತಿಸುತ್ತಾರೆ ದೇಶಭಕ್ತಿ ಎಂಬುದು ರಾಷ್ಟ್ರೀಯತೆಯ ಪರಿಕಲ್ಪನೆ.ರಾಷ್ಟ್ರೀಯತೆ ಎಂಬ ಪರಿಕಲ್ಪನೆಯು ಇತಿಹಾಸದ ಉದ್ದಕ್ಕೂ ಹಲವು ನಾಶ ನಷ್ಟಗಳಿಗೆ ಕಾರಣವಾಗಿದೆ.ಮತ್ತೊಬ್ಬರನ್ನು ವಿ ನಾಶಪಡಿಸುವುದೇ ದ್ವೇಷಿಸುವುದರ ಮೂಲಕವೇ ನಮ್ಮ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಕಟ್ಟಿಕೊಳ್ಳಬಾರದು ಹೀಗೆ ಮಾಡಿದ್ದರಿಂದಲೇ ಹಿಟ್ಲರ್ ಯಹೂದಿಗಳನ್ನು ದ್ವೇಷಿಸಿದ.ದ್ವೇಷಕ್ಕೆ ದ್ವೇಷವೇ ಉತ್ತರವಲ್ಲ? ಹಾಗೆಯೇ ಪ್ರೇಮವು ಉತ್ತರವಲ್ಲ ಎರಡರ ಮಧ್ಯದ ಹಾದಿಯನ್ನು ಆರಿಸಿಕೊಳ್ಳುವುದು ಬಹುಶಃ ಸರಿಯಾಗಬಹುದು. “ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ” ಎಂಬ ವ್ಯಾಖ್ಯಾನದಂತೆ ನಾವು ನಡೆದುಕೊಳ್ಳಬೇಕು.  

 ಎಷ್ಟೆಲ್ಲಾ ದೋಷಗಳನ್ನು ಹೊಂದಿದ್ದರೂ ತಾಯಿ ತನ್ನ ಮಗುವನ್ನು ಪ್ರೀತಿಸುವುದಿಲ್ಲವೇ ? ಹಾಗೆಯೇ ಹಲವಾರು ದೋಷಗಳನ್ನು ಹೊಂದಿದ್ದರೂ ಕೂಡ ಅಖಂಡ ಭಾರತ ನಮ್ಮ ಹೆಮ್ಮೆಯ, ಪ್ರೀತಿಯ ಅಭಿಮಾನದ ಜನ್ಮಭೂಮಿ.ಇದರ ಅರಿವಿನ ಜೊತೆಗೆ  ನಮ್ಮತನವನ್ನು ಬಿಟ್ಟುಕೊಡದೆ  ಸಾತ್ವಿಕ  ಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳುತ್ತಾ  ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯ ಸಾರ್ವಭೌಮತ್ವದ ಅರಿವನ್ನು ಹೆಚ್ಚಿಸಿಕೊಳ್ಳೋಣ. ನಮ್ಮ ಪೂರ್ವಜರು ನಮಗೆ ರಕ್ತ ಹರಿಸಿ ತಂದುಕೊಟ್ಟ ಸ್ವಾತಂತ್ರ್ಯಕ್ಕೆ ನಮ್ಮ ಜಾಣ್ಮೆಯನ್ನು ಬೆರೆಸಿ, ನಿಜವಾದ ಸ್ವಾತಂತ್ರ್ಯದ ಮೌಲ್ಯವನ್ನು ಪಡೆಯೋಣ, ಎಂಬ ಆಶಯದೊಂದಿಗೆ

————————————————

Leave a Reply

Back To Top