ಭಾವೈಕ್ಯತೆ ಸಂಗಾತಿ
ಸಿದ್ಧಾರ್ಥ ಟಿ ಮಿತ್ರಾ
ಹಿಂದೂ ಮುಸ್ಲಿಮರಲ್ಲಿ
ಭಾವೈಕ್ಯತೆಗೆ ಸಾಕ್ಷಿಯಾಗಿರುವ
ಮೊಹರಂ ಆಚರಣೆ
ಮೊಹರಂ ಹಬ್ಬವಲ್ಲ ಶೋಕಾಚರಣೆ ಇಸ್ಲಾಮಿಕ್ ಪ್ರಕಾರ ಮೊಹರಂ ಮೊದಲ ತಿಂಗಳು ಇದನ್ನು ಇಸ್ಲಾಂನಲ್ಲಿ ಹೊಸವರ್ಷ ಎಂದು ಆಚರಣೆ ಮಾಡುತ್ತಾರೆ.ಈ ತಿಂಗಳ 10ನೇ ದಿನವನ್ನು “ರೋಜಾ-ಏ-ಆಶುರಾ” ಎಂದು ಕರೆಯಲಾಗುತ್ತದೆ.ಇದನ್ನೇ ಕ್ಯಾಲೆಂಡರಲ್ಲಿ ಮೊಹರಂ ಕಡೆಯ ದಿನ ಎನ್ನುವರು.
ಅನೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರಚಲಿತವಾಗಿರುವ ಹಿಜರಿ ಸಂವತ್ಸರದ ಇಸ್ಲಾಂನ ಪ್ರಕಾರ ಹೊಸ ವರ್ಷದ ಮೊದಲನೆಯ ತಿಂಗಳು ಮೊಹರಂ. ಮುಹರ್ರಂ ಅರಬ್ಬಿ ಭಾಷೆಯ ಶಬ್ದ ಇದರ ಅರ್ಥ ನಿಷಿದ್ಧವಾದದ್ದು ಅಥವಾ ವರ್ಜಿತವಾದದ್ದು. ಇಸ್ಲಾಂ ಧರ್ಮ ಸ್ಥಾಪನೆಯ ಮೊದಲು ಅರಬಸ್ಥಾನದಲ್ಲಿ ಈ ತಿಂಗಳಲ್ಲಿ ಯುದ್ಧ, ಹಾಗು ರಕ್ತಪಾತ ಧಾರ್ಮಿಕ ದೃಷ್ಟಿಯಿಂದ ನಿಷಿದ್ಧವಾಗಿತ್ತು. ಆದುದರಿಂದ ಈ ತಿಂಗಳಿಗೆ ಮೊಹರಂ ಕಾ ಮಹಿನಾ ) ಹೆಸರು ಬಂದಿತು. ಅನಂತರ ಮುಸ್ಲಿಮರು ಇದೇ ಹೆಸರನ್ನು ಬಳಕೆಯಲ್ಲಿ ತಂದರು. ಮೊಹರಮ್‌ದ ಇನ್ನೊಂದು ಹೆಸರು ‘ಸೈಯದುಲ್ ಅಶಹರ್’ ಅಂದರೆ ಎಲ್ಲ ತಿಂಗಳುಗಳ ದೊರೆ ಆದರೆ ಇದೇ ತಿಂಗಳಲ್ಲಿ ಹುಸೇನರು ಹುತಾತ್ಮರಾದರು ಆದುದರಿಂದ ಈ ತಿಂಗಳು ತುಂಬಾ ದುಃಖದಾಯಕ ಮತ್ತು ಪವಿತ್ರ ಮಾಸ ಎಂದು ಪರಿಗಣಿಸಲಾಯಿತು
ಮೊಹರಂ ಆಚರಣೆ ಮೂಲತಃ ಶೋಕಾಚರಣೆ ದುಃಖಸ್ತವಾಗಿದ್ದರು ಕಾಲಚಕ್ರ ಉರುಳಿದಂತೆ ತನ್ನ ಮೂಲಭಾವ ಕಳೆದುಕೊಂಡು ಉತ್ಸವದ ರಂಗು ಪಡೆದು ರಾರಾಜಿಸುತ್ತ ರಂಜಿಸುತ್ತದೆ. ಭಾರತದ ಕೆಲ ರಾಜ್ಯಗಳಲ್ಲಿ ಮುಸ್ಲಿಂ ಆಡಳಿತವಿದ್ದ ಕಾಲಘಟ್ಟದಲ್ಲಿ ಅಂದ್ರೆ ಆಂಧ್ರ ಪ್ರದೇಶದ ಹೈದ್ರಾಬಾದ ನಗರದಲ್ಲಿ ಮೊಹರಂ ತಿಂಗಳು ಸಂಪೂರ್ಣವಾಗಿ ಶೋಕಾಚರಣೆ ಜಾರಿಯಲ್ಲಿದೆ. ಕರ್ನಾಟಕದ ಹಲವು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬ ಅಥವಾ ಜಾತ್ರೆಯನ್ನಾಗಿ ಪರಿವರ್ತನೆಗೊಂಡು ಉತ್ಸವವಾಗಿ ನಡೆದುಕೊಂಡು ಬರುತ್ತಿದೆ ಇಂದಿಗು . ಮೊಹರಂ ಹಬ್ಬವಾಗಿ ಪರಿವರ್ತನೆಯಾಗಲು ಅನೇಕ ಐತಿಹಾಸಿಕ ಹಿನ್ನೆಲೆಗಳು ಕಾರಣಗಳಾದಂತೆ ಹಿಂದುಗಳೊಂದಿಗೆ ಮುಸ್ಲಿಮರ ಮಧುರ ಮೈತ್ರಿಯೂ ಕಾರಣವೆನ್ನಬಹುದು.
ಹಿಂದು ಮತ್ತು ಮುಸ್ಲಿಂ ಮೈತ್ರಿಗೆ ಕಾರಣವಾದ ಮೊಹರಂ ಹಬ್ಬಕ್ಕೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆಯಿದ್ದು ಈ ಹೊತ್ತಿನಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಸಂಕ್ಷಿಪ್ತವಾಗಿ ಅದನ್ನು ಅವಲೋಕಿಸುವುದು ಅಗತ್ಯವಾಗಿದೆ.
ಪ್ರವಾದಿ ಹಜರತ್ ಮಹ್ಮದ್ ಪೈಗಂಬರರು ಮಾನವ ಕುಲದ ಕಲ್ಯಾಣಕ್ಕಾಗಿ ಸಾಕಷ್ಟು ಕಷ್ಟ ನಷ್ಟ ಅನುಭವಿಸಿ ಇಸ್ಲಾಂ ಪ್ರಜಾಪ್ರಭುತ್ವದ ಸ್ಥಾಪನೆ ಮಾಡಿದರು. ಅವರ ಮರಣದ ನಂತರ ಹ ಖಲೀಫರಾಗಿ ಅಬೂಬಕರ್ ಸಿದ್ದೀಕ್ (ಕ್ರಿ.ಶ. 632-634) ಹ| ಉಮರ ಫಾರೋಖ್ (ಕ್ರಿ.ಶ.634-644) ಹ| ಉಸ್ಮಾನ ಗನಿ (ಕ್ರಿ.ಶ. 644-656) ಪ್ರಜಾಪ್ರಭುತ್ವ ನಡೆಸಿದರು. ನಾಲ್ಕನೆಯ ಖಲೀಫರಾಗಿ ಬನೀಹಾಷೀಮ್ ಪಂಗಡದವರು ಹಜರತ ಅಲಿ ಅವರನ್ನು ಚುನಾಯಿಸಲು ಸಿರಿಯಾದ ಪ್ರಾಂತಾಧಿಕಾರಿಯಾದ ಹಜರತ ಮುಆವಿಯಾ ವಿರೋಧಿಸಿದನು. ಎರಡು ಪಂಗಡಗಳ ನಡುವೆ ಘರ್ಷಣೆ ನಡೆದು ಒಪ್ಪಂದವಾಯಿತು. ಆದರೆ ಕ್ರಿ.ಶ. 661 ರಲ್ಲಿ ಹಜರತ ಮುಆವಿಯಾನ ಕುತಂತ್ರಕ್ಕೆ ಹಜರತ ಅಲಿ ಅವರು ಬಲಿಯಾಗಲು ಅವರ ಜೇಷ್ಠ ಪುತ್ರ ಹಜರತ ಇಮಾಮ ಹಸಲು ಪ್ರಜಾಭಿಪ್ರಾಯ ಮುನ್ನಿಸಿ ಖಲೀಫರಾದರು.
ಮುಆವಿಯಾ ಸಾಯುವ ಮುನ್ನ ತನ್ನ ಮಗನಾದ ಯಜೀದನನ್ನು ಖಲೀಫನೆಂದು ಘೋಷಿಸಿ ಕೊನೆಯುಸಿರೆಳೆದನು. ತಂದೆಯ ಮರಣಾಂತರ ಯಜೀವ ಇಮಾಮ ಹಸನರನ್ನು ಮೋಸದಿಂದ ವಿಷಪ್ರಾಶನ ಮಾಡಿಸಿ ಕೊಲ್ಲಿಸಿದನು. ಮತ್ತು. ನಿಜವಾದ ಖಲೀಫನಾದ ತನಗೆ ಮುಸ್ಲಿಂ ಮುಖಂಡರು ‘ಬಯ್ಯತ್’ ಕೈಗೊಳ್ಳಬೇಕೆಂದು ಆಜ್ಞೆ ಹೊರಡಿಸಿದನು. ಖಲೀಫನಾಗಲು ಅನರ್ಹನಾದ ಯಜೀದನನ್ನು ದಿಕ್ಕರಿಸಿ ಅರೇಬಿಯಾ ಇರಾಣ, ಇರಾಕ್, ಕೂಫಾ ಜನರು ಹಜರತ ಇಮಾಮ ಹುಸೇನರಿಗೆ ಬೆಂಬಲ ನೀಡಿದರು. ಕೂಫೆದ ಜನ ಯಜೀದನ ದೌರ್ಜನ್ಯದಿಂದ ತಮ್ಮನ್ನು ಕಾಪಾಡಬೇಕೆಂದು ವಿನಂತಿಸಿ ಪತ್ರ ಬರೆದರು. ಧರ್ಮ ರಕ್ಷಣೆಗಾಗಿ, ಮಾನವ ಕಲ್ಯಾಣಕ್ಕಾಗಿ ಹಜರತ ಇಮಾಮ ಹುಸೇನರು ಯಜೀದನ ಕ್ರೌರ್ಯವನ್ನು ದುರಾಡಳಿತವನ್ನು ಪ್ರತಿಭಟಿಸಿದರು. ಹೆಂಡತಿ ಮಕ್ಕಳು ಹತ್ತಿರದ ಬಂಧುಬಳಗ ಮೊದಲಾಗಿ 72 ಜನರೊಂದಿಗೆ ಕೂಫೇಗೆ ಪ್ರಯಾಣ ಬೆಳೆಸಿದರು.
ಹಿಜರಿ ಸನ್ 61 ರ ಮೊಹರಂ ತಿಂಗಳು (ಕ್ರಿ.ಶ. 680) ಒಂದನೆಯ ದಿನಾಂಕದಂದು ಇರಾಕ್ ಪ್ರಾಂತ ಪ್ರವೇಶಿಸಿದರು. ಐದನೆಯ ದಿನ ‘ಕರ್ಬಲಾ’ ಭೂಮಿಗೆ ಬಂದಿಳಿದರು. ವೈರಿ ಸೈನಿಕರು ಜಲಾಶಯಗಳಿಗೆ ವಿಷಬೆರಸಿ ಅನ್ನನೀರಿಗೆ ತೊಂದರೆಯಾಗುವಂತೆ ವ್ಯವಸ್ಥೆ ಮಾಡಿದರು. ಹತ್ತು ದಿನಗಳವರೆಗೆ ಅನ್ನ ನೀರಿಲ್ಲದ ಹುಸೇನರ ಪರಿವಾರವು ಅನ್ನ ನಿರಿಗೆ ತತ್ತರಿಸಿ ಹೊಯ್ತು. ಮೊಹರಂ ತಿಂಗಳ ಒಂದನೆಯ ದಿನ ಯಜೀದನ ಅಸಂಖ್ಯಾತ ಸೈನಿಕರಿಗೂ ಹುಸೇನರ ಅನುಯಾಯಿಗಳಿಗೂ ಘನಘೋರ ಯುದ್ಧ ನಡೆಯಿತು. ಕಾಸೀಮ ಧೂಲಾ, ಅಬ್ದುಲ್ಲಾ, ಅಬ್ಬಾಸ ಅಲಿ, ಹುಸೇನ ಅವರ ವೀರಾವೇಶದ ಹೋರಾಟಕ್ಕೆ ವೈರಿ ಸೈನಿಕರು ತತ್ತರಿಸಿದರು. ಯುದ್ಧದ ನೀತಿ ಗಾಳಿಗೆ ತೂರಿದರು. ಮೋಸದಿಂದ ಹುಸೇನರ ಪರಿವಾರದ ಶೂರರನ್ನು ರುಂಡ ಚಂಡಾಡುತ್ತ ಮುನ್ನಡೆದರು. ಕೊನೆಗುಳಿದ ಹಜರತ ಇಮಾಮ ಹುಸೇನರನ್ನು ಎದುರಿಸಿ ಯುದ್ಧಮಾಡಲು ಯಾರೊಬ್ಬರಿಗೂ ಧೈರ್ಯವಾಗಲಿಲ್ಲ. ಆಗ ವೈರಿ ಪಡೆಯ ನಾಯಕರಾದ ‘ಶುಮರ’ ಘಾತುಕ ರೀತಿಯಲ್ಲಿ ಅತಿ ಕ್ರೂರ ರೀತಿಯಲ್ಲಿ ಆಕ್ರಮಣ ಮಾಡಲು ಆಜ್ಞೆಮಾಡಿದನು ‘ಜರವಿನ್ ಶರೀಕ್’ ಎಂಬ ಕ್ರೂರಿಯೊಬ್ಬ ಹುಸೇನರ ಎಡಗೈಯನ್ನು ಖಡ್ಗದಿಂದ ಕತ್ತರಿಸಿದನು ‘ಸಿನಾನ್ ಬಿನ್ ಅನಾಸ್ ಬಿನ್ ಅಮ್ರ ಅಲ್ ನಾಖಿಯಾ’ ಎಂಬವನು ಹುಸೇನರನ್ನು ನೆಲಕ್ಕೆ ಕೆಡಹಿದನು. ಆಗ ‘ಖವಾಲಿ ಬಿನ ಯಜೀದ್ ಅಲ್ ಅಸ್ಬಾಹಿ’ ಅವರ ತಲೆಯನ್ನು ಕತ್ತರಿಸಿ ಹಾಕಿದನು.
ಮೋಸಕ್ಕೆ ಜಯವಾಯಿತು. ಧರ್ಮಕ್ಕೆ ಸೋಲಾಯಿತು ಹಜರತ ಇಮಾಮ ಹುಸೇನರು ವೀರಮರಣ ಹೊಂದಿದರು.
ಈ ಘೋರ ದುರಂತ ಕೇಳಿದ ಮಕ್ಕಾಮದೀನಾ ಜನ, ಯಜೀದನ ಗುಂಪಿನ ಮೇಲೆ ದಂಗೆಯದ್ದು ಸೇಡು ತೀರಿಸಿಕೊಂಡರು. ಯಜೀದನ ಮರಣದ ಅನಂತರ ಬನೀ ಉಮೈಯರು, ಬನೀ ಹಾಷೀಮರು ಖಲೀಫರಾಗಿ ಆಳಿದರು. ಇದು ಕರ್ಬಲಾ ದುರಂತದರ ಭೀಕರ ಕಥೆ.
ಹಜರತ ಅಲಿ ಅವರ ಅನುಯಾಯಿಗಳಾದ ಷಿಯಾ ಮುಸ್ಲಿಮರು, ಹಜರತ ಇಮಾಮ ಹುಸೇನರ ವೀರ ಮರಣದ ಕೆಲವರ್ಷಗಳ ಅನಂತರ ಅವರ ಗೌರವಾರ್ಥ ಸಭೆ ಸೇರಿ ಶೋಕ ವ್ಯಕ್ತಪಡಿಸಿದರು. ಕ್ರಿ.ಶ.962ರಲ್ಲಿ ‘ಬುವಯಹಿ’ ಸಂತತಿಯ ‘ಷಿಯಾ’ ಮುಸ್ಲಿಮರು ಹಜರತ ಅಲಿ ಅವರ ಸಂತತಿಗೆ ಭಕ್ತಿಗೌರವ ಆದರಗಳಿಂದ ಗೌರವ ಹಾಗೂ ಪೂಜ್ಯ ಭಾವನೆಯಿಂದ ನಡೆದುಕೊಂಡು ಕರ್ಬಲಾ ಕಾಳಗದ ನೆನಪಿಗಾಗಿ ಕೂಟ ಕೂಡುವುದಕ್ಕೆ ಪ್ರೋತ್ಸಾಹ ನಿಡಿದರು
ಹುಸೇನರ ಆತ್ಮಕ್ಕೆ ಶಾಂತಿ ಸಿಗಲೆಂದು ಮೊಹರಂ ತಿಂಗಳಿನಲ್ಲಿ ಮುಸ್ಲಿಮರು ಉಪವಾಸ ವೃತ, ಕುರಾನ್ ಪಠಣ, ದಾನ ಧರ್ಮ ಇತ್ಯಾದಿಗಳನ್ನು ಮಾಡುತ್ತಿದ್ದರು. ದುಃಖ ಮೂಲವಾದ ಇಂತಹ ಮೊಹರಂ ಆಚರಣೆ ಸುಪ್ರಸಿದ್ಧ ಬಾದಶಹಾ ಅಮೀರ ತೈಮೂರಲಂಗ (ಕ್ರಿ.ಶ. 1336-1405)ನೇ ಕಾಲ ಘಟ್ಟದಲ್ಲಿ ಭಾರತವನ್ನು ಪ್ರವೇಶಿಸಿತು ‘ತಾಜಿಯಾ’ ತಯಾರಿಸುವ ಪದ್ಧತಿಯನ್ನು ಭಾರತದಲ್ಲಿ ಆರಂಭಿಸಿದವನು ಇವನೇ. ಮೊಗಲರ ಆಳ್ವಿಕೆಯಲ್ಲಿ ಇದೇ ಪದ್ಧತಿ ಮುಂದುವರೆದು ಕಾಲಕಳೆದಂತೆ ಮೊಹರಂ ಆಚರಣೆಯಲ್ಲಿ ಭಾಗವಹಿಸುವ ಹಿಂದುಗಳೂ ಕೂಡ ತಾಜಿಯಾ ತಯಾರಿಸಿ ಮೆರವಣಿಗೆ ಮಾಡಲಾರಂಭಿಸಿದರು. ಶೇರಖಿ ರಾಜ ಸಂತತಿಯ ಸುಲ್ತಾನರು (ಕ್ರಿ.ಶ. 1339-1486) ಹೊತ್ತಲ್ಲಿ ಮೊಹರಂ ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು ಮತ್ತು ಸಕಲ ಮತ ಪಂಥಗಳಿಗೆ ಮೊಹರಂ ಆಚರಣೆಗೆ ಹಣ ನೀಡುತ್ತಿದ್ದರು.
ಔಧ ಪ್ರಾಂತವನ್ನಾಳಿದ ಮೊಗಲ್ ಸಾಮ್ರಾಜ್ಯದ ನವಾಬ್ ಶುಜಾಉದ್ದೌಲನ ಹೆಂಡತಿ ಮೊಹರಂ ಆಚರಣೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದಳು. ಮತ್ತು ಸ್ವತಃ ಇಂತಹ ಆಚರಣೆಗಳಲ್ಲಿ ಭಾಗವಹಿಸುತ್ತಿದ್ದಳು. ಕ್ರಿಶ 1814 ರಲ್ಲಿ ಔಧ ಸಿಂಹಾಸನವೇರಿದ ಗಾಜಿ ಉದ್ದೀನ್ ಹೈದರ ಲಖನೌದಲ್ಲಿ ‘ಶಹಾನಜಫ್’ ಎಂಬ ಇಮಾಮಬಾಡಾ ಕಟ್ಟಿಸಿದ್ದನು. ಮತ್ತು ಹಿಂದೂಮುಸ್ಲಿಮರಿಗೆ ಹಣ ನೀಡಿ ಮೊಹರಂ ಆಚರಿಸಲು ಪ್ರೋತ್ಸಾಹಿಸುತ್ತಿದ್ದನು.
ದಕ್ಷಿಣ ಭಾರತದಲ್ಲಿ ಬೀದರ್ ಮತ್ತು ಕಲಬುರ್ಗಿಯನ್ನು ಆಳಿದ ಬಹಮನಿ ಸುಲ್ತಾನರು (ಕ್ರಿ.ಶ. 1347-1538) ಮತ್ತು ಬಿಜಾಪುರದ ಆದಿಲ್‌ಷಾಹಿಗಳು (ಕ್ರಿ.ಶ. 1489-1686) ರಿಂದ ಕಟ್ಟುನಿಟ್ಟಾಗಿ ಮೊಹರಂ ಆಚರಿಸಿಕೊಂಡು ಬಂದರು. ಗೋಲ್ಕೊಂಡದ ಕುತುಬ್ ಷಾಹಿಗಳು (ಕ್ರಿ.ಶ. 1550-1672) ಹೈದರಾಬಾದ ನಗರದಲ್ಲಿ ಅಲಂ ಇಡುವ ಪದ್ಧತಿ ಆರಂಭಿಸಿ ಮುಂದುವರೆಸಿಕೊಂಡು ಬಂದರು. ಅಲಂಗಳ ಮುಂದೆ ಮಜಲೀಸ್ ಏರ್ಪಡಿಸಿ ಉದಾರ ಮನಸ್ಸಿನಿಂದ ತಮ್ಮ ಬೊಕ್ಕಸದಿಂದ ಧನ ಸಹಾಯ ಮಾಡುತ್ತಿದ್ದರು. ‘ಅಬ್ದುಲ್ ಕುತುಬ್ ಷಾ’ ಮೊಹರಂ ತಿಂಗಳ ಮೊದಲನೆಯ ದಿನದಿಂದ ಸಫರ ತಿಂಗಳ 20ನೆಯ ದಿನಗಳ ಅವಧಿಯಲ್ಲಿ ಮಧ್ಯಸೇವನೆ ಕ್ಷೌರ ಮಾಡಿಸಿಕೊಳ್ಳುವುದು, ತಾಂಬೂಲು ಸೇವಿಸುವುದು ಅಪರಾಧವೆಂದು ಸಾರಿದ್ದನು. ಅಲಂ ಇಡುವುದಕ್ಕಾಗಿ ಕಟ್ಟಿಸಿದ ಆಶೂರಖಾನೆಗಳು ಇಂದಿಗೂ ಸುಸ್ಥಿತಿಯಲ್ಲಿದ್ದು ಹೈದರಾಬಾದ ನಗರದ ಸಾಂಸ್ಕೃತಿಕ ಮಹತ್ವವನ್ನು ಸಾರಿ ಹೇಳುತ್ತವೆ.
ಸಾಮ್ರಾಟ ಅಕ್ಬರ (ಕ್ರಿ.ಶ. 1541-1605) ದೀನ್-ಎ-ಇಲಾಹಿ ಸ್ಥಾಪಿಸಿದ ನಂತರ ಮೊಹರಂ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಮಾರ್ಪಾಡಿಸಿದನು. 18 ನೇಯ ಶತಮಾನದಲ್ಲಿ ಮೈಸೂರು ಸಂಸ್ಥಾನವನ್ನಾಳಿದ ಮೈಸೂರು ಹುಲಿ ಟಿಪ್ಪೂಸುಲ್ತಾನ ಮೊಹರಂ ಒಂದು ಹಬ್ಬವಲ್ಲ ಅದು ಹಜರತ ಮುಹ್ಮದ ಪೈಗಂಬರರ ಮೊಮ್ಮಕ್ಕಳು ಹೋರಾಡಿ ಹುತಾತ್ಮರಾದ ಪುಣ್ಯದ ದಿನ ಅದನ್ನು ಸೂತಕದಂತೆ ಆಚರಿಸಬೇಕು ಎಂದು ಹೇಳಿದನು. ಆದರೆ ಕುತಂತ್ರಿ ಬ್ರಿಟಿಷರು ತಮಗೆ ಸಿಂಹಸ್ವಪ್ನವಾಗಿದ್ದ ಟಿಪ್ಪೂವನ್ನು ಮುಸ್ಲಿಮರಿಂದ ಬೇರ್ಪಡಿಸಲು ಮೊಹರಂ ಪ್ರಸಂಗವನ್ನು ಉಪಯೋಗಿಸಿಕೊಂಡರು. ಕಂಪನಿಯ ಅಧಿಕಾರಿಗಳಿಗೆ ಮುಸ್ಲಿಮರ ಗೆಳೆತನ ಮಾಡಿಸಿ ಮುಜಾವರರಿಗೆ ಸಾಕಷ್ಟು ಹಣ ನೀಡಿ ‘ಮೊಹರಂ’ ಅನ್ನು ಅದ್ದೂರಿಯಿಂದ ಆಚರಿಸಲು ವ್ಯವಸ್ಥೆ ಮಾಡಿದರು. ಅಂದು ಬ್ರಿಟಿಷ್ ಅಧಿಕಾರಿಗಳು ಹಣದಾಸೆ ಅಧಿಕಾರದಾಸೆ ತೋರಿಸಿ ಪ್ರಾರಂಭಮಾಡಿದ ಮೊಹರಂ ವಿಕಾರವಾಗಿ ರೂಪಹೊಂದಿ ಆಚರಣೆಯಲ್ಲಿ ಬಂದಿತು. ಇಂದಿಗೂ ಕೆಲಹಳ್ಳಿಗಳಲ್ಲಿ ಸರಕಾರಿ ಡೋಲಿ ಸರಕಾರಿ ಅಲಂ ಇಡುವುದನ್ನು ನಾವು ಕಾಣುತ್ತೇವೆ. ಹೀಗೆ ಹಿಂದುಗಳ ಪ್ರಭಾವ ಮತ್ತು ಬ್ರಿಟಿಷರ ಕುತಂತ್ರದಿಂದಾಗಿ ಶೋಕ ಮೂಲ ಮೊಹರಂ ಆಚರಣೆ ಮರೆಯಾಗಿ ಸಂತೋಷ ಮತ್ತು ಸಂಭ್ರಮದ ಹಬ್ಬವಾಗಿ ವಿಶೇಷವಾಗಿ ಕರ್ನಾಟಕದ ಹಾಗೂ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಭಾಗದ ಹಲವು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾರ್ಪಾಟಾಯಿತು. ತತ್ಫಲವಾಗಿ ಹಿಂದೂಮುಸ್ಲಿಮರಲ್ಲಿ ಭಾವೈಕ್ಯತೆ ಹೊಂದಾಣಿಕೆ ಗಟ್ಟಿಗೊಂಡು ಭಾವೈಕ್ಯ ಸಾಧನೆಗೆ ಹಾದಿಯಾಯಿತು.
ಸಿದ್ಧಾರ್ಥ ಟಿ ಮಿತ್ರಾ