ಕಾವ್ಯ ಸಂಗಾತಿ
ಅರುಣಾ ನರೇಂದ್ರ
ವೈ.ಎಂ.ಯಾಕೊಳ್ಳಿ
ಗಜಲ್ ಜುಗಲ್ ಬಂದಿ
ಮಾತಾಡಬೇಕಾದ ಮಾತು ನೂರಿದ್ದವು ನೀನು ಮೌನವಾದೆ
ನಿನ್ನ ಕಣ್ಣುಗಳೇ ಎಲ್ಲವನು ಹೇಳುತ್ತಿದ್ದವು ನೀನು ಮೌನವಾದೆ
ಬೇಕು ಬೇಕೆಂದು ಬಯಸಿದಾಗ ಸಿಕ್ಕಿರುವ ಭಾಗ್ಯ ನೀ ನನಗೆ
ಬಾಳ ಬನದಲಿ ನೋವು ನಲಿವಿದ್ದವು ನೀನು ಮೌನವಾದೆ
ಮನಸಿನ ಮಾತು ಹೊರ ಬರಲು ಹರತಾಳ ಹೂಡಿವೆ ಕೇಳು.
ನಾಲಿಗೆ ತುದಿಯಲಿ ಸವಿನುಡಿ ಇಣುಕಿದ್ದವು ನೀನು ಮೌನವಾದೆ
ಕ್ಷಣ ಕ್ಷಣವು ಬಲು ಭಾರ ಕೊರಗಿನಲಿ ಸೊರಗುತಿದೆ ಉಸಿರು
ಮನದೊಳಗಿನ ಭಾವ ಬಯಕೆ ಹೊತ್ತಿದ್ದವು ನೀನು ಮೌನವಾದೆ
ಜಗದ ಜಂಜಡ ಮರೆತು ಪ್ರೀತಿಗಾಗಿ ಸೋತವಳು ಅರುಣಾ
ಅವಳ ಗೋರಿ ಮೇಲೆ ಹೂ ಅಳುತ್ತಿದ್ದವು ನೀನು ಮೌನವಾದೆ
**
ಅತುಣಾ ನರೇಂದ್ರ
********
ಹೇಳಬಲ್ಲ ಮಾತವು ಸಾಕಷ್ಟಿದ್ದವು ನೀನು ಮೌನವಾದೆ
ಆಡಬಲ್ಲ ನುಡಿಗಳು ಇನ್ನೂ ಉಳಿದಿದ್ದವು ನೀನು ಮೌನವಾದೆ
ಬಾಳ ನಡುವೆ ಅಪೂರ್ವಭಾಗ್ಯದಂತೆ ಬಂದವಳು ನೀನು
ಕಡೆಯ ಮಾತವು ನಡುವೆ ಬಿದ್ದಿದ್ದವು ನೀನು ಮೌನವಾದೆ
ಏಕೋ ಈ ಮನ ನಿನ್ನ ಹಚ್ಚಿಕೊಂಡಿತ್ತು ತಿಳಿಯದು ನನಗೂ
ಭಾವದೊಳು ಅರಿವಾಗಿ ಹೊಂದಿದ್ದವು ನೀನು ಮೌನವಾದೆ
ಲೋಕದ ನಂಟಿನ ಹಂಗು ಹರಿದು ಅಂಟಿಕೊಂಡವರು ನಾವು
ನಟ್ಟ ನಡು ರಾತ್ರಿಯ ಗಂಟು ಮುರಿದಿದ್ದವು ನೀನು ಮೌನವಾದೆ
ನಡೆವ ದಾರಿಯಲಿ ಸೋತು ಹೊರಟ ಯಯಾನೀಗ ಒಂಟಿ
ಜೊತೆ ನಡೆವ ನೂರು ಹೆಜ್ಜೆ ಉಳಿದಿದ್ದವು ನೀನುಮೌನವಾದೆ
*******************
ವೈ.ಎಂ.ಯಾಕೊಳ್ಳಿ