‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.

ಒಂದು ಕಾಲದಲ್ಲಿ ಮಲೆನಾಡಿಗರ ಅಚ್ಚುಮೆಚ್ಚಿನ ಒಡನಾಡಿ ಕಂಬಳಿಕೊಪ್ಪೆ..ಈ ಕಂಬಳಿ ಎನ್ನುವುದು ಬಹುಪಯೋಗಿ ವಸ್ತ್ರ ಎನ್ನಲೋ ಸಾಧನ ಎನ್ನಲೋ? ವಸ್ತ್ರದಂತ ಸಾಧನ ಎನ್ನಲೋ? ನೀವೇ ನಿರ್ಧರಿಸಿಕೊಳ್ಳಿ. ಮಳೆಗಾಲ ಪ್ರಾರಂಭಕ್ಕಿಂತ ಒಂದೆರಡು ತಿಂಗಳ‌ ಮೊದಲೇ ಊರೂರಿಗೆ ಕಂಬಳಿ ಕುರುಬರು ಮನೆಮನೆಗೆ ಬಂದು‌ ಮಾರುವುದು ವಾಡಿಕೆ. ಇತ್ತ ರೈತನೋ ಅಡಕೆ ಮಾರಿ ಒಂದಿಷ್ಟು ಹಣವನ್ನು ಪೆಟ್ಟಿಗೆಯಲ್ಲಿಟ್ಟು ನಾಜೂಕಾಗಿ ಖರ್ಚು‌ ಮಾಡುವ ಪರಿಸ್ಥಿತಿ. ಅದೂ ಸಹ ದೊಡ್ಡ ಕೊಯ್ಲಿನ ಅಡಕೆ ಮಾರಿ ಇಡೀ ವರ್ಷದಲ್ಲೇ ಗರಿಷ್ಡ ಮೊತ್ತದ ಹಣವನ್ನು ಮನೆಗೆ ತಂದು ಜಾತ್ರೆಗೆಂದು ಉದ್ರೆ ಮಾಡಿ ತಂದ ಬಟ್ಟೆಯ ಹಣವನ್ನು ಕಾಮತ್ ರಿಗೆ ಕೊಟ್ಟು, ಶೆಟ್ಟರ ಅಥವಾ ಹೆಗಡೇರ ದಿನಸಿ ಅಂಗಡಿಯಲ್ಲಿ ಬೆಳೆದ ಉದ್ರೆ ಪಟ್ಟಿ ಚುಕ್ತಾ ಮಾಡಿ ಮಳೆಗಾಲದಲ್ಲಿ ಬರುವ ಸಾಲು ಸಾಲು ಹಬ್ಬಗಳಿಗಾಗಿ,ಮತ್ತು ಶ್ರಾದ್ದಕ್ಕಾಗಿ,ಅಡಕೆಗೆ ಮದ್ದು ಹೊಡೆಸುವ ಸಲುವಾಗಿ ಹಣವನ್ನು ಮೀಸಲಿಟ್ಟು ಅದರಲ್ಲೇ ಸ್ವಲ್ಪ ಹಣವನ್ನು ಒಂದು ಜೊತೆ ಅಥವಾ ಎರಡು ಜೊತೆ ಕಂಬಳಿಯನ್ನು‌ ಕೊಂಡುಕೊಳ್ಳಬೇಕು.ಅಂತೂ ಕಂಬಳಿ‌ ಮಾರುವ ಕುರುಬರು ಮನೆಮನೆಗೆ ಬಂದಾಗ ಚೌಕಾಸಿ ಮಾಡಿ ಕಂಬಳಿ ಕೊಳ್ಳುವ ರೈತ ಅದರ ಗುಣಮಟ್ಟ ಪರಿಶೀಲಿಸುವುದು ಒಂದೆರಡು ‘ಕರೆ’ಯನ್ನು ಎಳೆದು ನೋಡಿ. ಅದು ಲಡ್ಡಾಗಿದೆಯೋ ಅಥವಾ ಗಟ್ಟಿಯಿದೆಯೋ ಎಂದು ತಿಳಿದುಕೊಳ್ಳುವ ಪರಿಯದು. ಈ ಕಂಬಳಿ ಮಾರುವವರು ಒಂದು ಜೊತೆ ಕಂಬಳಿಗೆ ಹೇಳುವ ದರ ಅಸಾಮಾನ್ಯವಾದುದು. ಒಂದು ಜೊತೆ ಕಂಬಳಿಗೆ ಇನ್ನೂರು ದರಕ್ಕೆ ನೀಡಿ ಹೋಗುವವರು ದರವೆಷ್ಟೆಂದು ಕೇಳಿದರೆ ಒಂದು ಸಾವಿರದಿಂದ ಒಂದೂವರೆ ಸಾವಿರ ಹೇಳುವುದುಂಟು. ಇದು ಸದಾ ನಡೆದು ನಡೆದು ಪೇಟೆಯಲ್ಲಿ ಯಾವ ವಸ್ತುಕೊಂಡರೂ ಚೌಕಾಸಿ‌ ಮಾಡುವಾಗ ‘ನೀವು ಕಂಬಳಿ ಕುರುಬರ ಹಾಗೆ ದರ ಹೇಳಬೇಡಿ’ ಆತ ರೇಟ್ ಹೇಳುವುದು ‘ ಕಂಬಳಿ ಕುರುಬರ ಹಾಗೆ ‘ ಎನ್ನುವುದು ಪಡೆನುಡಿಯಾಗಿ ಚಾಲ್ತಿಗೆ ಬರುವಷ್ಟಾಯಿತು.ಈಗಲೂ ಅಲ್ಲಲ್ಲಿ ಈ ಮಾತು ಬಳಕೆಯಲ್ಲಿದೆ.
ಕಂಬಳಿ ಕೊಂಡಾದ ಮೇಲೆ ಅದಕ್ಕಿರುವ ಗಂಜಿ ತೆಗೆಯಬೇಕು. ಗಂಜಿ ತೆಗೆಯದೇ ಹಾಗೆಯೆ ಇಟ್ಟರೆ ಮಳೆಗಾಲದ ತಂಡಿಗೆ ಗಂಜಿಯ ಪರಿಣಾಮದಿಂದ ಕಂಬಳಿಯಲ್ಲಿ ಹುಳುವಾಗಿ ಪುಡಿಪುಡಿಯಾಗುವುದು ನಿಶ್ಚಿತ. ಬಿರು ಬೇಸಿಗೆಯಲ್ಲೇ ಕಂಬಳಿಯನ್ನು ಬಿಸಿನೀರಿನಲ್ಲಿ ತೊಳೆದು ಬಿಸಿಲಿನಲ್ಲಿ ಒಣಹಾಕಿ ಸಾಯಂಕಾಲದ ವೇಳೆಗೆ ಕರೆಕಟ್ಟುವ ಕಾರ್ಯ. ಅದು ಕೌಶಲ್ಯದ ಕೆಲಸ. ಈ ಕೆಲಸ ಎಲ್ಲರಿಗೂ ಬರದು. ಕರೆಕಟ್ಟುವಲ್ಲಿ ನೈಪುಣ್ಯತೆ ತೋರಿ ಮೀಸೆತಿರುಗಿಸುವವರೂ ಇದ್ದರು. ಕೆಲವರು ಕರೆಕಟ್ಟಲು ಮನೆಗೆ ಕರೆಯಿಸಿ ಸಾಯಂಕಾಲ ಚಲೋ ಚಹಪಾರ್ಟಿ ಮಾಡಿ ಕಳುಹಿಸುವುದೂ ಇತ್ತು. ಕರೆಕಟ್ಟಿದ ಮೇಲೆ ಕಂಬಳಿ ಭದ್ರವಾದಂತೆ. ಅದರ ಎಳೆಗಳು ಬಿಚ್ಚವು.
ಈ ಕಂಬಳಿ ಎನ್ನುವುದು ಗೌರವದ ಸಂಕೇತ. ಅತಿಥಿಗಳು ಬಂದಾಗ ಕಂಬಳಿ ಹಾಸಿದರೆ ಈಗಿನ ಕಾಲದಲ್ಲಿ ಮೆತ್ತನೆಯ ಸೋಫಾ ಹಾಕಿ ಸ್ವಾಗತಿಸಿದಂತೆ.ನೆಂಟರು ತೆರಳಿದ ಮೇಲೆ ಮತ್ತೆ ಕಂಬಳಿಯನ್ನು ಎತ್ತಿ ಅದರ ಸ್ಥಾನವಾದ ‘ಬಿದಿರುಗಳ’ದ ಮೇಲೆ ಒಪ್ಪವಾಗಿ‌ ಮಡಿಸಿಡಬೇಕು. ಇದು ನೆಂಟರಿಗೆ ಆತಿಥ್ಯ ನೀಡಲು ಮೀಸಲಿಟ್ಟ ಕಂಬಳಿಯಾದರೆ ಮಳೆಗಾಲದಲ್ಲಿ ಹೊಲದಲ್ಲೋ, ಬೆಟ್ಟದಲ್ಲೋ ಕೆಲಸ ಮಾಡಲು ಬಳಸುವ ಕಂಬಳಿ ತುಸು ಭಿನ್ನ. ಇದರ ಎಳೆಗಳು ಒತ್ತೊತ್ತಾಗಿದ್ದು ಕರಿಯ ಕಂಬಳಿಯಾಗಿರುವುದು.
ಈ ಕಂಬಳಿ ಕೊಪ್ಪೆಯೇ ಮಳೆಗಾಲದಲ್ಲಿ ಏಕೆ ಬೇಕು? ಪ್ಲಾಸ್ಟಿಕ್ ಕೊಪ್ಪೆಗಳೂ ಬಳಕೆಯಿದ್ದ ಕಾಲದಲ್ಲಿ ಮೈಮುರಿದು ಮಾಡುವ ಕೆಲಸದಲ್ಲಿ ಕಂಬಳಿಕೊಪ್ಪೆಯೇ ಪ್ರಬಲ ಸಾಧನವಾಗುವುದು. ಛತ್ರಿ ಹಿಡಿದು ಕೆಲಸ ಮಾಡಲಾಗದು. ಪ್ಲಾಸ್ಟಿಕ್ ಕೊಪ್ಪೆ ಗಾಳಿಗೆ ಹಾರುವುದು. ಈ ಕಂಬಳಿ ಕೊಪ್ಪೆ ಗಾಳಿಗೆ ಹಾರದು. ಈ ಕಂಬಳಿಕೊಪ್ಪೆ ಹಾಕಲೂ ಕೌಶಲ್ಯಬೇಕು. ಅದರಲ್ಲೂ ಸಹ ಎರಡು ವಿಧವುಂಟು. ಯಾವ ವಿಧದಲ್ಲೂ ಹಾಕಿದರೂ ಅದಕ್ಕೆ ಸಿಕ್ಕಿಸಲು ಕಬ್ಬಿಣದ ಕಡ್ಡಿ ಬೇಕು.ಈ ಕಡ್ಡಿಯೆನ್ನುವುದು ಜೋಪಾನವಾಗಿ ಕಾಪಿಡುವ ವಸ್ತು. ಇದೇನಾದರೂ ಮಳೆಗಾಲದಲ್ಲಿ ಕಾಣದೇ ಇದ್ದರೆ ಮನೆಯ ಯಜಮಾನನಿಗೆ ಕಡುಕೋಪ ಬರುವುದು. ಮನೆಯ ಯಜಮಾನ್ತಿಯು ಈ ಕಡ್ಡಿಯನ್ನು ಜೋಪಾನವಾಗಿಡುವುದು ವಾಡಿಕೆ.
ಈ ಕಂಬಳಿಕೊಪ್ಪೆ ಹಾಕಿಕೊಂಡು ಹೊರಟ ಅಂತಾದರೆ ಅಂದು ದೊಡ್ಡ ಕೆಲಸವೇ ನಡೆದಿರುತ್ತದೆ ಎಂದರ್ಥ.ಅದು ಗುಡ್ಡದ ಮೇಲೆ ಬೇಣಕ್ಕೆ ಮುಳ್ಳಿನ ಬೇಲಿ ಹಾಕಲಿರಬಹುದು. ಸೊಪ್ಪಿನ ಹೊರೆ ತರಲೋ ಅಥವಾ ಇನ್ನಿತರ ಪ್ರಮುಖವಾದ ಕೆಲಸಕ್ಕೋ ಆಗಿರುತ್ತಿತ್ತು.
ಅಂತೂ ಕಂಬಳಿಕೊಪ್ಪೆಯ ವ್ಯವಹಾರ ಮುಗಿಯುವುದು ಹೆಚ್ಚೆಂದರೆ ಮಧ್ಯಾಹ್ನ ಎರಡು ಗಂಟೆಯೊಳಗೆ. ಕೆಲಸ ಕಾರ್ಯ ಮುಗಿದ ನಂತರ ಸ್ನಾನ‌ ಮುಗಿಸಿ ದೇವರ ಪೂಜೆಯ ನಂತರ 2-30 ರಿಂದ 3-00 ಗಂಟೆಯ ಒಳಗಡೆ ಊಟ ಮುಗಿಸಿ ವಿಶ್ರಾಂತಿಗೆ ತೆರಳುವ ಮೊದಲು ಅದರ ಕಡ್ಡಿ ತೆಗೆದು ಅಡುಗೆ ಮನೆಯ ಒಲೆಯ ಮೇಲೆ ಕಟ್ಟಿದ ‘ಗಳ’ಗಳಿಗೆ ಹಾಕಿದ ನಂತರ ಮತ್ತೆ ಆ ದಿನ ತೆಗೆಯುವಂತಿಲ್ಲ.
ಮರುದಿನ ಚೆನ್ನಾಗಿ ಒಣಗಿ ಗರಿಗರಿಯಾಗಿರುವುದರ ಜೊತೆಗೆ ಹೊಗೆಯ ಕಂಪು.ಕೆಲವರಿಗದು ಹೊಗೆಯ ಪರಿಮಳ!
ನಮ್ಮೂರಲ್ಲಿ ಗೋಳಿ ಎನ್ನುವ ಒಕ್ಕಲನೊಬ್ಬನಿದ್ದ. ಮಳೆಗಾಲದಲ್ಲಿ ಗುಡ್ಡದ ಮೇಲೆ ತರಕಾರಿ ಬೆಳೆಯಲು ಊರಿನೆಲ್ಲರಿಗೂ ಅವಕಾಶ ನೀಡುವವವನು. ಮಳೆಗಾಲದಲ್ಲಿ ಬೆಳೆಯುವ ತರಕಾರಿ ‘ಓಳಿ’ಗೆ ಮಾರಿಗೆ ಎರಡು ರೂಪಾಯಿ ನಿಗದಿಪಡಿಸಿ ‘ಮೊಗೆ ವೋಳಿ’ಗೊಂದು‌ ಮೊಗೆಕಾಯಿ ನಿಗದಿಪಡಿಸುವವನು. ಉಳಿದ ಜಾಗದಲ್ಲಿ ಶೇಂಗಾ ಬೆಳೆದು ‘ಮೋಳ’ಕಟ್ಟಿಕೊಂಡು ಅದರ ಅಟ್ಟದ ಮೇಲೆ ಮಲಗುವನು. ಕಾರಣ ರಾತ್ರಿ ನರಿ ಮತ್ತು ಹಂದಿಗಳು ತರಕಾರಿಗೋ ಶೇಂಗಾಕ್ಕೊ ದಾಳಿಯಿಡುವವು. ಕೆಲವು ಚಾಲಾಕಿ ನರಿಗಳಿಗೆ ಉರುಳು ಹಾಕಿ ದೇವರ ಸಾನಿಧ್ಯ ತೋರಿಸುವ ಅನಿವಾರ್ಯತೆಗೂ ಒಳಗಾದವನು.ಇಂತಿಪ್ಪ ಗೋಳಿ ಬೇಸಿಗೆಯಲ್ಲಿ ಒಂದು ಸೊಳ್ಳೆಯೂ ನುಸುಳದಂತೆ ಮುಳ್ಳುಗಳನ್ನು ಕಡಿದು ಭದ್ರವಾಗಿ ಬೇಲಿ ಹಾಕಿ ಮಳೆಗಾಲಕ್ಕೆ ತರಕಾರಿಗಳನ್ನು ಬೆಳೆಯಲು ಸಿದ್ಧತೆ ನಡೆಸುವವನು. ಅಂತಹ ಉರು ಬೇಸಗೆಯಲ್ಲೂ ಗೋಳಿ ಕಂಬಳಿಕೊಪ್ಪೆ ಇರದೇ ಇರಲಾರ.ಆತ ನೀಡುವ ಕಾರಣವೂ ಬಲು ಮಜಕೂರು.ಬೇಸಿಗೆಯ ಬಿರು ಬಿಸಿಲಿಗೆ ಮೈ ಬೆವರುವುದು. ಕೆಲಸ ಮುಗಿಸಿ ತಂಪಿನಲ್ಲಿ ಕುಳಿತಾಗ ಕಂಬಳಿಯೊಳಗೆ ಬೆವತ ಮೈ ಬೆವರಿನಿಂದಲೇ ತಂಪಾಗಿ ಹಾ! ಎನಿಸುವುದು ಎನ್ನುವುದು ಗೋಳಿಯ ಅನುಭವದ ಮಾತು.ಇದು ಕಂಬಳಿಯೊಂದಿಗೆ ಗೋಳಿಯ ಒಡನಾಟ ಈಗ ಮತ್ತೆ ವಿಷಯಕ್ಕೆ ಬರುವೆ.
ಈ ಕಂಬಳಿಕೊಪ್ಪೆ ಹಳತಾದ ನಂತರ ಅದಕ್ಕೆ ನಿವೃತ್ತಿಯಿಲ್ಲ. ಅದು ನೇರವಾಗಿ ಸೇರುವುದು ಹಾಸಿಗೆಗೆ. ಈ ಕಂಬಳಿಗೆ ಚಾಪೆಯ ಮೇಲಿನ ಸ್ಥಾನ. ಕೆಲವರಿಗೆ ಈ ಕಂಬಳಿ ಮೈಯೆಲ್ಲಾ ಕಚ್ಚುವ ಅನುಭವ ನೀಡಿದರೆ ಅಂತವರು ಅದರ ಮೇಲೊಂದು ಹಳೆಯ ಚಾದರ ಹಾಕಿ ಮಲಗುವರು. ಕೆಲವರಿಗೆ ಈ ಕಂಬಳಿ ‘ಅಕ್ಯೂ ಪಂಕ್ಚರ್’ ಇದ್ದ ಹಾಗೆ. ಇದರ ಚುಚ್ಚುವಿಕೆಯಿಂದ ರಕ್ತಸಂಚಾರ ಸುಗಮವಾಗಿ‌ ಮೈ ಕೈ ನೋವನ್ನು ತೆಗೆಯುತ್ತದೆ ಎನ್ನುವ ಭಾವನೆಯೂ ಇರುವುದು. ಒಟ್ಟಿನಲ್ಲಿ ಕಂಬಳಿ ಕೊಪ್ಪೆಯಿಂದ ಹಾಸಿಗೆಗೆ ವರ್ಗಾವಣೆಯಾಗಿ ಅಲ್ಲೂ ಸಹ ಪುಡಿಯಾಗಲು ಆರಂಭಿಸಿದರೆ ತೆಂಗಿನ ಮರದ ಬುಡ ಸೇರಿ ಸುಮಾರು ಹತ್ತು ವರ್ಷದ ಸೇವೆಯನ್ನು ಪೂರ್ಣಗೊಳಿಸಿ ಸಾರ್ಥಕ ಬದುಕನ್ನು ಸವೆಸಿ ಸಾರ್ಥಕತೆಯಲ್ಲಿ ಮಾನವನನ್ನು ಮೀರಿಸುವುದು.
ಈ ಕಂಬಳಿಯೆನ್ನುವುದು ವಯೋವೃದ್ದರಿಗೆ ಅತ್ಯವಶ್ಯವಾಗಿ ಬೇಕಾದುದು. ಬಾಣಂತಿಯರಿಗಂತೂ ತೀರ ಬೇಕಾದದ್ದೇ.ಅಲ್ಲೂ ಸಹ ಮೈಕೈಯನ್ನು ತೆಗೆಯುವ ಸಾಧನವೆಂದು ಪರಿಗಣಿಸಲಾಗುತ್ತದೆ.
ಈಗ ಕಂಬಳಿ ಬಲು ಅಪರೂಪ. ಕಂಬಳಿಯೆಂದರೆ ಈಗಿನ ಮಕ್ಕಳಿಗೆ ಅಲರ್ಜಿ. ಹಾಗಾಗಿ ಕಂಬಳಿ ಕೊಳ್ಳುವವರೂ ಇಲ್ಲ. ಅಲ್ಲಲ್ಲಿ ಕಂಬಳಿ ಮಾರುವವರು ಬಂದು ನೆಲೆಸಿದವರು ಅನಿವಾರ್ಯವಾಗಿ ಬೇರೆ ಉದ್ಯೋಗ ಕಂಡುಕೊಂಡರು.ಕಂಬಳಿ ನಮ್ಮಿಂದ ದೂರವಾಗುತ್ತಿದೆ. come ಬಳಿ ಎನ್ನುವವರು ಈ ಕಂಬಳಿಯ ಹತ್ತಿರ ಯಾರೂ ಹೇಳದ ಪರಿಸ್ಥಿತಿ ಬಂದೊದಗಿದೆ. ಇದು ಕಾಲದ ಮಹಿಮೆ ಎನ್ನಬೇಕೋ? ಆಧುನಿಕತೆಯ ಪರಿಣಾಮ ಎನ್ನಬೇಕೋ ? ತಿಳಿಯದು.


18 thoughts on “‘ಕಂಬಳಿ ಕೊಪ್ಪೆ’ ಲಲಿತಪ್ರಬಂಧ-ಜಿ.ಎಸ್ ಹೆಗಡೆ.

  1. ಶೀರ್ಷಿಕೆಯೇ ಕಮ್ ಬಳಿ…..ಎಂದು ಕರೆದು ಓದಿಸಿಕೊಂಡಿತು
    ದೊಳ್ಳೆ ಸುಲಲಿತ ಸಕಾಲಿಕ ಪ್ರಬಂಧವನ್ನು ಉಣಬಡಿಸಿದ ತಮಗೆ ಅಭಿನಂದನೆಗಳು.
    ಕಣ್ಮರೆಯಾಗುತ್ತಿರುವ ಕಂಬಳಿ ಬಗ್ಗೆ
    ಕಂಬಳಿಗಂಟಿದ ಹಾಸ್ಯ, ಕಂಬಳಿ ಹೊದ್ದಾಗ ಆಗುವ ಬೆಚ್ಚಗಿನ ಅನುಭವ, ಅರೋಗ್ಯ ಭಾಗ್ಯ ಹೀಗೆ ಪ್ರತಿಯೊಂದನ್ನು ಕಂಬಳಿಯ ಕರೆ (ನಾರು ಯಂತೆ ಎಳೆ ಎಳೆಯಾಗಿ ವಿವರಿಸಿರುವಿರಿ

    1. ‘ಕಂ’ ಬಳಿ ಈ ಪದ ಹೊಸತಲ್ಲ ಎನ್ನುವ ಕಾರಣಕ್ಕೆ ಬಳಸಿಲ್ಲ. ಧನ್ಯವಾದಗಳು

  2. ಮರೆಯಾದ ಕಂಬಳಿ ಚೆಂದದ ಬರಹ
    ಅಭಿನಂದನೆಗಳು ಸರ್
    ಡಾ.ಎನ್.ಟಿ.ಅನಿಲ್
    ಬೆಂಗಳೂರು

    1. ಶುರುವಿನಿಂದ ಕೊನೆಯವರೆಗೂ ಅಚ್ಚುಕಟ್ಟಾಗಿ ಓದಿಸಿಕೊಂಡು ಹೋಯಿತು ಲೇಖನ. ನಮ್ಮ ಮನೆಯಲ್ಲೂ ಪ್ರತೀ ವರುಷವೂ ಕಂಬಳಿ ಖರೀದಿಸಿ ಕೆಲಸಗಾರರಿಗೆ ಕೊಡುವ ಪದ್ಧತಿ ಇತ್ತು. ಅವರು ಅದನ್ನು ಸಂಭ್ರಮದಿಂದ ಧರಿಸಿ ತೋಟದ ಕೆಲಸಕ್ಕೆ ಅಥವಾ ಸೊಪ್ಪು ತರಲು ಹೋಗುವುದು ನೆನಪಾಗಿ ಹಿತವೆನಿಸಿತು. ಹೀಗೆ ಈಗಿನ ಕಾಲಕ್ಕೆ ಮಾಸಿ ಹೋಗಿರುವ ವಿಷಯಗಳ ಕುರಿತು ಇನ್ನೂ ಹೆಚ್ಚಿನ ಲೇಖನ ಬರಲಿ ನಿಮ್ಮಿಂದ. ಧನ್ಯವಾದಗಳು
      – ಕಾರ್ತಿಕ್

      1. ಇದೊಂದು ಹೊಸತು. ಮನೆಯ ಕೆಲಸದಾಳುಗಳಿಗೆ ಕಂಬಳಿ ಕೊಡಿಸುವ ಪದ್ಧತಿ. ಇದು ಅಪರೂಪದ ಕಾಳಜಿ. Thank you

  3. ಕಂಬಳಿಯಲ್ಲಿ ನಿಜಕ್ಕೂ ಆರೋಗ್ಯವಿದೆ, ನಾನಂತೂ ಕಚ್ಚುವ ಕಂಬಳಿಯನ್ನು ಇಷ್ಟಪಟ್ಟು ದಿನಾಲು ಬಳಸುತ್ತೇನೆ
    ಮೂರೂದಶಕಗಳ ಹಿಂದಿನ ಮಲೆನಾಡಿನ ಮನೆ – ಮಳೆ ಬದುಕನ್ನು ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರಿ

  4. Super ada baraha. Ondu sala kambali koppe haykandu thirugida anubhava atu. Shalege hopagalu hakiddu ittu.

    1. ನನಗೆ ಸುಮಾರು ನಾಲ್ಕು ವರ್ಷಗಳ ಕಾಲ ಕಂಬಳಿ ಕೊಪ್ಪೆ ಹಾಕಿ ಕೆಲಸ ಮಾಡಿದ ಅನುಭವವುಂಟು. ಧನ್ಯವಾದಗಳು

  5. ದ್ವಿತೀಯ ಪಿಯುಸಿಯಲ್ಲಿ ಇರುವಾಗ ವೀರೇಂದ್ರ ಸಿಂಪಿ ಅವರ ಹಳ್ಳಿಯ ಚಹಾದ ಹೋಟೆಲ್ಗಳು ಲಲಿತ ಪ್ರಬಂಧವನ್ನು ಓದಿದ್ದ ನನಗೆ ಬಹುಕಾಲದ ನಂತರ ಓದಿಸಿಕೊಂಡು ಹೋಗುವ ಉತ್ತಮ ಲೇಖನವೊಂದು ದೊರಕಿತು ಎನಿಸಿತು. ಆರಂಭದಿಂದ ಕೊನೆಯವರೆಗೂ ಓದಿಸಿಕೊಂಡು ಹೋದ ಈ ಲೇಖನ ಕಾಲ ಗರ್ಭದಲ್ಲಿ ಮರೆಯಾಗುವ ಮುಂಚೆ ವಸ್ತುವಿನ ಪ್ರಾಮುಖ್ಯತೆಯನ್ನು ಸಾರುವ ಪ್ರಯತ್ನದಂತೆ ಕಂಡಿತು.

    ಬಹಳ ಉತ್ತಮ ಪ್ರಯತ್ನ.

Leave a Reply

Back To Top