ಕಾವ್ಯ ಸಂಗಾತಿ
ಹನಮಂತ ಸೋಮನಕಟ್ಟಿ
ಕೊನೆಯ ಮಾತು.
ಇಂದೆ ಹೋಗುವೆ
ಎಂದಿದ್ದರೆ
ನಂದೊಂದು ಕೊನೆಯ ಮಾತಿತ್ತು
ಹೇಳದೇ ಹೋದದ್ದು
ಯಾವ ಲೆಕ್ಕ
ಜೊತೆಯಾಗುವಾಗ ಕೇಳಲಿಲ್ಲ
ಜೊತೆ ಉಳಿಯುವಾಗ
ಏನೆಲ್ಲವನ್ನೂ ಉಳಿಸಿಹೋದೆ
ಅದರ ಜೊತೆ
ನಿನ್ನ ಸವೆಯದ ನೆನಪನ್ನು
ಆ ಹೂಬನದಲ್ಲಿ
ಜೊತೆಗೂಡಿ ಪಿಸುಗುಟ್ಟುವಾಗ
ನೆರಳು ಕೊಟ್ಟ ಮಲ್ಲಿಗೆಯು
ಭರವಸೆಯ ಮಾತಿಗೆ ಸಾಕ್ಷಿಯಾಗಿ
ಮೆಲ್ಲಗೆ ಧ್ವನಿಗೂಡಿಸಿ ಹೇಳಿದ್ದು ನೆನಪಾಗಲಿಲ್ಲವೇ?
ಸುರಿಯುವ ತುಂತುರು ಮಳೆಯೂ
ಒಂದೊಂದು ತರ
ರಾಗ ಹೇಳುತ್ತಿತ್ತು
ಶಾಶ್ವತ ಪ್ರೀತಿಗೆ ನಾನೆ ಮುದ್ರೆ ಒತ್ತುವೆ ಎಂದು
ಮೈ ತಂಪಾಗಿಸಿದ್ದು ನೆನಪಾಗಲಿಲ್ಲವೆ?
ಆ ಬೆಟ್ಟದ ತುತ್ತ ತುದಿಯಲ್ಲಿ
ನಾವಿಬ್ಬರೇ ಒಂದೇ ಉಸಿರಿನಲ್ಲಿ
ಭಾಷೆ ಕೊಡುವಾಗ
ಒಂದೆರಡು ದಿನದ ಹಿಂದೆ
ಸಾಕ್ಷಿಯಾಗಿ ಕಲ್ಲು ಬಂಡೆಗಳು ಚಪ್ಪಾಳೆ ತಟ್ಟಿದ್ದು
ನೆನಪಾಗಲಿಲ್ಲವೇ?
ಇಬ್ಬರೂ ಪ್ರೇಮ ಕಾವ್ಯ ಬರೆಯುವಾಗ
ಚಂದ್ರನಿಲ್ಲದ ಬಾನಲ್ಲಿ ಬಂದ
ಮಿಂಚುವ ನಕ್ಷತ್ರಗಳು
ನಮಗೆಂದೆ ಬೆಳಕು ನೀಡಿ
ರುಜು ಮಾಡಿದ್ದವು ಎನ್ನುವ ಹಸ್ತಾಕ್ಷರ ಮರೆತು ಹೋಯಿತೆ?
ಬೇಲಿ ಮೇಲಿನ ಹೂವು ಬಳ್ಳಿ
ಹಗಲಿಗೊಂದೊಂದು ಹೂವರಳಿ
ಕ್ಷಣಕ್ಕೊಂದೊಂದು ಬಣ್ಣ ಬಳಿದು
ಜೊತೆಯಾಗಿರಿ ಜೊತೆಗಿರುವೆನೆಂದು
ಸಾಕ್ಷಿ ನುಡಿದಿದ್ದರು
ಸಾವಿನಲ್ಲಿ ಬಿಟ್ಟು ಹೋದದ್ದು ಯಾವ ಲೆಕ್ಕ……
ಒಂದು ಮಾತಂತೂ ಹಾಗೆ ಉಳಿಯಿತು
ಅದರ ಹಸಿಬೇರಿನೊಂದಿಗಿನ ಚಿಗುರು ಸಹಿತ
ಹನಮಂತ ಸೋಮನಕಟ್ಟಿ
Super