ವಿಶೇಷ ಲೇಖನ
ಲಿಂಗ ಸೂಕ್ಷ್ಮತೆ:
ಬದಲಾಗದ ಮನಸ್ಥಿತಿ !
ಸುಧಾ ಹಡಿನಬಾಳ
ಲಿಂಗ ತಾರತಮ್ಯ, ಜಾತಿ ತಾರತಮ್ಯ, ವರ್ಗ ತಾರತಮ್ಯ ,ವರ್ಣ ತಾರತಮ್ಯ ಇವೆಲ್ಲವೂ ಮನುಷ್ಯ ಮಾತ್ರರಲ್ಲಿ ಮಾತ್ರವೇ ಕಂಡುಬರುವ ಬಹುದೊಡ್ಡ ಅಸಮಾನತೆ .ಪಾಶ್ಚತ್ಯ ದೇಶಗಳಲ್ಲಿಯೂ ಮಹಿಳೆಯರು, ಬಡವರು, ಕಪ್ಪು ವರ್ಣದವರು ಅತ್ಯಧಿಕ ಪ್ರಮಾಣದಲ್ಲಿ ಶೋಷಣೆಗೆ ಗುರಿಯಾಗಿದ್ದನ್ನು ಇತಿಹಾಸದ ಪುಟಗಳಲ್ಲಿ ನೋಡಿದ್ದೇವೆ.. ಭಾರತವಂತೂ ಜಾತಿ ತಾರತಮ್ಯ, ಲಿಂಗ ತಾರತಮ್ಯಕ್ಕೆ ತವರೂರು. ಇಂದಿಗೂ ಪೂರ್ಣ ಪ್ರಮಾಣದಲ್ಲಿ ಇವುಗಳಿಂದ ಹೊರ ಬರಲು ಸಾಧ್ಯವಾಗದಿರುವುದು ದುರಂತ. ರಾಜಕೀಯ , ಧಾರ್ಮಿಕ ರಂಗದಲ್ಲಿ ಲಿಂಗ ತಾರತಮ್ಯ ಕಣ್ಣಿಗೆ ರಾಚುವಷ್ಟು ಎದ್ದು ಕಾಣುತ್ತದೆ ..
ಪುರುಷ ಪ್ರಧಾನವಾದ ದೇಶದಲ್ಲಿ ದಲಿತರು ಮತ್ತು ಮಹಿಳೆಯರು ಶೋಷಣೆಗೆ, ಅಸಮಾನತೆಗೆ ಗುರಿ ಆದಷ್ಟು ಬೇರಾರು ಗುರಿಯಾಗಿರಲು ಸಾಧ್ಯವಿಲ್ಲ .ಇಂದಿಗೂ ಯುದ್ಧ, ನೆರೆ, ಬರ ,ಕಾಯಿಲೆ ಮುಂತಾದ ಯಾವುದೇ ಬಗೆಯ ವಿಷಮ ಪರಿಸ್ಥಿತಿಯಲ್ಲಿಯೂ ಅತಿ ಹೆಚ್ಚು ಪ್ರಮಾಣದಲ್ಲಿ ಶೋಷಣೆಗೆ ಒಳಗಾಗುವವರು ದಲಿತರು, ಬಡವರು ಮತ್ತು ಮಹಿಳೆಯರು; ಅಂದರೆ ಜಾತಿ ತಾರತಮ್ಯ, ವರ್ಗತಾರತಮ್ಯ, ಲಿಂಗ ತಾರತಮ್ಯ ಈ ಮೂರು ಸಮಾಜದಿಂದ ತೊಲಗಿಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ಸತ್ಯ.
ನಮ್ಮ ಸಂವಿಧಾನ ಪೀಠಿಕೆ ಮತ್ತು ವಿಧಿಗಳಲ್ಲಿ ಸ್ವಾತಂತ್ರ್ಯ ಮತ್ತು ಸಮಾನತೆ ಬಹುಮುಖ್ಯ ಆಶಯವಾಗಿದ್ದು ಇವು ಸಂವಿಧಾನಬದ್ಧವಾಗಿ ನೀಡಿರುವ ಮೂಲಭೂತ ಹಕ್ಕುಗಳೂ ಆಗಿವೆ. ಸ್ವಾತಂತ್ರ್ಯಾನಂತರದಲ್ಲಿ ಶಿಕ್ಷಣ, ಉದ್ಯೋಗ ಈ ನಿಟ್ಟಿನಲ್ಲಿ ಮಹಿಳೆಯರು ಒಂದಿಷ್ಟು ಸಮಾನ ಅವಕಾಶಗಳನ್ನು ಪಡೆದುಕೊಂಡಿದ್ದರಾದರೂ ಜನಸಾಮಾನ್ಯರಿಂದ ನಾಯಕರವರೆಗಿನ ಮಹಿಳೆಯರ ಕುರಿತಾದ ಧೋರಣೆ, ಮನಸ್ಥಿತಿ ಬದಲಾಗಿಲ್ಲ. ದೇಶದ ಒಟ್ಟೂ ಜನಸಂಖ್ಯೆಯ ಅರ್ಧದಷ್ಟು ಸ್ತ್ರೀಯರೇ ಇದ್ದಾಗ್ಯೂ ,ದೇಶದ ಸಾಮಾಜಿಕ, ಆರ್ಥಿಕ ,ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ ಬಹುದೊಡ್ಡ ಮಟ್ಟದ್ದಾದರೂ ಇಂದಿಗೂ ರಾಜಕೀಯವಾಗಿ ಮಹಿಳೆಯರು ತುಂಬಾ ಹಿನ್ನೆಲೆಯಲ್ಲಿ ಇದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪ್ರತಿನಿಧಿ ಸದನಗಳಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ !ಪ್ರತಿವರ್ಷ ವಿವಿಧ ಸಾರ್ವತ್ರಿಕ ಚುನಾವಣೆಗಳಲ್ಲಿ ಟಿಕೆಟ್ ಹಂಚಿಕೆ ವಿಷಯ ಬಂದಾಗ ಮುನ್ನೆಲೆಗೆ ಬರುವವರು ಪುರುಷರೇ; ಐವತ್ತು ಶೇಕಡ ಬದಿಗಿರಲಿ ,33 ಶೇಕಡಾ ಹೋರಾಡಿ ಪಡೆದುಕೊಂಡಾಗಲೂ ಅವಕಾಶ ಸಿಗುವುದು ಐದರಿಂದ 10 ಶೇಕಡಾ ಅಥವಾ ಅದಕ್ಕಿಂತ ಕಡಿಮೆ! ಪ್ರಭಾವಿ, ಜನಪ್ರಿಯ, ನಿಷ್ಠಾವಂತ ಜನನಾಯಕಿಯರು ಇಲ್ಲವೆಂದಲ್ಲ; ಅಂಥವರನ್ನೆಲ್ಲ ಮೂಲೆಗುಂಪಾಗಿಸಿ ಅವರನ್ನು ಕೂಡ ರಾಜಕೀಯ ದಾಳವನ್ನಾಗಿಸಿ ಪುರುಷರ ನೆರಳಾಗಿ ದುಡಿಸಿಕೊಳ್ಳುವುದು ಕಂಡುಬರುವ ತಾರತಮ್ಯದ ಅತಿರೇಕ.
ಪ್ರತಿಷ್ಠಿತ ಐಟಿ ಕಂಪನಿಗಳು ಕೂಡ ಉನ್ನತ ಸ್ಥಾನಮಾನಗಳಿಗೆ ಬಡ್ತಿ ನೀಡುವಾಗ, ಹೊಸಬರನ್ನು ಆಯ್ಕೆ ಮಾಡಿಕೊಳ್ಳುವಾಗ ಮದುವೆಯಾದ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡದಿರುವುದು ಹಿಂದಿನಿಂದ ಇಂದಿನವರೆಗೂ ಕಣ್ಣಿಗೆ ಕಾಣುವ ಸತ್ಯ , ಕಾರಣವಿಷ್ಟೇ ಹೆಣ್ಣು ಮಕ್ಕಳು ಮದುವೆಯ ನಂತರ ಬಸಿರು, ಬಾಣಂತನ, ಚಿಕ್ಕ ಮಕ್ಕಳು, ಕೌಟುಂಬಿಕ ಸಮಸ್ಯೆಗಳು ಎಂದೆಲ್ಲಾ ರಜೆ ಪಡೆದುಕೊಳ್ಳುತ್ತಾರೆ ಎಂಬ ಧೋರಣೆ . ಅವರಿಗೆ ಕೆಲಸವಿಲ್ಲದೇ ಸಂಬಳ ನೀಡಬೇಕಲ್ಲ ಎಂಬ ಅಸಹನೆ…ಆದರೆ ಅಂದು ಅಂಬೇಡ್ಕರ್ ಪಠಿಸಿದ ಕೌಟುಂಬಿಕ ನೆಲೆಗಟ್ಟು ಭದ್ರವಾಗಿದ್ದಷ್ಟು ಉಳಿದೆಲ್ಲ ರಂಗಗಳು ಸದೃಢವಾಗಿ ಕಾರ್ಯನಿರ್ವಹಿಸಬಲ್ಲವು.. ಅದಕ್ಕಾಗಿ ಹೆಣ್ಣು ಮಕ್ಕಳಿಗೆ ನೀಡಬೇಕಾದ ಗೌರವ ಸಂಭಾವನೆ ಹೆರಿಗೆ ಭತ್ಯೆ ಎಂಬ ಸತ್ಯವನ್ನು ಯಾವ ಬುದ್ದಿವಂತ ನಾಯಕನೂ ಅರ್ಥಮಾಡಿಕೊಳ್ಳಲಾರ ! ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸಕ್ಕೆ ಗಂಡಾಳು, ಹೆಣ್ಣಾಳುಗಳಿಗೆ ನೀಡುವ ವೇತನ ತಾರತಮ್ಯ ಜನಜನಿತ.
. ಅಂತೆಯೇ ಒಂದು ಸಂಸ್ಥೆ, ಇಲಾಖೆಯ ಮುಖ್ಯಸ್ಥರಾಗಿ ಮಹಿಳೆಯರು ಅದೆಷ್ಟೇ ಪ್ರಾಮಾಣಿಕವಾಗಿ ನಿಷ್ಠೆಯಿಂದ ಕರ್ತವ್ಯ ನಿಭಾಯಿಸಿದರೂ ಅವರ ಕುರಿತಾಗಿ ಒಂದು ಅಸಡ್ಡೆಯ ದೃಷ್ಟಿಕೋನ ಜನಸಾಮಾನ್ಯರಿಂದ ಹಿಡಿದು ರಾಜಕಾರಣಿಗಳವರೆಗೂ ಇರುವಂತದ್ದೇ !
ಇಂದು ಖಾಸಗಿ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಶಿಕ್ಷಕಿಯರಾಗಿ ,ಮುಖ್ಯ ಶಿಕ್ಷಕಿಯರಾಗಿ ಅತ್ಯಂತ ಪ್ರಾಮಾಣಿಕವಾಗಿ ಶಿಸ್ತು ಬದ್ಧವಾಗಿ ಸಂಸ್ಥೆಯನ್ನು ಮುನ್ನಡೆಸುತ್ತ ಸಮಯ ಪಾಲನೆ ಶಿಸ್ತು ಇವೆಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರೂ ಜನಸಾಮಾನ್ಯರ ದೃಷ್ಟಿಯಲ್ಲಿ ಒಬ್ಬ ಪುರುಷ ಶಿಕ್ಷಕರೇ ತಮ್ಮ ಶಾಲೆಗೆ ಬೇಕು ಎಂಬ ಸಾಂಪ್ರದಾಯಿಕ ಮನಸ್ಥಿತಿ ಇಂದಿಗೂ ಬದಲಾಗಿಲ್ಲ.
ಯಾವುದೇ ಕ್ಷೇತ್ರದ ಒಂದು ಕಾರ್ಯಕ್ರಮವಿರಲಿ ವೇದಿಕೆಯ ಮೇಲೆ ಹತ್ತಾರು ಸಂಖ್ಯೆಯಲ್ಲಿ ಪುರುಷರೇ ವಿಜ್ರಂಭಿಸುವುದನ್ನು ಕಾಣುತ್ತೇವೆ . ಇದರರ್ಥ ಪ್ರತಿಭೆ ಇರುವ ದಕ್ಷ ಮಹಿಳೆಯರ ಸಂಖ್ಯೆ ಕಡಿಮೆ ಎಂದರ್ಥವಲ್ಲ . ಪುರುಷರಿಗೆ ಸರಿಸಮನಾಗಿ ಮಹಿಳೆಯರನ್ನು ವೇದಿಕೆಯ ಮೇಲೆ ಕೂಡ್ರಿಸಲು, ಅಧ್ಯಕ್ಷ ,ಉದ್ಘಾಟಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಸಂಘಟಕರ ಮನಸ್ಥಿತಿ ಒಪ್ಪಿಕೊಳ್ಳುವುದಿಲ್ಲ. ಬದಲಾಗಬೇಕಾದ ಮನಸ್ಥಿತಿ, ಅರ್ಥೈಸಿಕೊಳ್ಳಬೇಕಾದ ಸತ್ಯ ಇನ್ನೂ ತುಂಬಾ ಇದೆ ; ಒಬ್ಬ ಹೆಣ್ಣುಮಗಳು ಸರ್ಕಾರಿ ನೌಕರಿಯಲ್ಲಿರಲಿ, ಮನೆ ಕೆಲಸದಲ್ಲೇ ಇರಲಿ, ಒಂದು ಕೆಲಸದ ಸಮಯಕ್ಕೆ ಸರಿಯಾಗಿ ಹಾಜರಾದರೆ ಮತ್ತೆ ಕರ್ತವ್ಯದ ಅವಧಿ ಮುಗಿಯುವವರೆಗೂ ಚಹಾ ,ಊಟ ಹರಟೆ ಎಂದು ಕಚೇರಿಯಿಂದ ಅನವಶ್ಯಕವಾಗಿ ಹೊರ ವ್ಯವಹಾರ , ಕೆಲಸಕ್ಕೆ ಹೋಗಲಾರಳು. ಸಮಯಕ್ಕೆ , ಶಿಸ್ತಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಕೊಡುವ ಮಹಿಳೆಯರನ್ನು ಇಂದಿಗೂ ತಾರತ್ರಮ್ಯ ದೃಷ್ಟಿಕೋನದಿಂದ ನೋಡುವ ಮನಸ್ಥಿತಿ ಬದಲಾಗಬೇಕಿದೆ….
ಸುಧಾ ಹಡಿನಬಾಳ
ನೂರಕ್ಕೆ ನೂರರಷ್ಟು ಸತ್ಯ
Tq
ಸಮಾಜದ ಕೆಲ ಪುರುಷರ ಮನೋಸ್ಥಿತಿಗೆ ದಿಟ್ಟತನದ ಉತ್ತರವಾದರೆ,ಮಹಿಳೆಯರ ಮಾನಸಿಕ ಧೈರ್ಯ ಹೆಚ್ಚಿಸಬಲ್ಲ ಹಿತನುಡಿ
ಕೈಜೋಡಿಸಿದ್ದಕ್ಕೆ ಧನ್ಯವಾದಗಳು