‘ಗತ್ಯಂತರ’ ಎಸ್ ನಾಗಶ್ರೀ ಅಜಯ್ ಅವರ ಸಣ್ಣಕಥೆ

ಮಧ್ಯಾಹ್ನದ ಟೀ ವಿರಾಮದಲ್ಲಿ ಕೂತು ಕಾವ್ಯಾ ಲೆಕ್ಕ ಹಾಕುತ್ತಿದ್ದಳು.ಎರಡು ಗಂಟೆ ಪರ್ಮಿಷನ್ ತೆಗೆದುಕೊಂಡರೆ ಅತ್ತೆಯನ್ನು ಕಂಡು ಮಾತನಾಡಿ ಅಲ್ಲಿಂದ ಆಟೋ, ಮೆಟ್ರೋ, ಬಸ್ಸು ಅಂತ ಮೂರು ಗಾಡಿ ಬದಲಾಯಿಸಿ ಮನೆ ಸೇರುವುದು ಸಂಜೆ ಏಳಾಗುತ್ತದೆ. ಕೆಲಸವಿಲ್ಲದಿದ್ದರೆ ಕಂಬ ಸುತ್ತಿಸುವ, ಮಕ್ಕಳಿಗೆ ರಿವಿಷನ್ ಕ್ಲಾಸ್, ಲೈಬ್ರರಿಯಲ್ಲಿ ಸಾರ್ಟಿಂಗ್ ವರ್ಕ್ ಅಂತ ಹುಡುಕಿ ಹಚ್ಚುವ ಪುಡಿ ಕೆಲಸಗಳಿಂದ ಬಚಾವಾಗುವುದು ಸುಲಭವಲ್ಲ.  ಪ್ರಿನ್ಸಿಪಾಲರ ಮುಂದೆ ಹೊಟ್ಟೆನೋವು ಎಂದು ಸುಳ್ಳು ಕಾರಣ ಹೇಳಿ ಜೂಟ್ ಆಗೋದೇ ಸರಿ ಎಂಬ ನಿರ್ಧಾರಕ್ಕೆ ಬಂದಿದ್ದೇ ಕಾಡಿಗೆ ಅಳಿಸಿ, ಹುಬ್ಬಿನ ಕೆಳಗೆ ಸ್ಟಿಕ್ಕರ್ ಅಂಟಿಸಿ, ಕೂದಲನ್ನು ತಲೆಗಂಟಿಸಿ ಬಾಚಿ ಹುಷಾರಿಲ್ಲದ ನಾಟಕಕ್ಕೆ ಮಾಡಿದ ತಯಾರಿಯ ಬಗ್ಗೆ ತಾನೇ ಮೆಚ್ಚಿಕೊಳ್ಳುತ್ತಾ ಪರ್ಮಿಷನ್ ಪಡೆದು ಕಾಲೇಜಿಂದ ಹೊರಬಿದ್ದಾಗ ಸಾಕುಸಾಕೆನಿಸಿತ್ತು.

“ಎನ್.ಇ.ಟಿ, ಕೆಸೆಟ್ ಮಾಡ್ಕೊಳ್ರೀ… ಕೈತುಂಬ ಸಂಬಳ ಸಿಗದಿದ್ದರೆ ಕೇಳಿ. ಈಗ ಬರಿಯ ಎಂ.ಕಾಂ ಆದವರನ್ನ ನಾವು ಸೇರಿಸಿಕೊಳ್ಳೋದೇ ಇಲ್ಲ. ಅಡ್ಮಿನ್ , ಲೈಬ್ರರಿ, ಟೀಚಿಂಗ್ ಅಂತ ಎಲ್ಲ ಕಡೆ ಕೆಲಸ ಮಾಡೋಕೆ ಒಪ್ಪಿದ್ದು ನೋಡಿ, ನಿಮಗೆ ಅಗತ್ಯ ಇದೆ ಅಂತ ಸೇರಿಸಿಕೊಂಡಿದ್ದು. ಒಳ್ಳೆ ಕೆಲಸಗಾರ್ತಿ ಅಂತ ಸಂಬಳ ಹೆಚ್ಚು ಮಾಡಿ ಇಟ್ಟುಕೊಂಡಿದ್ದೀವಿ…” ಅಂತ ಪ್ರಿನ್ಸಿ ತನ್ನನ್ನು ಉದ್ಧರಿಸಲು ಬಂದ ಅವತಾರ ಪುರುಷನ ಹಾಗೆ ಪ್ರವಚನ ಕೊಡುವಾಗೆಲ್ಲ, ಇಂತಹ ಕಡೆ ಕರುಣಾಜನಕವಾಗಿ ಬದುಕೋಕಿಂತ ಸ್ವಂತ ವ್ಯಾಪಾರ ಮಾಡಿ ಗೆಲ್ಲಬೇಕು ಅನ್ನಿಸುತ್ತಿತ್ತು. ಆದರೆ ಬಂಡವಾಳ? ಮದುವೆ ಮುಂಚೆ ದುಡಿದಿದ್ದು ಮದುವೆ ಖರ್ಚಿನಲ್ಲಿ ಜಮೆಯಾಯಿತು. ಆಮೇಲಿನದು ಸಂಸಾರ ತೂಗಿಸಲೇ ಸರಿಯಾಗುತ್ತಿದೆ. ಸಾಲ ಮಾಡಿಯಾದರೂ ತುಪ್ಪ ತಿನ್ನುವ ಧೈರ್ಯ ಇಲ್ಲ. ಅತ್ತೆ ಸಹಾಯ ಮಾಡಿದರೆ ಆಗಬಹುದು.‌ ಆದರೆ ಕೇಳುವುದು ಹೇಗೆ? ಈ ಮಧ್ಯಮವರ್ಗದ ಸವಾಲುಗಳು ನಿತ್ಯನೂತನ. ಕಷ್ಟಗಳು ಕೂಡ ವಿವಿಧ ವಿನ್ಯಾಸ,ರೂಪ, ಸಮಯಗಳನ್ನು ತೆಳೆದು ಬರುತ್ತಲ್ಲ! ಭೇಷ್! ಕಷ್ಟವೇ ಭೇಷ್! ಎಂದುಕೊಂಡು ಒಳಗೊಳಗೆ ನಕ್ಕಳು. ಈಗೀಗ ಅವಳು ಸುಮ್ಮನಿದ್ದರೂ ನಗುತ್ತಿರುವಂತೆ ತುಟಿ ತುಸು ಹಿಗ್ಗಿರುತ್ತದೆ. ನಗುವೊಂದರಲ್ಲೇ ಜಗ ಗೆಲ್ಲುವೆನೆಂಬ ಉತ್ಸಾಹವೋ ಭಂಡತನವೋ ತೀರ್ಪು ನೀಡಲು ನಾವು ಯಾರು?

*

ಕಾವ್ಯಾ ತನ್ನನ್ನು ಸೊಸೆಯಾಗಿ ಮನೆತುಂಬಿಸಿಕೊಂಡ ಕಾಮಾಕ್ಷಿ ಅತ್ತೆಯ ಮನೆಗೆ ತಲುಪುವುದಕ್ಕೂ, ಧೋ ಎಂದು ಮಳೆ ಹಿಡಿಯುವುದಕ್ಕೂ ಒಂದೇ ಆಯಿತು. ಒಪ್ಪ ಓರಣವಾಗಿಟ್ಟುಕೊಂಡಿದ್ದ ಕೆಂಪುನೆಲದ ಪುಟ್ಟ ಗೂಡಿನೊಳಗೆ ಹುಡುಕಿದರೂ ಬೇಕಿಲ್ಲವೆನಿಸುವ ಒಂದು ಕಡ್ಡಿಯೂ ಇಲ್ಲ. ಇಪ್ಪತ್ತು ಮುವ್ವತ್ತರ ಆ ಮನೆಯೊಂದಿಗೆ ಅತ್ತೆಯ ಭಾವನಾತ್ಮಕ ಸಂಬಂಧ ಗೊತ್ತಿರುವ ಕಾವ್ಯಾಳಿಗೆ “ಒಂಟಿಯಾಗಿ ಇಲ್ಲಿರೋಕಿಂತ  ನಮ್ಮ ಜೊತೆಗೇ ಬಂದು ಇದ್ದುಬಿಡಿ‌” ಎನ್ನುವ ನಾಟಕೀಯ ಮಾತುಗಳನ್ನು ಆಡಲು ಬಾಯಿ ಬರುತ್ತಿರಲಿಲ್ಲ. ಕಾಫಿ ಕೋಡುಬಳೆಯ ಉಪಚಾರವಾದ ಮೇಲೆ, ಅತ್ತೆಯೇ ಮಾತು ಶುರು ಮಾಡಿದರು.
 ” ವಿಶೇಷವೇನೇ? ಮುಖ ಸೋತ ಹಾಗೆ ಕಾಣತ್ತೆ. ಅಥವಾ ಕಾಲೇಜಲ್ಲಿ ಅಷ್ಟು ಹೊತ್ತು ಪಾಠ ಮಾಡಿ ಆಯಾಸವಾಗಿದ್ಯೇನೋ? ಶನಿವಾರ, ಭಾನುವಾರ ನನ್ನ ಮಗನೂ ನಿನ್ನ ಜೊತೆಗೆ ಇರ್ತಾನೆ. ನಾನೇನೇ ಕೇಳಿದ್ರೂ ನೀವು ಅವನಿಗೆಲ್ಲಿ ಬೇಜಾರಾಗುತ್ತೋ ಅಂತ ದಾಕ್ಷಿಣ್ಯಕ್ಕೆ ಬಿದ್ದು ಉತ್ತರ ಕೊಡಬೇಕು. ಅದರ ಬದಲು ನಾವಿಬ್ಬರೇ ಇದ್ದಾಗ ಮಾತು ಸಲೀಸು. ನೀನು ಒಂದು ಮಾತು ಹಾಗಲ್ಲ ಹೀಗೆ ಅಂದರೂ ನಾನು ತಪ್ಪು ತಿಳಿಯಲ್ಲ. ನಾನೊಂದು ಮಾತು ಹೆಚ್ಚುಕಮ್ಮಿ ಆಡಿದರೂ ನೀನು ಮನಸ್ಸಿಗೆ ಹಾಕ್ಕೋಬೇಡ. ಅರವತ್ತಕ್ಕೆ ಅರಳು ಮರಳು ಅಂತಾರಲ್ಲ. ಹಾಗೆ ಅತ್ತೆಗೆ ಅರಳು ಮರಳು ಅನ್ಕೊಂಡು ಮಾಫ್ ಮಾಡಿಬಿಡು”  ಅಂತ  ನಕ್ಕಾಗ ಅವರ ಕಣ್ಣಲ್ಲಿದ್ದ ಮಾರ್ದವತೆಯನ್ನು ಎದೆಗಿಳಿಸಿಕೊಳ್ಳುವಾಗಲೇ ದಿನತಪ್ಪಿದ ಲೆಕ್ಕ ತಲೆಯೊಳಗೆ ನುಸುಳಿತ್ತು. ಇದ್ದರೂ ಇರಬಹುದೆನಿಸಿದರೂ, ಸುಮ್ಮನೆ ನಿರೀಕ್ಷೆಯ ಗಿಡ ನೆಡುವುದು ಬೇಡವೆಂದು ,
” ಅದು ಸರಿ ಅತ್ತೆ. ಕಾಲೇಜಲ್ಲಿ ವಿಪರೀತ ಕೆಲಸ. ಇವತ್ತು ಆರು ಕ್ಲಾಸ್ ಗಂಟಲು ಹರ್ಕೊಂಡು ಪಾಠ ಮಾಡಿ ಸಾಕಾಗಿತ್ತು. ಜೊತೆಗೆ ಪರ್ಮಿಷನ್ ಕೇಳಬೇಕು ಅಂತ ಅನಾರೋಗ್ಯದ ಮೇಕಪ್ ಹಾಕಿದ್ದೆ. ಮತ್ತೆ ನೀವು ಹೇಗಿದ್ದೀರಿ? ಮನೆಗೆ ಬಾ ಅಂದಿದ್ದರಲ್ಲ. ಏನೋ ಗಂಭೀರ ವಿಷಯ ಇರಬೇಕು ಅನ್ನಿಸ್ತು. ಇವತ್ತು ನಾಳೆ ಅಂತ ಮುಂದೆ ಹಾಕೋದು ಬೇಡ ಅಂತ ಇವತ್ತೇ ಬಂದೆ” ಎಂದಿದ್ದಳು.
” ನಾನು ಆರಾಮಾಗೇ ಇದ್ದೀನಿ. ಅರವತ್ತು ದಾಟಿದ ಮೇಲೆ ದಿನಕ್ಕೊಂದು ಸಣ್ಣಪುಟ್ಟ ನೋವು, ನೆಗಡಿ, ಮೈಮುಜುಗರ , ಸುಸ್ತು ಹೀಗೆ ಏನೋ ಒಂದು ಇರತ್ತೆ. ಅದಕ್ಕೆಲ್ಲ ಗಾಬರಿ ಬಿದ್ದು ನಿಮ್ಮನ್ನ ಕರೆಸೋದಿಕ್ಕೆ ಮನಸ್ಸು ಬರಲ್ಲ. ಬೇರೆ ಒಂದು ವಿಷಯ ಇದೆ. ಗಂಭೀರ ಹೌದೋ ಅಲ್ವೋ ನೀನೇ ಹೇಳಬೇಕು. ನಿಮ್ಮ ಮಾವ ಹೋದಾಗ, ನನ್ನ ಮಕ್ಕಳಿಬ್ಬರು ಚಿಕ್ಕವರು. ದೊಡ್ಡವನು ಏಳನೇ ಕ್ಲಾಸು. ಚಿಕ್ಕವನು ಮೂರನೇ ಕ್ಲಾಸು. ಅದಾದ ಮೇಲೆ ಪೆನ್ಷನ್ ಹಣ, ನನ್ನ ಹೂಬತ್ತಿ, ಕೋಡುಬಳೆ ವ್ಯಾಪಾರದಿಂದ ಮನೆ ನಡೀತು. ಇಬ್ಬರೂ ಚೆನ್ನಾಗಿ ಓದಿ, ಕೆಲಸಕ್ಕೆ ಸೇರಿದ್ದು, ದೊಡ್ಡವನ ಮದುವೆಯಾಗಿದ್ದು ಈಗ ಕನಸಿನ ಹಾಗೆ ಕಾಣತ್ತೆ. ಪ್ರಸನ್ನ ಹೋದ ಮೇಲೆ ಹೆಣ್ಣು ಹೆಂಗಸು ಏನು ಮಾಡ್ತಾಳೆ? ಇದ್ದ ಮನೆ ಮಾರಿಕೊಂಡು ಬೀದಿಗೆ ಬರ್ತಾರೆ ಅಂದುಕೊಂಡಿದ್ದವರ ಮುಂದೆ ಅದೇ ಪ್ರಸನ್ನನ ಮಕ್ಕಳು ಸ್ವಂತ ಕಾಲ ಮೇಲೆ ನಿಂತಿದ್ದಾರೆ. ಹು… ಏನು ಹೇಳೋಕೆ ಬಂದೆ?” ಎಂದಾಗ ಕಾವ್ಯಾ ಕಕ್ಕಾಬಿಕ್ಕಿಯಾಗಿದ್ದಳು‌. ಈ ಕತೆಯನ್ನು ಅವಳು ಮದುವೆಯಾಗಿ ಮೂರು ವರ್ಷದೊಳಗೆ ಮುನ್ನೂರು ಸಲ ಕೇಳಿದ್ದಳು. ಆದರೆ ಗೊತ್ತು ಬಿಡಿ ಎಂದು ಅವರ ಅಷ್ಟು ವರ್ಷದ ದುಡಿಮೆ,ಆದರ್ಶ,ಕನಸನ್ನು ತಳ್ಳಿಬಿಡಲು ಮನಸಾಗುತ್ತಿರಲಿಲ್ಲ.
“ನನ್ನ ಕರೆಸಿದ್ದು ಯಾಕೆ ಅಂತ ಹೇಳೋಕೆ ಶುರು ಮಾಡಿದ್ರಿ ಅತ್ತೆ”
” ಹೋ.. ಹೌದು. ಈ ಕಥೆ ನಿನಗೆ ಗೊತ್ತಿರೋದೇ. ಗೊತ್ತಿಲ್ಲದ ಅಧ್ಯಾಯ ಒಂದಿದೆ. ಹೇಳಬೇಕು. ನನ್ನ ಗಂಡ ಹೋಗೋಕೂ ಐದಾರು ವರ್ಷ ಮುಂಚೆ ಅವರಿಗೆ ತಲೆಕೆಟ್ಟಿತ್ತು. ನಿಜಕ್ಕೂ ಹುಚ್ಚು ಹಿಡಿದಿತ್ತು. ಆಗ ಅವರದ್ದು ಗುತ್ತಿಗೆ ಆಧಾರದ ಕೆಲಸ. ಇನ್ನೂ ಪರ್ಮನೆಂಟ್ ಸರ್ಕಾರಿ ಕೆಲಸ ಅಂತ ಆಗಿರಲಿಲ್ಲ. ಕೆಲಸಕ್ಕೆ ಹೋದರೆ ಸಂಬಳ. ಇಲ್ಲಾಂದ್ರೆ ಬಿಡಿಗಾಸೂ ಇಲ್ಲ. ಹುಣ್ಣಿಮೆ ದಿನ ಮೂರು ದಾರಿ ಸೇರೋ ಕಡೆ ಆಕ್ಸಿಡೆಂಟ್ ಆಗಿ ಮನೆಗೆ ಬಂದಿದ್ದೇ ಬಂದಿದ್ದು. ಆಮೇಲೆ ಒಬ್ಬರೇ ರೂಮಿನ ಬಾಗಿಲು ಹಾಕ್ಕೊಂಡು ಇಂಗ್ಲೀಷ್ ಅಲ್ಲಿ ಜಗಳ ಆಡೋರು. ರಾತ್ರಿ ಬಟ್ಟೆ ಬಿಚ್ಚಿ ಹೊರಗಡೆ ಓಡಿ ಹೋಗೋರು. ಕೋಲು ಹಿಡಿದು ಕಸದ ರಾಶಿ ಕೆದಕೋಕೆ ನಿಂತಿರೋರು. ನನಗೆ ಆಗ ಭಯಕ್ಕೆ ಕೈಕಾಲು ನಡುಕ ಬಂದುಬಿಡೋದು. ಮಕ್ಕಳು ಇನ್ನೂ ಚಿಕ್ಕವರು. ಅರ್ಥವಾಗುವ ವಯಸ್ಸಲ್ಲ. ಆದರೂ ಅಮ್ಮ ಅಮ್ಮ ಯಾಕೆ ಅಳ್ತೀಯಮ್ಮ? ಅಂತ ಪುಟ್ಟ ಪುಟ್ಟ ಕೈಯಲ್ಲಿ ಕಣ್ಣೀರು ಒರೆಸೋರು. ಲೋಟದಲ್ಲಿ ನೀರು ತಂದು ಕುಡಿಯಮ್ಮ ಅನ್ನೋರು.” ಎಂದು ಹೇಳುತ್ತಾ  ತಡೆಯಲಾಗದೆ ಮತ್ತೆ ಅಳಲು ಶುರು ಮಾಡಿದರು.
“ಅತ್ತೆ.. ಅತ್ತೆ.. ಸಮಾಧಾನ ಮಾಡ್ಕೊಳ್ಳಿ. ಆ ಕಾಲ ಕಳೆದು ಹೋಯಿತು. ಶುಕ್ರವಾರ ಸಂಜೆ ದೀಪ ಹಚ್ಚುವ ಹೊತ್ತಿನಲ್ಲಿ ಇದೆಲ್ಲ ಯಾಕೆ ನೆನಪು ಮಾಡ್ಕೊಂಡು ಅಳ್ತೀರ? ನಾವು ಇಲ್ಲೇ ಹೊರಗೆ ಹೋಗಿ ಬರೋಣ್ವಾ? ಒಂದು ಸಣ್ಣ ವಾಕ್ ಹೋಗಿ ಬಂದರೆ ಮನಸ್ಸು ತಿಳಿಯಾಗುತ್ತೆ. ಬನ್ನಿ ಅತ್ತೆ…” ಎಂದು ಭುಜ ಬಳಸಿ ಹಿಡಿದಿದ್ದಳು. ಮಳೆ ಪೂರ್ಣ ನಿಂತಿರಲಿಲ್ಲ. ಈ ಮಳೆ, ಚಳಿಯಲ್ಲಿ ಹೊರಗೆ ಕರೆದುಕೊಂಡು ಹೋಗಿ ಹುಷಾರು ತಪ್ಪಿದರೆ ಎಂಬ ಚಿಂತೆ ಮುಸುಕಿತು.


” ಬೇಡ.. ಇಲ್ಲೇ ಇರೋಣ. ಐದು ನಿಮಿಷ ಅಷ್ಟೇ. ಕಥೆ ಮುಗಿಬಿಡ್ತೀನಿ. ನೆನಪಾದರೆ ಅಳು ಬರತ್ತೆ ಅಂತ ಆದಷ್ಟು ಮರೆತ ಹಾಗೆ ಇರ್ತೀನಿ. ಆದರೆ ಇವತ್ತು ಹೇಳಲೇಬೇಕಾದ ಸಂದರ್ಭ ಬಂದಿದೆ. ಎಲ್ಲಿದ್ದೆ? ಹು… ಅವರು ಹಾಗೆ ಹುಷಾರು ತಪ್ಪಿ ಎರಡು ತಿಂಗಳು ಕೆಲಸಕ್ಕೇ ಹೋಗಿಲ್ಲ.‌ ಮನೆಯಲ್ಲಿದ್ದ ದಿನಸಿ ಖಾಲಿ.‌ ಹಾಲು, ಕಾಫಿಪುಡಿ, ಸಕ್ಕರೆ ಏನೂ ಇಲ್ಲ. ಚಿಲ್ಲರೆ ಪಲ್ಲರೆ ದುಡ್ಡಲ್ಲಿ ರೇಷನ್ ಅಕ್ಕಿ ತಂದು ಉಪ್ಪಿನಕಾಯಿ ಅನ್ನ ಕಲಸಿ ತಿನ್ನುವ ಪರಿಸ್ಥಿತಿ.  ಗುಡಿಸಿಲಿನ ಹಾಗೆ ಶೀಟು ಹೊದೆಸಿದ್ದ ಮನೆ ನಮ್ಮ ಸ್ವಂತದ್ದು ಎನ್ನುವುದೊಂದೇ ಬಲ.ನೆಂಟರಿಷ್ಟರು, ಬಂಧು ಬಳಗ ಅನ್ನಿಸಿಕೊಂಡ ಯಾರೊಬ್ಬರೂ ಬದುಕಿದ್ದೀಯ? ಸತ್ತಿದ್ದೀಯ? ಎಂದು ಕೇಳಲೂ ಬರಲಿಲ್ಲ. ಕೆಟ್ಟು ತವರು ಸೇರಬೇಡ ಅಂತ ಗಾದೆಯೇ ಇದೆಯಲ್ಲ. ಯಾರನ್ನೂ ಕೈಯೊಡ್ಡಿ ಗೊತ್ತಿಲ್ಲ. ಕಿವಿಯೋಲೆ ಗಿರವಿ ಇಟ್ಟು ಇವರಿಗೆ ನಿದ್ದೆಮಾತ್ರೆ ತಂದುಕೊಟ್ಟು ಮಲಗಿಸುವ ಪ್ರಯತ್ನ ಮಾಡಿದೆ. ತಾಯಿತ ಕಟ್ಟಿಸಿದೆ. ಕುಂಕುಮ, ವಿಭೂತಿ, ನಿಂಬೆಹಣ್ಣು ಏನೇನೋ ಅವತ್ತು ನಮಗೆ ತೋಚಿದ್ದು ಮಾಡಿದ್ದೆಲ್ಲ ವ್ಯರ್ಥ. ಎಲ್ಲಿ ಇವರ ಹುಚ್ಚಿನಲ್ಲಿ ಜೀವಕ್ಕೆ ತಂದುಕೊಳ್ತಾರೋ ಅಂತ ಭಯ.‌ ಆಗ ದೇವರ ಹಾಗೆ ಬಂದಿದ್ದು ಇವರ ಬಾಸ್ ರಾಮಚಂದ್ರ ಆಲೂರ್. ನಿಮ್ಮ ಮಾವ ಕೆಲಸಕ್ಕೆ ಹೋಗುವಾಗ ಬಹಳ ಶಿಸ್ತು, ಶ್ರದ್ಧೆ. ಒಂದು ದಿನಕ್ಕೂ ತಡವಾಗಿ ಹೋಗುವುದು, ಸುಳ್ಳು ಹೇಳುವುದು, ಮೈಗಳ್ಳತನ ಇಲ್ಲ.  ಅಂತಹ ಕೆಲಸಗಾರ ಯಾಕೆ ಒಂದು ಮಾತಿಲ್ಲದೆ ನಾಪತ್ತೆಯಾಗಿದ್ದಾರಲ್ಲ ಅಂತ ಅವರಿರವರ ಹತ್ತಿರ ಅಡ್ರಸ್ಸು ಕೇಳ್ಕೊಂಡು ಮನೆಗೆ ಬಂದ್ರು. ಇವರ ಪರಿಸ್ಥಿತಿ ಕಣ್ಣಾರೆ ಕಂಡು ಅರ್ಥವಾಗಿ, ನಾಳೆ ಸಂಜೆ ಐದು ಗಂಟೆಗೆ ಬರ್ತೀವಿ. ಸಿದ್ಧವಾಗಿರಿ. ಅಂತ ಹೇಳಿ ಹೊರಟರು.‌ನನಗೆ ಇವರೇನು ಮಾಡ್ತಾರೆ? ಒಂದಕ್ಷರ ಮಾತಾಡದೆ ಇವರಿಗೇನು ಗೊತ್ತಾಗಿರತ್ತೆ ಅಂತ. ನಿಮ್ಮ ಮಾವ ಆಸ್ಪತ್ರೆಗೆ ಎಂದರೆ ಬರಲ್ಲ ಅಂತ ಹಠ. ಆಲೂರ್ ಉಪಾಯವಾಗಿ, ‘ ನಡೀರಿ ಪ್ರಸನ್ನ.‌ ಜನರಲ್ ಮ್ಯಾನೇಜರ್ ನಿಮ್ಮನ್ನ ಕಾಣಬೇಕು ಅಂತ ಹೇಳಿ ಕಳಿಸಿದ್ದಾರೆ. ಒಳ್ಳೆ ಪ್ಯಾಂಟು, ಶರಟು ಹಾಕಿ ರೆಡಿಯಾಗಿ ಬನ್ರೀ …’ ಎಂದಿದ್ದೇ ತಡ. ಅಲಂಕಾರ ಮಾಡ್ಕೊಂಡು ಆಫೀಸ್ ವ್ಯಾನ್ ಹತ್ತಿದ್ರು. ಆ ಕಾಲಕ್ಕೆ ಫೇಮಸ್ ಡಾಕ್ಟರ್. ದಿನಕ್ಕೆ ಈ ತರಹ ನೂರಾರು ಪೇಷಂಟ್ಸ್ ನ ನೋಡಿ ವಾಸಿ ಮಾಡ್ತಿದ್ದ ಡಾ.ಭಾಸ್ಕರ್ ಹತ್ತಿರ ಕರೆದುಕೊಂಡು ಹೋಗಿದ್ದರು. ಮೂರು ತಿಂಗಳಿಗೆ ಮೆಡಿಸಿನ್ ಬರೆದರು. ಅದಕ್ಕೆ ತಕ್ಕನಾಗಿ ಪುಷ್ಟಿಯಾದ ಆಹಾರ ಕೊಡಬೇಕು. ರಾಗಿ ಮುದ್ದೆ, ಸೊಪ್ಪು, ತರಕಾರಿ, ಹಾಲು, ಮೊಸರು, ತುಪ್ಪ, ಮೊಟ್ಟೆ, ಮೀನೆಣ್ಣೆ ಮಾತ್ರೆ ಎಲ್ಲವೂ ಕೊಡದಿದ್ದರೆ ದೇಹ ವೀಕಾಗತ್ತೆ.‌ ಚೆನ್ನಾಗಿ ನೋಡಿಕೊಳ್ಳಿ. ಮತ್ತೆ ಮೊದಲಿನ ಹಾಗೆ ಆರೋಗ್ಯವಂತರಾಗ್ತಾರೆ. ಅಂತ ಭರವಸೆ ಕೊಟ್ಟರು. ಕಣ್ತುಂಬಿ ಡಾಕ್ಟರ್ ಕಾಲಿಗೆ ಬಿದ್ದುಬಿಟ್ಟೆ. ನಮ್ಮ ಪಾಲಿಗೆ ದೇವರು ಆತ.” ಎಂದು ಹೇಳುವಾಗ ಗಂಟಲು ಕಟ್ಟಿತ್ತು. ಕಣ್ಣೀರು ಧಾರೆಯಾಗಿ ಹರಿಯುತ್ತಿತ್ತು. ಇಪ್ಪತ್ತು ವರ್ಷದ ಹಿಂದಿನ ಕಥೆಗೆ ಹೃದಯವಿಳಿದು, ಹುಟ್ಟು ಹಾಕುತ್ತಿತ್ತು.
” ಆ ದಿನ ಸಂಜೆ ಒಂದು ತಿಂಗಳ ಮೆಡಿಸಿನ್ ಕೊಡಿಸಿ,ಮುಂದಿನ ತಿಂಗಳು ಚೆಕಪ್ ಗೆ ನಾವೇ ಬಂದು ಕರೆದುಕೊಂಡು ಹೋಗ್ತೀವಿ ಎಂದು, ಕೈಗೆ ಐದು ಸಾವಿರ ಹಣ ಕೊಟ್ಟಿದ್ರು. ‘ಇದರಲ್ಲಿ ಮನೆಗೆ ಬೇಕಾದ ದಿನಸಿ ತೊಗೊಳ್ಳಿ. ಇದನ್ನು ದಾನ ಎಂದುಕೊಳ್ಳಬೇಡಿ. ಸಾಲ ಅಂತ ತೆಗೆದುಕೊಳ್ಳಿ. ಪ್ರಸನ್ನ ಹುಷಾರಾಗಿ ಬಂದ ಮೇಲೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಸ್ವಲ್ಪ ಹಣ ಹಿಡಿದುಕೊಂಡು, ಈ ಸಾಲದ ಲೆಕ್ಕ ಚುಕ್ತಾ ಮಾಡ್ತೀವಿ. ನೀವು ಯಾವುದೇ ಸಮಯದಲ್ಲೂ ನಮ್ಮ ಆಫೀಸಿಗೆ ಫೋನ್ ಮಾಡಿ, ಅಥವಾ ಬಂದು ಭೇಟಿಯಾಗಿ. ಹೆದರಬೇಡಿ. ದೇವರಿದ್ದಾರೆ.’  ಎಂದಿದ್ರು.‌ದೇವರು ಕಣ್ಣೆದುರಿಗೇ ಇದ್ದ‌‌. ಸಾಕ್ಷಾತ್ ರಾಮಚಂದ್ರ ಪ್ರಭುವೇ ದಿಕ್ಕಿಲ್ಲದ ಈ ಕುಟುಂಬಕ್ಕೆ ಆಸರೆಯಾಗಲು ಈ ರೂಪದಲ್ಲಿ ಬಂದಿದ್ದಾನೆ ಎಂದುಕೊಂಡೆ.”

ಇಷ್ಟು ಹೇಳಿ ಸುಮಾರು ಹೊತ್ತು ಮೌನದಲ್ಲೇ ಕಳೆದುಹೋಗಿದ್ದ ಕಾಮಾಕ್ಷಿ  ಎಚ್ಚರಾಗಿ , “ಇವತ್ತು ಯಾಕೋ ಮನಸ್ಸು ವಿಪರೀತ ಮೃದುವಾಗಿದೆ. ಶುರುವಾದ ಅಳು ನಿಲ್ತಾನೇ ಇಲ್ಲ. ಮನೆಗೆ ಕರೆಸಿ ಬೇಜಾರು ಮಾಡ್ತಿದ್ದೀನಿ ಪುಟ್ಟಿ. ಕ್ಷಮಿಸು” ಎಂದು ಕೈಮುಗಿದರು.
ಅತ್ತು ಕೆಂಪಗಾದ ಆ ಮುಖ, ಹತ್ತಿ ಸೀರೆ, ದುಡಿದು ಬಡವಾದ ರಟ್ಟೆಗಳು… ಕಣ್ಣಿಗೆ ಬಿದ್ದಿದ್ದೆಲ್ಲ ಹೊಟ್ಟೆಯುರಿಸುತ್ತಿತ್ತು.
” ಅಯ್ಯೋ ಅತ್ತೆ… ನೀವು ಈ ಕಥೆ ಹೇಳಿದ್ದು ಬೇಜಾರಿಲ್ಲ. ನಿಮಗೆ ಸಮಾಧಾನ ಮಾಡೋಕೆ ಆಗ್ತಿಲ್ಲವಲ್ಲ ಅಂತ ಬೇಜಾರಾಗ್ತಿದೆ. ಯಾಕೆ ಇವನ್ನೆಲ್ಲ ಇಷ್ಟು ಮನಸ್ಸಿಗೆ ತಂದುಕೊಂಡಿದ್ದೀರಿ? ಆ ಕಾಲ ಆಯಿತು. ಹೋಯಿತು. ಇವತ್ತಿನ ಸಮಾಧಾನ ಮುಖ್ಯ ಅಲ್ವಾ ಅತ್ತೆ?” ಅನುನಯಿಸುವ ಸ್ವರದಲ್ಲಿ ವಿಷಾದ ಬೆರೆತಿತ್ತು.

” ಹೌದು. ಇವತ್ತಿನ ಸಮಾಧಾನ ಮುಖ್ಯ. ಆದರೆ ಶುರು ಮಾಡಿದ ಕಥೆಯನ್ನ ಅರ್ಧಕ್ಕೆ ಹೇಗೆ ನಿಲ್ಲಿಸಲಿ ಹೇಳು? ನಿನ್ನ ಕರೆಸಿದ ಉದ್ದೇಶ ಹೇಳಬೇಕು ಅಂದರೆ ಇವನ್ನೆಲ್ಲ ತಿಳಿಸಿಯೇ ಮುಂದುವರೆಯಬೇಕು.” ಧ್ವನಿ ಮೆತ್ತಗಿದ್ದರೂ ದೃಢವಾಗಿತ್ತು.
” ಹೇಳಿ ಅತ್ತೆ…”
” ಹಾಗೆ ಅವರು ಕೊಡಿಸಿದ ಔಷಧಿ ಸಂಜೀವಿನಿಯ ಹಾಗೆ ಕೆಲಸ ಮಾಡಿತು. ಮಡಿ ಮೈಲಿಗೆ ತಲೆಕೆಡಿಸಿಕೊಳ್ಳದೆ ಆಪದ್ಧರ್ಮ ಅಂತ ಮೂಗು ಮುಚ್ಚಿಕೊಂಡು ಆಮ್ಲೆಟ್ ಮಾಡಿ ಕೊಟ್ಟೆ. ಅವರು ಕೊಟ್ಟ ದುಡ್ಡು ಹೇಗೂ ಇತ್ತಲ್ಲ. ಪುಷ್ಟಿಯಾಗಿ ಆಹಾರ ಕೊಟ್ಟು , ಅಭ್ಯಂಗ ಸ್ನಾನ ಮಾಡಿಸಿ, ಔಷಧಿ ತಿನ್ನಿಸಿ, ಮಗುವಿನ ಹಾಗೆ ಜೋಪಾನ ಮಾಡಿ ನನ್ನ ಗಂಡನನ್ನ ಬದುಕಿಸಿಕೊಂಡೆ. ಮತ್ತೆ ಮನುಷ್ಯರಾದರು.‌ ಅದಾಗಿ ಆರು ತಿಂಗಳಿಗೆ ಕೆಲಸ ಪರ್ಮನೆಂಟ್ ಆಯಿತು. ಅವರಿಗೆ ಆಯಸ್ಸು ಇದ್ದಷ್ಟು ದಿನ ಚೆನ್ನಾಗಿ ಇದ್ದರು. ಹೋದ ಮೇಲೂ ಅವರು ಕಟ್ಟಿದ ಮನೆ , ಅವರ ಪೆನ್ಷನ್, ಮಕ್ಕಳ ಒತ್ತಾಸೆ ನನ್ನನ್ನು ಕೈಬಿಡದೆ ಕಾಪಾಡಿದೆ. ಇಷ್ಟೆಲ್ಲ ಮಾಡಿದ ರಾಮಚಂದ್ರ ಆಲೂರರ ಹೆಂಡತಿ ಮೊನ್ನೆ ದೇವಸ್ಥಾನದಲ್ಲಿ ಸಿಕ್ಕಿದ್ರು. ನಿಮ್ಮ ಮಾವ ಇರುವ ತನಕ ನಮ್ಮಿಬ್ಬರ ಮನೆಗಳ ಒಡನಾಟ ಇತ್ತು. ಆಮೇಲೆ ಅವರಿಗೂ ಬೇರೆ ಊರಿಗೆ ವರ್ಗವಾಯಿತು. ನಾನೂ ನನ್ನ ಬದುಕಿನಲ್ಲಿ ಕಳೆದುಹೋದೆ.‌ ಅವರ ಹೆಂಡತೀನ ನೋಡಿ ಎಷ್ಟು ಖುಷಿಯಾಯಿತು ಅಂತೀ? ಮನೆಗೆ ಬನ್ನಿ ಅಂತ ಕರೆದೆ. ಮಕ್ಕಳ ಬಗ್ಗೆ ವಿಚಾರಿಸಿದೆ. ನನ್ನ ಮಕ್ಕಳ ಬಗ್ಗೆ ಹೇಳಿದೆ. ಅವರಿಗೆ ಸಾಲಾಗಿ ಮೂರು ಜನ ಹೆಣ್ಣುಮಕ್ಕಳು.‌ಈಗ ಕೊನೆಯವಳ ಮದುವೆ ಇನ್ನು ಎರಡು ತಿಂಗಳಿಗೆ. ನನಗೆ ತಿಳಿದ ಮಟ್ಟಿಗೆ  ಆಲೂರರ ಅಣ್ಣತಮ್ಮಂದಿರು ಮನೆಪಾಲು ಮಾಡಿಕೊಂಡಾಗ ಹಿರಿಯಣ್ಣನಾದ ಇವರಿಗೆ ಸಿಕ್ಕಿದ್ದು ತುಂಡು ಭೂಮಿ. ಅವರ ಆದಾಯದ ಬಹುಪಾಲು ಅಣ್ಣತಮ್ಮಂದಿರ ಓದು,ನೌಕರಿ,ಮದುವೆಗೆ ಹೋಗಿತ್ತು. ಮೋಸವಾಯಿತೆಂದು ನಿಮ್ಮ ಮಾವನವರೇ ಎಷ್ಟೋ ಸಲ ನನ್ನ ಮುಂದೆ ಹೇಳಿದ್ದರು. ಈಗ ಅವರ ಪರಿಸ್ಥಿತಿ ಹೇಗೇ ಇರಲಿ. ನಮ್ಮ ಕಷ್ಟಕಾಲದಲ್ಲಿ ಅವರು ಮಾಡಿದ ಸಹಾಯದ ಸೂಜಿಮೊನೆಯಷ್ಟೂ ನಾವೀಗ ಮಾಡಲಾಗುವುದಿಲ್ಲ. ಸುಮ್ಮನೆ ಕೈಕಟ್ಟಿ ಕೂರುವಂತೆಯೂ ಇಲ್ಲ. ನಿಮ್ಮ ಮದುವೆಯಾದ ಮೇಲೆ ಪ್ರತಿ ತಿಂಗಳು ಇಷ್ಟಿಷ್ಟೇ ಕೂಡಿಟ್ಟ ಪುಟ್ಟ ಗಂಟೊಂದಿದೆ. ಒಂದುವರೆ ಎರಡು ಲಕ್ಷ ಆಗಬಹುದು. ನಿಮಗೆ ಯಾರಿಗಾದರೂ ಅಗತ್ಯ ಬಿದ್ದರೆ ಕೊಡೋಣ ಅಂತ ಮರೆತ ಹಾಗೆ ಸೇರಿಸಿದ್ದೆ. ಆಲೂರರ ಹೆಂಡತಿಯನ್ನು ಕಂಡ ಮೇಲೆ, ಮಗಳ ಮದುವೆಗೆ ಅರಿಶಿನ ಕುಂಕುಮದ ದುಡ್ಡು, ಅಣ್ಣಂದಿರ ಕಡೆಯಿಂದ ಅಂತ ಹೇಳಿ ನಿಮ್ಮ ಕೈಲಿ  ಕೊಡಿಸುವ ಯೋಚನೆ ಬಂತು. ನನ್ನ ಮಕ್ಕಳನ್ನ ಕೇಳಿದರೆ,’ ನಿನ್ನ ದುಡ್ಡು.‌ನಿನಗಿಷ್ಟ ಬಂದ ಹಾಗೆ ಖರ್ಚು ಮಾಡು. ಯಾರಿಗಾದರೂ ಕೊಡು. ನಾವು ಅದರ ತಂಟೆಗೆ ಬರಲ್ಲ’ ಅಂತಾರೆ.‌ ಆದರೆ ಈಗ ಅವರಿಬ್ಬರೇ ಅಲ್ಲ ನೋಡು. ಸೊಸೆ ಎಂದರೆ ಮನೆಮಗಳಿದ್ದ ಹಾಗೆ ಅಂತ ಹತ್ತು ಕಡೆ ಹೇಳಿಕೊಂಡು ಬರ್ತೀವಿ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಅಂತೀವಿ. ಅತ್ತೆ ಮನೆಯಲ್ಲಿ ಹೊರಗಿಂದ ಬಂದವಳು ಅಂತ ದೂರವೇ ಇಟ್ಟರೆ ಸರಿಯೇನು? ನನಗೆ ಎಲ್ಲಕ್ಕಿಂತ ಮೊದಲು ನಿನ್ನ ಅಭಿಪ್ರಾಯ ಮುಖ್ಯ. ಹಣ ನನ್ನದೇ ಇರಬಹುದು.‌ಆದರೆ ಇದು ಒಟ್ಟು ಕುಟುಂಬವಾಗಿ ನಾವು ಅವರಿಗೆ ಕೊಡುವ ಕಾಣಿಕೆ. ಒಂದೆರಡು ದಿನ ಸಮಯ ತೊಗೊಂಡು ಹೇಳು. ನೀನು ಒಪ್ಪದಿದ್ದರೆ ಈ ರಾಯಭಾರ ಮಾಡೋಲ್ಲ.” ಎಂದು ಮುಖ ದಿಟ್ಟಿಸಿದರು.
ಈ ಭಾವುಕ ಕ್ಷಣದಲ್ಲಿ ಹು ಎನ್ನುವುದಕ್ಕೆ ಅರೆನಿಮಿಷವೂ ಬೇಡ. ಆದರೆ ಈಗ ಒಪ್ಪಿ ಆಮೇಲೆ ಬೇಡವೆನ್ನಿಸಿದರೆ? ಮನಸ್ಸು ಅತ್ತಿಂದಿತ್ತ ತೂಗಿ ತೂಗಿ ಸುಸ್ತಾಯಿತು.


” ಅವನಿಗಿಷ್ಟ ಅಂತ ಇವತ್ತು ಪಾವು ಅಕ್ಕಿಹಿಟ್ಟಿಗೆ ಕೋಡುಬಳೆ ಮಾಡಿದೆ. ನಿಂಬೆಕಾಯಿ ಉಪ್ಪಿನಕಾಯಿ ಬಾಟಲಿಗೆ ಹಾಕಿಟ್ಟಿದ್ದೀನಿ. ಹೋದವಾರ ಕೊಡೋದು ಮರೆತೆ. ನಿನಗೆ ಇಷ್ಟ ಅಂತ ಪುಳಿಯೋಗರೆ ಗೊಜ್ಜು ಮಾಡಿದ್ದೀನಿ. ಈಗಲೇ ಒಂದು ಬ್ಯಾಗಿಗೆ ಹಾಕಿ ಇಡ್ತೀನಿ. ಹೊರಡುವ ಹೊತ್ತಿಗೆ ಅವಸರದಲ್ಲಿ ಎಲ್ಲ ಮರೆತು ಹೋಗತ್ತೆ. ವಿಶೇಷ ಇದ್ದರೆ ಪುಳಿಯೋಗರೆ ತಿನ್ನಬೇಡ. ಎಳ್ಳು ಬಿದ್ದ ಪದಾರ್ಥ ಮೊದಲ ಮೂರು ತಿಂಗಳು ತಿನ್ನಬಾರದು…” ಕಾಮಾಕ್ಷಿ ಓಡಾಡುತ್ತಾ ತಮ್ಮಷ್ಟಕ್ಕೆ ಮಾತನಾಡಿಕೊಂಡು ಬ್ಯಾಗಿನ ತುಂಬ ಒಂದೊಂದೇ ಪದಾರ್ಥ ಹಾಕಿಟ್ಟರು.
ಕತ್ತಲಾವರಿಸುತ್ತಿತ್ತು. ಹೊರಡುವ ಮುಂಚೆ ಅಡ್ಡಗೋಡೆಯ ಮೇಲೆ ದೀಪವಿಡುವುದಕ್ಕಿಂತ, ಮನಸ್ಸಿನಲ್ಲಿ ಮೂಡಿದ್ದನ್ನು ಹೇಳಿಬಿಟ್ಟರೆ ವಾಸಿಯೆನ್ನಿಸಿತು.
” ಅತ್ತೆ.. ಆಲೂರರ ಕುಟುಂಬ ನಿಮಗೆ ಮಾಡಿರುವ ಸಹಾಯ, ಕಷ್ಟದ ಸಮಯದಲ್ಲಿ ಕೈಹಿಡಿದ ರೀತಿ ಕೇಳಿದರೆ ಮನಸ್ಸು ತುಂಬಿ ಬರತ್ತೆ.‌ಆದರೆ ಅವರು ಹಾಗೆ ಮಾಡಿದ್ದು, ಮುಂದೆಂದೋ ನಿಮ್ಮಿಂದ ಸಹಾಯ ಪಡೆಯುವ ನಿರೀಕ್ಷೆಯಿಂದಲ್ಲ.‌ ಸಹಜವಾಗಿಯೇ ತೋರಿದ ಕಕ್ಕುಲಾತಿ ಅಲ್ಲವೆ? ನಾವು ಇಷ್ಟು ವರ್ಷದ ಮೇಲೆ‌ ಮತ್ತೆ ಸಿಕ್ಕಾಗ, ಅಷ್ಟೂ ವರ್ಷದ ಬಡ್ಡಿ ಸಮೇತ ಹಣ ಹಿಂತಿರುಗಿಸಿದ ಹಾಗೆ ಮಾಡುವುದು ಸರಿಯೆನ್ನಿಸಲ್ಲ. ನಿಮ್ಮ ಮನೆಯಲ್ಲಿ ನಿಮ್ಮ ಮಕ್ಕಳು ಓದಿ, ಉದ್ಯೋಗ ಸಂಪಾದಿಸಿ ಬದುಕಿನಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಹಾಗೆಯೇ ಅವರ ಮನೆಯಲ್ಲೂ ಒಳ್ಳೆಯ ದಿನಗಳು ನಡೆಯುತ್ತಿದ್ದಿರಬಹುದು.‌ ನಿಜ ಹೇಳಬೇಕಂದರೆ, ನನಗೇ ಹಣದ ಅವಶ್ಯಕತೆ ಇದೆ. ತವರಿನ ಪರಿಸ್ಥಿತಿ ಸರಿಯಿಲ್ಲ‌. ನಿಮ್ಮ ಮಗನೂ ಸಂಬಳಕ್ಕೆ ತಕ್ಕ ಹಾಗೆ ಎಲ್ಲೆಲ್ಲೋ ಕಂತುಗಳನ್ನು ತುಂಬುತ್ತಿದ್ದಾರೆ. ನನಗೆ ಇರುವ ಉದ್ಯೋಗದಲ್ಲಿ ನೆಮ್ಮದಿಯಿಲ್ಲ. ಸ್ವಂತ ವ್ಯಾಪಾರ ಮಾಡಬೇಕೆನ್ನುವುದು ಯಾವತ್ತಿನ ಕನಸು. ನೀವು ಮನಸ್ಸು ಮಾಡಿ ನನಗೇ ಆ ಹಣವನ್ನು ಸಾಲದ ರೂಪದಲ್ಲಿ ಕೊಟ್ಟರೆ, ವ್ಯಾಪಾರ ಕುದುರಿದ ಮೇಲೆ ವಾಪಸ್ ಕೊಡುವೆ.” ಎಂದಳು.
ಎಷ್ಟಾದರೂ ಸೊಸೆ ಮಗಳಾಗಲು, ಮಗನಂತೆ ಯೋಚಿಸಲು ಸಾಧ್ಯವಿಲ್ಲವೆನಿಸಿ ಕಾಮಾಕ್ಷಿ ಪೆಚ್ಚಾದರು. ಮನೆಯ ವ್ಯವಹಾರದಲ್ಲಿ ಸೊಸೆಯನ್ನು ಸೇರಿಸಿಕೊಳ್ಳಬೇಕೆಂದು ಯೋಚಿಸಿದ್ದೇ ತಪ್ಪಾಯಿತಾ? ಹೀಗೆ ಅಳೆದುಸುರಿದು ಕೇಳಿ, ಇಲ್ಲವೆನ್ನಿಸಿಕೊಳ್ಳುವ ಬದಲು ಮನಸ್ಸಿಗೆ ಬಂದಾಗಲೇ ಕಾರ್ಯರೂಪಕ್ಕೆ ತಂದಿದ್ದರೆ ಚೆನ್ನಾಗಿತ್ತು ಎನ್ನಿಸಿ ಸಪ್ಪಗಾದರು.
” ಸರಿ ಕಣೆ ಹುಡುಗಿ… ಮಾತುಮಾತಲ್ಲಿ ಮುಸ್ಸಂಜೆ ಮುಗಿದು ರಾತ್ರಿಯಾಗಿದ್ದೇ ತಿಳಿಯಲಿಲ್ಲ. ಕುಂಕುಮ ಹಚ್ಚಿಕೊಂಡು ಹೋಗಿ ಬಾ.‌ ಮುಂದಿನ ಸಲ ಬಂದಾಗ ಚೆಕ್ ಕೊಡ್ತೀನಿ. ಇನ್ನೊಂದು ಸಲ ನಾನು ಹೇಳಿದ್ದರ ಬಗ್ಗೆಯೂ ಸಮಾಧಾನವಾಗಿ ಯೋಚಿಸು.” ಎಂದಾಗ ಪ್ರಯತ್ನಪೂರ್ವಕವಾಗಿ ನಿರಾಸೆಯನ್ನು ಬಚ್ಚಿಟ್ಟಿದ್ದು, ಧ್ವನಿಯ ಬಾಗು ಬಳುಕಿನಲ್ಲಿ ಒಡೆದು ತೋರುತ್ತಿತ್ತು.

*

ಅತ್ತೆ ಕೊಟ್ಟ ಚೆಕ್ ಅಕೌಂಟಿಗೆ ನಗದಾಗಿ ಬಂದು ಬಿದ್ದಾಗಲೇ, ಹೊಸ ಐಪಿಓ ಒಂದು ತೆರೆದ ದಿನವೇ ದುಪ್ಪಟ್ಟಾಗುವ ತಿಂಗಳೊಳಗೆ ನಾಲ್ಕು ಪಟ್ಟು ಬೆಳೆಯುವ ಸುದ್ದಿ ಶೇರು ಮಾರುಕಟ್ಟೆ ಪಂಡಿತರ ವಲಯದಲ್ಲಿ ಭಾರೀ ಅಲೆಯನ್ನೆಬ್ಬಿಸಿತ್ತು. “ಹಾಕಿದ ಹಣಕ್ಕಂತೂ ಮೋಸವಿಲ್ಲ.‌ ಬೆಳೆಯುವ ವೇಗದ ಬಗ್ಗೆ ಅನುಮಾನವೇ ಬೇಕಿಲ್ಲ.‌ ರಿಸ್ಕ್ ತೊಗೊಂಡು ಹೂಡಿಕೆ ಮಾಡಿ. ಥ್ಯಾಂಕ್ಸ್ ಆಮೇಲೆ ಹೇಳಿ”  ಎಂದು ತಾನು ಫಾಲೋ ಮಾಡುವ ಅನಲಿಸ್ಟ್ ಹೇಳಿದಾಗ, ಇದೊಂದು ರಿಸ್ಕ್ ತೆಗೆದುಕೊಂಡು ಬಿಡಲೇ ಅಂತ ಯೋಚಿಸುತ್ತಿದ್ದಳು. ಅದುವರೆಗೂ ಇಪ್ಪತ್ತು ಮುವ್ವತ್ತು ಸಾವಿರ ಷೇರಿನಲ್ಲಿ ಹಾಕಿ ಸಾವಿರದ ಲೆಕ್ಕದಲ್ಲಿ ಲಾಭ, ನಷ್ಟ ನೋಡಿದವಳಿಗೆ ಒಟ್ಟಾಗಿ ಒಂದುವರೆ ಲಕ್ಷ ಹೂಡಿಕೆ ಮಾಡಲು ಆಸೆಯಷ್ಟೇ ಅಂಜಿಕೆಯೂ ಇತ್ತು. ಮತ್ತೊಮ್ಮೆ ತಾನು ಬಳಸುವ ಆಪ್ ತೆಗೆದು, ಅಕೌಂಟ್ ನೋಡಿದಳು. ಮುವ್ವತ್ತು ಸಾವಿರ ಒಂದು ವರ್ಷದಲ್ಲಿ ನಲವತ್ತೆಂಟು ಸಾವಿರವಾಗಿತ್ತು. ಕೆಲವು ಷೇರುಗಳು ಹೆಚ್ಚು ಬೆಳೆದು, ಇನ್ನು ಕೆಲವು ನೆಲಕ್ಕೆ ಕುಸಿದರೂ ಒಟ್ಟಾರೆ ಲಾಭದ ಹಾದಿಯಲ್ಲಿತ್ತು.‌ ಈ ಜೂಜು ಬೇಕೆ ಎನ್ನಿಸಿದಾಗ ದಿನವೊಂದರಲ್ಲಿ ಹಾಕಿ, ತೆಗೆಯುವ ಆಟವಾಡಿದರೆ ಅದು ಜೂಜು.‌ ಹೆಚ್ಚು ಕಾಲ ಬೆಳೆಯಲು ಬಿಡುವ ಉದ್ದೇಶದಿಂದ , ಸರಿಯಾಗಿ ವಿಶ್ಲೇಷಿಸಿ ಹಾಕುವುದು ‘ಹೂಡಿಕೆ’ ಎಂಬ ಪಾಠ ನೆನಪಾಯಿತು.‌ಇನ್ನು ಹತ್ತು ದಿನಕ್ಕೆ ತೆರೆದುಕೊಳ್ಳುವ ಐಪಿಓಗೆ ಬುಕಿಂಗ್ ಆರಂಭವಾದ ಸೂಚನೆ ಸಿಕ್ಕೊಡನೆ, ಒಂದುವರೆ ಲಕ್ಷಕ್ಕೆ ಬರುವಷ್ಟು ಶೇರುಗಳನ್ನು ಮುಂಗಡವಾಗಿ ಕಾಯ್ದಿರಿಸಿದಳು. ಆದರೂ ” ಎಲ್ಲ ಮೊಟ್ಟೆಗಳನ್ನು ಒಂದೇ ಬುಟ್ಟಿಯಲ್ಲಿ ತುಂಬಬೇಡಿ” ಎಂಬ ಷೇರು ಪಾಠ ಹೃದಯಬಡಿತ ಹೆಚ್ಚಿಸುತ್ತಿತ್ತು. ಬೇಕು ಅಂದವರಿಗೆಲ್ಲ ಸಿಗುವುದಿಲ್ಲವಲ್ಲ. ಅದೃಷ್ಟವಿದ್ದರೆ ಅವತ್ತು ಶೇರ್ ಅಲಾಟ್ ಆಗತ್ತೆ. ಇಲ್ಲದಿದ್ದರೆ ಬ್ಯಾಂಕಿಗೆ ಹಣ ವಾಪಸ್ ಆಗತ್ತೆ. ಯಾವುದಕ್ಕೂ ಕಾದು ನೋಡಬೇಕು ಎಂದು ಬೇರೆ ಕೆಲಸಗಳಲ್ಲಿ ಮುಳುಗಿದಳು.

*

ಸೊಸೆಗೆ ಒಳಿತಾಗಲಿ ಎಂದು ಹರಸಿ ಕೊಟ್ಟಿದ್ದರೂ, ಕೊಡುವ ಮನಸ್ಸೇ ಇಲ್ಲದೆ ಎಲ್ಲ ತನಗೇ ಇರಲಿ ಎಂಬ ಸ್ವಾರ್ಥಿ ಆಕೆ ಎನ್ನುವ ಕಹಿಭಾವ ಮೂಡಿ ಮರೆಯಾಗುತ್ತಿತ್ತು.‌ಬಹುಶಃ ಈ ಜನ್ಮದಲ್ಲಿ ರಾಮಚಂದ್ರ ಆಲೂರರ ಋಣ ಕಳೆದುಕೊಳ್ಳುವ ಯೋಗ ನನಗಿಲ್ಲವೇನೋ… ಕಡೇಪಕ್ಷ ಅವರಿಗಿಷ್ಟವಾದ ಕೋಡುಬಳೆ, ಕೊಬ್ಬರಿಮಿಠಾಯಿ, ನುಚ್ಚಿನುಂಡೆ, ಮಜ್ಜಿಗೆ ಹುಳಿ ಮಾಡಿಕೊಂಡು ಹೋಗಿ ಕೊಟ್ಟು, ಮಾತಾಡಿಸಿಕೊಂಡು ಬರೋಣವೆಂದು ಕಾಮಾಕ್ಷಿ ತಯಾರಿ ಮಾಡಿಕೊಂಡರು. ಆಲೂರರ ಹೆಂಡತಿಗೆ ಎರಡು ದಿನ ಮುಂಚಿತವಾಗಿಯೇ ಕರೆ ಮಾಡಿ, ಬರುವುದಾಗಿ ತಿಳಿಸಿದರು. ಉಪ್ಪು, ಖಾರದ ಹದ ಸರಿಯಿದೆಯೇ ಮತ್ತೆ ಮತ್ತೆ ಪರೀಕ್ಷಿಸಿ, ಅತಿ ಮುತುವರ್ಜಿಯಿಂದ ಬಾಯಲ್ಲಿಟ್ಟರೆ ಕರಗುವಂತಹ, ಬೇಗ ತಿಂದರೆ ಮುಗಿದೇ ಹೋಯಿತಲ್ಲ ಎನಿಸುವ ತಿಂಡಿಗಳನ್ನು ಮಾಡಿಟ್ಟರು. ಆಲೂರರ ಮನೆಗೆ ಹೋಗಿ ಥಳಥಳ ಹೊಳೆಯುವ ಡಬ್ಬಿಗಳಲ್ಲಿದ್ದ ತಿಂಡಿಗಳನ್ನು ತಾವೇ ಕೈಯಾರ ಗಂಡ-ಹೆಂಡತಿಗೆ ತಿನ್ನಲು ಕೊಟ್ಟರು. ಅವರು ಒಂದೊಂದು ತುತ್ತು ಆಸ್ವಾದಿಸಿ ತಿನ್ನುವಾಗ, ಈ ಸಾರ್ಥಕತೆ ಹಣದಲ್ಲಿ ದೊರಕುತ್ತಿತ್ತೆ ಎನಿಸಿ ಕಣ್ಣು ಮಂಜಾಯಿತು. ಕಾಫಿ ಸಮಾರಾಧನೆಯೂ ಜರುಗಿ, ಮನೆಗೆ ಹೊರಟಾಗ ಮತ್ತೆ ಬನ್ನಿರೆಂದು ಆಲೂರರು ಪುನಃ ಪುನಃ ಹೇಳಿ ಬೀಳ್ಕೊಟ್ಟರು.

” ಯಾವ ಎಣ್ಣೆಯಲ್ಲಿ ಕರಿದಿದ್ದೋ.. ಫುಡ್ ಕಲರ್, ಟೇಸ್ಟಿಂಗ್ ಪೌಡರ್ ಹಾಕಿ ಜನರನ್ನು ಮರುಳು‌ಮಾಡೋರೇ ಹೆಚ್ಚು.‌ಅವರು ತಂದುಕೊಟ್ಟರು ಅಂತ ಹಿಂದೆ ಮುಂದೆ ಯೋಚಿಸದೆ ತಿಂದಿದ್ದೀರಲ್ಲಪ್ಪ. ಶುಗರ್, ಹಾರ್ಟ್ ಪ್ರಾಬ್ಲಂ ಎಲ್ಲ ಇರುವಾಗ ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು ಅಲ್ವಾ? ಅಮ್ಮ ನೀನಾದರೂ ತಡೆದಿರುತ್ತೀಯ ಅನ್ಕೊಂಡ್ರೆ ಅಪ್ಪನ ಸಮಕ್ಕೆ ಕುಣ್ಕೊಂಡು…” ಕಿರಿಮಗಳು ತರಾಟೆ ತೆಗೆದುಕೊಳ್ಳುತ್ತಿದ್ದಳು.

ಹೊರಡುವ ಗಡಿಬಿಡಿಯಲ್ಲಿ ಕೈಯಲ್ಲಿದ್ದ ಪರ್ಸನ್ನು ಆಲೂರರ ಮನೆಯಲ್ಲೇ ಮರೆತಿದ್ದು, ಅರ್ಧ ದಾರಿ  ಹೋದ ಮೇಲೆ ನೆನಪಾಗಿ ವಾಪಾಸು ಬಂದಿದ್ದ ಕಾಮಾಕ್ಷಿಯ ಕಿವಿಗೆ ಈ ಮಾತುಗಳು ಅರ್ಧಂಬರ್ಧ ಕಿವಿಗೆ ಬಿದ್ದಿತ್ತು.‌ ಮಕ್ಕಳು ಕಾಳಜಿಯಿಂದ ಆಡಿದ್ದನ್ನು ಅಪಾರ್ಥ ಮಾಡಿಕೊಳ್ಳಬಾರದೆಂದು ಎಷ್ಟು ಎಚ್ಚರಿಸಿಕೊಂಡರೂ ವಿಷಾದದ ಮೋಡ ದಟ್ಟೈಸಿತ್ತು.

ತಾನು ಹಣ ಕೊಟ್ಟಿದ್ದರೂ ಅಪಾರ್ಥವೇ ಆಗುತ್ತಿತ್ತಾ? ಸೊಸೆಯ ವಾದವೇ ಸರಿಯಿತ್ತಾ? ಬದಲಾದ ಕಾಲದಲ್ಲಿ ನಮ್ಮ ಚಿಂತನೆಗಳೇ ಅಪ್ರಸ್ತುತವೇ? ಏನೇನೋ ಪ್ರಶ್ನೆಗಳು ತಲೆಯೊಳಗೆ ದಾಂಧಲೆ ಎಬ್ಬಿಸಿ ನಿದ್ದೆಯಿಲ್ಲದ ರಾತ್ರಿ ಉದ್ದವಾಯಿತು.

*

ಕಾವ್ಯಾಗೆ ‌ಐಪಿಓ ಅಲಾಟ್ ಆಗಿತ್ತು. ಒಂದೆರಡು ತಿಂಗಳಲ್ಲಿ ಒಂದುವರೆ ಲಕ್ಷ ನಾಲ್ಕು ಮುಕ್ಕಾಲು ಲಕ್ಷವಾಗಿ ಬೆಳೆದಿತ್ತು. ಇನ್ನೂ ಬೆಳವಣಿಗೆಯ ಸಾಧ್ಯತೆಯಿದ್ದ ಷೇರನ್ನು ಮಾರುವ ಮನಸ್ಸಿಲ್ಲದೆ,‌ ಉದ್ಯೋಗವನ್ನೇ ಮುಂದುವರೆಸುವ ಯೋಚನೆಗೆ ಕಟ್ಟುಬಿದ್ದಳು. ಪ್ರತಿ ತಿಂಗಳು ಕಾಸಿಗೆ ಕಾಸು ಕೂಡಿಸಿ ಅತ್ತೆಗೆ ಹಣ ಹಿಂತಿರುಗಿಸಬೇಕಿತ್ತು.‌ ಷೇರು ವ್ಯವಹಾರವೆಂದರೆ ಹೆದರುವ, ಜೂಜಾಡಿದ ದುಡ್ಡು ಪಾಪದ್ದೆನ್ನುವ ಅತ್ತೆಗೆ ಸತ್ಯ ಹೇಳಲಾರದ, ವ್ಯಾಪಾರ ಶುರು ಮಾಡದಿರಲು ಕಾರಣವನ್ನೂ ಹುಡುಕಲಾಗದ ತಳಮಳ ಪಾಪಪ್ರಜ್ಞೆ ಹೆಚ್ಚಿಸುತಿತ್ತು.‌ ವಿಶೇಷವೇನೆ? ಎಂದು ಕೇಳುವಾಗಿನ ಅವರ ನಿರೀಕ್ಷೆ, ಈ ಬಾರಿಯೂ ಆಸೆಪಾಸೆ ಮಾಡಿದ ತಿಂಗಳ ಲೆಕ್ಕ, ಇರುವ ಗೋಜಲಿನಲ್ಲಿ ಅದೊಂದು ಸೇರಿಕೊಂಡರೆ ಹೇಗೆಂಬ ಆತಂಕ, ವಯಸ್ಸು ಮೀರಿ ಹೋದರೆ ಎಂಬ ಚಿಂತೆ ಕಗ್ಗಂಟಾಗಿ ಕುತ್ತಿಗೆ ಹಿಸುಕುತ್ತಿತ್ತು.

ಆಲೂರರ ಮನೆಯಲ್ಲಿ ಜರುಗಿದ್ದನ್ನು ಮರೆಯಲೂ ಆಗದೆ, ಯಾರಲ್ಲಿಯೂ ಹೇಳಿಕೊಳ್ಳಲಾಗದೆ ಕಾಮಾಕ್ಷಿ ನವೆಯುತ್ತಿದ್ದರು.

ಹೀಗಿದ್ದೂ, ಒಡಲೊಳಗೆ ಹುದುಗಿದ ಅಷ್ಟೂ ಭಾವವನ್ನೂ ನಗೆಯಲ್ಲಿ ತೇಲಿಸಿಬಿಡುವ ಉಮೇದಿನಲ್ಲಿ ಕಾವ್ಯಾ ನಗುತ್ತಿದ್ದಳು. ಒಬ್ಬರಿಗಾದರೂ ಸಂತೋಷವಾಯಿತಲ್ಲ ಎಂಬ ಹಗುರ ಭಾವ ಕಾಮಾಕ್ಷಿಗೆ ಸಾಂತ್ವನವೀಯುತ್ತಿತ್ತು.


One thought on “‘ಗತ್ಯಂತರ’ ಎಸ್ ನಾಗಶ್ರೀ ಅಜಯ್ ಅವರ ಸಣ್ಣಕಥೆ

Leave a Reply

Back To Top