ಡಾ. ವಿಶ್ವನಾಥ ಎನ್ ನೇರಳಕಟ್ಟೆ ಅವರ ಬರಹ “ಲೋಕಗ್ರಹಿತ ದೌರ್ಬಲ್ಯಗಳೆಲ್ಲವೂ ಬರಹಗಾರರ ಶಕ್ತಿಯಾದಾಗ…”

ಬರಹಗಾರರು ನಿಜಕ್ಕೂ ಅದೃಷ್ಟವಂತರು ಎಂದು ಹಲವು ಸಲ ನಾನು ಅಂದುಕೊಂಡದ್ದಿದೆ. ಲೋಕ ಯಾವುದನ್ನು ಒಬ್ಬ ವ್ಯಕ್ತಿಯ ದೌರ್ಬಲ್ಯಗಳೆಂದು ಪರಿಭಾವಿಸುತ್ತದೆಯೋ ಅವುಗಳನ್ನು ದೌರ್ಬಲ್ಯಗಳಾಗಿಯೇ ಒಪ್ಪಿಕೊಂಡು ಬದುಕಬೇಕಾದ ಅನಿವಾರ್ಯತೆ ಉಳಿದವರದ್ದು. ಆದರೆ ಅಂತಹ ದುರ್ಬಲತೆಗಳನ್ನು ಶಕ್ತಿಯಾಗಿ ಮಾರ್ಪಡಿಸಿಕೊಳ್ಳುವ, ಸಾಧನೆಯ ಆಕರಗಳಾಗಿ ರೂಪಾಂತರಗೊಳಿಸಿಕೊಳ್ಳುವ ಅಪೂರ್ವ ಅವಕಾಶ ಬರಹಗಾರರಿಗಿರುತ್ತದೆ. ಈ ಕಾರಣದಿಂದಾಗಿ ಲೌಕಿಕ ದೌರ್ಬಲ್ಯಗಳು ನೈಜರೂಪದಲ್ಲಿ ಅವರನ್ನು ಬಾಧಿಸುವ ಸಾಧ್ಯತೆ ತೀರಾ ವಿರಳವಾದದ್ದು ಎನ್ನುವುದು ಸ್ಪಷ್ಟ. ಹೀಗೆ ಲೋಕದ ಕಣ್ಣಿಗೆ ದೌರ್ಬಲ್ಯವಾಗಿ ಕಾಣುವ, ಬರಹಗಾರರ ಶಕ್ತಿಯಾಗಿರುವ ಕೆಲವು ವಿಚಾರಗಳನ್ನು ಅವಲೋಕಿಸಿಕೊಳ್ಳಬಹುದಾಗಿದೆ.

ಅಂತರ್ಮುಖಿತ್ವ ಎನ್ನುವುದು ವ್ಯಾವಹಾರಿಕ ಜಗತ್ತಿನಲ್ಲಿ ಪ್ರಯೋಜನಕ್ಕೆ ಬರದ ಸಂಗತಿ. ಆದರೆ ಸಾಹಿತ್ಯ ಜಗತ್ತಿನಲ್ಲಿ ಅದಕ್ಕೆ ವಿಶಿಷ್ಟ ಸ್ಥಾನವಿದೆ. ವಿಚಾರಗಳನ್ನು, ಭಾವನೆಗಳನ್ನು ಬೇರೆಯವರ ಜೊತೆಗೆ ಮೌಖಿಕ ಸ್ವರೂಪದಲ್ಲಿ ಹಂಚಿಕೊಳ್ಳದ ಮನೋಪ್ರವೃತ್ತಿಯನ್ನು ಅಂತರ್ಮುಖಿತ್ವ ಎನ್ನುವುದಾಗಿ ಗುರುತಿಸಲಾಗುತ್ತದೆ. ಮಾತಿನ ರೂಪದಲ್ಲಿ ತಮ್ಮೊಳಗನ್ನು ತೆರೆದಿಡಲಾಗದ ಒತ್ತಡವೇ ಬರವಣಿಗೆಯ ಮೂಲವಾಗಿರುತ್ತದೆ. ಬರವಣಿಗೆಯೊಂದು ಹುಟ್ಟು ಪಡೆಯಬೇಕಾದರೆ ದೀರ್ಘಕಾಲದಿಂದ ಗರ್ಭಸ್ಥವಾದ ಮೌನಭ್ರೂಣದ ನೆರವು ಬೇಕು. ಇನ್ನು ಹೇಳದೇ ಇರಲಾರೆ ಎಂಬ ಭಾವ ತುರಿಯಾವಸ್ಥೆಯನ್ನು ತಲುಪಿದಾಗ ಬರವಣಿಗೆ ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ. ಅಂತರ್ಮುಖಿಗಳಾಗಿದ್ದವರು ಅಧಿಕ ಚಿಂತನೆಯ ಮನೋಭೂಮಿಕೆಯನ್ನು ಹೊಂದಿರುವುದರಿಂದ ಅವರ ಮೂಲಕ ವ್ಯಕ್ತಗೊಳ್ಳುವ ಲಿಖಿತ ಸ್ವರೂಪವು ಚಿಂತನಾಪ್ರಧಾನವಾಗಿರುತ್ತದೆ; ಬೌದ್ಧಿಕತೆಯನ್ನು ಆಧರಿಸಿಕೊಂಡಿರುತ್ತದೆ. ಆದ್ದರಿಂದ ಅಂತರ್ಮುಖತೆ ಎನ್ನುವುದು ಜಗತ್ತಿನ ಕಣ್ಣಿಗೆ ವಿಚಿತ್ರವಾಗಿ ಕಂಡರೂ ಬರಹಗಾರರ ಪಾಲಿಗೆ ಧನಾತ್ಮಕವಾದ ಅಂಶವಾಗಿರುತ್ತದೆ.

ಮುಗ್ಧರಾಗಿರುವವರನ್ನು ಹಲವು ಬಗೆಯಲ್ಲಿ ವಂಚಿಸುವ ಘಟನೆಗಳು ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ. ಬರವಣಿಗೆಯ ಜಗತ್ತನ್ನು ಹೊಕ್ಕಾಗ ಮುಗ್ಧತೆ ಬರಹಗಾರರ ಶಕ್ತಿಯಾಗಿ ಅವರ ಬಗಲಿನ ಚೀಲದಲ್ಲಿ ಕುಳಿತುಬಿಡುತ್ತದೆ. ಒಳ್ಳೆಯ ಬರವಣಿಗೆ ರೂಪುಗೊಳ್ಳಬೇಕಾದರೆ ಎಲ್ಲವನ್ನೂ ಕುತೂಹಲದಿಂದ ಕಾಣುವ ವಿಶೇಷ ದೃಷ್ಟಿ ಬೇಕಾಗುತ್ತದೆ. ಏನೂ ಗೊತ್ತಿಲ್ಲದವನಂತೆ ಇದ್ದಾಗಲೇ ಎಲ್ಲವನ್ನೂ ಅರಿತುಕೊಳ್ಳುವುದಕ್ಕೆ ಸಾಧ್ಯವಿದೆ. ಈ ಮನಃಸ್ಥಿತಿಯನ್ನು ಮಗುವೊಂದರ ಮನಃಸ್ಥಿತಿಗೆ ಸಂವಾದಿಯಾಗಿ ಪರಿಕಲ್ಪಿಸಿಕೊಳ್ಳಬಹುದಾಗಿದೆ. ಲೋಕವನ್ನು ಈ ಬಗೆಯ ಮುಗ್ಧತೆಯಿಂದ ಗಮನಿಸಿಕೊಂಡಾಗಲೇ ಸಹಜ ದೃಷ್ಟಿಗೆ ಗೋಚರವಾಗದ ಅತಿಸೂಕ್ಷ್ಮ ಸಂಗತಿಗಳೂ ಸಹ ನೋಟಗ್ರಹಿಕೆಗೆ ಒದಗಿಬರುತ್ತವೆ. ಡಿ.ವಿ.ಜಿ.ಯವರ ಕಗ್ಗಗಳನ್ನು ಗಮನಿಸಿಕೊಂಡಾಗ (ಮಂಕುತಿಮ್ಮನ ಕಗ್ಗ ಮತ್ತು ಮರುಳಮುನಿಯನ ಕಗ್ಗ) ಪಾಮರನೊಬ್ಬನ ರೀತಿಯಲ್ಲಿ ಜಗದ ಬಗೆಯನ್ನು ಕಾಣುತ್ತಲೇ ವಿಶ್ಲೇಷಣೆಗೊಳಪಡಿಸುವ, ಮಾರ್ಗದರ್ಶನ ನೀಡುವ ಬಹುವಿಶಿಷ್ಟ ಆಯಾಮವೊಂದು ಗೋಚರವಾಗುತ್ತದೆ. ಇದು ಒಂದು ಉದಾಹರಣೆ ಮಾತ್ರ. ಬಹುಪ್ರಮುಖ ಸಾಹಿತ್ಯ ರಚನೆಗಳು ಈ ಬಗೆಯ ಮುಗ್ಧತೆಯ ದೃಷ್ಟಿಕೋನವನ್ನಿರಿಸಿಕೊಂಡೇ ಅಸ್ತಿತ್ವ ಗಳಿಸಿಕೊಂಡಿವೆ. ಅಂದರೆ ಶಿಶುಸಹಜವಾದ ಮುಗ್ಧತೆಯ ಬಲದಿಂದಲೇ ಪಂಡಿತಮಾನ್ಯವಾದ ಸಾಹಿತ್ಯ ರಚನೆಗಳು ರೂಪುಗೊಳ್ಳುತ್ತವೆ. ಈ ನೆಲೆಯಲ್ಲಿ ಗಮನಿಸಿಕೊಂಡಾಗ ಮುಗ್ಧತೆ ಎನ್ನುವುದು ಬರಹಗಾರರ ಸಾಮರ್ಥ್ಯ ಎನ್ನುವುದು ಅರಿವಿಗೆ ಬರುತ್ತದೆ.

ಖಿನ್ನತೆ ಎನ್ನುವುದೊಂದು ಮನೋದೌರ್ಬಲ್ಯ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಸ್ಪರ್ಧಾತ್ಮಕವಾದ ಜಗತ್ತಿನಲ್ಲಿ ಬಹುತೇಕರು ಈ ಮನಸ್ಸಿನ ಅಸಮರ್ಥತೆಗೆ ತುತ್ತಾಗುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಬದುಕಿನಲ್ಲಿ ಬಯಸಿದ್ದು ಸಿಗದೇ ಇದ್ದಾಗ, ಭವಿಷ್ಯದ ಕುರಿತ ಭರವಸೆ ಕಳೆದುಹೋದಾಗ, ಪ್ರೀತಿಪಾತ್ರರನ್ನು ಅಗಲಬೇಕಾಗಿ ಬಂದಾಗ ಹೀಗೆ ವಿವಿಧ ಸಂದರ್ಭಗಳಲ್ಲಿ ಖಿನ್ನತೆ ಮನಸ್ಸನ್ನು ಆವರಿಸುವ ಸಾಧ್ಯತೆ ಇರುತ್ತದೆ. ಈ ಮನಃಸ್ಥಿತಿ ಉಳಿದವರನ್ನು ಕಂಗೆಡಿಸಿಬಿಡುತ್ತದೆ. ಆದರೆ ಬರಹಗಾರರು ಖಿನ್ನತೆಗೊಳಗಾದಾಗ ಅವರ ಸೃಜನಶೀಲತೆ ಗಾಢವಾಗುತ್ತದೆ. ಖಿನ್ನತೆಯಿಂದ ಹೊರಬರುವ ಮನಃಸ್ಥಿತಿಯೇ ಭಿನ್ನ ವಿಭಿನ್ನ ಮಾದರಿಯ ಸಾಹಿತ್ಯ ರಚನೆಯೆಡೆಗೆ ಅವರನ್ನು ಪ್ರೇರೇಪಿಸುತ್ತದೆ. ವೈರುಧ್ಯದ ನೆಲೆಯಲ್ಲಿ ಮನಸ್ಸನ್ನು ರೂಪಿಸಿಕೊಳ್ಳಲು ಸಾಧ್ಯವಿರುವುದು ಬರಹಗಾರರಿಗೆ ಮಾತ್ರ. ಅಚ್ಚರಿಯ ಸಂಗತಿಯೆಂದರೆ, ಬದುಕಿನಿಂದ ವಿಮುಖಗೊಳಿಸುವ ಖಿನ್ನತೆಯನ್ನು ಜೊತೆಯಲ್ಲಿಟ್ಟುಕೊಂಡೇ ಬರಹಗಾರರು ಜೀವನ್ಮುಖಿಯಾದ ಬರಹವನ್ನು ರಚಿಸಬಲ್ಲರು. ಮಧುರ ಚೆನ್ನರ ಬಹುತೇಕ ಜೀವನ್ಮುಖಿ ಸಾಹಿತ್ಯ ರಚನೆಗಳು ಅವರು ಖಿನ್ನತೆಯಲ್ಲಿದ್ದ ಅವಧಿಯಲ್ಲಿಯೇ ಮೂಡಿಬಂದಿವೆ.

ಮನುಷ್ಯ ಸಮಾಜ ಜೀವಿ ಎನ್ನುವುದು ಅತ್ಯಂತ ಪ್ರಸಿದ್ಧವಾದ ಮಾತು. ಮನುಷ್ಯ ಒಬ್ಬನೇ ಬದುಕಲಾರ. ಈ ಭೂಮಿಯ ಮೇಲೆ ಒಬ್ಬರ ಅಸ್ತಿತ್ವ ಇನ್ನೊಬ್ಬರ ಅಸ್ತಿತ್ವವನ್ನು ಆಧರಿಸಿಕೊಂಡಿದೆ. ಜೀವನದ ಅನೇಕ ಗತಿಗಳಲ್ಲಿ ಇನ್ನೊಬ್ಬರ ಸಾಹಚರ್ಯ, ಸಾಂತ್ವನ, ಮಾರ್ಗದರ್ಶನ ಇವೆಲ್ಲವೂ ಬೇಕಾಗುತ್ತದೆ. ಇತರರ ಒಡನಾಟ ಇಲ್ಲದೇ ಇದ್ದಾಗ ಒಬ್ಬಂಟಿತನ ಮನುಷ್ಯನನ್ನು ಕಾಡಲಾರಂಭಿಸುತ್ತದೆ. ಈ ಬಗೆಯ ಏಕಾಂಗಿತನವನ್ನು ಬಯಸದೆ ಇರುವ ಮನಃಸ್ಥಿತಿ ಉಳಿದವರದ್ದಾದರೆ, ಸಾಹಿತ್ಯಸೃಷ್ಟಿಯ ಪ್ರಕ್ರಿಯೆಗಾಗಿ ಏಕಾಂಗಿತನವನ್ನು ಬಯಸುವುದು ಬರಹಗಾರರ ಮನಃಸ್ಥಿತಿ. ಆದ್ದರಿಂದ ಬರವಣಿಗೆಯ ಪ್ರಕ್ರಿಯೆಯುದ್ದಕ್ಕೂ ಬರಹಗಾರರು ಸಮಾಜಶಾಸ್ತçದ ಮೂಲಭೂತ ನಿಯಮಕ್ಕೆ ಅತೀತವಾದವರಾಗಿಬಿಡುತ್ತಾರೆ. ಬರವಣಿಗೆಯ ಲೋಕದಲ್ಲಿ ನೆಮ್ಮದಿ ಕಂಡುಕೊಳ್ಳುವ ಪ್ರವೃತ್ತಿ ಇದ್ದವರು ಮನುಷ್ಯರ ಸಂಪರ್ಕವೇ ಇಲ್ಲದೆಯೂ ತಮ್ಮ ದಿನವನ್ನು ಸಂತಸದಿಂದಲೇ ಮುಗಿಸಬಲ್ಲರು. ಇದೊಂದು ರೀತಿಯಲ್ಲಿ ಮನಸ್ಸಿನ ಆನಂದಕ್ಕಾಗಿ ಇನ್ನೊಬ್ಬರ ಮೇಲೆ ಅವಲಂಬಿತರಾಗದ ಸ್ವಾವಲಂಬೀ ಮನಃಸ್ಥಿತಿ. ಹೀಗೆ ಒಂಟಿತನವನ್ನು ಆಧಾರವಾಗಿಟ್ಟುಕೊಂಡು ಬರೆಯುವುದರ ಹಿಂದೆ ಸಮಾಜಮುಖಿಯಾದ ನಿಲುವೊಂದು ಕಾರ್ಯಾಚರಿಸಿರುತ್ತದೆ ಅನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಜಗತ್ತಿನ ಬಹುತೇಕರು ತಮ್ಮ ತಮ್ಮ ವ್ಯವಹಾರಗಳಲ್ಲಿ ನಿರತರು. ತಮ್ಮ ಬಗ್ಗೆ, ತಮ್ಮ ಮನೆಯವರ ಬಗ್ಗೆ ಯೋಚನೆಯನ್ನು ಇಟ್ಟುಕೊಂಡು, ಅದಕ್ಕನುಗುಣವಾಗಿ ಬದುಕುತ್ತಿರುವವರು. ಆದರೆ ಬರಹಗಾರರ ಬದುಕು ಹೀಗಲ್ಲ. ತಮ್ಮ ಬದುಕಿನ ಜೊತೆಗೆ ಉಳಿದವರ ಬದುಕಿನ ಬಗ್ಗೆ ಚಿಂತನೆ ನಡೆಸುವ, ಸಮಾಜದ ಚಲನೆ ಎಲ್ಲಾ ಆಯಾಮಗಳಲ್ಲೂ ಊರ್ಧ್ವಮುಖಿಯಾಗಿರಬೇಕೆಂದು ಬಯಸುವ ವಿಶಿಷ್ಟ ನಿಲುವು ಅವರದ್ದು. ವ್ಯಷ್ಟಿ ಪ್ರಜ್ಞೆಗಿಂತಲೂ ಸಮಷ್ಟಿ ಪ್ರಜ್ಞೆಯನ್ನು ಆಧರಿಸಿಕೊಂಡ ಬದುಕು ಬರಹಗಾರರದ್ದು. ಸಮಾಜದ ಸಮಸ್ಯೆಗಳನ್ನು ತನ್ನದೆಂದುಕೊಳ್ಳುವ, ಹಾಗೆಂದು ಅವುಗಳನ್ನು ತೀರಾ ವ್ಯಕ್ತಿಗತ ನೆಲೆಯಲ್ಲಿ ಪರಿಭಾವಿಸದಿರುವ ವಿಶಿಷ್ಟ ಶಕ್ತಿಯೊಂದು ಬರಹಗಾರರಿಗೆ ಕರಗತವಾಗಿರುತ್ತದೆ. ಇದೊಂದು ರೀತಿಯಲ್ಲಿ ಕೆಸುವಿನೆಲೆಯ ಮೇಲೆ ನೆಲೆನಿಂತ ನೀರಿನ ಹನಿಯ ತರಹದ ಸ್ಥಿತಿ. ಅತಿಸಂಪರ್ಕವಿಲ್ಲದ, ಹಾಗೆಂದು ಸಂಪರ್ಕವನ್ನು ಕಳೆದುಕೊಳ್ಳದ ಮಧ್ಯಮ ನಿಲುವು. ಈ ಕಾರಣದಿಂದಲೇ ಬರಹಗಾರರು ಸಮಾಜದ ಕುರಿತಾದ ಗಂಭೀರ ಚಿಂತನೆಗಳನ್ನು ಇಟ್ಟುಕೊಂಡಿದ್ದರೂ ಮನಸ್ಸಿನ ನೆಮ್ಮದಿಯನ್ನು ಉಳಿಸಿಕೊಂಡು ಬದುಕು ನಡೆಸಬಲ್ಲರು. ಈ ರೀತಿಯಲ್ಲಿ ಜಗತ್ತಿನ ಪರಿಭಾವನೆಯ ಅಶಕ್ತತೆಗಳೆಲ್ಲವನ್ನೂ ಬರಹಗಾರರು ತಮ್ಮ ಶಕ್ತಿಯಾಗಿ ಬದಲಾಯಿಸಿಕೊಳ್ಳುತ್ತಾರೆ. ಮನುಷ್ಯ ಸಹಜವಾದ ದೌರ್ಬಲ್ಯಗಳನ್ನು ಮೀರಿ ಬದುಕುವ, ಈ ನೆಲೆಯಲ್ಲಿ ಇತರರಿಗೆ ಬೋಧಿಸುವ ಅಪೂರ್ವ ಸಾಮರ್ಥ್ಯ ಅವರದ್ದಾಗಿರುತ್ತದೆ. ಆದ್ದರಿಂದ ಲೋಕಗ್ರಹಿತ ದೌರ್ಬಲ್ಯಗಳೆಲ್ಲವೂ ಬರಹಗಾರರ ಶಕ್ತಿಯಾದಾಗ ಲೋಕಮಾನ್ಯವಾದ ಸಾಹಿತ್ಯ ರಚನೆ, ಚಿಂತನೆಗಳು ಲೋಕಕ್ಕೆ ದಕ್ಕುತ್ತವೆ.


2 thoughts on “ಡಾ. ವಿಶ್ವನಾಥ ಎನ್ ನೇರಳಕಟ್ಟೆ ಅವರ ಬರಹ “ಲೋಕಗ್ರಹಿತ ದೌರ್ಬಲ್ಯಗಳೆಲ್ಲವೂ ಬರಹಗಾರರ ಶಕ್ತಿಯಾದಾಗ…”

  1. ವಿಶಿಷ್ಟವಾದ ಬರಹ ತುಂಬಾ ಚೆನ್ನಾಗಿದೆ.

    ಹೆಚ್.ಮಂಜುಳಾ.

    1. ತಮ್ಮ ಅಮೂಲ್ಯ ಅಭಿಪ್ರಾಯಕ್ಕೆ ಧನ್ಯವಾದಗಳು ಮೇಡಂ

Leave a Reply

Back To Top